ಭಾರತಕ್ಕೆ ಕ್ಷಾಮ ತರುವ ಉತ್ತರ ಅಟ್ಲಾಂಟಿಕ್ ಸುಳಿಗಾಳಿ


ರಂಜಿನಿ ರಘುನಾಥ್

Build-up of rainfall deficit in the two kinds of Indian monsoon droughts
(Credit: Pritam J. Borah, Centre for Atmospheric and Oceanic Sciences, Indian Institute of Science)

ಕಳೆದ ಶತಮಾನದಲ್ಲಿ ಭಾರತ ಕಂಡ ಮುಂಗಾರು ಕ್ಷಾಮಗಳ ಪೈಕಿ ಸುಮಾರು ಅರ್ಧದಷ್ಟಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿನ ವಾತಾವರಣದ ಏರುಪೇರುಗಳೇ ಕಾರಣ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರದ (ಸಿಎಒಎಸ್) ಸಂಶೋಧಕರು ಈ ಕುರಿತು ನಡೆಸಿರುವ ಅಧ್ಯಯನದ ಅಂಶಗಳು ‘ಸೈನ್ಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿವೆ.

ಭಾರತದಲ್ಲಿ ಕೋಟ್ಯಂತರ ಜನರು ಮುಂಗಾರು ಮಳೆಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಈ ಮುಂಗಾರು ಋತುವು ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ದೇಶದಾದ್ಯಂತ ಉತ್ತಮ ಮಳೆಯನ್ನು ಸುರಿಸುತ್ತದೆ. ಈ ಮಳೆಯೇನಾದರೂ ವಿಫಲವಾದರೆ ದೇಶವು ಬರದ ದವಡೆಗೆ ಸಿಲುಕುತ್ತದೆ. ಅಂತಹ ಸಂದರ್ಭದಲ್ಲೆಲ್ಲಾ ಅದಕ್ಕೆ ಎಲ್ ನಿನೋ ಕಾರಣ ಎಂದು ಭಾವಿಸಲಾಗುತ್ತದೆ. ಸಮಭಾಜಕ ವೃತ್ತದ ಬಳಿಯ ಪೆಸಿಫಿಕ್ ಸಾಗರದ ನೀರಿನ ಉಷ್ಣತೆಯು ಅಸಹಜವೆನ್ನುವ ರೀತಿಯಲ್ಲಿ ಜಾಸ್ತಿಯಾಗಿ, ಭಾರತ ಉಪಖಂಡ ಭಾಗದಿಂದ, ತೇವಾಂಶದಿಂದ ಕೂಡಿದ ಮೋಡಗಳನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಕ್ರಿಯೆ ಇದಾಗಿದೆ. ಹಾಗೆಯೇ, ಇದು ಪದೇಪದೇ ಮರುಕಳಿಸುವ ಪ್ರಕ್ರಿಯೆಯೂ ಆಗಿದೆ. ಅದೇನೇ ಇರಲಿ, ಭಾರತ ದೇಶದಲ್ಲಿ ಕಳೆದ ಶತಮಾನದಲ್ಲಿ ಉಂಟಾದ 23 ಕ್ಷಾಮಗಳ ಪೈಕಿ 10 ಬರಗಾಲಗಳು ಎಲ್ ನಿನೋ ಇಲ್ಲದಿದ್ದಾಗ ಸಂಭವಿಸಿವೆ. ಹಾಗಾದರೆ, ಇಂತಹ ಸಂದರ್ಭಗಳಲ್ಲಿ ಉಂಟಾದ ಬರಗಾಲಗಳಿಗೆ ಕಾರಣಗಳು ಏನಿರಬಹುದು?

ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯುವ ಪ್ರಮಾಣ ಹಠಾತ್ತಾಗಿ ಹಾಗೂ ತೀವ್ರವಾಗಿ ಕುಸಿದಿದ್ದೇ ಈ ಸಂದರ್ಭಗಳಲ್ಲಿ ಉಂಟಾದ ಬರಗಾಲಕ್ಕೆ ಕಾರಣ ಎಂಬುದು ಐ.ಐ.ಎಸ್.ಸಿ. ಅಧ್ಯಯನದಿಂದ ತಿಳಿದುಬಂದಿದೆ. ಹೀಗೆ ಮಳೆ ಸುರಿಯುವ ಪ್ರಮಾಣ ತೀವ್ರವಾಗಿ ಕುಸಿತ ಕಂಡಿದ್ದಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದ ‘’ಮಧ್ಯ ಅಕ್ಷಾಂಶ” (ಮಿಡ್ ಲ್ಯಾಟಿಟ್ಯೂಡ್)  ಪ್ರದೇಶದಲ್ಲಿನ ವಾತಾವರಣದಲ್ಲಿ ಉಂಟಾದ ಏರುಪೇರೇ ಇದಕ್ಕೆ ಕಾರಣ. ಇದು ಭಾರತ ಉಪಖಂಡವನ್ನು ವ್ಯಾಪಿಸಿದ ವಾತಾವರಣ ಸುಳಿಗಳ ವಿನ್ಯಾಸವನ್ನು ರೂಪಿಸಿ ಮುಂಗಾರನ್ನು ಹಾಳುಗೆಡವಿತು.

“1980ರ ದಶಕದಲ್ಲಿ ಜನರು ಈ ಬರ ಪರಿಸ್ಥಿತಿಗಳನ್ನು ಬಿಡಿ ಪ್ರಕರಣಗಳಂತೆ ನೋಡುತ್ತಿದ್ದರು. ಅವರು, ಇವನ್ನೆಲ್ಲಾ ಒಟ್ಟುಗೂಡಿಸಿ ಅಧ್ಯಯನ ನಡೆಸಿರಲಿಲ್ಲ. ಎಲ್ ನಿನೋ ಕ್ಷಾಮಗಳಿಗಿಂತ ವಿಭಿನ್ನವಾದ ‘ಮಧ್ಯ ಅಕ್ಷಾಂಶ ಪ್ರಭಾವ’ವೆಂಬ ಸಾಮಾನ್ಯ ಕಾರಣ ಇವುಗಳ ಹಿಂದಿದೆ ಎಂಬುದು ಅವರ ಗ್ರಹಿಕೆಗೆ ನಿಲುಕಿರಲಿಲ್ಲ” ಎನ್ನುತ್ತಾರೆ ಸಿ.ಇ.ಒ.ಎಸ್. ಸಹ ಪ್ರಾಧ್ಯಾಪಕ ಹಾಗೂ ಪ್ರಬಂಧದ ಹಿರಿಯ ಲೇಖಕರಲ್ಲಿ ಒಬ್ಬರಾದ ವಿ.ವೇಣುಗೋಪಾಲ್.

ಇದೀಗ ಸಂಶೋಧಕರು ಎಲ್ ನಿನೋ ಹಾಗೂ ಎನ್ ನಿನೋಯೇತರ ಬರಗಾಲದ ವರ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಹಾಗೆ ಮಾಡಿದಾಗ, ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿನ ವಿನ್ಯಾಸಗಳಲ್ಲಿ ತೀವ್ರ ವ್ಯತ್ಯಾಸಗಳು ಕಂಡುಬಂದಿವೆ.

ಎಲ್ ನಿನೋ ವರ್ಷಗಳಲ್ಲಿ ಬರ ಆವರಿಸುವ ರೀತಿಯು ಹೀಗಿರುತ್ತದೆ- ವಾಡಿಕೆ ಸರಾಸರಿ ಮಳೆಯಲ್ಲಿನ ಕೊರತೆಯು ಜೂನ್ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಾ ಹೋಗಿ ಶೋಚನೀಯ ಪರಿಸ್ಥಿತಿ ತಲುಪುತ್ತದೆ. ಆಗಸ್ಟ್ ಮಧ್ಯಭಾಗದ ವೇಳೆಗೆ ಇದು ಇಡೀ ದೇಶವನ್ನೆಲ್ಲಾ ವ್ಯಾಪಿಸುತ್ತದೆ. ಕೊನೆಗೆ, ಬರಗಾಲದಿಂದ ಇನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಉಂಟಾಗುತ್ತದೆ.

ಮತ್ತೊಂದೆಡೆ, ಎಲ್ ನಿನೋಯೇತರ ಬರಗಾಲಗಳು ಆವರಿಸಿಕೊಳ್ಳುವ ರೀತಿ ಹೀಗಿರುತ್ತದೆ- ಮೊದಲಿಗೆ, ಜೂನ್ ತಿಂಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆ ಕಡಿಮೆಯಾಗುತ್ತದೆ. ಮುಂಗಾರಿನ ಉತ್ತುಂಗದ ದಿನಗಳಾದ ಜುಲೈ ಮಧ್ಯದಿಂದ ಹಿಡಿದು ಆಗಸ್ಟ್ ಮಧ್ಯದವರೆಗೆ ಮಳೆಯು ಚೇತರಿಸಿಕೊಂಡಂತೆ ತೋರುತ್ತದೆ. ಆದರೆ, ಆಗಸ್ಟ್ ಮೂರನೇ ವಾರದ ಹೊತ್ತಿಗೆ ಮಳೆ ಪ್ರಮಾಣ ತೀವ್ರವಾಗಿ ಕುಸಿದು ಬರಗಾಲವನ್ನು ತಂದೊಡ್ಡುತ್ತದೆ.

“ಆಗಸ್ಟ್ ಕೊನೆಯ ಭಾಗದಲ್ಲಿ ಏಕೆ ಈ ರೀತಿ ಆಗುತ್ತದೆ?- ಇದು ನಮ್ಮ ಮುಂದಿದ್ದ ಪ್ರಶ್ನೆಯಾಗಿತ್ತು” ಎನ್ನುತ್ತಾರೆ ಸಿ.ಎ.ಒ.ಎಸ್. ಸಹ ಪ್ರಾಧ್ಯಾಪಕ ಹಾಗೂ ಮತ್ತೊಬ್ಬ ಲೇಖಕರಾದ ಜೈ ಸುಖಾತ್ಮೆ. “ಇದರ ಹಿಂದೆ ಯಾವುದಾದರೂ ಬಲವಾದ ಸಂಗತಿ ಇದೆಯೇ ಅಥವಾ ಈ ರೀತಿಯ ವರ್ತನೆಯನ್ನು ಪ್ರಭಾವಿಸುವ ವ್ಯವಸ್ಥೆ ಇದೆಯೇ ಎಂಬುದನ್ನು ಗುರುತಿಸಲು ನಾವು ಪ್ರಯತ್ನಿಸಿದೆವು. ಇದಕ್ಕಾಗಿ, ಎಲ್ ನಿನೋಯೇತರ ಬರಗಾಲದ ವರ್ಷಗಳ ಗಾಳಿ ಚಲನೆಯ ಸ್ವರೂಪವನ್ನು ಅವಲೋಕಿಸಿದೆವು” ಎಂದೂ ಅವರು ವಿವರಿಸುತ್ತಾರೆ.

ಸಂಶೋಧಕರು ಹೀಗೆ ಅವಲೋಕಿಸಿದಾಗ ಮಧ್ಯ ಅಕ್ಷಾಂಶ ವಲಯದಲ್ಲಿ ಅಸಹಜವೆನ್ನಿಸುವ ವಾತಾವರಣದ ಏರುಪೇರು ಗಮನಕ್ಕೆ ಬಂದಿತು. ಅಸಹಜವಾಗಿ ಶೀತಲವಾದ ಉತ್ತರ ಅಟ್ಲಾಂಟಿಕ್ ಜಲರಾಶಿಯ ವಾತಾವರಣದ ಮೇಲ್ಭಾಗದಲ್ಲಿನ ಗಾಳಿಯು ತೀವ್ರವಾದ ಚಂಡಮಾರುತದೊಂದಿಗೆ ವರ್ತಿಸುವುದೇ ಇದಕ್ಕೆ ಕಾರಣ. ಇದರಿಂದಾಗಿ ‘ರಾಸ್ ಬೈ ಅಲೆ’ ಎಂದು ಕರೆಯಲಾಗುವ ಗಾಳಿಯ ಸುಳಿಗಳು ಉಂಟಾಗುತ್ತವೆ. ಇವು ಉತ್ತರ ಅಟ್ಲಾಂಟಿಕ್ ನಿಂದ ಸೆಳೆತಕೊಳ್ಳಗಾಗಿ, ನಂತರ ಟಿಬೆಟ್ ಪ್ರಸ್ಥಭೂಮಿಯಿಡೆಗೆ ಚಲಿಸಿ, ಆಗಸ್ಟ್ ಮಧ್ಯಭಾಗದ ವೇಳೆಗೆ ಭಾರತ ಉಪಖಂಡವನ್ನು ಅಪ್ಪಳಿಸಿ ಮಳೆ ಸುರಿಯದಂತೆ ತಡೆಯುತ್ತವೆ. ‘ಅಲೆಗಳು ಸಾಮಾನ್ಯವಾಗಿ ಪಶ್ಚಿಮದಿಂದ ಪೂರ್ವದೆಡೆಗೆ ಚಲಿಸಬೇಕೇ ಹೊರತು ಸಮಭಾಜಕ ವಲಯದೆಡೆಗೆ ಅಲ್ಲ’ ಎಂಬ ವಿವರಣೆ ನೀಡುತ್ತಾರೆ ಸುಖಾತ್ಮೆ. “ಈ ನಿರ್ದಿಷ್ಟ ವರ್ಷಗಳಲ್ಲಿ ಗಾಳಿಯು ಒಳಮುಖವಾಗಿ ಸೆಳೆತಕ್ಕೊಳಗಾಗುತ್ತದೆ ಎಂಬುದೇ ನಾವು ಗಮನಿಸಿದ ವಿಚಿತ್ರ ಅಂಶ” ಎಂದೂ ಅವರು ಹೇಳುತ್ತಾರೆ.

ಭಾರತದ ಮುಂಗಾರಿನ ಮೇಲೆ ಉಷ್ಣವಲಯಕ್ಕೆ ಹೊರತಾದ ಅಂಶಗಳ ಪ್ರಭಾವಗಳನ್ನು ಕೂಡ ಪರಿಗಣಿಸಬೇಕಾದ ಪ್ರಾಮುಖ್ಯವನ್ನು ಈ ಅಧ್ಯಯನವು ಎತ್ತಿಹಿಡಿದಿದೆ. ಅದಕ್ಕೆ ಪೂರಕವಾಗಿ, ಇತ್ತೀಚಿನ ಹವಾಮಾನ ಮುನ್ಸೂಚನೆಗಳಲ್ಲಿ ಇದಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. “ಭಾರತದ ಮುಂಗಾರು ಕ್ಷಾಮಗಳಿಗೆ ಸಂಬಂಧಿಸಿದಂತೆ ನಡೆಯುವ ಎಲ್ಲಾ ಚರ್ಚೆಗಳಲ್ಲಿ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ವಿಷಯ ಮುಖ್ಯವಾಗಿ ಕೇಳಿಬರುತ್ತದೆ. ಆದರೆ ಇದೀಗ ಮಧ್ಯ ಅಕ್ಷಾಂಶ ಪ್ರಭಾವಗಳ ಕುರಿತೂ ಗಮನ ಕೇಂದ್ರೀಕರಿಸುವುದು ಜರೂರಿನ ಸಂಗತಿ ಎಂಬುದು ದೃಢಪಟ್ಟಿದೆ. ಮುಂಗಾರಿನಲ್ಲಿನ ವ್ಯತ್ಯಯನವನ್ನು ಹೆಚ್ಚಿನ ನಿಖರತೆಯೊಂದಿಗೆ ಊಹಿಸಲು ಇದು ಅನುವು ಮಾಡಿಕೊಡುಬಹುದು” ಎಂದೂ ವೇಣುಗೋಪಾಲ್ ಅಭಿಪ್ರಾಯಪಡುತ್ತಾರೆ.

ಉಲ್ಲೇಖ:

Indian monsoon derailed by a North Atlantic wavetrain, Science, 370:1335-1338, 2020. ಕುರಿತು ಪಿ.ಜೆ.ಬೋರ್ಹಾ, ವಿ.ವೇಣುಗೋಪಾಲ್, ಜೆ.ಸುಖಾತ್ಮೆ, ಪಿ.ಮುದ್ದೇಬಿಹಾಲ್, ಬಿ.ಎನ್.ಗೋಸ್ವಾಮಿ.

https://science.sciencemag.org/cgi/doi/10.1126/science.aay6043

 

ಸಂಪರ್ಕಿಸಿ:

ವಿ.ವೇಣುಗೋಪಾಲ್
ಸಹ ಪ್ರಾಧ್ಯಾಪಕರು
ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರ (ಸಿಎಒಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.)
venu@iisc.ac.in
+91-80-2293 3073

ಜೈ ಸುಖಾತ್ಮೆ
ಸಹ ಪ್ರಾಧ್ಯಾಪಕರು
ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರ (ಸಿಎಒಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.)
jai@iisc.ac.in
+91-80-2293 3321

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or>pro@iisc.ac.in ಗೆ ಬರೆಯಿರಿ.

—000—