ಎನ್.ಎಸ್.ಎಂ. ಅಡಿಯಲ್ಲಿ ಐ.ಐ.ಎಸ್ ಸಿ.ಯಲ್ಲಿ ‘ಪರಮ್ ಪ್ರವೇಗ’ ಸೂಪರ್ ಕಂಪ್ಯೂಟರ್


ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನ (ಎನ್.ಎಸ್.ಎಂ.)ದ ಅಡಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ) ದೇಶದಲ್ಲಿಯೇ ಅತ್ಯಧಿಕ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ಗಳಲ್ಲಿ ಒಂದಾದ ‘ಪರಮ್ ಪ್ರವೇಗ’ವನ್ನು ಅನುಸ್ಥಾಪಿಸಿ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಇದು ದೇಶದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಪೈಕಿ ಅತ್ಯಂತ ದೊಡ್ಡ ಸೂಪರ್ ಕಂಪ್ಯೂಟರ್ ಆಗಿದೆ.

ವಿವಿಧ ಸಂಶೋಧನಾ ಮತ್ತು ಶೈಕ್ಷಣಿಕ ಅಧ್ಯಯನಗಳಿಗೆ ಹೆಚ್ಚಿನ ಮಟ್ಟದಲ್ಲಿ ಬಲ ತುಂಬುತ್ತದೆಂದು ನಿರೀಕ್ಷಿಸಲಾಗಿರುವ ‘ಪರಮ್ ಪ್ರವೇಗ’ವು 3.3 ಪೆಟಾಫ್ಲಾಪ್ಗಳ (1 ಪೆಟಾಫ್ಲಾಪ್ ಎಂದರೆ ಪ್ರತಿ ಸೆಕೆಂಡಿಗೆ ಕ್ವಾಡ್ರಿಲಿಯನ್ ಅಥವಾ 1015 ಕಾರ್ಯಾಚರಣೆಗಳು) ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯ ಹೊಂದಿದೆ. ಸೆಂಟರ್ ಫಾರ್ ಡೆವಲಪ್ ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಇದನ್ನು ವಿನ್ಯಾಸಗೊಳಿಸಿದೆ. ಈ ವ್ಯವಸ್ಥೆಯನ್ನು ರೂಪಿಸಲು ಬೇಕಾದ ಬಹುಪಾಲು ಬಿಡಿಭಾಗಗಳನ್ನು ದೇಶದಲ್ಲಿಯೇ ತಯಾರಿಸಿ ಜೋಡಣೆಗೊಳಿಸಲಾಗಿದೆ. ಇದರ ಜೊತೆಗೆ ‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಕರೆಗೆ ಅನುಗುಣವಾಗಿ ಸಿ-ಡ್ಯಾಕ್ ದೇಶೀಯವಾಗಿ ರೂಪಿಸಿರುವ ತಂತ್ರಾಂಶಗಳನ್ನು ಇದು ಹೊಂದಿದೆ.

[metaslider id=36683]

ಫೋಟೋ ಕೃಪೆ: ಹರೀಶ್ ಬೈಂದೂರು, ಎಸ್.ಇ.ಆರ್.ಸಿ., ಐ.ಐ.ಎಸ್ ಸಿ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ.) ಮತ್ತು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಗಳ (MeitY) ನೇತೃತ್ವದಲ್ಲಿ ಸಿ-ಡ್ಯಾಕ್ ಮತ್ತು ಐ.ಐ.ಎಸ್ ಸಿ. ಇದನ್ನು ಅನುಷ್ಠಾನಗೊಳಿಸಿವೆ. ಎನ್.ಎಸ್.ಎಂ. ಅಡಿಯಲ್ಲಿ ಇದುವರೆಗೆ ಐ.ಐ.ಎಸ್ ಸಿ, ಐ.ಐ.ಟಿ.ಗಳು, ಪುಣೆಯ ಐ.ಐ.ಎಸ್.ಇ.ಆರ್., ಜೆ.ಎನ್.ಸಿ.ಎ.ಎಸ್.ಆರ್., ಎನ್.ಎ.ಬಿ.ಐ.- ಮೊಹಾಲಿ ಮತ್ತು ಸಿ-ಡ್ಯಾಕ್ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ 10 ಸೂಪರ್ ಕಂಪ್ಯೂಟರ್ ಗಳನ್ನು ಅನುಸ್ಥಾಪಿಸಲಾಗಿದ್ದು, ಇವೆಲ್ಲವುಗಳನ್ನು ಒಟ್ಟು ಸೇರಿಸಿದ ಕಂಪ್ಯೂಂಟಿಂಗ್ ಸಾಮರ್ಥ್ಯ 17 ಪೆಟಾಫ್ಲಾಪ್ ಗಳಷ್ಟಾಗುತ್ತದೆ. ಇವುಗಳನ್ನು ಬಳಸಿ ದೇಶದಾದ್ಯಂತ ಇರುವ ಸಂಶೋಧಕರು ಇದುವರೆಗೆ 31,00,000 ಗಣಕೀಕರಣ (ಕಾಂಪ್ಯುಟೇಷನಲ್) ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಬೋಧಕ ವೃಂದದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಮುಖ ಸಂಶೋಧನಾ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಇವು ತುಂಬಾ ಸಹಕಾರಿಯಾಗಿವೆ. ವಂಶವಾಹಿನಿ ವಿಶ್ಲೇಷಣಾತ್ಮಕ ಅಧ್ಯಯನ (ಜೀನೋಮಿಕ್ಸ್) ಹಾಗೂ ಔಷಧ ಆವಿಷ್ಕಾರ, ನಗರ ಪರಸರೀಯ ಪರಿಸ್ಥಿತಿಗಳ ಅಧ್ಯಯನ, ಪ್ರವಾಹ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆ ವ್ಯವಸ್ಥೆಗಳ ಸ್ಥಾಪನೆ, ದೂರಸಂಪರ್ಕ ಜಾಲಗಳ ಕಾರ್ಯಕ್ಷಮತೆ ಗರಿಷ್ಠಗೊಳಿಸುವಿಕೆ ಸೇರಿದಂತೆ ಹಲವು ಕಾರ್ಯಯೋಜನೆಗಳಿಗೆ ವೇದಿಕೆಗಳನ್ನು ರೂಪಿಸಲು ಇವನ್ನು ಬಳಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಐ.ಐ.ಎಸ್ ಸಿ. ಯಲ್ಲಿ ಅನುಸ್ಥಾಪಿಸಲಾಗಿರುವ ‘ಪರಮ್ ಪ್ರವೇಗ’ವು ವಿಭಿನ್ನ ಜಾಲಘಟಕಗಳ ಸಂಯೋಜನೆಯಾಗಿದೆ. ಇದರಲ್ಲಿ ಸಿ.ಪಿ.ಯು. ಜಾಲಘಟಕಗಳಿಗೆ ಇಂಟೆಲ್ ಕ್ಸಿಯಾನ್ ಕ್ಯಾಸ್ಕೇಡ್ ಲೇಕ್ ಪ್ರೊಸೆಸರ್ ಗಳನ್ನು ಹಾಗೂ ಜಿ.ಪಿ.ಯು. ಜಾಲಘಟಕಗಳಿಗೆ NVIDIA ಟೆಸ್ಲಾ V100 ಕಾರ್ಡ್ ಗಳನ್ನು ಬಳಸಲಾಗಿದೆ. ಇನ್ನು ಹಾರ್ಡ್ ವೇರ್ ವಿಷಯಕ್ಕೆ ಬಂದರೆ, ಇದು ಗರಿಷ್ಠ 3.3 ಪೆಟಾಫ್ಲಾಪ್ ಗಳಷ್ಟು ಕಂಪ್ಯೂಟಿಂಗ್ ಸಾಮರ್ಥ್ಯದ ATOS BullSequana XH2000 ಸರಣಿ ವ್ಯವಸ್ಥೆಯನ್ನು ಹೊಂದಿದೆ.ಬಈ ಹಾರ್ಡ್ ವೇರ್ ಗೆ ಪೂರಕವಾದ ಸಾಫ್ಟ್ ವೇರ್ ಗಳನ್ನು ಸಿ-ಡ್ಯಾಕ್ ಒದಗಿಸುವುದರ ಜೊತೆಗೆ ಅದಕ್ಕೆ ಕಾರ್ಯಬೆಂಬಲವನ್ನೂ ನೀಡುತ್ತಿದೆ. ಅಧಿಕ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ (HPC) ಆನ್ವಯಿಕತೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಅಗತ್ಯವಾದ ಪ್ರೋಗ್ರಾಂ ಡೆವೆಲಪ್ ಮೆಂಟ್ ಟೂಲ್ ಗಳು, ಯುಟಿಲಿಟಿಗಳು ಮತ್ತು ಲೈಬ್ರರಿಗಳು ಈ ಸೂಪರ್ ಕಂಪ್ಯೂಟರ್ ನಲ್ಲಿವೆ.

ಐ.ಐ.ಎಸ್ ಸಿ.ಯು ಹಲವು ವರ್ಷಗಳ ಹಿಂದೆಯೇ ಆಧುನಿಕ ಸೂಪರ್ ಕಂಪ್ಯೂಟಿಂಗ್ ಸೌಲಭ್ಯವನ್ನು ಹೊಂದಿತ್ತು. ಸಂಸ್ಥೆಯು 2015ರಲ್ಲಿ ಸಂಸ್ಥೆಯು ‘ಸಹಸ್ರ ಟಿ’ ಸೂಪರ್ ಕಂಪ್ಯೂಟರ್ ಅನ್ನು ಖರೀದಿಸಿ ಅನುಸ್ಥಾಪನೆಗೊಳಿಸಿತ್ತು. ಇದು ಅಂದಿನ ಸನ್ನಿವೇಶದಲ್ಲಿ ಅತ್ಯಧಿಕ ವೇಗದ ಸೂಪರ್ ಕಂಪ್ಯೂಟರ್ ಆಗಿತ್ತು. ಅತ್ಯಂತ ಪರಿಣಾಮಕಾರಿಯಾದ ಹಾಗೂ ಸಾಮಾಜಿಕವಾಗಿ ಪ್ರಸ್ತುತವೆನ್ನಿಸುವಂತಹ ವಲಯಗಳಲ್ಲಿ ಸಂಶೋಧನೆ ನಡೆಸಲು ಬೋಧಕ ವೃಂದದವರು ಹಾಗೂ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸುತ್ತಿದ್ದಾರೆ. ತೀರಾ ಇತ್ತೀಚಿನ ಉದಾಹರಣೆ ಹೇಳುವುದಾದರೆ, ಕೋವಿಡ್-19 ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಸಂಶೋಧನಾ ಅಧ್ಯಯನಗಳಿಗೆ ಇದನ್ನು ಉಪಯೋಗಿಸಲಾಗಿದೆ. ವೈರಾಣುಗಳ ಪ್ರವೇಶ ಹಾಗೂ ಅವುಗಳ ಬಂಧನ ಪ್ರಕ್ರಿಯೆಯ ಪ್ರತಿರೂಪೀಕರಣ, ಬ್ಯಾಕ್ಟೀರಿಯಲ್ ಹಾಗೂ ವೈರಾಣು ಕಾಯಿಲೆಗಳಲ್ಲಿ ಪ್ರೋಟೀನ್ ಗಳ ಪ್ರತಿಸ್ಪಂದನ, ಬ್ಯಾಕ್ಟಿರಿಯಾ ನಿರೋಧಕ ಹಾಗೂ ವೈರಾಣು ನಿರೋಧಕ ಗುಣಗಳುಳ್ಳ ಹೊಸ ಅಣುಗಳ ಸಂರಚನೆ ಇತ್ಯಾದಿಗಳಿಗೆ ಸಂಬಂಧಿಸಿದ ಸಂಶೋಧನೆಗಳ ವೇಳೆಯೂ ಇದು ಸಾಕಷ್ಟು ಸಹಕಾರಿಯಾಗಿದೆ. ಇದಲ್ಲದೇ ಹಸಿರು ಇಂಧನ ತಾಂತ್ರಿಕತೆ, ಹವಾಮಾನ ವೈಪರೀತ್ಯ ಅಧ್ಯಯನ ಕುರಿತ ಸಂಶೋಧನೆಗಳಿಗೆ, ವೈಮಾನಿಕ ಎಂಜಿನ್ ಗಳ ಹಾಗೂ ಹೈಪರ್ ಸಾನಿಕ್ ವಿಮಾನ ಗಳ ವಿಶ್ಲೇಷಣಾತ್ಮಕ ಅಧ್ಯಯನಗಳಲ್ಲೂ ಸಾಕಷ್ಟು ಉಪಯುಕ್ತವಾಗಿದೆ. ಇದೀಗ ‘ಪರಮ್ ಪ್ರವೇಗ’ ಅನುಸ್ಥಾಪನೆಯಿಂದ ಈ ಎಲ್ಲಾ ಸಂಶೋಧನಾತ್ಮಕ ಅಧ್ಯಯನಗಳು ಇನ್ನಷ್ಟು ವೇಗ ಪಡೆಯುವ ನಿರೀಕ್ಷೆ ಇದೆ.

ತಾಂತ್ರಿಕ ನಿರ್ದಿಷ್ಟತೆಗಳು ಸೇರಿದಂತೆ ‘ಪರಮ್ ಪ್ರವೇಗ’ಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ:
http://www.serc.iisc.ac.in/supercomputer/for-traditional-hpc-simulations-param-pravega/

—-000—-