ಇಂಧನ ಮತ್ತು ಪರಿಸರ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಷೆಲ್ ಇಂಡಿಯಾ ಕಂಪನಿಗಳು ಸಹಭಾಗಿತ್ವ ಮಾಡಿಕೊಂಡಿವೆ. ಭಾರತೀಯ ವಿಜ್ಞಾನ ಸಂಸ್ಥೆಯ ಅಂತರಶಿಸ್ತೀಯ ಇಂಧನ ಸಂಶೋಧನಾ ಕೇಂದ್ರ (ಐಸಿಇಆರ್) ದಲ್ಲಿ ನಡೆಯುತ್ತಿರುವ ಅತ್ಯಾಧುನಿಕ ಇಂಧನ ಹಾಗೂ ಪರಿಸರ ಸಂಬಂಧಿ ಸಂಶೋಧನೆಗಳನ್ನು ಆಧರಿಸಿ ಮುನ್ನಡಿ ಇಡಬೇಕೆಂಬುದು ಈ ಸಹಭಾಗಿತ್ವದ ಉದ್ದೇಶವಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 15ನೇ ಸೆಪ್ಟೆಂಬರ್ 2022ರ ಗುರುವಾರ ಈ ಸಹಭಾಗಿತ್ವಕ್ಕೆ ಸಹಿ ಹಾಕಲಾಯಿತು. ಐಐಎಸ್ಸಿ ನಿರ್ದೇಶಕ ಪ್ರೊಫೆಸರ್ ಗೋವಿಂದನ್ ರಂಗರಾಜನ್ ಮತ್ತು ಷೆಲ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಯೂರಿ ಸೆಬ್ರೆಗ್ತತ್ಸ್ ಅವರು ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.
_______________________
ಹಸಿರು ಮನೆ ಅನಿಲಗಳ ಹೊರಸುವಿಕೆಯನ್ನು ತಗ್ಗಿಸುವುದು, ಕಡಿಮೆ ಇಂಗಾಲದ ಇಂಧನಗಳು, ಡಿಸ್ಟ್ರಿಬ್ಯೂಟೆಡ್ ಎಲೆಕ್ಟ್ರಿಫಿಕೇಶನ್, ಇಂಗಾಲ ಹೀರುಕಗಳು, ಜಲಜನಕ ಉತ್ಪಾದನೆ, ಸೂಪರ್ ಕ್ರಿಟಿಕಲ್ ಇಂಗಾಲದ ಡೈಆಕ್ಸೈಡ್ ಬಳಸಿ ಕ್ಷಮತೆಯಿಂದ ಕೂಡಿದ ಇಂಧನ ಹಾಗೂ ಶೀತಲೀಕರಣ ಆವರ್ತನಗಳ ಮೂಲಕ ಇಂಗಾಲಮುಕ್ತ ಸನ್ನಿವೇಶ ನಿರ್ಮಾಣಕ್ಕೆ ಉತ್ತೇಜನ ನೀಡುವುದು ಇತ್ಯಾದಿಗಳ ಬಗ್ಗೆ ಈ ಸಹಭಾಗಿತ್ವವು ಗಮನಕೇಂದ್ರಿಕರಿಸುತ್ತದೆ. ಈ ಒಪ್ಪಂದದ ಪ್ರಕಾರ, ಯೋಜಿತ ಸಂಶೋಧನಾ ಕಾರ್ಯಯೋಜನೆಗಳಿಗೆ ಚಾಲನೆ ಕೊಡಲಾಗುತ್ತದೆ. ಇದರಲ್ಲಿ ಷೆಲ್ ಕಂಪನಿಯ ವಿಜ್ಞಾನಿಗಳು ಹಾಗೂ ಐಐಎಸ್ ಸಿ ಬೋಧಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಇಂಗಾಲ ಹೊರಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸಬೇಕೆಂಬ ಗುರಿಯ ಹಿನ್ನೆಲೆಯಲ್ಲಿ ತಂತ್ರಜ್ಞಾನದ ನೆರವಿನಿಂದ ವಿವಿಧ ಉದ್ಯಮ ವಲಯಗಳಲ್ಲಿ ಇಂಗಾಲ ರಹಿತತೆ ಹಾಗೂ ಶುದ್ಧ ಇಂಧನದ ಹೆಚ್ಚಿನ ಲಭ್ಯತೆಗಳಿಗೆ ಭಾರತೀಯ ಸಂದರ್ಭದಲ್ಲಿ ವಿಶೇಷವಾದ ಪ್ರಾಮುಖ್ಯವಿದೆ. ಹವಾಮಾನ ವೈಪರೀತ್ಯವು ಮುಖ್ಯ ವಿಷಯವಾಗಿದೆ ಗಮನ ಸೆಳೆಯುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಇಂಧನಗಳು ಹಾಗೂ ಈಗ ಬಳಕೆಯಾಗುತ್ತಿರುವ ಇಂಧನಗಳ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಇಂಗಾಲರಹಿತತೆಗೆ (ಡೀಕಾರ್ಬೊನೈಸೇಷನ್) ಹೆಚ್ಚು ಒತ್ತಕೊಡಲಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊಫೆಸರ್ ಗೋವಿಂದನ್ ರಂಗರಾಜನ್ ಅವರು, “ಷೆಲ್ ಇಂಡಿಯಾ ಕಂಪನಿಯೊಂದಿಗಿನ ಈ ಸಹಭಾಗಿತ್ವವು ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ನೆರವಿನಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಮಗೆ ಮಹತ್ವದ್ದೆನ್ನಿಸಿರುವ ಇಂಧನಕ್ಕೆ ಸಂಬಂಧಿಸಿದ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಂತಿಮವಾಗಿ ಇದು ಜಾಗತಿಕ ಇಂಗಾಲ ಹೊರಸುಸುವಿಕೆಯನ್ನು ತಗ್ಗಿಸಲು ನೆರವು ನೀಡುತ್ತದೆ. ಈ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಷೆಲ್ ಇಂಡಿಯಾ ಜೊತೆ ಸಹಭಾಗಿತ್ವ ಸಾಧಿಸುತ್ತಿರುವುದು ಖುಷಿ ತಂದಿದೆ ಎಂದೂ ಅವರು ಹೇಳಿದರು.
____________________
ಭಾರತ ಸರ್ಕಾರವು ಸಿದ್ಧಪಡಿಸಿರುವ ನೀಲನಕ್ಷೆಯಂತೆ ಇಂಧನ ಬಳಕೆಯಲ್ಲಿ ಆಗಬೇಕಾದ ಬದಲಾವಣೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತ ಕೇಂದ್ರಿತ ಪರಿಹಾರಗಳನ್ನು ರೂಪಿಸುವುದಕ್ಕೆ ಕೂಡ ಈ ಸಹಭಾಗಿತ್ವವು ಪೂರಕವಾಗಿರಲಿದೆ. ಇದು, ದೇಶದಲ್ಲಿ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯನ್ನೂ ಮೂಡಿಸಿದೆ. ಸ್ನಾತಕೋತ್ತರ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸುವುದು, ಉದ್ದಿಮೆಗಳಲ್ಲಿ ಇಂಟರ್ನ್ ಷಿಪ್ಗಳನ್ನು ಕೈಗೊಳ್ಳುವಂತೆ ಅವಕಾಶಗಳನ್ನು ಮುಕ್ತಗೊಳಿಸುವುದು ಹಾಗೂ ಯುವ ಸಂಶೋಧಕರನ್ನು ಸಾಹಸೋದ್ಯಮಗಳಿಗೆ ಪ್ರೋತ್ಸಾಹಿಸುವುದು ಇತ್ಯಾದಿ ಕ್ರಮಗಳ ಮೂಲಕ ಇದನ್ನು ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ.
ಇದು ಶೈಕ್ಷಣಿಕ ವಲಯ ಹಾಗೂ ಉದ್ಯಮ ವಲಯಗಳಿಗೆ ಸಹಭಾಗಿತ್ವ ಎಷ್ಟು ಮಹತ್ವವಾದುದು ಎಂಬುದನ್ನು ತೋರಿಸುತ್ತದೆ. ವೈವಿಧ್ಯಮಯ ಪಾಲುದಾರಿಕೆಯ ಮೂಲಕ ಪರಿಣತರನ್ನು ಸಮನ್ವಯಗೊಳಿಸಿ ಇಂಧನ ಬಳಕೆಯಲ್ಲಿನ ಸ್ಥಿತ್ಯಂತರಕ್ಕೆ ಅತ್ಯಂತ ಅಗತ್ಯವಾದ ಪರಿಹಾರಗಳನ್ನು ಒದಗಿಸಬಲ್ಲ ಕ್ರಾಂತಿಕಾರಕ ತಾಂತ್ರಿಕತೆಗಳ ಅಭಿವೃದ್ಧಿಯನ್ನು ತ್ವರಿತಗೊಳಿಸಲು ನಮಗೆ ಸಾಧ್ಯವಾಗಿದೆ. ಐಐಎಸ್ ಸಿ ಯೊಂದಿಗಿನ ಈ ಸಂಶೋಧನಾ ಒಪ್ಪಂದದ ಫಲವಾಗಿ ಪರಿಣಾಮಕಾರಿ ನಾವೀನ್ಯತೆಗಳು ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಮಾತನಾಡಿದ ಷೆಲ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಯೂರಿ ಸೆಬ್ರೆಗ್ತತ್ಸ್ ಅಭಿಪ್ರಾಯಪಟ್ಟರು.
ಇಂಧನಕ್ಕೆ ಸಂಬಂಧಿಸಿದ ವಲಯಗಳಲ್ಲಿ ಮೂಲಭೂತ ಹಾಗೂ ಆನ್ವಯಿಕ ಸಂಶೋಧನೆಗಳೆರಡನ್ನೂ ಐಸಿಇಆರ್ ನಡೆಸುತ್ತಿದೆ. ನಾನು ನಡೆಸುತ್ತಿರುವ ಸಂಶೋಧನೆಗಳನ್ನು ಇಂಧನ ಮಾರುಕಟ್ಟೆಯ ಉತ್ಪನ್ನಗಳಾಗಿ ಪರಿವರ್ತಿಸಲು ಅದು ಒತ್ತು ನೀಡಿದೆ. ‘ಐಐಎಸ್ಸಿ ಶತಮಾನೋತ್ತರ ಒಳನೋಟ’ದ ಭಾಗವಾಗಿ ಭಾರತ ಸರ್ಕಾರದ ರಾಷ್ಟ್ರೀಯ ಅಭಿಯಾನಗಳಿಗೆ ಪೂರಕವೆನ್ನಿಸುವಂತೆ ಸಾಮಾಜಿಕ ಪ್ರಸ್ತುತತೆಯ ಸಂಶೋಧನೆಗಳನ್ನು ಕೈಗೊಳ್ಳಬೇಕೆಂಬ ಉದ್ದೇಶದಿಂದ 2012 ರಲ್ಲಿ ಈ ಪರಿಕಲ್ಪನೆ ಒಡಮೂಡಿತು. ತಯಾರಿಕಾ ಉದ್ಯಮಿಗಳೊಂದಿಗೆ ಸಹಭಾಗಿತ್ವ ಸಾಧಿಸುವ ಮೂಲಕ ಪ್ರೋಸೆಸ್ ಮತ್ತು ಮೆಟೀರಿಯಲ್ ಡೆವಲಪ್ಮೆಂಟ್ ಗೆ ಒತ್ತು ನೀಡಿ ಹಲವಾರು ವಲಯಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಬೇಕೆಂಬುದು ಐಸಿಇಆರ್ ಆಶಯವಾಗಿದೆ.
ಸಂಪರ್ಕಿಸಿ:
ಐಐಎಸ್ಸಿ ಸಮೂಹನ ಸಂವಹನ ಕಚೇರಿ | news@iisc.ac.in