ಕ್ಯಾನ್ಸರ್ ಕೋಶಗಳ ವಿರುದ್ಧ ಪ್ರತಿಕಾಯ ಉತ್ಪತ್ತಿ ಪ್ರಚೋದಿಸುವ ಕೃತಕ ಆಂಟಿಜೆನ್


22 ಏಪ್ರಿಲ್ 2024

-ರಂಜಿನಿ ರಘುನಾಥ್

ರಕ್ತದಲ್ಲಿನ ಪ್ರೋಟೀನಿಗೆ ತಗುಲಿಕೊಂಡು ದುಗ್ಧ ಗೆಣ್ಣುಗಳೆಡೆಗೆ ಸಂಚರಿಸಿ, ಅಲ್ಲಿ ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಸೆಣಸಬಲ್ಲ ಪ್ರತಿಕಾಯಗಳ ಉತ್ಪತ್ತಿಯನ್ನು ಉತ್ತೇಜಿಸಬಲ್ಲ ಆಂಟಿ ಜೆನ್ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಈ ವಿಧಾನವು ಹಲವಾರು ವಿಧದ ಕ್ಯಾನ್ಸರ್ ಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೊಸ ದಿಕ್ಕು ತೋರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಮನುಷ್ಯನ ಶರೀರದಲ್ಲಿ ಕ್ಯಾನ್ಸರ್ ಕೋಶಗಳು ತಮ್ಮ ವಿರುದ್ಧ ಹೋರಾಡಬಲ್ಲ ಹಾಗೂ ತಮ್ಮನ್ನು ನಿರ್ಮೂಲನೆಗೊಳಿಸಬಲ್ಲ ಪ್ರತಿಕಾಯಗಳ (ಆಂಟಿ ಬಾಡಿ) ಉತ್ಪತ್ತಿಯನ್ನು ದುರ್ಬಲಗೊಳಿಸಬಹುದು ಅಥವಾ ಸ್ಥಗಿತಗೊಳಿಸಬಹುದು. ಆದ್ದರಿಂದ, ಕ್ಯಾನ್ಸರ್ ವಿರುದ್ಧದ ಲಸಿಕೆಯ ಅಭಿವೃದ್ಧಿಯು ಪ್ರತಿಕಾಯಗಳ ಉತ್ಪತ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ಯಾನ್ಸರ್ ಕೋಶಗಳ ಮೇಲೆ ಕಂಡುಬರುವ ಆಂಟಿಜೆನ್ನಿನ ಮಾರ್ಪಡಿಸುವಿಕೆಯನ್ನು ಅಥವಾ ಅದರ ಪ್ರತಿರೂಪದಂತಿರುವ ಆಂಟಿಜೆನ್ನನ್ನು ಸೃಷ್ಟಿಸುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಇಂತಹ ಆಂಟಿಜೆನ್ ಗಳನ್ನು ಅಭಿವೃದ್ಧಿಪಡಿಸಲು ಕ್ಯಾನ್ಸರ್ ಕೋಶಗಳ ಮೇಲ್ಮೈ ಮೇಲೆ ಕಂಡುಬರುವಂತಹ ಕಾರ್ಬೋಹೈಡ್ರೇಟುಗಳತ್ತ ಮುಖಮಾಡಿದ್ದಾರೆ.

“ಕ್ಯಾನ್ಸರ್ ವಿರೋಧಿ ಲಸಿಕೆಗಳ ಅಭಿವೃದ್ಧಿಯಲ್ಲಿ ಕಾರ್ಬೋಹೈಡ್ರೇಟ್ ಆಧಾರಿತ ಆಂಟಿಜೆನ್ನುಗಳು ಅತ್ಯಂತ ಹೆಚ್ಚಿನ ಪ್ರಾಮುಖ್ಯ ಹೊಂದಿವೆ” ಎಂದು ವಿವರಿಸುತ್ತಾರೆ ಐಐಎಸ್‌ಸಿ ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಹಾಗೂ ‘ಅಡ್ವಾನ್ಸ್ಡ್ ಹೆಲ್ತ್ ಕೇರ್ ಮಟೀರಿಯಲ್ಸ್’ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಹಿರಿಯ ಲೇಖಕರಾದ ಎನ್ ಜಯರಾಮನ್. “ಸಹಜ ಜೀವಕೋಶಗಳು ಹಾಗೂ ಕ್ಯಾನ್ಸರ್ ಜೀವಕೋಶಗಳು, ಇವೆರಡೂ ತಮ್ಮ ಮೇಲ್ಮೈ ಮೇಲೆ ದೊಡ್ಡ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಗಳ ಲೇಪನ ಹೊಂದಿರುವುದು ಇದಕ್ಕೆ ಬಹುಮುಖ್ಯ ಕಾರಣ. ಆದರೆ, ಕ್ಯಾನ್ಸರ್ ಜೀವಕೋಶಗಳು ತೀವ್ರ ಪ್ರಮಾಣದಲ್ಲಿ ಭಿನ್ನಾಗ್ರಗೊಂಡ (truncated) ಕಾರ್ಬೋಹೈಡ್ರೇಟ್ ಕಣಗಳಿಂದ ಕೂಡಿರುತ್ತವೆ” ಎಂದೂ ಅವರು ಪ್ರತಿಪಾದಿಸುತ್ತಾರೆ.

ಈ ಹಿಂದೆ ವಿಜ್ಞಾನಿಗಳು ಕೃತಕ ಪ್ರೋಟೀನ್ ಅಥವಾ ವೈರಾಣು ಕಣಗಳನ್ನು ವಾಹಕವನ್ನಾಗಿ ಬಳಸಿ ಇಂತಹ ಆಂಟಿಜೆನ್ನುಗಳನ್ನು ದೇಹದೊಳಕ್ಕೆ ರವಾನಿಸಲು ಪ್ರಯತ್ನಿಸಿದ್ದರು. ಆದರೆ ಇಂತಹ ವಾಹಕಗಳ ಗಾತ್ರ ದೊಡ್ಡದಿರುವುದು, ಅಡ್ಡ ಪರಿಣಾಮಗಳಿಗೆ ಎಡೆ ಮಾಡಿಕೊಡುವುದು ಮತ್ತು ಕೆಲವೊಮ್ಮೆ ಕ್ಯಾನ್ಸರ್ ಕೋಶಗಳ ವಿರುದ್ಧ ಪ್ರತಿಕಾಯಗಳ ಉತ್ಪತ್ತಿಯನ್ನು ಕುಗ್ಗಿಸುವುದು ಕಂಡುಬಂದಿತ್ತು. ಆದ್ದರಿಂದ, ಐಐಎಸ್‌ಸಿ ತಜ್ಞರ ತಂಡದವರು ತಮ್ಮ ಅಧ್ಯಯನದಲ್ಲಿ ರಕ್ತದ ಪ್ಲ್ಯಾಸ್ಮಾದಲ್ಲಿ ವಿಪುಲ ಪ್ರಮಾಣದಲ್ಲಿರುವ ನೈಸರ್ಗಿಕ ಪ್ರೋಟೀನಾದ ಸೀರಂ ಆಲ್ಬುಮಿನ್ ನ ವಾಹಕ ಸಾಮರ್ಥ್ಯ ಬಳಸಿಕೊಳ್ಳಲು ನಿರ್ಧರಿಸಿದರು.

ಆಂಟಿಜೆನ್ ಸಂಯುಕ್ತ ರಾಸಾಯನಿಕವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಯರಾಮನ್ ಮತ್ತು ಅವರ ಪಿಎಚ್.ಡಿ. ವಿದ್ಯಾರ್ಥಿ ಕೀರ್ತನಾ ಟಿವಿ ಅವರು ಹಲವಾರು ಬಗೆಯ ಕ್ಯಾನ್ಸರ್ ಕೋಶಗಳ ಮೇಲೆ ಕಂಡುಬರುವ Tn ಎಂಬ ಭಿನ್ನಾಗ್ರಗೊಂಡ ಕಾರ್ಬೋಹೈಡ್ರೇಟನ್ನು ಗುರುತಿಸಿ, ಅದನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದರು. ನಂತರ, ಅದನ್ನು ಅವರು ಎಣ್ಣೆಯೆಡೆಗೆ ಒಲವು ಹೊಂದಿದ (ನೀರಿನಡೆಗೆ ಒಲವು ಹೊಂದಿದ ಕಾರ್ಬೋಹೈಡ್ರೇಟ್ ಗಳಂತಲ್ಲದ) ದೀರ್ಘ ಸರಪಳಿಯ ರಾಸಾಯನಿಕದೊಂದಿಗೆ ಸಂಯೋಜನೆಗೊಳಿಸಿ ಗುಳ್ಳೆ ತರಹದ ‘ಮೈಸೆಲೆಸ್’ (ಕಲಿಲ ಕಣಗಳು) ರೂಪಿಸಿದರು. ಈ ಸಂಯೋಜನೆಯು ಮನುಷ್ಯನ ಸೀರಂ ಆಲ್ಬುಮಿನ್ ಗೆ ಬಿಗಿಯಾಗಿ ಅಂಟಿಕೊಳ್ಳುವ (ಬಂಧಗೊಳ್ಳುವ) ಸಾಮರ್ಥ್ಯ ಹೊಂದಿದೆ ಎಂಬುದು ಅವರಿಗೆ ದೃಢಪಟ್ಟಿತು.

“ಆಲ್ಬುಮಿನ್ ಗೆ ಅಂಟಿಕೊಳ್ಳುತ್ತಿದ್ದಂತೆಯೇ ಕಲಿಲಕಣವು ಚದುರಿಕೊಂಡು ಆಂಟಿಜೆನ್ನಿನ ಎಲ್ಲಾ ಪ್ರತ್ಯೇಕ ಕಣಗಳು ಲಭ್ಯ ಆಲ್ಬಮಿನ್ ಗೆ ಬಂಧಗೊಳ್ಳುತ್ತವೆ (ಅಂಟಿಕೊಳ್ಳುತ್ತವೆ)” ಎನ್ನುತ್ತಾರೆ ಜಯರಾಮನ್. “ಅಂದರೆ, ವೈರಾಣುವಿಗೆ ಅಥವಾ ಪ್ರೋಟೀನಿಗೆ ಅಥವಾ ಇನ್ನಿತರ ಬಗೆಯ ವಾಹಕಗಳಿಗೆ ಶೋಧಿಸುವ ಅಗತ್ಯವಿಲ್ಲ ಎಂಬ ಸಾಧ್ಯತೆಯನ್ನು ಇದು ತೆರೆದಿಡುತ್ತದೆ. ಅದನ್ನು ಮುಂದಕ್ಕೆ ಸಾಗಿಸಲು ಸೀರಮ್ ಆಲ್ಬುಮಿನ್ ಮಾತ್ರವೇ ಸಾಕು” ಎಂದು ಅವರು ವಿವರಿಸುತ್ತಾರೆ.

ಸಂಶೋಧಕರು ಈ ಸಂಯುಕ್ತ ರಾಸಾಯನಿಕವನ್ನು ಇಲಿಗಳ ಮೇಲೆ ಪ್ರಯೋಗಿಸಿ, ಅದು ಸಾಗುವ ಬಗೆ ಹಾಗೂ ಪ್ರತಿರೋಧಕತೆಯ ಮೇಲೆ ಉಂಟುಮಾಡುವ ಪರಿಣಾಮವನ್ನು ಅಧ್ಯಯನ ಮಾಡಿದರು. ಹೀಗೆ ಮಾಡಿದಾಗ, ಹಂತಕ T ಜೀವಕೋಶಗಳ ಸಕ್ರಿಯತೆ ಮತ್ತು ಪ್ರತಿಕಾಯ ಉತ್ಪತ್ತಿ ಸೇರಿದಂತೆ ಶರೀರದ ಪ್ರತಿರೋಧಕತೆಯಲ್ಲಿ ಒಳಗೊಳ್ಳುವ ಪ್ರಮುಖ ಜೀವಕೋಶೀಯ ಪ್ರಕ್ರಿಯೆಗಳ ನೆಲೆಯಾದ
ದುಗ್ಧ ಗೆಣ್ಣುಗಳಲ್ಲಿ ಆಂಟಿಜೆನ್ ಬಹುಮಟ್ಟಿಗೆ ಶೇಖರಣೆಗೊಳ್ಳುತ್ತದೆ ಎಂಬುದು ಅವರಿಗೆ ಕಂಡುಬಂದಿತು.

ಈ ಸಂಯುಕ್ತ ರಾಸಾಯನಿಕದಿಂದಾಗಿ ಪ್ರತಿರೋಧಕತೆ ಪಡೆದ ಇಲಿಗಳು ಕಡಿಮೆ ಡೋಸೇಜ್ ನೀಡಲಾದ ಸಂದರ್ಭದಲ್ಲಿಯೂ ಹೆಚ್ಚಿನ ಪ್ರಮಾಣದ ಪ್ರತಿಕಾಯಗಳನ್ನು ಸೃಷ್ಟಿಸಿದವು. ಆದರೆ, ಇದೇ ರೀತಿಯ ಆಂಟಿಜೆನ್ನನ್ನು ಪರ್ಯಾಯ ಬಾಹ್ಯ ಪ್ರೋಟೀನ್ ವಾಹಕದ ಮೂಲಕ ನೀಡಲಾದ ಇಲಿಗಳು ಕಡಿಮೆ ಪ್ರಮಾಣದ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿದವು. ತಾವು ಅಭಿವೃದ್ಧಿಪಡಿಸಿದ ಸಂಯುಕ್ತ ರಾಸಾಯನಿಕವನ್ನು ಎರಡನೇ ಬಾರಿ ನೀಡಿದಾಗ ಮೊದಲನೇ ಬಾರಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತದೆ ಎಂಬುದು ಕೂಡ ತಜ್ಞರಿಗೆ ಖಚಿತಪಟ್ಟಿತು. ಮೊದಲನೇ ಬಾರಿ ಲಸಿಕೆ ನೀಡಿದಾಗ ಸೃಷ್ಟಿಯಾಗುವ ಪ್ರತಿಕಾಯಗಳ ಉತ್ಪತ್ತಿಯನ್ನು ಇನ್ನಷ್ಟು ಉತ್ತೇಜಿಸುವ ಮೆಮೊರಿ- ಬಿ ಜೀವಕೋಶಗಳೆಂಬ ಪ್ರತಿರೋಧ ಕೋಶಗಳ ಸಕ್ರಿಯತೆ ಇದಕ್ಕೆ ಕಾರಣವಿರಬಹುದು ಎಂಬುದು ತಜ್ಞರ ಊಹೆಯಾಗಿದೆ.

ಈ ಸಂಯುಕ್ತ ರಾಸಾಯನಿಕವನ್ನು ಮುಂಬರುವ ದಿನಗಳಲ್ಲಿ ಲಸಿಕೆ ಅಭಿವೃದ್ದಿಗೆ ಹಾಗೂ ಚಿಕಿತ್ಸಾ ಪ್ರಯೋಗಗಳಿಗೆ ಬಳಸಬಹುದು ಎಂಬುದು ತಜ್ಞರ ತಂಡದ ವಿಶ್ವಾಸವಾಗಿದೆ. ಇದೇ ತಾತ್ವಿಕತೆಯನ್ನು ಇನ್ನಿತರ ಬಗೆಯ ಲಸಿಕೆಗಳ ಅಭಿವೃದ್ಧಿಗೂ ಅನುಸರಿಸಬಹುದು ಎಂದೂ ಜಯರಾಮನ್ ಅಭಿಪ್ರಾಯಪಡುತ್ತಾರೆ.

“ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಸೇರಿದಂತೆ ಬಹುತೇಕ ಎಲ್ಲಾ ಬಗೆಯ ಕ್ಯಾನ್ಸರ್ ಕೋಶಗಳಲ್ಲಿ Tn ಆಂಟಿ ಜೆನ್ ಇರುತ್ತದೆ” ಎನ್ನುತ್ತಾರೆ ಕೀರ್ತನಾ. “ಆಂಟಿಜೆನ್ ವಿಧವನ್ನು ಬದಲಿಸುವ ಮೂಲಕ ವಿವಿಧ ಕ್ಯಾನ್ಸರ್ ಗಳ ವಿರುದ್ಧ ಹೋರಾಡಬಹುದು” ಎಂದೂ ಅವರು ವಿಷಯ ಮಂಡಿಸುತ್ತಾರೆ.

ಉಲ್ಲೇಖ:
ಥೆಕ್ಕೆ ವೀಟ್ಟಿಲ್ ಕೆ,
ಜಯರಾಮನ್ ಎನ್,
Lymph Node Targeting Mediated by Albumin Hitchhiking of Synthetic Tn Glycolipid Leads to Robust In Vivo Antibody Production, Advanced Healthcare Materials (2024) e2304664.

ಸಂಪರ್ಕಿಸಿ:
ಎನ್ ಜಯರಾಮನ್
ಪ್ರಾಧ್ಯಾಪಕರು
ಸಾವಯವ ರಸಾಯನಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಇಮೇಲ್: jayaraman@iisc.ac.in
ಫೋನ್: +91-80-2293-2578
ವೆಬ್ಸೈಟ್: https://njiisc.in/

 

ಪರ್ತಕರ್ತರಿಗೆ ಸೂಚನೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.
——000—-