ಇರುವೆಗಳು ಪರ್ವತ ಪಕ್ಷಿಗಳನ್ನು ಎತ್ತರಕ್ಕೆ ದೂಡುತ್ತಿರುವ ಸಾಧ್ಯತೆ- ಅಧ್ಯಯನದಿಂದ ಪತ್ತೆ


30ನೇ ಸೆಪ್ಟೆಂಬರ್ 2024

ಮೋಹಿತ್ ನಿಕಲ್ಜೆ

ಭೂಮಿಯ ಮೇಲೆ ಪರ್ವತ ಪ್ರದೇಶಗಳ ವಿಸ್ತೀರ್ಣ ಶೇ 25ರಷ್ಟು ಮಾತ್ರವಿದ್ದರೂ ಪ್ರಪಂಚದ ಶೇ 85ರಷ್ಟು ಉಭಯವಾಸಿಗಳು, ಹಕ್ಕಿಪಕ್ಷಿಗಳು ಹಾಗೂ ಸಸ್ತನಿ ಪ್ರಭೇದಗಳಿಗೆ ಆವಾಸಸ್ಥಾನವಾಗಿದೆ. ಈ ಕಾರಣದಿಂದಾಗಿ, ಪರ್ವತ ಪ್ರದೇಶಗಳು ಅತ್ಯಂತ ವೈವಿಧ್ಯಮಯ ಜೀವವೈವಿಧ್ಯ ವ್ಯವಸ್ಥೆ ಹೊಂದಿದ್ದು, ವಿವಿಧ ಸಂಕುಲಗಳ ಸಂರಕ್ಷಣೆಯಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತವೆ.

ಪರ್ವತ ಪ್ರದೇಶಗಳಲ್ಲಿನ ಪ್ರಭೇದಗಳ ವೈವಿಧ್ಯವು, ಅಂದರೆ, ಯಾವ ವಿಭಿನ್ನ ಪ್ರಭೇದಗಳು ಯಾವ ಎತ್ತರಗಳಲ್ಲಿ ಕಂಡುಬರುತ್ತವೆ ಎಂಬುದು ಹವಾಮಾನದ ಪರಿಸ್ಥಿತಿಯಂತಹ ಪರಿಸರ ಸಂಬಂಧಿ ಕಾರಣಗಳಿಗಾಗಿ ವ್ಯತ್ಯಾಸಗೊಳ್ಳಬಹುದು. ಭಾರತೀಯ ವಿಜ್ಞಾನ ಸಂಸ್ಥೆಯ (ಐ ಐ ಎಸ್ ಸಿ) ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ (ಸಿಇಎಸ್) ಇತ್ತೀಚಿನ ಅಧ್ಯಯನವು ಮಧ್ಯಮ ಹಂತದ ಎತ್ತರಗಳಲ್ಲಿ ಹಕ್ಕಿ ಪ್ರಭೇದಗಳೊಂದಿಗೆ ನಂಟು ಹೊಂದಿದ ವಿಭಿನ್ನ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಓಸೋಫೈಲ್ಲಾ ಜೀನಸ್ ಕುಟುಂಬಕ್ಕೆ ಸೇರಿದ ಇರುವೆಗಳ ಇರುವಿಕೆಯೇ ತಜ್ಞರು ಪತ್ತೆಹಚ್ಚಿರುವ ಈ ವಿಭಿನ್ನ ಅಂಶವಾಗಿದೆ.

“ಪರ್ವತ ಪ್ರದೇಶಗಳಲ್ಲಿನ ಪ್ರಭೇದ ವೈವಿಧ್ಯವು ಎತ್ತರಕ್ಕೆ ಸಂಬಂಧಿಸಿದಂತೆ ಗ್ರ್ಯಾಫ್ ನಲ್ಲಿ ಅವಲೋಕಿಸಿದರೆ ಬಹುತೇಕ ಸಂದರ್ಭಗಳಲ್ಲಿ ರಸ್ತೆಯುಬ್ಬಿನ ಆಕಾರದಲ್ಲಿರುವುದು (ಹಂಪ್) ಕಂಡುಬರುತ್ತದೆ. ಬಹಳ ದೀರ್ಘಕಾಲದಿಂದಲೂ ಜನರು ಇದು ಹೀಗೇಕೆ ಎಂಬುದರ ಬಗ್ಗೆ ಕುತೂಹಲವುಳ್ಳವರಾಗಿದ್ದಾರೆ. ಆದರೆ, ಸ್ಪರ್ಧೆಯಂತಹ ಜೈವಿಕ ಪ್ರತಿಸ್ಪಂದನವು ಅವರು ಆಲೋಚಿಸಿರದಿದ್ದ ಪ್ರಕ್ರಿಯೆಗಳ ಪೈಕಿ ಒಂದಾಗಿದೆ” ಎನ್ನುತ್ತಾರೆ ಸಿಇಎಸ್ ಪ್ರಾಧ್ಯಾಪಕರಾದ ಹಾಗೂ ‘ಎಕಾಲಜಿ ಲೆಟರ್ಸ್’ನಲ್ಲಿ ಪ್ರಕಟಗೊಂಡಿರುವ ಈ ಅಧ್ಯಯನದ ಸಹಲೇಖಕರಾದ ಕಾರ್ತಿಕ್ ಶಂಕರ್.

ಓಸಿಫೆಲ್ಲಾ ಇರುವೆಗಳು ಆಕ್ರಮಣಕಾರಿ ಹಾಗೂ ಪ್ರಬಲ ವರ್ತನೆಗೆ ಹೆಸರಾದಂತವು. ಆಫ್ರಿಕಾ, ಏಷ್ಯಾ ಹಾಗೂ ಓಷಿಯಾನಾವನ್ನು ವ್ಯಾಪಿಸಿರುವ ಪ್ಯಾಲಿಯೋಟ್ರಾಪಿಕ್ಸ್ ವಲಯದ ಪರ್ವತಗಳ ಬುಡದಲ್ಲಿನ ಕೀಟಗಳ ಪ್ರಧಾನ ಪರಭಕ್ಷಕಗಳು ಇವು. ಈ ಹಿನ್ನೆಲೆಯಲ್ಲಿ, ಸಂಶೋಧಕರು ವಿಶೇಷವಾಗಿ ಕಡಿಮೆ ಹಂತದ ಎತ್ತರಗಳಲ್ಲಿ ಇರುವೆಗಳ ಇರುವಿಕೆಯು ಕೀಟಭಕ್ಷಕ ಹಕ್ಕಿಗಳ ವೈವಿಧ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಪರೀಕ್ಷಿಸಲು ನಿರ್ಧರಿಸಿದರು.

ಷಿಕಾಗೊ ವಿಶ್ವವಿದ್ಯಾಲಯದ ಜೀವವೈವಿಧ್ಯ ಮತ್ತು ವಿಕಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಈ ಅಧ್ಯಯನದ ಸಹಲೇಖಕ ಟ್ರೆವರ್ ಡಿ ಪ್ರೈಸ್ ಅವರ ನೇತೃತ್ವದಲ್ಲಿ ಈ ಮುಂಚೆ ನಡೆಸಲಾಗಿದ್ದ ಅಧ್ಯಯನವು ಪೂರ್ವ ಹಿಮಾಲಯ ಶ್ರೇಣಿಯ ಬುಡದಲ್ಲಿ ಓಸಿಫೈಲ್ಲಾ ಇರುವೆಗಳ ಇರುವಿಕೆಯು ಕೀಟಗಳ ದಟ್ಟಣೆಯನ್ನು ತಗ್ಗಿಸುತ್ತದೆ; ಹೀಗಾಗಿ, ಇದು ಕೀಟಭಕ್ಷಕ ಪಕ್ಷಿಗಳ ಉಪಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ತೋರಿಸಿತ್ತು. ಪ್ರಸ್ತುತ ಅಧ್ಯಯನದಲ್ಲಿ ತಜ್ಞರು ಈ ವಿನ್ಯಾಸವು ಇತರ ಕೀಟಭಕ್ಷಕ ಪ್ರಭೇದಗಳಲ್ಲಿಯೂ ವ್ಯಾಪಕವಾಗಿ ಕಂಡುಬರುತ್ತದೆಯೇ ಎಂಬುದನ್ನು ಅವಲೋಕಿಸಲು ಬಯಸಿದ್ದರು.

ಸಿಇಎಸ್ ಸಹಾಯಕ ಪ್ರಾಧ್ಯಾಪಕರಾದ ಉಮೇಶ್ ಶ್ರೀನಿವಾಸನ್ ಅವರ ನೇತ್ವತ್ವದ ಸಂಶೋಧಕರ ತಂಡವು ವಿವಿಧ ಪರ್ವತ ಶ್ರೇಣಿಗಳ ವಿಭಿನ್ನ ಹಂತಗಳ ಎತ್ತರಗಳಲ್ಲಿ ಕಂಡುಬರುವ ಹಕ್ಕಿ ಪ್ರಭೇದಗಳ ಬಗೆಗಿನ ಮಾಹಿತಿಯೊಂದಿಗಿನ ಲಭ್ಯ ದತ್ತಾಂಶಗಳನ್ನು (ಡ್ಯಾಟಾಸೆಟ್ಸ್) ತಮ್ಮ ಅಧ್ಯಯನಕ್ಕಾಗಿ ಬಳಸಿಕೊಂಡಿತ್ತು. ಹಕ್ಕಿಗಳನ್ನು ಅವುಗಳ ಆಹಾರದ ಆದ್ಯತೆಗಳಿಗೆ ಅನುಗುಣವಾಗಿ, ಅಂದರೆ ಕೀಟಭಕ್ಷಕ ಹಾಗೂ ಆಮ್ಲಿವೋರ್ಸ್ (ಸರ್ವಭಕ್ಷಕ) ಎಂದು ವರ್ಗೀಕರಿಸಿಕೊಂಡಿತ್ತು.

“ಈ ಹಕ್ಕಿ ಪ್ರಭೇದಗಳು ಕಂಡುಬರುವ ಎತ್ತರದ ಹಂತಗಳನ್ನು ನಾವು ಗಮನದಲ್ಲಿ ಇರಿಸಿಕೊಂಡೆದ್ದೆವು. ಪ್ರತಿ ವರ್ಗೀಕರಣದಲ್ಲೂ ಯಾವ ಹಕ್ಕಿ ಪ್ರಭೇದಗಳು 100 ಮೀಟರು, 200 ಮೀಟರು, 300 ಮೀಟರು ಹೀಗೆ ಪ್ರತಿ ನೂರು ಮೀಟರುಗಳ ಸ್ತರಗಳಲ್ಲಿ ಇರುತ್ತವೆ ಎಂಬುದನ್ನು ಗುರುತಿಸಿಕೊಂಡಿದ್ದೆವು” ಎಂದು ವಿವರಿಸುತ್ತಾರೆ ಶ್ರೀನಿವಾಸನ್. “ನಂತರ ನಾವು ಬುಡದಲ್ಲಿ ಇರುವೆಗಳಿರುವ ಪರ್ವತ ಶ್ರೇಣಿಗಳು ಹಾಗೂ ಬುಡದಲ್ಲಿ ಇರುವೆಗಳಿರದ ಪರ್ವತ ಶ್ರೇಣಿಗಳು ಎಂಬ ವರ್ಗೀಕರಣ ಮಾಡಿಕೊಂಡು ವಿವಿಧ ಎತ್ತರದ ಸ್ತರಗಳಲ್ಲಿ ಯಾವ್ಯಾವ ಪ್ರಭೇದಗಳು ಇವೆ ಎಂಬುದನ್ನು ಅವಲೋಕಿಸಿದೆವು” ಎಂದೂ ಅವರು ಮುಂದುವರಿಸುತ್ತಾರೆ.

ಹೀಗೆ ಅಧ್ಯಯನ ನಡೆಸಿದಾಗ, ಕಡಿಮೆ ಹಂತದ ಎತ್ತರಗಳಲ್ಲಿ ಓಸಿಫೆಲ್ಲಾ ಇರುವೆಗಳು ಅಸ್ತಿತ್ವಕ್ಕಾಗಿ ಕೀಟಭಕ್ಷಕ ಹಕ್ಕಿಗಳೊಂದಿಗೆ ಸ್ಪರ್ಧೆ ನಡೆಸುವುದನ್ನು ಸ್ಪಷ್ಟವಾಗಿ ಸೂಚಿಸುವ ವಿನ್ಯಾಸ ಕಂಡುಬಂದಿತು. ಇದು, ಈ ಪ್ರಭೇದದ ಹಕ್ಕಿಗಳನ್ನು ಪರ್ವತಗಳ ಎತ್ತರ ಪ್ರದೇಶಕ್ಕೆ ದೂಡುವುದಕ್ಕೆ ಕಾರಣವಾಗಿರಬಹುದು. ಇಂತಹ ಪ್ರಭೇದಗಳ ವೈವಿಧ್ಯವು ಸುಮಾರು 960 ಮೀಟರುಗಳಷ್ಟು ಎತ್ತರದಲ್ಲಿ ಅತ್ಯಂತ ಹೆಚ್ಚಾಗಿರುವುದು ಇದನ್ನು ಸೂಚಿಸುತ್ತದೆ. ಆದರೆ, ಮಕರಂದ ಹೀರುವ ಹಾಗೂ ಹಣ್ಣು ತಿನ್ನುವ ಇನ್ನಿತರ ಹಕ್ಕಿಪ್ರಭೇದಗಳು, ಅಂದರೆ, ಓಸಿಫೆಲ್ಲಾ ಇರುವೆಗಳಿಗೆ ಸ್ಪರ್ಧೆಯೊಡ್ಡದ ಹಕ್ಕಿಗಳ ಪ್ರಭೇದ ವೈವಿಧ್ಯವು ಎತ್ತರಕ್ಕೆ ಹೋದಂತೆಲ್ಲಾ ಕಡಿಮೆಯಾಗುತ್ತದೆ. ಹೀಗಾಗಿ, ಪರ್ವತಗಳ ಬುಡಗಳಲ್ಲಿ ಓಸಿಫೆಲ್ಲಾ ಇರುವೆಗಳ ಇರುವಿಕೆಯು ಅಥವಾ ಇಲ್ಲದಿರುವಿಕೆಯು ಕೀಟಭಕ್ಷಕ ಹಕ್ಕಿಗಳ ವೈವಿಧ್ಯವು ಮಧ್ಯಮ ಹಂತದ ಎತ್ತರಗಳಲ್ಲಿ ಏಕೆ ಅತ್ಯಂತ ಹೆಚ್ಚಾಗಿರುತ್ತದೆ ಎಂಬುದನ್ನು ಅಂದಾಜಿಸಲು ಉತ್ತಮ ಮಾನದಂಡವಾಗಿರುತ್ತದೆ ಎಂಬುದನ್ನು ತಂಡದವರು ಕಂಡುಕೊಂಡರು.

“ಹವಾಮಾನ ವೈಪರೀತ್ಯದಿಂದಾಗಿ ಒಂದೊಮ್ಮೆ ಇರುವೆಗಳು ತಮ್ಮ ಆವಾಸದ ನೆಲೆಯನ್ನು ಇನ್ನಷ್ಟು ಎತ್ತರದ ಹಂತಗಳಿಗೆ ಸ್ಥಳಾಂತರಿಸಿದರೆ ಎತ್ತರದ ಹಂತಗಳಲ್ಲಿರುವ ಹಕ್ಕಿ ಪ್ರಭೇದಗಳ ಮೇಲೂ ಅದು ಪ್ರಭಾವ ಬೀರಬಹುದು” ಎನ್ನುತ್ತಾರೆ ಶ್ರೀನಿವಾಸನ್.

ಉಲ್ಲೇಖ:

ಶ್ರೀನಿವಾಸನ್ ಯ, ಶಂಕರ್ ಕೆ, ಪ್ರೈಸ್ ಟಿಡಿ, Ant impacts on global patterns of bird elevational diversity, Ecology Letters (2024).

ಸಂಪರ್ಕ:

ಉಮೇಶ್ ಶ್ರೀನಿವಾಸನ್
ಸಹಾಯಕ ಪ್ರಾಧ್ಯಾಪಕರು, ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ)
ಇಮೇಲ್: umeshs@iisc.ac.in
ಫೋನ್: 080-22932360
ವೆಬ್ ಸೈಟ್: https://ces.iisc.ac.in/?q=user/408

ಕಾರ್ತಿಕ್ ಶಂಕರ್
ಪ್ರಾಧ್ಯಾಕರು ಹಾಗೂ ಮುಖ್ಯಸ್ಥರು, ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ ವಿಭಾಗ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ)
ಇಮೇಲ್: kshanker@iisc.ac.in
ಫೋನ್: 080-22933104
ವೆಬ್ ಸೈಟ್: http://www.kartikshanker.in/

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.