14 ಜನವರಿ 2025
ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ) ಸಹಯೋಗದಲ್ಲಿ ಐಐಎಸ್ ಸಿ ಬೆಂಗಳೂರು ಕ್ಯಾಂಪಸ್ಸಿನಲ್ಲಿ ಟಾಟಾ ಐಐಎಸ್ ಸಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಟಾಟಾ ಸಮೂಹವು ಇಂದು ಪ್ರಕಟಿಸಿದೆ.
ಈ ಸಂಬಂಧ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿದ್ದು, ಅದಕ್ಕೆ ಸಹಿ ಹಾಕಲಾಯಿತು. ಉದ್ದೇಶಿತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಟಾಟಾ ಸಮೂಹವು ರೂ 500 ಕೋಟಿಗಳ ಕೊಡುಗೆ ನೀಡಲಿದೆ.
ಟಾಟಾ ಐ.ಐ.ಎಸ್.ಸಿ. ವೈದ್ಯಕೀಯ ಕಾಲೇಜು ಭಾರತದಲ್ಲಿ ಚಿಕಿತ್ಸಾ ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಅನನ್ಯ ಮಾದರಿಯನ್ನು ಪ್ರೇರೇಪಿಸುವ ಉತ್ಕೃಷ್ಠತಾ ಕೇಂದ್ರವಾಗಿ ಹೊರಹೊಮ್ಮುವ ಆಶಯ ಹೊಂದಿದೆ. ಇದು, ಚಿಕಿತ್ಸಾ ವಿಜ್ಞಾನ ಮತ್ತು ವೈದ್ಯಕೀಯ ವೃತ್ತಿಗಳಿಗೆ ಮೂಲಭೂತ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳನ್ನು ಸಂಯೋಜನೆಗೊಳಿಸಲಿದೆ. ಗಂಥಿಶಾಸ್ತ್ರ, ನರವಿಜ್ಞಾನ (ನ್ಯೂರಾಲಜಿ), ನೆಫ್ರಾಲಜಿ (ಮೂತ್ರಪಿಂಡ ಅಧ್ಯಯನ), ಮಧುಮೇಹ, ಚಯಾಪಚಯ ನ್ಯೂನತೆಗಳು, ಸಾಂಕ್ರಾಮಿಕ ರೋಗಗಳು, ಸಂಯೋಜಿತ ವೈದ್ಯಕೀಯ, ಹಾಗೂ ಸಾರ್ವಜನಿಕ ಆರೋಗ್ಯ ಸೇರಿದಂತೆ ವಿವಿಧ ತಜ್ಞತೆಗಳ ಬಗ್ಗೆ ಇದು ಗಮನ ಕೇಂದ್ರೀಕರಿಸಲಿದೆ.
ಉದ್ದೇಶಿತ ಟಾಟಾ ಐ.ಐ.ಎಸ್.ಸಿ. ವೈದ್ಯಕೀಯ ಕಾಲೇಜು, ಸಂಯೋಜಿತ ಎಂಡಿ-ಪಿಎಚ್.ಡಿ. ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವ ಜೊತೆಗೆ ಇತರ ಅವಳಿ ಪದವಿ (ಡ್ಯುಯಲ್ ಡಿಗ್ರಿ) ಕೋರ್ಸ್ ಗಳ ಅಧ್ಯಯನಕ್ಕೆ ಅನುವು ಮಾಡಿಕೊಡಲಿದೆ. ಫಿಸಿಜಿಯನ್- ಸೈಂಟಿಸ್ಟ್ ಗಳ ಮತ್ತು ಮೆಡಿಕಲ್ ಟೆಕ್ನಾಲಜಿಸ್ಟ್ ಗಳ ಹೊಸ ಪೀಳಿಗೆಯನ್ನು ರೂಪಿಸುವ ಗುರಿಯನ್ನು ಇದು ಹೊಂದಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಐ.ಐ.ಎಸ್.ಸಿ. ವಿಜ್ಞಾನ ಹಾಗೂ ಎಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಅತ್ಯಾಧುನಿಕ ಚಿಕಿತ್ಸಾ ಅಭ್ಯಾಸ ಹಾಗೂ ವೈಜ್ಞಾನಿಕ ಸಂಶೋಧನೆಯನ್ನು ಸಂಯೋಜಿಸುವ ಮೂಲಕ ಇದನ್ನು ಸಾಧಿಸಲಾಗುವುದು. ಇಡೀ ದೇಶಕ್ಕೆ ಮಾದರಿಯಾಗುವಂತಹ ಚಿಕಿತ್ಸಾ ಸಂಶೋಧನೆ ಮತ್ತು ತರಬೇತಿಯ ಅನನ್ಯ ಮಾದರಿಯನ್ನು ರೂಪಿಸುವ ಧ್ಯೇಯ ಹೊಂದಲಾಗಿದೆ. ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ನೈಪುಣ್ಯ, ಜ್ಞಾನ ಹಾಗೂ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುವು ಕಲ್ಪಿಸಲು ಪ್ರಪಂಚದ ಮುಂಚೂಣಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಳ್ಳುವುದಕ್ಕೂ ಒತ್ತು ಕೊಡಲಾಗುತ್ತದೆ.
ಟಾಟಾ ಸನ್ಸ್ ಅಧ್ಯಕ್ಷರಾದ ಶ್ರೀ ಎನ್.ಚಂದ್ರಶೇಖರನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಆರೋಗ್ಯಶುಶ್ರೂಷೆಯು ಭಾರತದ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಜೊತೆಗೆ, ಡಯಾಗ್ನೊಸಿಸ್ ನಿಂದ ಹಿಡಿದು ಶುಶ್ರೂಷೆ ಹಾಗೂ ಸಮುದಾಯ ಆರೋಗ್ಯದವರೆಗೆ ತಂತ್ರಜ್ಞಾನವು ಉಂಟುಮಾಡಬಲ್ಲ ಅಗಾಧ ಪರಿವರ್ತನೆಯ ಹಿನ್ನೆಲೆಯಲ್ಲಿ ಇದು ಬಹಳ ದೊಡ್ಡ ಅವಕಾಶವೂ ಆಗಿದೆ. ಹೀಗಾಗಿ, ಟಾಟಾ ಐ.ಐ.ಎಸ್.ಸಿ. ವೈದ್ಯಕೀಯ ಕಾಲೇಜಿನ ಸ್ಥಾಪನೆ ಬಗ್ಗೆ ಪ್ರಕಟಿಸಲು ನಮಗೆ ಬಹಳ ಸಂತಸವಾಗುತ್ತಿದೆ. ಸಂಸ್ಥೆಯು ಅತ್ಯಾಧುನಿಕ ಸಂಶೋಧನೆ ಹಾಗೂ ಜಾಗತಿಕ ಸಹಭಾಗಿತ್ವಕ್ಕೆ ಗಮನ ನೀಡುವುದರಿಂದ ಆಧುನಿಕ ವೈದ್ಯಕೀಯದ ಹೊಚ್ಚ ಹೊಸ ವಿಧಾನಗಳಲ್ಲಿ ತರಬೇತುಗೊಂಡ ಅತ್ಯಂತ ಅರ್ಹರಾದ ಫಿಸಿಜಿಯನ್-ಸೈಂಟಿಸ್ಟ್ ಗಳ ತಲೆಮಾರನ್ನು ರೂಪಿಸಲು ಕೊಡುಗೆ ನೀಡಲಿದೆ” ಎಂದರು.
ಈ ಹೊಸ ತಲೆಮಾರಿನ ವೃತ್ತಿಪರರ ಪ್ರಭಾವವು ಆರೋಗ್ಯಸೇವಾ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುವುದಲ್ಲದೆ, ಜನರಿಗೆ ವೈಯಕ್ತಿಕ ಮಟ್ಟದಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಿಸಲು ಸಹಕಾರಿಯಾಗಲಿದೆ. ಟಾಟಾ ಐ.ಐ.ಎಸ್.ಸಿ. ವೈದ್ಯಕೀಯ ಕಾಲೇಜು ನಮ್ಮ ಸಮುದಾಯಗಳ ಆರೋಗ್ಯ ಕಾಪಾಡುವಲ್ಲಿ ಹಾಗೂ ಭಾರತವನ್ನು ಜಾಗತಿಕ ಆರೋಗ್ಯಸೇವಾ ಕ್ರಾಂತಿಯ ಮುಂಚೂಣಿಯಲ್ಲಿ ನಿಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಐ.ಐ.ಎಸ್.ಸಿ. ನಿರ್ದೇಶಕರಾದ ಪ್ರೊ.ಜಿ.ರಂಗರಾಜನ್ ಅವರು ಮಾತನಾಡಿ, ಟಾಟಾ ಸಮೂಹದ ಉದಾರ ಕೊಡುಗೆಗೆ ಸಂಸ್ಥೆಯು ಆಭಾರಿಯಾಗಿರಲಿದೆ ಎಂದರು. “ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಒಂದು ಶತಮಾನದಿಂದ ಕೊಡುಗೆ ನೀಡಿರುವ ಸಂಸ್ಥೆಗೆ ಈಗ ವೈದ್ಯಕೀಯ ರಂಗದಲ್ಲಿ ಹೊಸ ಭಾಷ್ಯ ಬರೆಯಲು ಅವಕಾಶ ಒದಗಿಬಂದಿದೆ. ಭಾರತದಲ್ಲಿ ಶಿಕ್ಷಣದ ಅಭ್ಯುದಯಕ್ಕಾಗಿ ಅಪೂರ್ವ ಸಮಾಜಸೇವಾ ಕಾರ್ಯಗಳನ್ನು ಕೊಡುಗೆಯಾಗಿ ನೀಡಿರುವ ಜಮಷೇಟಜಿ ನುಸರ್ ವಾಂಜಿ ಟಾಟಾ ಅವರ ಉದಾರತೆ ಹಾಗೂ ದೂರದೃಷ್ಟಿಗಳೇ ನಮ್ಮ ಸಂಸ್ಥೆಗೆ ಪ್ರೇರಣೆಯಾಗಿವೆ. ಈ ಪರಂಪರೆ ಮುಂದುವರಿಸುವ ಜೊತೆಗೆ ಭಾರತ ಹಾಗೂ ಪ್ರಪಂಚದ ಇನ್ನಿತರ ದೇಶಗಳಿಗೆ ಸುಲಭ ದರದ ಆರೋಗ್ಯಸೇವಾ ಪರಿಹಾರಗಳನ್ನು ರೂಪಿಸುವಲ್ಲಿ ಹೊಸ ವ್ಯಾಖ್ಯಾನ ರೂಪಿಸಬೇಕೆಂಬುದು ನಮ್ಮ ದೃಢ ಸಂಕಲ್ಪವಾಗಿದೆ” ಎಂದರು.
ಟಾಟಾ ಸನ್ಸ್ ಬಗ್ಗೆ:
ಜಮಷೇಟ್ ಜಿ ಟಾಟಾ ಅವರಿಂದ 1868ರಲ್ಲಿ ಸ್ಥಾಪನೆಗೊಂಡ ಟಾಟಾ ಗ್ರೂಪ್, ಭಾರತದಲ್ಲಿ ಪ್ರಧಾನಿ ಕಚೇರಿ ಹೊಂದಿರುವ ಒಂದು ಜಾಗತಿಕ ಸಂಸ್ಥೆಯಾಗಿದೆ. ಇದು 10 ವಲಯಗಳಡಿ 30 ವಿವಿಧ ಕಂಪನಿಗಳನ್ನು ಹೊಂದಿದ್ದು, ಆರು ಖಂಡಗಳ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ವಿಶ್ವಾಸಾರ್ಹ ನಾಯಕತ್ವ ಆಧಾರಿತವಾಗಿ ಭಾಗೀದಾರರಿಗೆ ದೀರ್ಘಾವಧಿ ಮೌಲ್ಯ ಸೃಷ್ಟಿಸುವ ಮೂಲಕ ಸಮುದಾಯಗಳ ಬದುಕಿನ ಗುಣಮಟ್ಟ ಸುಧಾರಣೆಗೆ ಜಾಗತಿಕವಾಗಿ ಸೇವೆ ಸಲ್ಲಿಸುವುದು ಸಂಸ್ಥೆಯ ಧ್ಯೇಯವಾಗಿದೆ.
ಟಾಟಾ ಸನ್ಸ್ ಸಂಸ್ಥೆಯು ಟಾಟಾ ಕಂಪನಿಗಳ ಪ್ರಧಾನ ಹೂಡಿಕೆ ಹೋಲ್ಡಿಂಗ್ ಕಂಪನಿ ಹಾಗೂ ಪ್ರವರ್ತಕ ಆಗಿದೆ. ಟಾಟಾ ಸನ್ಸ್ ನ ಶೇಕಡಾ 66ರಷ್ಟು ಷೇರು ಬಂಡವಾಳವು ಶಿಕ್ಷಣ, ಆರೋಗ್ಯ,
ಜೀವನೋಪಾಯ ಸೃಜನೆ ಮತ್ತು ಕಲೆ ಹಾಗೂ ಸಂಸ್ಕೃತಿಗೆ ನೆರವು ನೀಡುವ ಸಮಾಜಸೇವಾ ಟ್ರಸ್ಟ್ ಗಳಲ್ಲಿದೆ.
ಟಾಟಾ ಕಂಪನಿಗಳ ಒಟ್ಟು ಆದಾಯವು 2023-24ರಲ್ಲಿ 165 ಶತಕೋಟಿ ಡಾಲರ್ ಗಳಿಗಿಂತ ಅಧಿಕವಿದೆ. ಈ ಕಂಪನಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರ ಉದ್ಯೋಗಗಳಲ್ಲಿದ್ದಾರೆ.
ಪ್ರತಿಯೊಂದು ಟಾಟಾ ಕಂಪನಿಯೂ ತನ್ನದೇ ಪ್ರತ್ಯೇಕ ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯೊಂದಿಗೆ ಸ್ವತಂತ್ರವಾಗಿ ಕಾರ್ಯಾಚರಿಸುತ್ತದೆ. ಒಟ್ಟಾರೆ 26 ಟಾಟಾ ಕಂಪನಿಗಳು ಷೇರುಪೇಟೆಯಲ್ಲಿ ನೋಂದಣಿಯಾಗಿದ್ದು, ಇವುಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ ಮೌಲ್ಯವು 2024ರ ಮಾರ್ಚ್ 31ರ ಪ್ರಕಾರ 365 ಶತಕೋಟಿ ಡಾಲರ್ ಮೀರಿದೆ.
ಐ.ಐ.ಎಸ್.ಸಿ. ಬಗ್ಗೆ:
ಉದ್ಯಮಿ ಜಮ್ ಷೇಟ್ ಜಿ ನಸರ್ ವಾಂಜಿ ಟಾಟಾ, ಮೈಸೂರು ರಾಜಸಂಸ್ಥಾನ ಮತ್ತು ಭಾರತ ಸರ್ಕಾರಗಳ ದೂರದರ್ಶಿತ್ವದ ಪಾಲುದಾರಿಕೆಯಲ್ಲಿ ಭಾರತ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.) 1909ರಲ್ಲಿ ಸ್ಥಾಪನೆಗೊಂಡಿತು. ಕಳೆದ 115 ವರ್ಷಗಳಲ್ಲಿ ಐ.ಐ.ಎಸ್.ಸಿ.ಯು ಆಧುನಿಕ ವಿಜ್ಞಾನ ಹಾಗೂ ತಾಂತ್ರಿಕ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಭಾರತದ ಭೌತಿಕ ಹಾಗೂ ಕೈಗಾರಿಕಾ ಪ್ರಗತಿಗೆ ಕಾರಣವಾಗುವಂತಹ ಉನ್ನತ ಬೋಧನೆಗೆ ಹಾಗೂ ಸ್ವೋಪಜ್ಞ ಪರಿವೀಕ್ಷಣೆಗಳಿಗೆ ಎಲ್ಲಾ ಜ್ಞಾನಶಾಖೆಗಳಲ್ಲಿ ಅವಕಾಶ ಕಲ್ಪಿಸಲು ಸಂಸ್ಥೆಯು ಕಟಿಬದ್ಧವಾಗಿದೆ. ಸಂಸ್ಥೆಯು ಭಾರತ ಸರ್ಕಾರದಿಂದ 2018ರಲ್ಲಿ “ಇನ್ಸ್ ಟಿಟ್ಯೂಟ್ ಆಫ್ ಎಮಿನೆನ್ಸ್” ಎಂದು ಆಯ್ಕೆಯಾಗಿದೆ. ಸಂಸ್ಥೆಯು ಜಾಗತಿಕ ವಿಶ್ವವಿದ್ಯಾಲಯಗಳ ರಾಂಕಿಂಗ್ ನಲ್ಲಿ ಸತತವಾಗಿ ಭಾರತದ ಅಗ್ರಮಾನ್ಯ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗುತ್ತಿದೆ.