22 ಅಕ್ಟೋಬರ್ 2025
-ಕೇಧಾರ್ ಆರ್ ತ್ಯಾಗರಾಜನ್
ಹೆಚ್ಚಾಗಿ ಬಳಸಲಾಗುವ ಪ್ಲ್ಯಾಸಿಕ್ ನ ಅಪೇಕ್ಷಿತ ಗುಣಲಕ್ಷಣಗಳನ್ನು ಉಳಿಸಿಕೊಂಡು ಅದನ್ನು ಪುನರ್ ಸಂಸ್ಕರಣೆ ಮಾಡುವ ತ್ವರಿತ ವಿಧಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ)ಯ ಮಟೀರಿಯಲ್ಸ್ ಎಂಜಿನಿಯರಿಂಗ್ (ಮ್ಯಾಟ್ಇ- MatE) ವಿಭಾಗದವರು ಹೊಸ ಅಧ್ಯಯನದಿಂದ ಕಂಡುಹಿಡಿದಿದ್ದಾರೆ.
ಈ ಕುರಿತ ಅಧ್ಯಯನ ವರದಿಯು ‘ಕೆಮಿಕಲ್ ಎಂಜಿನಿಯರ್ ಜರ್ನಲ್’ನಲ್ಲಿ ಪ್ರಕಟವಾಗಿದೆ. ಹೊಸ ರಾಸಾಯನಿಕ ಪ್ರಕ್ರಿಯೆಯನ್ನು ಬಳಸಿ ಮೀನಿನ ಬಲೆಗಳು ಹಾಗೂ ವಾಹನಗಳ ಬಿಡಿಭಾಗಗಳನ್ನು ಪುನರ್ ಸಂಸ್ಕರಣೆಗೊಳಿಸುವಲ್ಲಿ ಯಶಸ್ಸು ಸಾಧಿಸಿರುವುದಾಗಿ ಸಂಶೋಧಕರು ಈ ವರದಿಯಲ್ಲಿ ವಿವರಿಸಿದ್ದಾರೆ. ಸಾಮಾನ್ಯವಾಗಿ, ಇಂತಹ ಪ್ಲ್ಯಾಸ್ಟಿಕ್ ತ್ಯಾಜ್ಯಗಳು ಹೆಚ್ಚಾಗಿ ಪಿಎ-66 ಎಂಬ ಪಾಲಿಮರ್ ನಿಂದ ತಯಾರಾಗಿರುತ್ತವೆ ಹಾಗೂ ಇವುಗಳ ಪುನರ್ ಸಂಸ್ಕರಣೆಯು ಸವಾಲಿನ ಸಂಗತಿಯಾಗಿರುತ್ತದೆ.
ಈ ಪ್ರಕ್ರಿಯೆಯು ಪಿಎ-66 ಇರುವ ಕರಗಿಸಲಾದ ತ್ಯಾಜ್ಯಕ್ಕೆ ವೇಗವರ್ಧಕದೊಂದಿಗೆ ಮೆಲಮೈನ್ ಎಂಬ ರಾಸಾಯನಿಕ ಕ್ರಾಸ್-ಲಿಂಕರ್ ನ (ಎರಡು ಅಥವಾ ಅದಕ್ಕಿಂತ ಹೆಚ್ಚು ಸಂಯುಕ್ತ ಕಣಗಳ ನಡುವೆ ಕೋವೆಲೆಂಟ್ ಬಾಂಡ್ ಸಂಯುಕ್ತ ಕಣ) ಸೇರ್ಪಡೆಯನ್ನು ಒಳಗೊಂಡಿರುತ್ತದೆ. ಇದರಿಂದ ಉಂಟಾಗುವ ಟ್ರ್ಯಾನ್ಸ್ಅಮಿಡೇಷನ್ ಎಂಬ ರಾಸಾಯನಿಕ ಕ್ರಿಯೆಯು ಕೈಗಾರಿಕಾ ಎಕ್ಸ್ಟ್ರೂಡರ್ ಗಳಲ್ಲಿ ದೊಡ್ಡ ಪ್ರಮಾಣದ ಸಂಸ್ಕರಣೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಡೆಸಬಹುದಾದಷ್ಟು ವೇಗವಾಗಿ ನಡೆಯುತ್ತದೆ. “ಈ ವಿಧಾನವನ್ನು ಇಂತಹ ಕೈಗಾರಿಕಾ ಪ್ರಕ್ರಿಯೆಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಅಂದರೆ, ರಾಸಾಯನಿಕ ಕ್ರಿಯೆಯ ಸಮಯವು ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆಯುತ್ತದೆ” ಎನ್ನುತ್ತಾರೆ ‘ಮ್ಯಾಟ್ಇ’(MatE)ದಲ್ಲಿ ಪಿಎಚ್.ಡಿ. ಸಂಶೋಧನಾರ್ಥಿಯಾಗಿರುವ ಅಧ್ಯಯನ ವರದಿಯ ಮೊದಲ ಲೇಖಕರಾದ ಎಸ್.ವಿಮಲ್ ಕುಮಾರ್. ಇದರಿಂದಾಗಿ, ಮೂರು ಬಾರಿಯ ಪುನರ್ ಸಂಸ್ಕರಣೆ ಆವರ್ತನೆಗಳ ನಂತರವೂ ಸುಧಾರಿತ ಗುಣಲಕ್ಷಣಗಳನ್ನು ಉಳಿಸಿಕೊಂಡ ನೈಲಾನ್ ಮಟೀರಿಯಲ್ ಉತ್ಪಾದನೆಯಾಯಿತು ಎಂದೂ ಅವರು ಹೇಳುತ್ತಾರೆ.

“ನೂಡಲ್ ನ ಎಳೆಯೊಂದನ್ನು ಕಲ್ಪಿಸಿಕೊಳ್ಳಿ. ಅದನ್ನು ಜೋರಾಗಿ ಕಲಕಿದರೆ ಚಿಕ್ಕ ಚಿಕ್ಕ ತುಂಡುಗಳಾಗುತ್ತದೆ” ಎನ್ನುತ್ತಾರೆ ಮ್ಯಾಟ್ಇ(MatE)ದಲ್ಲಿ ಪ್ರಾಧ್ಯಾಪಕರಾಗಿರುವ ಅಧ್ಯಯನದ ಪೂರಕ ಲೇಖಕರಾದ ಸೂರ್ಯಸಾರಥಿ ಬೋಸ್. “ಆದರೆ, ಹೀಗೆ ತುಂಡುತುಂಡಾದ ಚಿಕ್ಕ ಎಳೆಗಳನ್ನೆಲ್ಲಾ ಜೋಡಿಸಿ ಹೊಸ ಸಂಯುಕ್ತ ಕಣವನ್ನಾಗಿಸಿದರೆ, ಮುಂಚಿನ ನೂಡಲ್ ಎಳೆಯನ್ನು ಮೊದಲಿಗೆ ನಿರಚನೆ ಮಾಡಿ ನಂತರ ಅದನ್ನು ಪುನರ್ ನಿರ್ಮಿಸಿದಂತಾಗುತ್ತದೆ; ಆದರೆ, ಅದರ ಗುಣಲಕ್ಷಣಗಳು ಈಗ ಇನ್ನಷ್ಟು ಸುಧಾರಣೆಗೊಂಡಿರುತ್ತವೆ” ಎಂಬುದು ಬೋಸ್ ಅವರ ವಿವರಣೆ.
“ಪುನರ್ ಸಂಸ್ಕರಣೆ ಪ್ರಕ್ರಿಯೆಯಿಂದ ಉತ್ಪಾದಿಸಲಾದ ನೈಲಾನ್ ಸಾಕಷ್ಟು ಗಟ್ಟಿಯಿದ್ದು, ಗಡುಸುತನವನ್ನು ಅಪೇಕ್ಷಿಸುವ ಉತ್ಪನ್ನಗಳ ತಯಾರಿಕೆಗೆ ಉಪಯೋಗಿಸಬಹುದಾಗಿದೆ. ಇದನ್ನು ಉದ್ಯಾನಗಳಲ್ಲಿ ಬೆಂಚುಗಳಾಗಿ, ರಸ್ತೆ ವಿಭಜಕಗಳಾಗಿ ಅಥವಾ ಫುಟಪಾಥ್ ನ ನೆಲಹಾಸುಗಳಾಗಿ ಬಳಸಲು ಸಾಧ್ಯವೇ ಎಂಬ ಬಗ್ಗೆ ನಾವು ಪ್ರಯತ್ನಿಸುತ್ತಿದ್ದೇನೆ” ಎನ್ನುತ್ತಾರೆ. ತ್ಯಾಜ್ಯವನ್ನು ನೈಲಾನ್ ಆಗಿ ಪರಿವರ್ತಿಸಲು ಬೇಕಾಗುವ ಸಮಯ ಕಡಿಮೆಯಾದ್ದರಿಂದ ದೊಡ್ಡ ಪ್ರಮಾಣದ ಸಂಸ್ಕರಣೆಯನ್ನು ಸುಲಭವಾಗಿ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೋಸ್ ಅವರು VOiLA3D ಎಂಬ ಸ್ಟಾರ್ಟ್ ಅಪ್ ನ ಸಹ-ಸ್ಥಾಪಕರೂ ಆಗಿದ್ದಾರೆ. ಈ ಕಂಪನಿಯು ಮೇಲೆ ತಿಳಿಸಿದಂತಹ ಪುನರ್ ಸಂಸ್ಕರಿತ ಸಾಮಗ್ರಿಗಳನ್ನು ಬಳಸಿ ಗೃಹಬಳಕೆ ಹಾಗೂ ನಾಗರಿಕ ಮೂಲಸೌಕರ್ಯದಲ್ಲಿ ಬಳಸಲಾಗುವ ಉತ್ಪನ್ನಗಳನ್ನು ರೂಪಿಸುತ್ತದೆ ಮಾಡುತ್ತದೆ. ಅಧ್ಯಯನದ ಭಾಗವಾಗಿ, ತಜ್ಞರು ಈ ಪ್ರಕ್ರಿಯೆಯ ಮೂಲಕ ತಯಾರಿಸಿದ ಪುನರ್ ಸಂಸ್ಕರಿತ ಪಿಎ-66 ಅನ್ನು ಕುರ್ಚಿ, ಸ್ಪೀಡ್ ಬೋಟ್ ನಂತತ 3ಡ್ರಿ ಮುದ್ರಿತ ವಸ್ತುಗಳಿಗೆ ಬಳಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಪ್ರಕಾರ, ಮನುಷ್ಯರು ತಮ್ಮ ಅಗತ್ಯಗಳಿಗಾಗಿ ವಾರ್ಷಿಕ 430 ದಶಲಕ್ಷ ಟನ್ ಗಳಿಗೂ ಹೆಚ್ಚು ಪ್ಲ್ಯಾಸಿಕ್ ತಯಾರಿಸುತ್ತಿದ್ದಾರೆ. ಮೀನುಗಾರಿಕೆಗೆ ಬಳಸಲಾಗುವ ಬಲೆಗಳ ಪ್ಲ್ಯಾಸ್ಟಿಕ್ ತ್ಯಾಜ್ಯವು ಪ್ರಾಣಘಾತುಕ ತ್ಯಾಜ್ಯಗಳಲ್ಲಿ ಒಂದಾಗಿದ್ದು, ಅಸಂಖ್ಯಾತ ಕಡಲಜೀವಿಗಳ ಪಾಲಿಗೆ ಭೀತಿಯೊಡ್ಡುತ್ತಿದೆ.
ಪಿಎ-66ದಂತಹ ಪಾಲಿಮರ್ ಗಳ ಸುಧಾರಿತ ಪುನರ್ ಸಂಸ್ಕರಣೆ ಪ್ರಕ್ರಿಯೆಯು ಬಳಕೆಯಾದ ಪ್ಲ್ಯಾಸ್ಟಿಕ್ ಗೆ ಹೊಸ ಜೀವ ನೀಡಿ ತ್ಯಾಜ್ಯ ಸಂಗ್ರಹವನ್ನು ಪ್ರೋತ್ಸಾಹಿಸಲಿದೆ.
ಉಲ್ಲೇಖ:
ಕುಮಾರ್ ಎಸ್ ವಿ, ಧೀರಜ್ ಬಿಡಿಎಸ್, ರೆಗೆ ಎಸ್ ಎಸ್, ರೆಡ್ಡಿ ಎಎಂ, ಪ್ರಶಾಂತ್ ಎಸ್ ಆರ್, ಇಸ್ಲಾಂ ಎಸ್ ಎಸ್, ಡೇ ಐ, ಸಮಂತ ಕೆ, ಮಿಶ್ರಾ ಎ, ಬೋಸ್ ಎಸ್. From ocean to opportunity: Upcycling fishing net waste into high-performance, reprocessable nylons, Chemical Engineering Journal (2025). https://www.sciencedirect.com/science/article/pii/S1385894725090370
ಸಂಪರ್ಕ:
ಸೂರ್ಯಸಾರಥಿ ಬೋಸ್
ಪ್ರಾಧ್ಯಾಪಕರು
ಮಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗ (ಮ್ಯಾಟ್ ಇ)
ಇಮೇಲ್: sbose[at]iisc.ac.in
ಫೋನ್: : +91-80-22933407 Website: https://sites.google.com/site/polymerprocessinggroup/home
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ. ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.