24 ಅಕ್ಟೋಬರ್ 2025
-ಆಶ್ಮಿತಾ ಗುಪ್ತಾ
ಬ್ರೆಡ್, ಬಿಯರ್ ಹಾಗೂ ಜೈವಿಕತಾಂತ್ರಿಕತೆಯ ಉತ್ಪನ್ನಗಳ ತಯಾರಿಕೆಗೆ ಬೇಕರಿ ಯೀಸ್ಟ್ (ಸ್ಯಾಕ್ಹರೊಮೈಸೆಸ್ ಸೆರೆವಿಸಿಯೆ) ಅತ್ಯವಶ್ಯಕ. ಆದರೆ, ಈ ಸೂಕ್ಷ್ಮಾಣುಜೀವಿಯು ಅಂತರಿಕ್ಷಕ್ಕೆ ಸಂಬಂಧಿಸಿದ ಸುಳಿವುಗಳನ್ನು ಕೂಡ ತನ್ನೊಡಲಲ್ಲಿ ಅಡಗಿಸಿಕೊಂಡಿದೆ. ಹೌದು, ಅನ್ಯಗ್ರಹ ಪರಿಸ್ಥಿತಿಗಳಲ್ಲಿ ಜೀವವು ಹೇಗೆ ಬದುಕುಳಿಯಬಲ್ಲದು ಎಂಬುದಕ್ಕೆ ಯೀಸ್ಟ್ ನಲ್ಲಿ ಉತ್ತರ ಕಂಡುಕೊಳ್ಳಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ಜೀವರಸಾಯನ (ಬಿಸಿ) ವಿಭಾಗದ ಸಂಶೋಧಕರು ಹಾಗೂ ಅಹಮದಾಬಾದಿನ ಫಿಸಿಕಲ್ ರೀಸರ್ಚ್ ಲ್ಯಾಬೊರೇಟರಿ (ಪಿ.ಆರ್.ಎಲ್.)ನಲ್ಲಿನ ಸಹಭಾಗಿಗಳು ಮಂಗಳ ಗ್ರಹದಲ್ಲಿ ಇರುವಂತಹ ಕಠಿಣ ಸನ್ನಿವೇಶಗಳನ್ನು ತಾಳಿಕೊಳ್ಳಬಲ್ಲ ಕ್ಷಮತೆಯನ್ನು ಯೀಸ್ಟ್ ಹೊಂದಿದೆ ಎಂಬುದನ್ನು ಹೊಸ ಅಧ್ಯಯನದಿಂದ ಕಂಡುಕೊಂಡಿದ್ದಾರೆ.
ತಂಡದ ತಜ್ಞರು ಅಧ್ಯಯನದ ಭಾಗವಾಗಿ, ಯೀಸ್ಟ್ ಜೀವಕೋಶಗಳನ್ನು ಮಂಗಳ ಗ್ರಹದಲ್ಲಿರುವಂತಹ ವೈಪರೀತ್ಯದ ಪರಿಸ್ಥಿತಿಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಪರೀಕ್ಷಿಸಿದರು. ಈ ಜೀವಕೋಶಗಳನ್ನು ಅಧಿಕ ತೀವ್ರತೆಯ ಆಘಾತದ ಅಲೆಗಳಿಗೆ ಒಡ್ಡಿಕೊಳ್ಳುವಂತೆ ಮಾಡಿದರು. ಅಂದರೆ, ಮಂಗಳಗ್ರಹದಲ್ಲಿ ಧೂಮಕೇತುಗಳ ಅಪ್ಪಳಿಸುವಿಕೆಯಿಂದ ಉಂಟಾಗುವ ಅಲೆಗಳನ್ನು ಹೋಲುವ ಅಲೆಗಳು ಇವಾಗಿದ್ದವು. ಪಿ.ಆರ್.ಎಲ್.ನಲ್ಲಿನ ಬಾಲಮುರುಗನ್ ಶಿವರಾಮನ್ ಪ್ರಯೋಗಾಲಯದಲ್ಲಿ ಅಧಿಕ-ತೀಕ್ಷತೆಯ ಶಾಕ್ ಟ್ಯೂಬ್ ಫಾರ್ ಆಸ್ಟ್ರೊಕೆಮಿಸ್ಟ್ರಿ (HISTA- ಹಿಸ್ಟಾ) ಉಪಕರಣವನ್ನು ಬಳಸಿ 5.6 ಮಾಕ್ ತೀವ್ರತೆಯ ಆಘಾತದ ಅಲೆಗಳನ್ನು ಹೊರಹೊಮ್ಮಿಸಿದರು. ಜೊತೆಗೆ, ಅಧ್ಯಯನಕಾರರು ಯೀಸ್ಟ್ ಜೀವಕೋಶಗಳನ್ನು 100 ಮಿಲಿಮೋಲ್ಸ್ (100 mM) ಸೋಡಿಯಂ ಪರ್ಕ್ಲೊರೇಟ್ ನೊಂದಿಗೆ ಪ್ರತ್ಯೇಕವಾಗಿ ಅಥವಾ ಆಘಾತದ ಅಲೆಗಳ ಸಂಯೋಜನೆಯೊಂದಿಗೆ ಸಂಪರ್ಕಕ್ಕೆ ಬರುವಂತೆ ಮಾಡಿದರು. ಅಂದಂತೆ, ಪರ್ಕ್ಲೋರೇಟ್ ಲವಣಗಳು ಮಂಗಳ ಗ್ರಹದ ಮಣ್ಣಿನಲ್ಲಿರುವ ವಿಷಕಾರಕ ರಾಸಾಯನಿಕಗಳಾಗಿವೆ.
“ಸಜೀವ ಯೀಸ್ಟ್ ಕೋಶಗಳನ್ನು ಆಘಾತದ ಅಲೆಗಳಿಗೆ ಒಡ್ಡಲು ಅನುಕೂಲವಾಗುವಂತೆ ‘ಹಿಸ್ಟಾ’ ಕೊಳವೆಯನ್ನು ಏರ್ಪಾಡುಗೊಳಿಸುವುದು ಬಹಳ ದೊಡ್ಡ ಅಡಚಣೆಯಾಗಿತ್ತು. ಈ ಪ್ರಯತ್ನವು ಈ ಮುಂಚೆ ಎಂದಿಗೂ ನಡೆದಿರಲಿಲ್ಲ. ನಂತರದ ಪ್ರಯೋಗಗಳಿಗಾಗಿ ಕನಿಷ್ಠ ಮಲಿನತೆಯೊಂದಿಗೆ (ಪ್ರದೂಷಣೆ) ಯೀಸ್ಟ್ ಕೋಶಗಳನ್ನು ಮರಳಿ ಪಡೆಯುವುದು ಕೂಡ ದೊಡ್ಡ ತೊಡಕಾಗಿತ್ತು” ಎಂದು ಅಧ್ಯಯನ ವರದಿಯ ಮೊದಲ ಲೇಖಕರಾದ ರಿಯಾ ಧಗೆ ವಿವರಿಸುತ್ತಾರೆ. ಇವರು ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಪುರುಷಾರ್ಥ್ ಐ ರಾಜ್ಯಗುರು ಅವರ ಪ್ರಯೋಗಾಲಯದಲ್ಲಿ ಪ್ರಾಜೆಕ್ಟ್ ಸಹಾಯಕಿಯೂ ಆಗಿದ್ದಾರೆ.
ಅಚ್ಚರಿಕೆಯ ಅಂಶವೆಂದರೆ, ಯೀಸ್ಟ್ ಕೋಶಗಳನ್ನು ಆಘಾತದ ಅಲೆಗಳೊಂದಿಗೆ ಮತ್ತು ಪರ್ಕ್ಲೊರೇಟ್ ನೊಂದಿಗೆ ಪ್ರತ್ಯೇಕವಾಗಿ ಹಾಗೂ ಸಂಯೋಜನೆಯೊಂದಿಗೆ ಒಡ್ಡಿಕೊಳ್ಳುವಂತೆ ಮಾಡಿದಾಗ ಆ ಕೋಶಗಳ ಬೆಳವಣಿಗೆಯ ದರ ತಗ್ಗಿತಾದರೂ ಬದುಕುಳಿದದ್ದು ದೃಢಪಟ್ಡಿತು. ಈ ಕ್ಷಮತೆಯು ಬಹುಶಃ ರೈಬೊನ್ಯೂಕ್ಲಿಯೊಪ್ರೋಟೀನ್ (ಆರ್.ಎನ್.ಪಿ.) ಸಂಯುಕ್ತ ಕಣಗಳನ್ನು ಉತ್ಪಾದಿಸಬಲ್ಲ ಅವುಗಳ ಸಾಮರ್ಥ್ಯದಲ್ಲಿ ಅಡಗಿದೆ. ಈ ಆರ್.ಎನ್.ಪಿ ಸಂಯುಕ್ತ ಕಣಗಳು ಜೀವಕೋಶಗಳು ಒತ್ತಡದಲ್ಲಿರುವಾಗ ಎಂಆರ್.ಎನ್.ಎ.ಯನ್ನು ರಕ್ಷಿಸಲು ಹಾಗೂ ಪುನರ್ ವ್ಯವಸ್ಥೆಗೊಳಿಸಲು ನೆರವಾಗುವ ಪೊರೆರಹಿತವಾದ ಪುಟಾಣಿ ಸಂರಚನೆಗಳಾಗಿವೆ. ಆಘಾತದ ಅಲೆಗಳು ಸ್ಟ್ರೆಸ್ ಗ್ರ್ಯಾನ್ಯೂಲ್ಸ್ ಮತ್ತು ಪಿ-ಬಾಡೀಸ್ ಎಂಬ ಎರಡು ಬಗೆಯ ಆರ್.ಎನ್.ಪಿ.ಗಳ ಸಂಯೋಗವನ್ನು ಪ್ರಚೋದಿಸಿದರೆ , ಪರ್ಕ್ಲೊರೇಟ್ ಒಡ್ಡಿಕೊಳ್ಳುವಿಕೆಯು ಪಿ-ಬಾಡೀಸ್ ಸೃಜನೆಗೆ ಮಾತ್ರ ಎಡೆಮಾಡಿಕೊಟ್ಟಿತು. ಈ ಸಂರಚನೆಗಳನ್ನು ರೂಪಿಸಲಾಗದ ಯೀಸ್ಟ್ ರೂಪಾಂತರಿಗಳು ಬದುಕುಳಿಯುವ ಸಾಧ್ಯತೆ ಕಡಿಮೆಯಿರುತ್ತದೆ.

ಆರ್.ಎನ್.ಪಿ. ಸಂಯುಕ್ತ ಕಣಗಳು ಅನ್ಯಗ್ರಹ ಪರಿಸ್ಥಿತಿಗಳಲ್ಲಿನ ಜೀವಕೋಶೀಯ ಒತ್ತಡಕ್ಕೆ ಯಾವ ರೀತಿಯಲ್ಲಿ ಸೂಚಕಗಳಾಗಿ ವರ್ತಿಸಬಲ್ಲವು ಎಂಬುದನ್ನು ಈ ಫಲಿತಾಂಶಗಳು ತೋರಿಸುತ್ತವೆ.
“ಮಂಗಳ ಗ್ರಹದಂತಹ ವೈಪರೀತ್ಯದ ಪರಿಸ್ಥಿತಿಯಲ್ಲಿ ಜೀವಿಗಳು ಹೇಗೆ ಬದುಕುಳಿಯಬಲ್ಲವು ಎಂಬುದನ್ನು ಅರ್ಥ ಮಾಡಿಕೊಳ್ಳಲು ಶಾಕ್ವೇವ್ ಭೌತಶಾಸ್ತ್ರ ಮತ್ತು ರಸಾಯನ ಜೀವಶಾಸ್ತ್ರವನ್ನು ಆಣ್ವಿಕ ಕೋಶ ಜೀವಶಾಸ್ತ್ರದೊಂದಿಗೆ ಸಂಯೋಜನೆಗೊಳಿಸಿರುವುದು ಈ ಅಧ್ಯಯನದ ವಿಶೇಷವಾಗಿದೆ” ಎನ್ನುತ್ತಾರೆ ರಿಯಾ ಧಗೆ.
ಖಗೋಳ-ಜೀವಶಾಸ್ತ್ರ ಸಂಶೋಧನೆಗೆ ಸಂಬಂಧಿಸಿದ ಭಾರತದ ಅಧ್ಯಯನಗಳಿಗೆ ಬೇಕರಿಯ ಯೀಸ್ಟ್ ಹೇಗೆ ಅತ್ಯುತ್ತಮ ಮಾದರಿಯಾಗಬಲ್ಲದು ಎಂಬುದನ್ನು ಈ ಅಧ್ಯಯನದಿಂದ ದೃಢಪಡಿಸಿಕೊಂಡ ಅಂಶಗಳು ಮನಗಾಣಿಸುತ್ತವೆ. ಅಂತಹ ಜೀವಕೋಶಗಳು ಭೌತಿಕ ಹಾಗೂ ರಾಸಾಯನಿಕ ಒತ್ತಡದಡಿ ಹೇಗೆ ತಮ್ಮ ಆರ್.ಎನ್. ಎ. ಮತ್ತು ಪ್ರೋಟೀನುಗಳನ್ನು ಪುನರ್ ವ್ಯವಸ್ಥೆಗೊಳಿಸಿಕೊಳ್ಳುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಭೂಗ್ರಹದ ಆಚೆ ಜೀವಿಗಳು ಬದುಕುಳಿಯುವ ಸಾಧ್ಯತೆ ಬಗ್ಗೆ ಒಳನೋಟಗಳನ್ನು ಲಭ್ಯವಾಗಿಸಬಹುದು. ಇಂತಹ ಒಳನೋಟಗಳು ಒತ್ತಡ ತಾಳಿಕೊಳ್ಳಬಲ್ಲ ಅನ್ಯಗ್ರಹ ಜೈವಿಕ ವ್ಯವಸ್ಥೆಗಳನ್ನು ರೂಪಿಸುವುದಕ್ಕೂ ಮಹತ್ವದ ಮಾರ್ಗದರ್ಶನ ಲಭ್ಯವಾಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
“ನಮ್ಮ ಪ್ರಯೋಗಗಳಲ್ಲಿ ಬಳಸಿದ ಮಂಗಳ ಗ್ರಹದಂತಹ ಒತ್ತಡದ ಪರಿಸ್ಥಿತಿಗಳಲ್ಲಿ ಯೀಸ್ಟ್ ಬದುಕುಳಿದದ್ದನ್ನು ನೋಡಿ ನಮಗೆ ಅಚ್ಚರಿಯಾಯಿತು” ಎನ್ನುತ್ತಾರೆ ಅಧ್ಯಯನ ವರದಿಯ ಪೂರಕ ಲೇಖಕರಾದ ರಾಜ್ಯಗುರು. “ಭವಿಷ್ಯದ ಅಂತರಿಕ್ಷ ಅನ್ವೇಷಣಾ ಯಾನಗಳ ವೇಳೆ ಯೀಸ್ಟ್ ಅನ್ನು ಕೊಂಡೊಯ್ಯುವ ಪ್ರಯತ್ನಗಳನ್ನು ಒಗ್ಗೂಡಿಸಲು ಈ ಅಧ್ಯಯನವು ಅನುವು ಮಾಡಿಕೊಡುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಉಲ್ಲೇಖ:
ಧಗೆ ಆರ್, ರಾಯ್ ಎ, ಶಿವರಾಮನ್ ಬಿ, ರಾಜ್ಯಗುರು ಪಿಐ, Ribonucleoprotein (RNP) condensates modulate survival in response to Mars-like stress conditions, PNAS NEXUS (2025). https://academic.oup.com/pnasnexus/article/4/10/pgaf300/8285101
ಸಂಪರ್ಕ:
ಪುರುಷಾರ್ಥ್ ಐ ರಾಜ್ಯಗುರು
ಸಹ ಪ್ರಾಧ್ಯಾಪಕರು
ಬಯೋಕೆಮಿಸ್ಟ್ರಿ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ಇಮೇಲ್: rajyaguru@iisc.ac.in
ಫೋನ್: +91 80-22932547
ವೆಬ್ಸೈಟ್: https://rajgodhuli.wixsite.com/rajyaguru-lab
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ. ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.