ಹೊಸ ಶುಲ್ಕ ವಿವರ


06 ಫೆಬ್ರುವರಿ 2026

ಭಾರತೀಯ ವಿಜ್ಞಾನ ಸಂಸ್ಥೆಯು (ಐ.ಐ.ಎಸ್.ಸಿ.) 2026-27 ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ಹೊಸ ಶುಲ್ಕ ವಿವರವನ್ನು ಪ್ರಕಟಿಸಿದೆ.

ವಿಜ್ಞಾನ (ಸಂಶೋಧನೆ) ಪದವಿ ಕೋರ್ಸ್ ಗಳ ಬೋಧನಾ ಶುಲ್ಕವು ವರ್ಷಕ್ಕೆ ರೂ 80,000 ಆಗಿರುತ್ತದೆ. ಇದು ಭಾರತದಲ್ಲಿ ಉತ್ಕೃಷ್ಠ ರಾಂಕಿಂಗ್ ಗೆ ಪಾತ್ರವಾಗಿರುವ ಇತರ ಶೈಕ್ಷಣಿಕ ಸಂಸ್ಥೆಗಳ ಶುಲ್ಕಕ್ಕೆ ಸರಿಸಮಾನವಾಗಿದೆ. ಈ ಕೋರ್ಸ್ ಅನ್ನು 2011ರಲ್ಲಿ ಆರಂಭಿಸಿದಾಗಿನಿಂದಲೂ ಶುಲ್ಕವು ಒಮ್ಮೆಯೂ ಬದಲಾಗದೆ ವಾರ್ಷಿಕ ರೂ 10,000 ಇತ್ತು ಎಂದು ವಿವರಿಸಲಾಗಿದೆ.

ಪಿಎಚ್.ಡಿ. ಹಾಗೂ ಕೆಲವು ಸ್ನಾತಕೋತ್ತರ ಕೋರ್ಸುಗಳ ಬೋಧನಾ ಶುಲ್ಕವೂ ಹೆಚ್ಚಳವಾಗಲಿದೆ. ಹೊಸ ಪ್ರವೇಶಾತಿಗಳಿಗೆ ಇದು ಅನ್ವಯವಾಗಲಿದ್ದು, ಈಗಾಗಲೇ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಂಸ್ಥೆಯ ಶೈಕ್ಷಣಿಕ ಕೋರ್ಸುಗಳು, ಸಂಪನ್ಮೂಲಗಳು, ಸೌಲಭ್ಯಗಳು ಹಾಗೂ ಇತರ ಬೆಂಬಲಿತ ಸೇವೆಗಳನ್ನು ಸುಸ್ಥಿರವಾಗಿ ಕಾಯ್ದುಕೊಳ್ಳುವ ಜೊತೆಗೆ ಅವುಗಳ ಸುಧಾರಣೆ ಹಾಗೂ ಎಲ್ಲಾ ಹಂತಗಳಲ್ಲೂ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ಲಭ್ಯವಾಗಿಸುವುದನ್ನು ದೃಷ್ಟಿಯಲ್ಲಿರಿಸಿಕೊಂಡು ಸೂಕ್ತ ಪರಿಶೀಲನೆಯ ನಂತರ ಈ ಹೆಚ್ಚಳ ಮಾಡಲಾಗಿದೆ.

ಮೀಸಲಾತಿ ವರ್ಗಗಳು ಹಾಗೂ ಆರ್ಥಿಕ ದುರ್ಬಲ ವರ್ಗಗಳ ವಿದ್ಯಾರ್ಥಿಗಳ ಬೋಧನಾ ಶುಲ್ಕ ರದ್ದತಿ/ಮರುಪಾವತಿಗಾಗಿ ಸಂಸ್ಥೆಯು ಆರ್ಥಿಕ ನೆರವು ನೀಡಲಿದೆ ಎಂದು ತಿಳಿಸಲಾಗಿದೆ.

ಹೊಸ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ವಿವರಗಳು ಹಾಗೂ ಕೊನೆಯ ದಿನಾಂಕಗಳ ಕುರಿತು ಸದ್ಯದಲ್ಲಿಯೇ ಐ.ಐ.ಎಸ್.ಸಿ. ಪ್ರವೇಶಾತಿ ವೆಬ್ಸೈಟ್ ನಲ್ಲಿ (https://admissions.iisc.ac.in/).ವಿವರ ಪ್ರಕಟಿಸಲಾಗುವುದು.