16 ಜನವರಿ 2026
ಶ್ರಾವಣಿ ದೇಓಘರ್

ನಮ್ಮ ಶರೀರವನ್ನು ಹೊಸ ರೋಗಕಾರಕವು ಒಳಹೊಕ್ಕ ಪ್ರತಿಯೊಂದು ಪರಿಸ್ಥಿತಿಯಲ್ಲೂ ‘ಅಡ್ಯಾಪ್ಟೀವ್ ನಿರೋಧಕತೆ’ ಎಂಬ ನಿರ್ಣಾಯಕ ರಕ್ಷಣಾ ವ್ಯವಸ್ಥೆಯು ಮಹತ್ವದ ಪಾತ್ರ ವಹಿಸುತ್ತದೆ. ಈ ವ್ಯವಸ್ಥೆಯ ಪ್ರಮುಖ ವಾಹಕಗಳಾದ ಟಿ-ಜೀವಕೋಶಗಳು ಸೋಂಕುಯುಕ್ತ ಜೀವಕೋಶಗಳ ಆಂತರಿಕ ಪರಿಸರದ ವಿಚಕ್ಷಣೆ ನಡೆಸಿ ರೋಗಜನಕಗಳನ್ನು ನಿವಾರಿಸುವ ಕಾರ್ಯ ಆರಂಭಿಸುತ್ತವೆ. ಈ ಟಿ-ಜೀವಕೋಶಗಳು ಅತ್ಯಂತ ಚಲನಶೀಲವೂ, ಇತರ ಜೀವಕೋಶಗಳ ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ತಮ್ಮ ಸಂರಚನೆಯನ್ನು ಮಾರ್ಪಡಿಸಿಕೊಳ್ಳಬಲ್ಲ ಸಾಮರ್ಥ್ಯವುಳ್ಳವೂ ಆಗಿರುತ್ತವೆ.
ಒಮ್ಮೆಯೂ ರೋಗಕಾರಕದ ಸಂಪರ್ಕಕ್ಕೆ ಬಾರದ ಟಿ-ಜೀವಕೋಶಗಳು ಪ್ರತಿವಿಷಜನಕ (ಆಂಟಿಜೆನ್) ಉಪಸ್ಥಿತಿಯಿರುವ ಜೀವಕೋಶದ (ಎಪಿಸಿ) ಸಂಪರ್ಕಕ್ಕೆ ಬಂದಾಗ (ಅಂದರೆ, ರೋಗಜನಕದಿಂದ ಪ್ರತಿವಿಷಜನಕ ಪ್ರೋಟೀನುಗಳನ್ನು ರವಾನಿಸುವ ಆಶ್ರಯದಾತ ಜೀವಕೋಶದ ಸಂಪರ್ಕಕ್ಕೆ ಬಂದಾಗ) ಎಪಿಸಿ ಹಾಗೂ ಟಿ-ಜೀವಕೋಶದ ರಿಸೆಪ್ಟಾರುಗಳ (ಟಿಸಿಆರ್ ಗಳು) ನಡುವೆ ವಿಶೇಷವಾದ ಇಮ್ಯೂನೋಲಾಜಿಕಲ್ ಸಿನ್ಯಾಪ್ಸ್ ಎಂಬ ಇಂಟರ್ ಫೇಸ್ ರೂಪುಗೊಳ್ಳುತ್ತದೆ. “ಈ ಸಂಪರ್ಕದ ಮೊದಲ ಕೆಲವು ನಿಮಿಷಗಳ ಅವಧಿಯು ಬಹಳ ಮಹತ್ವದ್ದಾಗಿರುತ್ತದೆ. ಇದು ಟಿ-ಜೀವಕೋಶಗಳನ್ನು ಶಾಶ್ವತವಾಗಿ ಮಾರ್ಪಡಿಸುತ್ತದೆ” ಎಂದು ವಿವರಿಸುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಸೂಕ್ಷ್ಮಾಣುಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ (ಎಂಸಿಬಿ) ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಧಾ ಕುಮಾರಿ.
ಕುಮಾರಿ ಅವರ ತಂಡವು ಭೌತಶಾಸ್ತ್ರ ವಿಭಾಗದ ಬೋಧನಾ ವಿಭಾಗದ ಸುಮಂತ್ರ ಸರ್ಕಾರ ಅವರ ತಂಡದವರ ಸಹಭಾಗಿತ್ವದಲ್ಲಿ ಈ ಪ್ರಕ್ರಿಯೆಯ ಬಗ್ಗೆ ಹೊಸ ಬೆಳಕು ಚೆಲ್ಲಿದೆ. ‘ಇಎಂಬಿಒ ರಿಪೋರ್ಟ್ಸ್’ ನಲ್ಲಿ (EMBO Reports) ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಈ ಸಂಪರ್ಕವನ್ನು ರೂಪಿಸುವ ‘ಸೈಟೊಸ್ಕೆಲೆಟಲ್ ಡೈನಮಿಕ್ಸ್’ ಬಗ್ಗೆ ವಿವರಿಸಲಾಗಿದೆ.
ಪ್ರತಿವಿಷಜನಕಕ್ಕೆ ಬಂಧಗೊಂಡ ಟಿ.ಸಿ.ಆರ್.ಗಳು ಇಮ್ಯುನೋಲಾಜಿಕಲ್ ಸಿನ್ಯಾಪ್ಸ್ ನಲ್ಲಿ ಕ್ಷಿಪ್ರವಾಗಿ ಮೈಕ್ರೋಕ್ಲಸ್ಟರ್ ಗಳನ್ನು ರೂಪಿಸುತ್ತವೆ ಎಂಬುದು ಈ ಹಿಂದಿನ ಮೈಕ್ರೋಸ್ಕೋಪಿ ಅಧ್ಯಯನಗಳಿಂದ ದೃಢಪಟ್ಟ ಸಂಗತಿಯಾಗಿತ್ತು. ರಿಸೆಪ್ಟಾರುಗಳನ್ನು ಜೀವಕೋಶದೊಳಕ್ಕೆ ಸೆಳೆದುಕೊಳ್ಳುವುದು ಹಾಗೂ ಎಪಿಸಿಯೊಂದಿಗಿನ ಸಂಪರ್ಕ ಕಡಿತವು ಸಾಧ್ಯವಾಗುವಂತೆ ಈ ಟಿ.ಸಿ.ಆರ್.ಗಳು ಸಿನ್ಯಾಪ್ಸ್ ಕೇಂದ್ರದೆಡೆಗೆ ಸೆಳೆಯಲ್ಪಡುತ್ತುವೆ ಎಂದು ವಿಜ್ಞಾನಿಗಳು ಪರಿಭಾವಿಸಿದ್ದರು (ಎಂಡೊಸೈಟೊಸಿಸ್ ಎಂಬ ಪ್ರಕ್ರಿಯೆ). ಕೋಶದ ಪರಿಧಿಯಿಂದ ಕೇಂದ್ರದೆಡೆಗಿನ ಆಕ್ಟಿನ್ ನ ಹಿಮ್ಮುಖ ಹರಿವು ಚಲನೆಯಿಂದ ಇದು ನಿರ್ದೇಶಿತವಾಗುತ್ತದೆ (ಆಕ್ಟಿನ್ ಎಂಬುದು ಜೀವಕೋಶವನ್ನು ರೂಪಿಸುವ ಸಲುವಾಗಿ ತಂತುಗಳನ್ನು ರೂಪಿಸುವ ಸೈಟೊಸ್ಕೆಲಿಟಲ್ ಪ್ರೋಟೀನ್ ಆಗಿದೆ)
ಆದರೆ, ಟಿ-ಜೀವಕೋಶಗಳು ಅನುಕ್ರಮವಾಗಿ ಹಲವು ಎ.ಪಿ.ಸಿ.ಗಳಿಗೆ ಬಂಧಗೊಳ್ಳಬಲ್ಲವು. ಒಂದೊಮ್ಮೆ, ಎಲ್ಲಾ ಟಿ.ಸಿ.ಆರ್.ಗಳು ಜೀವಕೋಶದೊಳಕ್ಕೆ ಸೆಳೆಯಲ್ಪಟ್ಟಿದ್ದರೆ ಹಾಗೂ ಪ್ರತಿಬಾರಿಯೂ ಅವು ಹೊಸದಾಗಿ ಉತ್ಪತ್ತಿಯಾಗಬೇಕಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುವ ಸಲುವಾಗಿ ಐ.ಐ.ಎಸ್.ಸಿ. ತಜ್ಞರು ಹೈ ಸ್ಪೇಷಿಯಲ್ ಮತ್ತು ಟೆಂಪೋರಲ್ ರೆಸಲ್ಯೂಷನ್ ಇಮೇಜಿಂಗ್ ತಾಂತ್ರಿಕತೆಗಳನ್ನು ಬಳಸಿದರು. ಆ ಮೂಲಕ ಟಿ-ಜೀವಕೋಶ ಹಾಗೂ ಎ.ಪಿ.ಸಿ.ಯಂತಹ ಲಿಪಿಡ್ ಬೈಲೇಯರ್ ಮೇಲ್ಮೈ ಸಂಪರ್ಕದ ವೇಳೆ ಟಿಸಿಆರ್ ಮೈಕ್ರೋಕ್ಲಸ್ಟರ್ ಗಳು ಯಾವ ಬಗೆಯಲ್ಲಿ ರೂಪುಗೊಳ್ಳುತ್ತವೆ ಹಾಗೂ ಚಲಿಸುತ್ತವೆ ಎಂಬುದನ್ನು ಅವಲೋಕಿಸಿದರು. ಮೈಕ್ರೋಕ್ಲಸ್ಟರ್ ಗಳ ಚಲನೆಯನ್ನು ಸೆರೆಹಿಡಿಯಲು ಟ್ರ್ಯಾಕಿಂಗ್ ಅಲ್ಗಾರಿದಮ್ ಅನ್ನು ಸಿದ್ಧಪಡಿಸಿದರು. ಅಚ್ಚರಿಯ ಅಂಶವೆಂದರೆ, ಆಕ್ಟಿನ್ ನ ಹಿಮ್ಮುಖ ಹರಿವಿಗೆ ವ್ಯತಿರಿಕ್ತವಾಗಿ ಸುಮಾರು ಶೇಕಡಾ 40ಷ್ಟು ಟಿಸಿಆರ್ ಮೈಕ್ರೋಕ್ಲಸ್ಟರುಗಳು ಸಿನ್ಯಾಪ್ಸ್ ಕೇಂದ್ರದಿಂದ ಹೊರಮುಖವಾಗಿ ಜೀವಕೋಶದ ಪರಿಧೆಯೆಡೆಗೆ ಸರಿಯುತ್ತವೆ (ಚಲಿಸುತ್ತವೆ) ಎಂಬುದು ದೃಢಪಟ್ಟಿತು.
ಈ ಹಂತದಲ್ಲಿ ಬೇರಿನ್ನೇನೋ ಸಂಭವಿಸುತ್ತಿದೆ ಎಂಬುದನ್ನು ತಜ್ಞರು ಕಂಡುಕೊಂಡರು. ಜೀವಕೋಶದ ಪರಿಧಿಯೆಡೆಗೆ ಮುಂಚಲಿಸುವ ತರಂಗಮುಖಗಳನ್ನು (ಕಿರು ಅಲೆಗಳು) ಸಿನ್ಯಾಪ್ಸ್ ಕೇಂದ್ರದ ಸುತ್ತಲೂ ಆಕ್ಟಿನ್ ರೂಪಿಸುತ್ತದೆ. ಈ ತರಂಗಗಳ ಚಲನೆಯು ಟಿಸಿಆರ್ ಮೈಕ್ರೋಕ್ಲಸ್ಟರುಗಳ ಹೊರಮುಖ ಚಲನೆಯೊಂದಿಗೆ ಪ್ರಬಲ ಸಂಬಂಧ ಹೊಂದಿದೆ. ರೋಗನಿರೋಧಕತೆ ನ್ಯೂನತೆಗಳಿಗೆ ಕಾರಣವಾಗುವ ಡಬ್ಲ್ಯು.ಎ.ಎಸ್.ಪಿ. (WASP) ಎಂಬ ಪ್ರಮುಖ ಪ್ರೋಟೀನನ್ನು ಹೊಂದಿರದ ಒಮ್ಮೆಯೂ ರೋಗಕಾರಕದ ಸಂಪರ್ಕಕ್ಕೆ ಬಾರದ ಟಿ-ಜೀವಕೋಶಗಳು ಆಕ್ಟಿನ್ ತರಂಗಗಳು ಹಾಗೂ ಟಿಸಿಆರ್ ಚಲನೆಗಳ ನಡುವೆ ಸ್ಪಷ್ಟವಾಗಿ ಅಸಮನ್ವಯತೆಯನ್ನು ತೋರ್ಪಡಿಸುತ್ತವೆ ಎಂಬುದನ್ನೂ ಕಂಡುಕೊಂಡರು.
ಆಕ್ಟಿನ್ ತರಂಗಮುಖಗಳು ಯಾವ ರೀತಿಯಲ್ಲಿ ಸುಮಾರು ಅರ್ಧದಷ್ಟು ಟಿಸಿಆರ್ ಗಳನ್ನು ಸಕ್ರಿಯವಾಗಿ ಸಿನ್ಯಾಪ್ಸ್ ಕೇಂದ್ರದಿಂದ ಹೊರಮುಖವಾಗಿ ವರ್ಗಾಯಿಸಿ ಅವುಗಳನ್ನು ಎಂಡೋಸೈಟೋಸಿಸ್ ನಿಂದ ಪಾರು ಮಾಡುತ್ತವೆ ಎಂಬುದನ್ನು ಈ ಅಧ್ಯಯನ ದೃಢಪಡಿಸುತ್ತದೆ. “ಆಕ್ಟಿನ್ ಎಂಬುದು ಜೀವಕೋಶಗಳಲ್ಲಿ ಸ್ವಾಭಾವಿಕವಾಗಿ ಹಿಮ್ಮುಖ ದಿಕ್ಕಿನಲ್ಲಿ ಚಲಿಸುವುದರಿಂದ ಇದು ವಿರೋಧಾಭಾಸವೂ ಹೌದು. ಇದು ನದಿಯೊಂದು ಎರಡೂ ದಿಕ್ಕುಗಳಲ್ಲಿ ಹರಿಯುತ್ತದೆ ಎಂದಂತಾಗುತ್ತದೆ. ಇದನ್ನು ಹೇಗಾದರೂ ಕಲ್ಪಿಸಿಕೊಳ್ಳಲು ಸಾಧ್ಯ” ಎಂದು ಕೇಳುತ್ತಾರೆ ಕುಮಾರಿ.
ಈ ಅಧ್ಯಯನದಿಂದ ಕಂಡುಕೊಂಡಿರುವ ಅಂಶಗಳು ಜೈವಿಕ-ಭೌತವಿಜ್ಞಾನದಲ್ಲಿನ ಪರಿಕಲ್ಪನೆಗಳ ವಿಸ್ತೃತ ಕೊರತೆಯನ್ನೂ ಬೆಟ್ಟು ಮಾಡಿ ತೋರಿಸುತ್ತವೆ ಎನ್ನುತ್ತಾರೆ ಅಧ್ಯಯನ ವರದಿಯ ಪ್ರಥಮ ಲೇಖಕರಾದ ಭೌತಶಾಸ್ತ್ರ ವಿಭಾಗದ ಪಿಎಚ್.ಡಿ. ಸಂಶೋಧನಾರ್ಥಿ ಸ್ಯಾಮ್ಯುಯೆಲ್ ಖಿಯಾಂಗ್ಟ್ ಝೆ. “ಈ ಪ್ರಯೋಗದಲ್ಲಿ ಅವಲೋಕಿಸಲಾಗಿರುವ ಮಹತ್ವದ ವಿನ್ಯಾಸಗಳು ಸಕ್ರಿಯ ಸೈಟೊಸ್ಕೆಲೆಟನ್ ನಲ್ಲಿ ಅಂತರ್ಗತವಾಗಿರುವ ಭೌತಶಾಸ್ತ್ರದ ಬಗ್ಗೆ ಬಹಳಷ್ಟು ಆಸಕ್ತಿದಾಯಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಹಾಗೂ ಚಲನಶೀಲ ವಿನ್ಯಾಸ ರೂಪುಗೊಳ್ಳುವಲ್ಲಿ ಈ ಚಟುವಟಿಕೆಯ ಪಾತ್ರದ ಬಗ್ಗೆ ಅಧ್ಯಯನ ಮಾಡಲು ಪ್ರೇರೇಪಿಸುತ್ತವೆ” ಎಂದೂ ಹೇಳುತ್ತಾರೆ.
ಎಂಸಿಬಿಯಲ್ಲಿ ಪಿಎಚ್.ಡಿ.ಸಂಶೋಧನಾರ್ಥಿಯಾಗಿರುವ ಹಾಗೂ ಮತ್ತೊಬ್ಬ ಪ್ರಥಮ ಲೇಖಕರಾದ ಅಹೀರಿಯಾ ಡೇ ಅವರು ಈ ಬಗ್ಗೆ ವಿವರಿಸಿ, “ಇದರ ಸೂಚಿತ ಅರ್ಥಗಳು ನಿರೋಧಕ ವ್ಯವಸ್ಥೆಯೊಂದಿಗೆ ಗಹನವಾದ ಸಂಬಂಧ ಹೊಂದಿವೆ. ಟಿ-ಜೀವಕೋಶವು ಸಮರ್ಪಕವಾಗಿ ಪ್ರತಿವರ್ತಿಸುತ್ತದೆಯೇ ಎಂಬುದನ್ನು ನಿರ್ಧರಿಸುವಲ್ಲಿ ಇಮ್ಯೂನ್ ಸಿನ್ಯಾಪ್ಸ್ ನಿರ್ಧಾರಕ ನೆಲೆಯಾಗಿರುತ್ತದೆ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ನಿರ್ಲಕ್ಷಿಸಲ್ಪಡುವ ಸೂಕ್ಷ್ಮವಾದ ಸೈಟೊಸ್ಕೆಲಿಟಲ್ ಚಲನಶೀಲತೆಗಳು ಈ ಸಮತೋಲನವನ್ನು ಪ್ರಭಾವಿಸಬಲ್ಲವು. ಈ ಸಂಗತಿಯ ಬಗೆಗಿನ ಆಳವಾದ ಜ್ಞಾನವು ಕ್ಯಾನ್ಸರ್ ಥೆರಪಿ ಹಾಗೂ ಸ್ವಯಂಪ್ರತಿರೋಧ ಕಾಯಿಲೆಗಳ ಕುರಿತಾದ ಸಂಶೋಧನೆಗೆ ಹೆಚ್ಚು ಸಹಕಾರಿಯಾಗಬಹುದು” ಎನ್ನುತ್ತಾರೆ.
ಉಲ್ಲೇಖ:
ಡೇ ಎ, ಖಿಯಾಂಗ್ಟೆ ಎಸ್ ಝಡ್, ಮಂಡಲ್ ಎಸ್, ಕೊಲಿನ್-ಯಾರ್ಕ್ ಎಚ್, ಫ್ರಿಟ್ಝ್ ಎಂ, ಸರ್ಕಾರ್ ಎಸ್, ಕುಮಾರಿ ಎಸ್, Actin waves guide an outward movement of microclusters in the lymphocyte immunological synapse, EMBO Reports (2026). https://link.springer.com/article/10.1038/s44319-025-00676-2
ಸಂಪರ್ಕ:
ಸುಧಾ ಕುಮಾರಿ
ಸಹಾಯಕ ಪ್ರಾಧ್ಯಾಪಕರು
ಸೂಕ್ಷ್ಮಾಣುಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ಇಮೇಲ್: sudhakm@iisc.ac.in
ಫೋನ್: 080-22932344 ವೆಬ್ಸೈಟ್: https://sudhakm.wixsite.com/immunosurveillance-l
ಸುಮಂತ್ರ ಸರ್ಕಾರ್
ಸಹಾಯಕ ಪ್ರಾಧ್ಯಾಪಕರು
ಭೌತಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್. ಸಿ.)
ಫೋನ್: 080-22933764 ವೆಬ್ಸೈಟ್: https://sumantrasarkarlab.org.in/
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ. ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.