ಐಎಎಸ್‌ಸಿ-ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಪಾಲುದಾರಿಕೆಯಲ್ಲಿ ವಿದ್ಯುತ್ ಪ್ರಸರಣ ವ್ಯವಸ್ಥೆಗಳಲ್ಲಿನ ಸೈಬರ್ ಸುರಕ್ಷತಾ ಸಮಸ್ಯೆಗಳಿಗೆ ಪರಿಹಾರ——————–

ವಿದ್ಯುತ್ ಪ್ರಸರಣ ಮತ್ತು ಜಾಲ ನಿರ್ವಹಣೆಯಲ್ಲಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ‘ಪವರ್ ಗ್ರಿಡ್’ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಐಐಎಸ್ ಸಿ ವಿಜ್ಞಾನ, ನಾವೀನ್ಯತೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಫ್ಎಸ್ಐಡಿ) ಗಳು ಪಾಲುದಾರಿಕೆ ಮಾಡಿಕೊಂಡಿವೆ.

ವಿದ್ಯುತ್ ಜಾಲಗಳಿಗೆ ಸಂಬಂಧಿಸಿದ ಸೈಬರ್ ಸುರಕ್ಷತೆಗಾಗಿ ಶೈಕ್ಷಣಿಕ ವಲಯ, ರಾಷ್ಟ್ರೀಯ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು ಹಾಗೂ ಉದ್ಯಮ ಪರಿಣತರು ಒಟ್ಟಾಗಿ ಸೇರಿ ಕಾರ್ಯನಿರ್ವಹಿಸುವ ಸಮನ್ವಯ ಕೇಂದ್ರವಾಗಿ ಹಾಗೂ ಚಿಂತಕರ ಚಾವಣಿಯಾಗಿ ಇದು ಕಾರ್ಯನಿರ್ವಹಿಸಲಿದೆ.


——————–

“ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯುತ್ ಪ್ರಸರಣದಲ್ಲಿ ಹಾಗೂ ವಿದ್ಯುತ್ ಜಾಲನಿರ್ವಹಣೆಯಲ್ಲಿ ಸೈಬರ್ ಸುರಕ್ಷತೆಯು ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತದೆ. ವಿಶ್ವಾಸಾರ್ಹವಾದ ವಿದ್ಯುತ್ ಪೂರೈಕೆಯನ್ನು ಕಾಯ್ದುಕೊಳ್ಳಲು ಸೈಬರ್ ಭೀತಿಗೆ ಪ್ರತಿಯಾಗಿ ಸದೃಢ ಸುರಕ್ಷತೆಗಳನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯವಾಗಿರುತ್ತದೆ. ಸುರಕ್ಷತೆ ಹಾಗೂ ಭದ್ರತೆಯಿಂದ ಕೂಡಿದ ವಿದ್ಯುತ್ ಜಾಲವನ್ನು ರೂಪಿಸುವಲ್ಲಿ ಸೈಬರ್ ಪ್ರತಿರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಾಮರ್ಥ್ಯ ವೃದ್ಧಿಸಲು ಶೈಕ್ಷಣಿಕ ವಲಯದವರು ಹಾಗೂ ಉದ್ಯಮ ಮಂದಿ ಸೇರಿ ನಿರಂತರವಾಗಿ ಹಾಗೂ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸುವುದು ಈಗಿನ ಜರೂರಾಗಿದೆ” ಎನ್ನುತ್ತಾರೆ ಪವರ್ ಗ್ರಿಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿಎಂ ಡಿ ಕೆ ಶ್ರೀಕಾಂತ್.

ದೇಶದ ಅತ್ಯಂತ ದೊಡ್ಡ ವಿದ್ಯುತ್ ಪ್ರಸರಣ ಸೇವಾ ವ್ಯವಸ್ಥೆಯಾದ ‘ಪವರ್ ಗ್ರಿಡ್’, ಸೈಬರ್ ಸುರಕ್ಷತೆಗಾಗಿ ಪವರ್ ಗ್ರಿಡ್ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆ ಕೈಜೋಡಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ‘ಪವರ್ ಗ್ರಿಡ್’ ಸಂಸ್ಥೆಯು ಮುಂಬರುವ 10 ವರ್ಷಗಳಲ್ಲಿ 119. 02 ಕೋಟಿ ರೂಪಾಯಿಗಳ ಅನುದಾನವನ್ನು ಕೊಡಲು ನಿರ್ಧರಿಸಿದೆ. ಜೊತೆಗೆ, ಈ ವಲಯದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಕೇಂದ್ರಕ್ಕೆ ಉದ್ಯಮ ಪರಿಣಿತರನ್ನು ನಿಯೋಜಿಸಲಿದೆ ಎಂದೂ ಅವರು ವಿವರಿಸುತ್ತಾರೆ.

“ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉದ್ಯಮದೊಂದಿಗೆ ಸೇರಿ ಕಾರ್ಯನಿರ್ವಹಿಸುವುದು ಭಾರತೀಯ ವಿಜ್ಞಾನ ಸಂಸ್ಥೆಯ ಧ್ಯೇಯವಾಗಿರುತ್ತದೆ. ಇಡೀ ದೇಶಕ್ಕೆ ಅತ್ಯಂತ ಮಹತ್ವದ್ದೆನ್ನಿಸುವ ವಲಯದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ನೆರವು ನೀಡಿದ್ದಕ್ಕಾಗಿ ‘ಪವರ್ ಗ್ರಿಡ್’ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ” ಎನ್ನುತ್ತಾರೆ ಐಐಎಸ್‌ಸಿ ನಿರ್ದೇಶಕ ಪ್ರೊಫೆಸರ್ ಗೋವಿಂದನ್ ರಂಗರಾಜನ್.

ಸಂಪರ್ಕಿಸಿ:
ಐಎಎಸ್‌ಸಿ ಸಂವಹನ ಕಚೇರಿ | news@iisc.ac.in