ಐವರು ಸಾಧಕರಿಗೆ 2021ನೇ ಸಾಲಿನ ಅಲ್ಯುಮ್ನಾ ಪುರಸ್ಕಾರ


ಭಾರತೀಯ ವಿಜ್ಞಾನ ಸಂಸ್ಥೆಯ 2021ನೇ ಸಾಲಿನ ಅಲ್ಯುಮ್ನಸ್/ಅಲ್ಯುಮ್ನಾ ಪುರಸ್ಕಾರಕ್ಕೆ ಗಮನ ಸೆಳೆಯುವಂತಹ ಕೊಡುಗೆಗಳನ್ನು ನೀಡಿದ ಐವರು ವಿಜ್ಞಾನಿಗಳು ಮತ್ತು ಎಂಜಿನಿಯರರು ಪಾತ್ರರಾಗಿದ್ದಾರೆ.

ವೃತ್ತಿ ಕ್ಷೇತ್ರಕ್ಕೆ, ಸಮಾಜಕ್ಕೆ ಹಾಗೂ ಸಂಸ್ಥೆಗೆ ವಿಶೇಷ ಕೊಡುಗೆ ನೀಡುವ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದವರಿಗೆ ಈ ವಾರ್ಷಿಕ ಪುರಸ್ಕಾರವನ್ನು ಕೊಡಲಾಗುತ್ತದೆ. ಐ.ಐ.ಎಸ್ ಸಿ. ನಿರ್ದೇಶಕರು ಅಧ್ಯಕ್ಷರಾಗಿರುವ ಸಮಿತಿಯು ಈ ಆಯ್ಕೆಯನ್ನು ಮಾಡಲಿದೆ.

ಡಾ. ಅನುರಾಧಾ ಎಂ.ಅಣ್ಣಸ್ವಾಮಿ, ಪ್ರೊ.ಸಾಜಲ್ ಕೆ.ದಾಸ್, ಪ್ರೊ.ಟಿ.ಪ್ರದೀಪ್, ಪ್ರೊ.ಸಿ.ಎಸ್.ರಾಘವೇಂದ್ರ ಮತ್ತು ಡಾ.ರಿತು ಶ್ರೀವಾಸ್ತವ ಅವರು 2021ನೇ ಸಾಲಿನ ಪುರಸ್ಕೃತರಾಗಿದ್ದಾರೆ.

ಡಾ. ಅನುರಾಧಾ ಎಂ.ಅಣ್ಣಸ್ವಾಮಿ ಅವರು ಪ್ರಸ್ತುತ ಅಮೆರಿಕದ ಮೆಸ್ಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಹಿರಿಯ ಸಂಶೋಧಕ ವಿಜ್ಞಾನಿಯಾಗಿದ್ದಾರೆ. ಕಂಟ್ರೋಲ್ ಥಿಯರಿ ಹಾಗೂ ತಾಂತ್ರಿಕತೆಯಲ್ಲಿ ಅವರು ಮುಂಚೂಣಿ ಸಂಶೋಧಕರಾಗಿದ್ದಾರೆ. ಅಡ್ಯಾಪ್ಟೀವ್ ಕಂಟ್ರೋಲ್ ಥಿಯರಿ, ನ್ಯೂರಲ್ ಜಾಲದ ನಿಯಂತ್ರಣ, ಅಡ್ಯಾಪ್ಟೀವ್ ಕಂಟ್ರೋಲ್ ಮತ್ತು ಮಷೀನ್ ಲರ್ನಿಂಗ್ ನ ನಿಯಂತ್ರಣ ವಿನ್ಯಾಸಗಳು, ವೈಮಾನಿಕ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳಿಗೆ ಆನ್ವಯಿಕತೆಗಳು, ದಹನ ವ್ಯವಸ್ಥೆಗಳು, ಸ್ಮಾರ್ಟ್ ಗ್ರಿಡ್ ಗಳು ಮತ್ತು ನಗರ ಸಂಚಾರ ನಿಯಂತ್ರಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗಮನಾರ್ಹ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಇವರು ಸಂಸ್ಥೆಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ 1979ರಲ್ಲಿ ಬಿ.ಇ. ಪದವಿ ಪಡೆದಿದ್ದಾರೆ.

ಪ್ರೊ. ಸಾಜಲ್ ಕೆ.ದಾಸ್ ಅವರು ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ. ಅಮೆರಿಕದ ಮಿಸ್ಸೋರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸೇಂಟ್ ಕ್ಲೇರ್ ದತ್ತಿ ಪೀಠದ ಮುಖ್ಯಸ್ಥರಾಗಿರುವ ಇವರು ಸ್ಮಾರ್ಟ್ ಹೆಲ್ತ್ ಬೆಕನ್ಸ್, ಎಲ್.ಎಲ್.ಸಿ.ಯ ಸಹ-ಸ್ಥಾಪಕರೂ ಆಗಿದ್ದಾರೆ. ಮೊಬೈಲ್ ಹಾಗೂ ಪರ್ವೇಸಿವ್ ಕಂಪ್ಯೂಟಿಂಗ್, ನಿಸ್ತಂತು (ವೈರ್ ಲೆಸ್) ಮತ್ತು ಸಂವೇದಕ ಜಾಲಗಳು (ಸೆನ್ಸರ್ ನೆಟ್ ವರ್ಕ್ ಗಳು), ಚತುರ ಪರಿಸರ (ಸ್ಮಾರ್ಟ್ ಎನ್ವಿರಾನ್ ಮೆಂಟ್), ಸೈಬರ್-ಫಿಸಿಕಲ್ ಮತ್ತು ಐಒಟಿ ಸುರಕ್ಷಾ ವ್ಯವಸ್ಥೆಗೆ ಸಂಬಂಧಿಸಿದಂತೆ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ. ಇವರು ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಸ್ವಯಂಚಾಲನೆ ವಿಭಾಗದಲ್ಲಿ 1985ರಲ್ಲಿ ಎಂ.ಇ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರೊ. ಟಿ. ಪ್ರದೀಪ್ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಮದ್ರಾಸ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ನ್ಯಾನೊ ಲೋಹ ಕಣಗಳನ್ನು ಆಧರಿಸಿದ ನೀರು ಶುದ್ಧೀಕರಣ ವಿಧಾನಗಳು, ಅಣುಗಾತ್ರದ ಹಾಗೂ ನ್ಯಾನೊ ಕಣ ಗಾತ್ರದ ವಸ್ತುಗಳ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಐ.ಐ.ಟಿ. ಮದ್ರಾಸ್ ನಲ್ಲಿರುವ ‘ಶುದ್ಧ ನೀರು ಅಂತರರಾಷ್ಟ್ರೀಯ ಕೇಂದ್ರ’ದ ಪರಿಕಲ್ಪನೆ ಹಾಗೂ ನಂತರದ ನಿರ್ಮಾಣದ ಹಿಂದಿನ ರೂವಾರಿ ಇವರಾಗಿದ್ದಾರೆ. ಪ್ರೊಫೆಸರ್ ಪ್ರದೀಪ್ ಅವರು ಸಂಸ್ಥೆಯ ‘ಘನ ಸ್ಥಿತಿ ಮತ್ತು ಸಂರಚನಾ ರಸಾಯನಶಾಸ್ತ್ರ ಘಟಕ’ದಿಂದ 1991ರಲ್ಲಿ ಪಿಎಚ್.ಡಿ. ಪಡೆದಿದ್ದಾರೆ.

ಸಿ. ಎಸ್. ರಾಘವೇಂದ್ರ ಅವರು ಅಮೆರಿಕದ ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಟೆರ್ಬಿ ಸ್ಕೂಲ್ ಆಫ್ ಎಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾಗಿರುವ ಜೊತೆಗೆ ಅಲ್ಲಿನ ‘ಜಾಗತಿಕ ಶೈಕ್ಷಣಿಕ ಉಪಕ್ರಮ’ಗಳ ನಿಕಾಯದ ವೈಸ್-ಡೀನ್ ಕೂಡ ಆಗಿದ್ದಾರೆ. ಅಂತರಸಂಪರ್ಕ ಜಾಲಗಳು, ವಿಶ್ವಾಸಾರ್ಹ ಹಾಗೂ ದೋಷ-ಸಹಿಷ್ಣು ಕಂಪ್ಯೂಟಿಂಗ್, ಸಂವರ್ಧಿತ ಮೆಷ್ ಗಳಿಗೆ ಹಾಗೂ ಹೈಪರ್ ಕ್ಯೂಬ್ ಗಳಿಗೆ ಸಮಾನಾಂತರ ಅಲ್ಗಾರಿದಮ್ ಗಳು, ನಿಸ್ತಂತು ಮಧ್ಯಂತರ ಜಾಲಗಳಿಗೆ ಪವರ್ ಅವೇರ್ ಸಂಹಿತೆಗಳು, ತೈಲ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಮಷೀನ್ ಲರ್ನಿಂಗ್ ಅಲ್ಗಾರಿದಮ್ ಗಳ ಆನ್ವಯಿಕತೆಗೆ ಸಂಬಂಧಿಸಿದಂತೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಇವರು ಸಂಸ್ಥೆಯ ಎಲೆಕ್ಟ್ರಿಕಲ್ ಸಂವಹನ ಎಂಜಿನಿಯರಿಂಗ್ ವಿಭಾಗದಲ್ಲಿ 1976ರಲ್ಲಿ ಬಿ.ಇ.ಯನ್ನು ಹಾಗೂ 1978ರಲ್ಲಿ ಸ್ನಾತಕೋತ್ತರ ಎಂ.ಇ.ಯನ್ನು ಪಡೆದಿದ್ದಾರೆ.

ಡಾ. ರಿತು ಶ್ರೀವಾಸ್ತವ ಅವರು ಅಮೆರಿಕದ ಸ್ಯಾನ್ ಡಿಸ್ಕ್ ಕಾರ್ಪೊರೇಷನ್ ತಾಂತ್ರಿಕ ಅಭಿವೃದ್ಧಿ ವಿಭಾಗದ ಮಾಜಿ ಉಪಾಧ್ಯಕ್ಷರು. ಅರೆವಾಹಕ ಸಾಧನ ಭೌತಶಾಸ್ತ್ರ, ಸ್ಮರಣ ಚಿಪ್ ವಿನ್ಯಾಸ ಹಾಗೂ ಫ್ಯಾಬ್ರಿಕೇಷನ್ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಇವರ ಕೊಡುಗೆಗಳಿಂದಾಗಿ ಚಿಪ್ ಗಳ ಮೇಲೆ ಟ್ರಾನ್ಸಿಸ್ಟರ್ ಸಾಂದ್ರತೆಯ ಮಿತಿಯ ವಿಸ್ತರಣೆ, ಸ್ಮರಣ ಕೋಶದಿಂದ ಮಾಹಿತಿ ಹೆಕ್ಕಿ ತೆಗೆಯುವಿಕೆಯ ವೇಗವರ್ಧನೆ ಹಾಗೂ ಕಡಿಮೆ ವಿದ್ಯುತ್ ಬಳಕೆ, ಇವೆಲ್ಲವೂ ಸಾಧ್ಯವಾಗಿದೆ. ವರು ಸಂಸ್ಥೆಯ ಎಲೆಕ್ಟ್ರಿಕಲ್ ಸಂವಹನ ಎಂಜಿನಿಯರಿಂಗ್ ವಿಭಾಗದಲ್ಲಿ 1971ರಲ್ಲಿ ಬಿ.ಇ.ಯನ್ನು ಹಾಗೂ 1973ರಲ್ಲಿ ಸ್ನಾತಕೋತ್ತರ ಎಂ.ಇ.ಯನ್ನು ಪಡೆದಿದ್ದಾರೆ.

“ಭಾರತೀಯ ವಿಜ್ಞಾನ ಸಂಸ್ಥೆಯ ಪದವೀಧರರಾದ ಈ ಐವರು ವಿಶಿಷ್ಟ ಸಾಧಕರಿಗೆ ಈ ಪುರಸ್ಕಾರವನ್ನು ಪ್ರದಾನ ಮಾಡಲು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ” ಎನ್ನುತ್ತಾರೆ ಐ.ಐ.ಎಸ್ ಸಿ. ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್ ರವರು. “ಇವರಲ್ಲಿ ಪ್ರತಿಯೊಬ್ಬರೂ ತಂತಮ್ಮ ಪರಿಣತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಈ ಪುರಸ್ಕಾರದ ಮೂಲಕ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇವರು ಸಂಸ್ಥೆಯಲ್ಲಿ ಈಗ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಈಗಷ್ಟೇ ವ್ಯಾಸಂಗ ಮುಗಿಸಿದವರಿಗೆ ಪ್ರೇರಣೆಯಾಗಿರುತ್ತಾರೆ” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.