ಐ.ಐ.ಎಸ್ ಸಿ.- ಎಲೆಕ್ಟ್ರೋವಿಂಗ್ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಹೊಚ್ಚ ಹೊಸ ತಾಂತ್ರಿಕತೆ ಆಧಾರಿತ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ


ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.) ಅಭಿವೃದ್ಧಿಪಡಿಸಿದ ತಾಂತ್ರಿಕತೆಯನ್ನು ಆಧರಿಸಿದ ಆಮ್ಲಜನಕ ಉತ್ಪಾದನಾ ಘಟಕವನ್ನು ಬೆಂಗಳೂರಿನ ಪೊಬ್ಬತಿ ಮೆಡಿಕಲ್ ಸೆಂಟರ್ ನಲ್ಲಿ ಅನುಸ್ಥಾಪಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು 27ನೇ ಜುಲೈ 2021 ರಂದು ಇದರ ಉದ್ಘಾಟನೆ ನಡೆಸಿಕೊಟ್ಟರು.

ಬೆಂಗಳೂರು ಮೂಲದ ಎಲೆಕ್ಟ್ರೋವಿಂಗ್ ಟೆಕ್ನಾಲಜೀಸ್ ಎಂಬ ಕಂಪನಿಯು ಘಟಕದ ಅನುಸ್ಥಾಪನಾ ಕಾರ್ಯವನ್ನು ನಿರ್ವಹಿಸಿದೆ. ಗಿವ್ ಇಂಡಿಯಾ ಫೌಂಡೇಷನ್ ಮತ್ತು ಜೆರೋದಾ ಸಂಸ್ಥೆಗಳ ನೆರವಿನಲ್ಲಿ ಇದು ನಡೆದಿದೆ.

ಜಲಜನಕ ಉತ್ಪಾದನೆಗಾಗಿ ಬಹು ಪ್ರಭೇದ ಅನಿಲ ವರ್ಗೀಕರಣ ಪ್ರಕ್ರಿಯೆಯನ್ನು ಆಧರಿಸಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಸುಸ್ಥಿರ ತಾಂತ್ರಿಕತೆಗಳ ಕೇಂದ್ರದ (ಸಿ.ಎಸ್.ಟಿ.) ಪ್ರೊಫೆಸರ್ ಎಸ್.ದಾಸಪ್ಪ ಅವರ ನೇತೃತ್ವದಲ್ಲಿ ಸಂಶೋಧಕರಾದ ಅರಷ್ ದೀಪ್ ಸಿಂಗ್ ಮತ್ತು ಆನಂದ್ ಎಂ.ಶಿವಪೂಜಿ ಅವರನ್ನು ಒಳಗೊಂಡ ಐ.ಐ.ಎಸ್ ಸಿ. ತಂಡವು ಈ ಅನಿಲ ವರ್ಗೀಕರಣ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿತ್ತು.

ಕಳೆದ ವರ್ಷ ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ‘ಸ್ವಿಂಗ್ ಅಡ್ ಸಾರ್ಪ್ಷನ್’ ಪ್ರಕ್ರಿಯೆಯನ್ನು ಆಧರಿಸಿದ ಆಮ್ಲಜನಕ ಉತ್ಪಾದನಾ ವ್ಯವಸ್ಥೆಯ ಪರಿಕಲ್ಪನೆಯನ್ನು ರೂಪಿಸಿ ನಂತರ ಅದನ್ನು ಅಭಿವೃದ್ಧಿಪಡಿಸಿತ್ತು. ಕಡಿಮೆ ವಿದ್ಯುತ್ ಬಳಸುವ ಈ ವಿಧಾನವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಕಟಿಸಿರುವ ಮಾನದಂಡಗಳಿಗೆ ಕೂಡ ಒಳಪಟ್ಟಿರುತ್ತದೆ.

ಕಂಪ್ರೆಸರ್ ಮೂಲಕ ಪರಿಸರದಲ್ಲಿನ ಗಾಳಿಯನ್ನು ಸೆಳೆದುಕೊಳ್ಳುವ ಹಾಗೂ ಆಮ್ಲಜನಕವನ್ನು ಪ್ರತ್ಯೇಕಗೊಳಿಸುವ ಮುನ್ನ ಕಶ್ಮಲಗಳನ್ನು ತೆಗೆಯುವ ಕಂಡೀಷನಿಂಗ್ ವ್ಯವಸ್ಥೆಯನ್ನು ಈ ಪ್ರಕಿಯೆ ಒಳಗೊಂಡಿದೆ.

ಸಣ್ಣದಾದ ಸಂಗ್ರಾಹಕ ಮತ್ತು ನಿರ್ಗಮನ ನಾಳಗಳಿಂದ ಹಾಗೂ ಹಲವಾರು ಸುರಕ್ಷತಾ ವ್ಯವಸ್ಥೆಗಳಿಂದ ಸಂಯೋಜನೆಗೊಳಿಸಲಾದ ‘ಟ್ವಿನ್-ಬೆಡ್ ಅಡ್ ಸಾರ್ಪ್ಷನ್ ವ್ಯವಸ್ಥೆ’ಯಲ್ಲಿ ಈ ಪ್ರತ್ಯೇಕೀಕರಣ ನಡೆಯುತ್ತದೆ. ಉತ್ಪಾದನೆಯಾಗುವ ಆಮ್ಲಜನಕವು ಇಂಡಿಯನ್ ಫಾರ್ಮಕೋಪಿಯಾ ನಿಗದಿಗೊಳಿಸಿರುವ ಗುಣಮಟ್ಟ ಅಗತ್ಯಗಳಿಗೆ ಅನುಗುಣವಾಗಿರುತ್ತದೆ. ಹೀಗಾಗಿ, ಇದನ್ನು ಆಸ್ಪತ್ರೆಗಳ ಐಸಿಯು/ಸಿಸಿಯು/ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಇತರ ಚಿಕಿತ್ಸಾ ವಾರ್ಡ್ ಗಳಲ್ಲಿ ಬಳಸಬಹುದು.

ಭಾರತದಲ್ಲಿ ಹೆಚ್ಚಾಗಿರುವ ಆಮ್ಲಜನಕ ಬೇಡಿಕೆಯನ್ನು ಪೂರೈಸುವ ಸಲುವಾಗಿ ಐ.ಐ.ಎಸ್ ಸಿ. ತಂಡವು 50 ಎಲ್.ಪಿ.ಎಂ. ವೈದ್ಯಕೀಯ ಆಮ್ಲಜನಕ ಘಟಕ ಸ್ಥಾಪನೆಗೆ ಓಪನ್-ಸೋರ್ಸ್ ವಿನ್ಯಾಸವನ್ನು ಅಭಿವೃದ್ಧಿಪಡಿಸಿದೆ. ಆಸ್ಪತ್ರೆಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ವಿವಿಧ ಸಾಮರ್ಥ್ಯಗಳ (50 ಎಲ್.ಪಿ.ಎಂ.ನಿಂದ 1000 ಎಲ್.ಪಿ.ಎಂ.ವರೆಗೆ) ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅನುಸ್ಥಾಪಿಸಲು ದೇಶದ ವಿವಿಧೆಡೆಯ ನಾಲ್ಕು ಏಜೆನ್ಸಿಗಳೊಂದಿಗೆ ತಾಂತ್ರಿಕ ವರ್ಗಾವಣೆ ಒಪ್ಪಂದಗಳಿಗೆ ಐ.ಐ.ಎಸ್ ಸಿ. ಸಹಿಯನ್ನೂ ಹಾಕಿದೆ.

ಇದೀಗ ಪೊಬ್ಬತಿ ಮೆಡಿಕಲ್ ಸೆಂಟರ್ ನಲ್ಲಿ ಅಳವಡಿಸಲಾಗಿರುವ ಘಟಕವು ಈ ತಾಂತ್ರಿಕತೆಯನ್ನು ಆಧರಿಸಿದ ಮೊದಲ ಘಟಕವಾಗಿದೆ. ಇದು ಶೇ 93% ರಷ್ಟು ಪರಿಶುದ್ಧತೆಯಿಂದ ಕೂಡಿದ ವೈದ್ಯಕೀಯ ದರ್ಜೆಯ ಆಮ್ಮಜನಕವನ್ನು 50 ಎಲ್.ಪಿ.ಎಂ. ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಮೊಬೈಲ್ ಸಿಗ್ನಲ್ ಲಭ್ಯವಿರುವ ಯಾವುದೇ ದೂರದ ಸ್ಥಳದಿಂದಲೂ ಇದರ ಮೇಲ್ವಿಚಾರಣೆಯನ್ನು ನಿರಂತರವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಐಒಟಿ ತಾಂತ್ರಿಕತೆಯೊಂದಿಗೆ ಜೋಡಣೆ ಮಾಡಲಾಗಿದೆ. ಇದರಿಂದಾಗಿ, ಸಂಬಂಧಿಸಿದವರಿಗೆ ಆಮ್ಲಜನಕ ಘಟಕದ ಸುಸ್ಥಿತಿಯ ಬಗ್ಗೆ ನಿಗಾ ವಹಿಸಲು ಹಾಗೂ ಸೂಕ್ತ ಸಮಯದಲ್ಲಿ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆ.

ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿದ ಈ ಪ್ರಕ್ರಿಯೆಯನ್ನು ಆಧರಿಸಿದ ಆಮ್ಲಜನಕ ಉತ್ಪಾದನಾ ಘಟಕಗಳನ್ನು 50 ಹಾಸಿಗೆಗಳಿರುವ ಸಣ್ಣ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುಸ್ಥಾಪಿಸಲು ಐ.ಐ.ಎಸ್ ಸಿ. ತಂಡವು ನೆರವಿನ ನಿರೀಕ್ಷೆಯಲ್ಲಿದೆ. ವಿದ್ಯುತ್ ಪೂರೈಕೆಯ ಬ್ಯಾಕ್ ಅಪ್ ವ್ಯವಸ್ಥೆ ಇರುವ ಆಸ್ಪತ್ರೆಗಳಲ್ಲಿ ಕಂಟೇನರ್ ಗಳ ನೆರವಿನಿಂದ ಅಡೆತಡೆಯಿಲ್ಲದೆ ಆಮ್ಲಜನಕ ಪೂರೈಸಲು ಸಾಧ್ಯವಾಗುವಂತೆ ‘ಪ್ಲಗ್ ಅಂಡ್ ಪ್ಲೇ’ ನಮೂನೆಯಲ್ಲಿ ಇದನ್ನು ಕಾರ್ಯಗತಗೊಳಿಸುವ ಯೋಜನೆ ಹೊಂದಿದೆ. ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಐಒಟಿ ತಾಂತ್ರಿಕತೆಯನ್ನು ಸಂಯೋಜಿಸಿರುವ ಈ ದೂರನಿಯಂತ್ರಿತ ವ್ಯವಸ್ಥೆಯು ಹೆಚ್ಚು ಅನುಕೂಲಕರ ಎನ್ನಲಾಗಿದೆ. ಕ್ಲೌಡ್ ತಾಂತ್ರಿಕತೆಯ ಮೂಲಕ ದತ್ತಾಂಶ ಕೇಂದ್ರೀಕೃತ ವ್ಯವಸ್ಥೆಯು ನೈಜ ಕ್ಷಣದಲ್ಲಿ ವಿಶ್ಲೇಷಣೆಗೆ ಹಾಗೂ ಸಂಬಂಧಿಸಿದ ಏಜೆನ್ಸಿಗಳಿಗೆ ಆಯಾ ಕ್ಷಣದಲ್ಲೇ ಎಸ್.ಎಂ.ಎಸ್. ಅಥವಾ ಇ-ಮೇಲ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ.

ಸಂಪರ್ಕಿಸಿ:

ಎಸ್.ದಾಸಪ್ಪ
ಪ್ರಾಧ್ಯಾಪಕರು, ಸುಸ್ಥಿರ ತಾಂತ್ರಿಕತೆಗಳ ಕೇಂದ್ರ (ಸಿ.ಎಸ್.ಟಿ.)
dasappa@iisc.ac.in
scube@iisc.ac.in
080-2293 2338

——000——