ಐ.ಐ.ಎಸ್.ಸಿ. ವಿಜ್ಞಾನಿಗಳಿಂದ ಭಾಷ್ಪೀಕರಣ ದರ ಲೆಕ್ಕಹಾಕಬಲ್ಲ ಸಾಧನ ಅಭಿವೃದ್ಧಿ


-ರೋಹಿಣಿ ಮುರುಗನ್

ಸ್ಥಳೀಯ ನೆಲೆಯೊಂದರ ಭಾಷ್ಪೀಕರಣ ದರವನ್ನು ಕೆಲವೇ ನಿಮಿಷಗಳಲ್ಲಿ ಲೆಕ್ಕಹಾಕಬಲ್ಲ ಹೊಸ ಸಾಧನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದೆ. ಈ ವಿಧಾನದಿಂದ ಭಾಷ್ಪೀಕರಣ ದರವನ್ನು ಲೆಕ್ಕ ಹಾಕುವುದು ಚಾಲ್ತಿಯಲ್ಲಿರುವ ವಿಧಾನಗಳಿಗಿಂತ ಹೆಚ್ಚು ಕ್ಷಮತೆಯಿಂದ ಕೂಡಿದುದೂ ಹಾಗೂ ಅಗ್ಗದ ಮಾರ್ಗೋಪಾಯವೂ ಆಗಿದೆ.

“ನಾವು ಅಭಿವೃದ್ಧಿಪಡಿಸಿರುವ ವಿಧಾನವು ಸಸ್ಯಗಳಿಂದ ಆಗುವ ಭಾಷ್ಪೀಕರಣ ಮತ್ತು ಮಣ್ಣಿನಿಂದ ಆಗುವ ಭಾಷ್ಪೀಕರಣವನ್ನು ಲೆಕ್ಕಹಾಕುವ ಹೆಚ್ಚು ವಾಸ್ತವಿಕ ಕ್ರಮವಾಗಿದೆ” ಎನ್ನುತ್ತಾರೆ ಐ.ಐ.ಎಸ್.ಸಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗೂ ‘ಜರ್ನಲ್ ಆಫ್ ಹೈಡ್ರಾಲಜಿ’ಯಲ್ಲಿ ಇತ್ತೀಚಿಗೆ ಪ್ರಕಟವಾದ ಅಧ್ಯಯನ ವರದಿಯ ಹಿರಿಯ ಲೇಖಕ ಜಯವಂತ್ ಎಚ್.ಅರಕೇರಿ.


Evaporimeter tested in the lab (Credits: Aditya, Arjun, Anush, and Navneet)

ಭಾಷ್ಪೀಕರಣ ಎಂದರೆ, ನೀರು ದ್ರವ ಸ್ಥಿತಿಯಿಂದ ಅನಿಲ ಸ್ಥಿತಿಗೆ ಬದಲಾಗುವ ಪ್ರಕ್ರಿಯೆಯಾಗಿದೆ. ಇದು ಜಲಚಕ್ರದಲ್ಲಿನ ಅವಿಭಾಜ್ಯ ಪ್ರಕ್ರಿಯೆಯಾಗಿದೆ. ಜೊತೆಗೆ, ಸಸ್ಯಗಳಿಂದ ಭಾಷ್ಪೀಕರಣ ಪ್ರಕ್ರಿಯೆ ಮೂಲಕ ನೀರಿನಂಶದ ನಷ್ಟವನ್ನು ನಿಯಂತ್ರಿಸುವಲ್ಲಿ ಕೂಡ ಮುಖ್ಯಪಾತ್ರ ವಹಿಸುತ್ತದೆ. ಭಾಷ್ಪೀಕರಣ ದರವನ್ನು ಲೆಕ್ಕ ಹಾಕುವುದರಿಂದಾಗಿ ರೈತರಿಗೆ ತಮ್ಮ ಕೃಷಿ ಭೂಮಿಗೆ ನೀರಿನ ಅಗತ್ಯ ಎಷ್ಟಿದೆ ಎಂಬುದನ್ನು ತಿಳಿಯಲು ಅನುಕೂಲವಾಗುತ್ತದೆ. ಜೊತೆಗೆ, ಇದು ಹವಾಮಾನ ಕೇಂದ್ರಗಳಲ್ಲಿ ಸ್ಥಳೀಯ ವಾತಾವರಣ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವುದಕ್ಕೂ ಅನುವು ಮಾಡಿಕೊಡುತ್ತದೆ. ಇದಲ್ಲದೇ ಸಸ್ಯಶಾಸ್ತ್ರಜ್ಞರಿಗೆ, ಸಸ್ಯಗಳ ಭಾಷ್ಪೀಕರಣದ ಅಂತರ್ಗತ ಚಲನಶೀಲತೆಯನ್ನು ಅಧ್ಯಯನ ಮಾಡುವುದಕ್ಕೂ ಇದು ಹೆಚ್ಚಿನ ಮಟ್ಟದಲ್ಲಿ ಸಹಕಾರಿಯಾಗುತ್ತದೆ.

ಪ್ರಸ್ತುತ, ಭಾಷ್ಪೀಕರಣ ದರವನ್ನು ಲೆಕ್ಕಹಾಕಲು ಅತ್ಯಂತ ಸಾಮಾನ್ಯವಾಗಿ ಬಳಸುತ್ತಿರುವ ಸಾಧನಗಳೆಂದರೆ ಪ್ಯಾನ್ ಇವಾಪೊರಿಮೀಟರ್ ಗಳಾಗಿವೆ.ಅವು ನೀರಿನಿಂದ ತುಂಬಿದ ದೊಡ್ಡ ಗಾತ್ರದ ಬೋಗುಣಿಗಳಂತೆ ಇರುತ್ತವೆ. ಒಂದು ದಿನದ ಅವಧಿಯಲ್ಲಿ ಅದರಲ್ಲಿನ ನೀರಿನ ಮಟ್ಟದಲ್ಲಿ ಆಗುವ ಬದಲಾವಣೆಯು ಆ ದಿನಕ್ಕೆ ಅನ್ವಯವಾಗುವಂತೆ ಆ ಜಾಗದ ಭಾಷ್ಪೀಕರಣ ದರವನ್ನು ಒದಗಿಸುತ್ತದೆ.

 “ಈಗಿರುವ ವಿಧಾನಗಳ ಅನಾನುಕೂಲವೆಂದರೆ, ಅವುಗಳಲ್ಲಿ ಭಾಷ್ಪೀಕರಣ ದರವನ್ನು ದಿನವೊಂದಕ್ಕೆ ಎಷ್ಟೆಂದು ಮಾತ್ರ ಅಂದಾಜಿಸಬಹುದು ಹಾಗೂ ದೊಡ್ಡ ವಿಸ್ತೀರ್ಣದ ಜಾಗಕ್ಕೆ (1 ಚದುರ ಮೀಟರ್) ಅನ್ವಯವಾಗುವಂತೆ ಮಾತ್ರ ತಿಳಿಯಬಹುದು. ಜೊತೆಗೆ, ಈ ಸಾಧನಗಳನ್ನು ಅಳವಡಿಸಲು ಬಯಲು ಜಾಗ ಬೇಕಾಗುತ್ತದೆ. ಆದರೆ ನಮ್ಮ ವಿಧಾನವು ನೇರವಾಗಿದ್ದು, ಅತ್ಯಂತ ಚಿಕ್ಕ ಜಾಗಕ್ಕೆ ಅನ್ವಯವಾಗುವಂತೆಯೂ ಲೆಕ್ಕ ಹಾಕಬಹುದು. ಅಂದರೆ ಕೆಲವೇ ಚದುರ ಸೆಂಟಿಮೀಟರುಗಳ ಜಾಗಕ್ಕೆ ಅಲ್ಪಾವಧಿಯಲ್ಲಿಯೇ ಭಾಷ್ಪೀಕರಣ ದರವನ್ನು ನಿಖರವಾಗಿ ಲೆಕ್ಕ ಹಾಕಬಹುದು” ಎಂದು ವಿವರಿಸುತ್ತಾರೆ ಅರಕೇರಿ.

ಈ ಸಾಧನದಲ್ಲಿ ಶೋಧನಾ ಕಾಗದವನ್ನು ಕ್ಯಾಪಿಲ್ಲರಿ ಟ್ಯೂಬ್ ವೊಂದಕ್ಕೆ ಸಂಪರ್ಕಿಸಲಾಗಿರುತ್ತದೆ. ಈ ಕ್ಯಾಪಿಲ್ಲರಿ ಟ್ಯೂಬ್, ನೀರನ್ನು ಅದರ ಮೂಲದಿಂದ ಶೋಧನಾ ಕಾಗದದೆಡೆಗೆ ಕೊಂಡೊಯ್ದು, ಅದನ್ನು ಪಸೆಯಾಗಿಸುತ್ತದೆ. ಈ ಮೂಲಕ ಭಾಷ್ಪೀಕರಣಗೊಳ್ಳುವ ನೀರಿನ ಮೇಲ್ಮೈಯನ್ನು ಪ್ರತ್ಯನುಕರಣೆ ಮಾಡುತ್ತದೆ. ಒಂದೆರಡು ನಿಮಿಷಗಳ ಅವಧಿಯಲ್ಲಿ ಲೋಯರ್ ಮಿನಿಸ್ಕಸ್ ಕ್ಯಾಪಿಲ್ಲರಿ ಟ್ಯೂಬ್ ನಲ್ಲಿ ಚಲಿಸಿದ ದೂರವನ್ನು ಅಳೆಯುವ ಮೂಲಕ ಭಾಷ್ಪೀಕರಣ ದರವನ್ನು ಲೆಕ್ಕ ಹಾಕಬಹುದು. ಅತ್ಯಂತ ಕಡಿಮೆ ಪ್ರಮಾಣದ ನೀರು (ಸುಮಾರು 1 ಮೈಕ್ರೋಲೀಟರ್) ಮೇಲ್ಮೈನಿಂದ ಒಂದು ನಿಮಿಷಕ್ಕೂ ಕಡಿಮೆ ಅವಧಿಯೊಳಗೆ ಭಾಷ್ಪೀಕರಣವಾಗಿ ನಷ್ಟವಾಗುವುದನ್ನು ಕೂಡ ಅಳತೆ ಹಾಕಬಲ್ಲ ಇದರ ಕ್ಷಮತೆಯಲ್ಲಿ ನಾವೀನ್ಯತೆ ಅಡಗಿದೆ.

ಭಾಷ್ಪೀಕರಣ ದರವು ಉಷ್ಣತೆ, ಗಾಳಿಯ ವೇಗ ಹಾಗೂ ತೇವಾಂಶದಂತಹ ಹಲವಾರು ಅಂಶಗಳಿಂದ ಪ್ರಭಾವಿತವಾಗುತ್ತದೆ. ಈ ಸಾಧನವು ಆದರ್ಶ ವಾತಾವರಣದಲ್ಲಿ ಭಾಷ್ಪೀಕರಣ ದರ ಎಷ್ಟೆಂಬುದನ್ನು ತೋರಿಸುತ್ತದೆ. “ಇದು ಅತ್ಯಂತ ಸಣ್ಣ ಎಲೆಯ ಭಾಷ್ಪೀಕರಣ ದರದ ಬಗ್ಗೆಯೂ ಮಾಹಿತಿ ಕೊಡಬಲ್ಲದು. ಉದಾಹರಣೆಗೆ, ಈ ಸಾಧನವನ್ನು ಭತ್ತದ ಸಸಿಯ ಹತ್ತಿರ ಇರಿಸಿದರೆ, ಆ ಸಸಿಯ ನಿರ್ದಿಷ್ಟವಾದ ಹುಲ್ಲಿನ ಎಳೆಯಿಂದ ಆಗುವ ಭಾಷ್ಪೀಕರಣ ದರವನ್ನೂ ಲೆಕ್ಕಹಾಕಬಹುದು” ಎಂದು ವಿವರಿಸುತ್ತಾರೆ ಅರಕೇರಿ.

ಈ ಸಾಧನವನ್ನು ಬಳಸಿ ಅತ್ಯಂತ ಕಡಿಮೆ ವಿಸ್ತೀರ್ಣದ ಜಾಗದಲ್ಲಿ ಅಲ್ಪಾವಧಿಯಲ್ಲಿ ಆಗುವ ಭಾಷ್ಪೀಕರಣ ದರವನ್ನು ಲೆಕ್ಕಹಾಕಲು ಸಾಧ್ಯವಾಗುವುದರಿಂದ ಸಸ್ಯಗಳಲ್ಲಿ ಭಾಷ್ಪೀಕರಣ ಪ್ರಕ್ರಿಯೆ ಅಧ್ಯಯನ ಮಾಡುವವರಿಗೆ ಇದು ಉಪಯೋಗಕರ. ಈ ಸಾಧನವನ್ನು ಬಳಸಿ ಈಗ ಪತ್ರರಂಧ್ರಗಳ ಪ್ರತಿಸ್ಪಂದನವನ್ನು (ಸ್ಟೊಮ್ಯಾಟಲ್ ರೆಸ್ಪಾನ್ಸಸ್ ಅನ್ನು) ಸುಧಾರಿತ ಹಾಗೂ ಹೆಚ್ಚು ನಿಯಂತ್ರಿತ ರೀತಿಯಲ್ಲಿ ನಿರ್ವಹಿಸಬಹುದು. ಸಾಗರಗಳಲ್ಲಿ ಬದಲಾಗುವ ಭಾಷ್ಪೀಕರಣ ವಿನ್ಯಾಸಗಳನ್ನು ಅಧ್ಯಯನ ಮಾಡಲು ಇದನ್ನು ಬಳಸಬಹುದು. ಜೊತೆಗೆ, ಹವಾಮಾನ ಕೇಂದ್ರಗಳಲ್ಲಿ ಈಗ ವಾತಾವರಣದಲ್ಲಿನ ಭಾಷ್ಪೀಕರಣ ದರದ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದರೆ ಈ ಸಾಧನವು ಅದಕ್ಕೂ ಅನುವು ಮಾಡಿಕೊಡುತ್ತದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

“ಈ ಸಾಧನವು ವಾಣಿಜ್ಯಿಕವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಮುಂದಿನ ಕೆಲಸವಾಗಿದೆ. ಇದನ್ನು ಉತ್ಪನ್ನವಾಗಿ ಅಭಿವೃದ್ಧಿಪಡಿಸಲು ಆಸಕ್ತಿಯುಳ್ಳ ಕಂಪನಿಗಳಿಗಾಗಿ ಎದುರು ನೋಡುತ್ತಿದ್ದೇವೆ. ಈ ಮಧ್ಯೆ, ಪಾಲಿಹೌಸ್ ನಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಇವನ್ನು ಕಾರ್ಯಕ್ಷೇತ್ರದಲ್ಲೂ ನಡೆಸುವ ಗುರಿ ಹೊಂದಿದ್ದೇವೆ” ಎನ್ನುತ್ತಾರೆ ಅರಕೇರಿ.

 ಉಲ್ಲೇಖ:

ಕುಮಾರ್ ಎನ್., ಅರಕೇರಿ ಜೆ.ಎಚ್., A fast method to measure the evaporation rate, Journal of Hydrology (2020)

https://doi.org/10.1016/j.jhydrol.2020.125642

ಸಂಪರ್ಕಿಸಿ:

ಜಯವಂತ್ ಎಚ್.ಅರಕೇರಿ
ಪ್ರೊಫೆಸರ್
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.)
jaywant@iisc.ac.in
080-2293 3228 

ನವ್ ನೀತ್ ಕುಮಾರ್ (ಪಿಎಚ್.ಡಿ., ಐ.ಐ.ಎಸ್.ಸಿ., ಬೆಂಗಳೂರು)
ಸಹಾಯಕ ಪ್ರೊಫೆಸರ್
ಮೆಕ್ಯಾನಿಕಲ್ ಎಂಜಿನಿಯರಿಂಗ್
ಭಾರತೀಯ ತಂತ್ರಜ್ಞಾನ ಸಂಸ್ಥೆ, ಜಮ್ಮು
navneet.kumar@iitjammu.ac.in
0191-274-1174

ಪತ್ರಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಬಿಡುಗಡೆಯ ಯಾವುದೇ ಪಠ್ಯ ಭಾಗವನ್ನು ಯಥಾವತ್ತಾಗಿ ಬಳಸಿಕೊಂಡರೆ, ದಯವಿಟ್ಟು ಅದನ್ನು ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆ ಹೆಸರಿನಲ್ಲಿ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳುವುದಿದ್ದರೆ ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.

———-000———