ಜಲಜನಕ ಉತ್ಪಾದನಾ ತಾಂತ್ರಿಕತೆ ಅಭಿವೃಧಿ: ಐ.ಐ.ಎಸ್.ಸಿ.- ಐ.ಒ.ಸಿ. ಪರಸ್ಪರ ತಿಳಿವಳಿಕೆ ಒಪ್ಪಂದ


ಇಂಧನ ಕೋಶ ದರ್ಜೆಯ ಜಲಜನಕವನ್ನು ಸುಲಭ ದರದಲ್ಲಿ ಉತ್ಪಾದಿಸಬಲ್ಲ ಜೈವಿಕ ತ್ಯಾಜ್ಯ ಅನಿಲೀಕರಣ ಆಧಾರಿತ ಜಲಜನಕ ಉತ್ಪಾದನಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಹಾಗೂ ಭಾರತೀಯ ತೈಲ ನಿಗಮದ (ಐಒಸಿ) ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು 29-10-2020ರಂದು ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದವು.

ಈ ಒಪ್ಪಂದದ ಅನುಸಾರ, ಐ.ಐ.ಎಸ್.ಸಿ. ಮತ್ತು ಭಾರತೀಯ ತೈಲ ನಿಗಮಗಳು, ಜೈವಿಕ ತ್ಯಾಜ್ಯ ಅನಿಲೀಕರಣ ಹಾಗೂ ಜಲಜನಕ ಶುದ್ಧೀಕರಣ ಪ್ರಕ್ರಿಯೆಗಳ ಗರಿಷ್ಠ ಸದ್ಬಳಕೆಗಾಗಿ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಲಿವೆ. ಅಭಿವೃದ್ಧಿಗೊಳಿಸಿದ ತಾಂತ್ರಿಕತೆಯನ್ನು ಉನ್ನತದರ್ಜೆಗೇರಿಸಿ ಫರೀದಾಬಾದ್ ನಲ್ಲಿರುವ ತೈಲ ನಿಗಮದ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಜಲಜನಕ ಉತ್ಪಾದನೆಗಾಗಿ ಅಳವಡಿಸಲಾಗುವುದು. ಈ ಘಟಕದಲ್ಲಿ ಉತ್ಪಾದಿಸುವ ಜಲಜನಕವನ್ನು ಭಾರತೀಯ ತೈಲ ನಿಗಮದ ಕಾರ್ಯಯೋಜನೆ ಅನುಸಾರ ಇಂಧನ ಕೋಶ ಬಸ್ಸುಗಳಲ್ಲಿ (ಫ್ಯೂಯೆಲ್ ಸೆಲ್ ಬಸ್) ಬಳಸಲಾಗುವುದು. ಇದು ದೇಶದ ಜಲಜನಕ ಆಧಾರಿತ ಆರ್ಥಿಕತೆಯ ಬಗ್ಗೆ ಆಶಾಭಾವ ಮೂಡಿಸುವ ಬೆಳವಣಿಗೆಯಾಗಲಿದೆ.

ಐ.ಐ.ಎಸ್.ಸಿ. ನಿರ್ದೇಶಕರಾದ ಪ್ರೊಫೆಸರ್ ಜಿ.ರಂಗರಾಜನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಶೈಕ್ಷಣಿಕ ವಲಯ ಹಾಗೂ ಉದ್ಯಮ ವಲಯದ ನಡುವಿನ ಸಹಭಾಗಿತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಇದೇ ವೇಳೆ ಅವರು, ಪ್ರಸ್ತುತ ಜೈವಿಕ ತ್ಯಾಜ್ಯ ಬಳಕೆಗಾಗಿ ಇಂಧನ ಸಂಶೋಧನಾ ಅಂತರಶಿಸ್ತು ಕೇಂದ್ರದ ಅಧ್ಯಕ್ಷರಾಗಿರುವ ಐ.ಐ.ಎಸ್.ಸಿ. ಸುಸ್ಥಿರ ತಾಂತ್ರಿಕತೆಗಳ ಕೇಂದ್ರದ (ಸಿ.ಎಸ್.ಟಿ.) ಪ್ರೊಫೆಸರ್ ಎಸ್.ದಾಸಪ್ಪ ಅವರು ನೀಡಿರುವ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿದರು. ದೇಶದ ಇಂಗಾಲೀಕರಣ-ರಹಿತತೆಯ ಅಗತ್ಯಗಳನ್ನು ಪೂರೈಸುವಲ್ಲಿ ಇಂಧನ ಸಂಶೋಧನಾ ಅಂತರಶಿಸ್ತು ಕೇಂದ್ರವು ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಐ.ಒ.ಸಿ. ನಿರ್ದೇಶಕರಾದ (ಸಂಶೋಧನೆ ಮತ್ತು ಅಭಿವೃದ್ಧಿ) ಡಾ.ರಾಮಕುಮಾರ್ ಅವರು ಇದೇ ಸಂದರ್ಭದಲ್ಲಿ ಜೈವಿಕ-ಜಲಜನಕದ ಭವಿಷ್ಯದ ಸಾಧ್ಯತೆಗಳ ಬಗ್ಗೆ ವಿವರಿಸಿದರು.

ಜಲಜನಕವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಬಲ್ಲ ಭರವಸೆದಾಯಕ, ಶುದ್ಧ ಹಾಗೂ ಪರಿಸರ ಸ್ನೇಹಿ ಇಂಧನವಾಗಿದೆ. ಜಲಜನಕ ಆಧಾರಿತ ಇಂಧನ ಕೋಶ ತಂತ್ರಜ್ಞಾನವು ಭಾರತದ ಸಂಚಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಸ್ಥಿರ ಪರಿಸರ ಸ್ನೇಹಿ ಪರಿಹಾರವಾಗಿದೆ. ಇಂಧನ ಕೋಶ ಅಳವಡಿಸಿದ ವಿದ್ಯುತ್ ಚಾಲಿತ ವಾಹನಗಳು ಜಲಜನಕದಿಂದ ಚಾಲನೆಗೊಳ್ಳುತ್ತವೆ. ಇವು ಕೊನೆಯಲ್ಲಿ ಶುದ್ಧವಾದ ನೀರನ್ನು ಮಾತ್ರ ಹೊರಸೂಸುತ್ತವೆ. ವಾಹನಗಳಿಗೆ ಇಂಧನ ಕೋಶ ತಾಂತ್ರಿಕತೆ ಬಳಸಲು ಅತಿ ಶುದ್ಧವಾದ ಜಲಜನಕ ಅತ್ಯಗತ್ಯವಾಗಿದ್ದು, ಅದರಲ್ಲಿನ ಅಶುದ್ಧ ಕಣಗಳ ಪ್ರಮಾಣ ಪಿಪಿಬಿ (ಪ್ರತಿ ಶತಕೋಟಿಗೆ ಕಣಗಳ ಪ್ರಮಾಣ) ಮಟ್ಟಕ್ಕಿಂತ ಕಡಿಮೆ ಇರಬೇಕಾಗುತ್ತದೆ.

ದೇಶದಲ್ಲಿ ಜಲಜನಕ ಕುರಿತ ಸಂಶೋಧನೆಯಲ್ಲಿ  ಭಾರತೀಯ ತೈಲ ನಿಗಮವು ಮುಂಚೂಣಿಯಲ್ಲಿದೆ. ಇತ್ತೀಚೆಗೆ ದೆಹಲಿಯಲ್ಲಿ ಜಲಜನಕ- ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿ.ಎನ್.ಜಿ.) ಆಧಾರಿತ 50 ಬಸ್ಸುಗಳ ಪ್ರಯೋಗಾರ್ಥ ಸಂಚಾರವನ್ನು ಆರಂಭಿಸಿದೆ. ಐ.ಒ.ಸಿ. ಪೇಟೆಂಟ್ ನ ಏಕ ಹಂತದ ಸುಧಾರಣಾ ತಂತ್ರಜ್ಞಾನವನ್ನು ಈ ಬಸ್ಸುಗಳಲ್ಲಿ ಬಳಸಲಾಗಿದೆ.

ಜೈವಿಕ ತ್ಯಾಜ್ಯ ಅನಿಲೀಕರಣ ಆಧಾರಿತ ಜಲಜನಕ ಉತ್ಪಾದನೆಯು ಅತ್ಯಂತ ಕಡಿಮೆ ದರದಲ್ಲಿ ಜಲಜನಕ ಉತ್ಪಾದನೆಯನ್ನು ಸಾಧ್ಯವಾಗಿಸಬಲ್ಲದು. ಜೊತೆಗೆ, ಬೇರೆ ತಾಂತ್ರಿಕತೆಗಳಿಗೆ ಹೋಲಿಸಿದರೆ ಇದರಲ್ಲಿ ಇಂಗಾಲದ ಹೊರಸೂಸುವಿಕೆಯೂ ಕಡಿಮೆಯಾಗಿದೆ. ಐ.ಐ.ಎಸ್.ಸಿ. ಅಭಿವೃದ್ಧಿಗೊಳಿಸಿದ ಜೈವಿಕ ತ್ಯಾಜ್ಯ ಅನಿಲೀಕರಣ ಜಲಜನಕ ಉತ್ಪಾದನಾ ತಂತ್ರಜ್ಞಾನವು ಜೈವಿಕ ತ್ಯಾಜ್ಯದಿಂದ ಜಲಜನಕ ಸಮೃದ್ಧ ಸಂಶ್ಲೇಷಿತ ಅನಿಲ ಉತ್ಪಾದಿಸುವ ಹಾಗೂ ಸಂಶ್ಲೇಷಿತ ಅನಿಲದಿಂದ ಜಲಜನಕವನ್ನು ಪ್ರತ್ಯೇಕಿಸುವ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಸಂಸ್ಥೆಯು ಜೈವಿಕ ತ್ಯಾಜ್ಯ ಅನಿಲೀಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತವಾಗಿ ಕಾರ್ಯನಿರ್ವಹಿಸಿ, ಜಲಜನಕ ಸಮೃದ್ಧ ಸಂಶ್ಲೇಷಿತ ಅನಿಲ ಉತ್ಪಾದನೆಗೆ ನಾವೀನ್ಯತಾ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದರ ಸಣ್ಣ ಪ್ರಮಾಣದ ಪ್ರಾಯೋಗಿಕ ಮಾದರಿಯ ಪ್ರಾತ್ಯಕ್ಷಿಕೆಯನ್ನು ಐ.ಐ.ಎಸ್.ಸಿ. ಕ್ಯಾಂಪಸ್ ನಲ್ಲಿ ಪ್ರದರ್ಶಿಸಲಾಗಿದೆ.

ಜೈವಿಕ ತ್ಯಾಜ್ಯದಿಂದ ಇಂಧನ ಕೋಶ ದರ್ಜೆಯ ಜಲಜನಕ ಉತ್ಪಾದನೆಯು ಜಲಜನಕವನ್ನು ಭಾರತದ ಮುಖ್ಯವಾಹಿನಿಯ ಇಂಧನವನ್ನಾಗಿಸುವ ದಿಸೆಯಲ್ಲಿನ ಗಮನ ಸೆಳೆಯುವ ಉಪಕ್ರಮವಾಗಿದೆ. ಐ.ಒ.ಸಿ ಹಾಗೂ ಐ.ಐ.ಎಸ್.ಸಿ. ಸಹಭಾಗಿತ್ವದಲ್ಲಿನ ಈ ಸಂಶೋಧನೆಯು ದೇಶದ ಕೃಷಿ ವಲಯದ ಸದುಪಯೋಗಕ್ಕೂ ಅವಕಾಶ ಮಾಡಿಕೊಡಲಿದೆ. ಇದು ದೇಶಕ್ಕೆ ಶುದ್ಧವಾದ ಇಂಧನದ ಆಯ್ಕೆಯನ್ನು ಲಭ್ಯವಾಗಿಸುವ ಜೊತೆಗೆ ಜೈವಿಕ ತ್ಯಾಜ್ಯ ನಿರ್ವಹಣೆಯ ಸವಾಲಿಗೂ ಪರಿಹಾರವಾಗಲಿದೆ.

——000—–