ಜೀವವೈದ್ಯಕೀಯ ಆವಿಷ್ಕಾರ ತ್ವರಿತಗೊಳಿಸಲು ಐಎಎಸ್‌ಸಿ-ಬ್ಲಾಕ್ ಚೈನ್ ಫಾರ್ ಇಂಪ್ಯಾಕ್ಟ್ ಸಹಭಾಗಿತ್ವ


12 ಫೆಬ್ರುವರಿ, 2024

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಬ್ಲಾಕ್ ಚೈನ್ ಫಾರ್ ಇಂಪ್ಯಾಕ್ಟ್ (ಬಿ ಎಫ್ ಐ) ಸಂಸ್ಥೆಗಳು ಬಿ ಎಫ್ ಐ-ಬಯೋಮ್ ವರ್ಚುವಲ್ ನೆಟ್ವರ್ಕ್ ಕಾರ್ಯಕ್ರಮದಡಿ ಸಹಭಾಗಿತ್ವ ಪ್ರಕಟಿಸಿವೆ. ಈ ಸಹಭಾಗಿತ್ವದಡಿ ಭಾರತೀಯ ವಿಜ್ಞಾನ ಸಂಸ್ಥೆ ಕೈಗೊಳ್ಳುವ ವಿವಿಧ ಸಂಶೋಧನಾ ಪ್ರಾಜೆಕ್ಟ್ ಗಳಿಗೆ ಬಿಎಫ್ಐ ನೆರವು ನೀಡಲಿದೆ. ಈ ಸಹಭಾಗಿತ್ವವನ್ನು ಐಏಎಸ್‌ಸಿಯಲ್ಲಿ ಫೆಬ್ರವರಿ 8, 2024ರ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.

ಬಿಎಫ್ಐ ಬಯೋಮ್ ವರ್ಚುಯಲ್ ನೆಟ್ವರ್ಕ್ ಕಾರ್ಯಕ್ರಮಕ್ಕಾಗಿ ಮೂರು ವರ್ಷಗಳ ಅವಧಿಯಲ್ಲಿ 1 ದಶಲಕ್ಷ ಡಾಲರ್ ಅನುದಾನ ನೀಡುವ ಗುರಿಯನ್ನು ಬಿಎಫ್ಐ ಹೊಂದಿದೆ. ಸಂಶೋಧನೆಗಳಲ್ಲಿ ಹೊರಹೊಮ್ಮಿದ ಫಲಿತಾಂಶಗಳನ್ನು ಚಿಕಿತ್ಸಕ ಆರೋಗ್ಯಸೇವಾ ಪರಿಹಾರಗಳನ್ನಾಗಿ ಪರಿವರ್ತಿಸಲು ಸಹಭಾಗಿತ್ವದಡಿ ಕೈಗೊಳ್ಳಲಾಗುವ ಪ್ರಾಜೆಕ್ಟ್ ಗಳಿಗೆ ನೆರವು ನೀಡುವುದು ಇದರ ಉದ್ದೇಶವಾಗಿರುತ್ತದೆ. ಈ ಪಾಲುದಾರಿಕೆಯಡಿ ಐಐಎಸ್‌ಸಿ ಬೋಧಕ ವೃಂದದವರು ನಡೆಸಲಿರುವ ಜೀವವಿಜ್ಞಾನಕ್ಕೆ ಸಂಬಂಧಿಸಿದ ಆಯ್ದ ಸಂಶೋಧನಾ ಪ್ರಾಜೆಕ್ಟ್ ಗಳಿಗೆ ಬಿಎಫ್ಐ ಬಯೋಮ್ ಸಹಾಯ ನೀಡಲಿದೆ. ಪ್ರತಿವರ್ಷ 2ರಿಂದ 3 ಪ್ರಾಜೆಕ್ಟ್ ಗಳಿಗೆ ನೆರವು ನೀಡುವ ನಿರೀಕ್ಷೆ ಹೊಂದಲಾಗಿದೆ.

ಐಐಎಸ್‌ಸಿ ನಿರ್ದೇಶಕ ಪ್ರೊಫೆಸರ್ ಗೋವಿಂದನ್ ರಂಗರಾಜನ್, ಅಂತರಶಿಸ್ತೀಯ ವಿಜ್ಞಾನಗಳ ವಿಭಾಗದ ಪ್ರೊಫೆಸರ್ ನವಕಾಂತ ಭಟ್, ಅಭಿವೃದ್ಧಿ ಮತ್ತು ಹಳೆಯ ವಿದ್ಯಾರ್ಥಿಗಳ ಚಟುವಟಿಕೆಗಳ ಕಚೇರಿಯ ಮುಖ್ಯಸ್ಥರಾದ ಪ್ರೊಫೆಸರ್ ಕೆ.ಜೆ. ವಿನೋಯ್, ಸಂಶೋಧನಾ ಅನುದಾನಗಳ ಕಚೇರಿಯ (ಒ ಆರ್.ಜಿ) ಸದಸ್ಯರು, ಬಿಎಫ್ಐ ಪ್ರತಿನಿಧಿಗಳಾದ ಸಿಇಒ ಡಾ. ಗೌರವ್ ಸಿಂಗ್, ಯೋಜನಾ ನಿರ್ದೇಶಕರಾದ ಡಾ. ಪೂಜಾ ಅಗರ್ವಾಲ್ ಮತ್ತು ಹಿರಿಯ ಸಲಹೆಗಾರ ಡಾ. ಸತ್ಯಪ್ರಕಾಶ್ ದಾಶ್ ಅವರು ಉಪಸ್ಥಿತರಿದ್ದರು. ಅತ್ಯಾಧುನಿಕ ಜೀವವೈದ್ಯಕೀಯ ಆವಿಷ್ಕಾರಗಳ ಮೂಲಕ ಚಿಕಿತ್ಸಕ ಆರೋಗ್ಯಸೇವಾ ಪರಿಹಾರಗಳ ಲಭ್ಯತೆಯನ್ನು ತ್ವರಿತಗೊಳಿಸುವ ದಿಸೆಯಲ್ಲಿ ಈ ಸಹಭಾಗಿತ್ವವು ಮಹತ್ವದ ಹೆಜ್ಜೆಯಾಗಿದೆ.

ಬ್ಲಾಕ್ ಚೈನ್ ಫಾರ್ ಇಂಪ್ಯಾಕ್ಟ್ ಸ್ಥಾಪಕರಾದ ಶ್ರೀ ಸಂದೀಪ್ ನೈಲ್ವಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಐಎಎಸ್‌ಸಿ ಜೊತೆ ಬಿಎಫ್ಐ ಬಯೋಮ್ ವರ್ಚುಯಲ್ ನೆಟ್ವರ್ಕ್ ಸಹಭಾಗಿತ್ವದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಭಾರತದಲ್ಲಿ ಜೀವವೈದ್ಯಕೀಯ ಸಂಶೋಧನೆ ಮತ್ತು ಆವಿಷ್ಕಾರ ಮುನ್ನಡೆಸಲು 15 ದಶಲಕ್ಷ ಡಾಲರ್ ಕಾರ್ಯಕ್ರಮದೊಂದಿಗೆ ‌ ಆವಿಷ್ಕಾರಗಳನ್ನು ಚಿಕಿತ್ಸಕ ಆರೋಗ್ಯ ಸೇವಾ ಪರಿಹಾರಗಳನ್ನಾಗಿಸುವಂತಹ ಕಾರ್ಯ ಪರಿಸರ ಸೃಷ್ಟಿಸುವ ಮೂಲಕ ಬಿಎಫ್ಐ ಬಯೋಮ್ ಉಪಕ್ರಮವು ಸಾಂಪ್ರದಾಯಿಕ ಗಡಿಗಳನ್ನು ಮೀರಲಿದೆ. ಮುಂಚೂಣಿ ಸಂಶೋಧಕರು, ತಂತ್ರಜ್ಞರು ಮತ್ತು ಅನ್ವೇಷಕರನ್ನು ಸಹಭಾಗಿತ್ವದ ಮೂಲಕ ಒಂದೇ ವೇದಿಕೆಯಡಿ ಒಗ್ಗೂಡಿಸಿ ಸುಧಾರಿತ ಆರೋಗ್ಯ ಸೇವೆಗಾಗಿ ಮುಂಬರುವ ತಲೆಮಾರಿನ ಚಿಕಿತ್ಸಕ ವಿಧಾನಗಳನ್ನು ಇದು ಉತ್ತೇಜಿಸಲಿದೆ. ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೈಜೋಡಿಸುವ ಮೂಲಕ ಈ ದೇಶದಲ್ಲಿ (ಭಾರತ) ಮತ್ತು ಗ್ಲೋಬಲ್ ಸೌತ್ ನ (ಜಾಗತಿಕ ದಕ್ಷಿಣ ದೇಶಗಳ) ಆರೋಗ್ಯಸೇವೆ ಲಭ್ಯತೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಉಪಕ್ರಮಗಳಿಗೆ ಒತ್ತಾಸೆ ನೀಡುವ ಆಶಯವನ್ನು ಬಿಎಫ್ಐ ಬಯೋಮ್ ಹೊಂದಿದೆ ಎಂದು ವಿವರಿಸಿದರು.

ಬಿಎಫ್ಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೌರವ್ ಸಿಂಗ್ ಮಾತನಾಡಿ, ಐಐಎಸ್‌ಸಿ ಜೊತೆಗಿನ ಸಹಭಾಗಿತ್ವವು ನಮಗೆ ಹೆಮ್ಮೆ ತಂದಿದೆ. ಭಾರತದಲ್ಲಿ ಜೀವವೈದ್ಯಕೀಯ ಸಂಶೋಧನೆ ಮತ್ತು ಆವಿಷ್ಕಾರವನ್ನು ಹೊಸ ಎತ್ತರಕ್ಕೆ ಕೊಂಡಯ್ಯಬೇಕೆಂಬ ನಮ್ಮ ಸಂಕಲ್ಪಕ್ಕೆ ಇದು ನಿದರ್ಶನವಾಗಿದೆ. ಸಹಭಾಗಿತ್ವಗಳ ಮೂಲಕ ಸರ್ವರಿಗೂ ದೀರ್ಘಾವಧಿಯ ವೈದ್ಯಕೀಯ ಸನ್ಮದ್ದತೆಯ ವಿಧಾನಗಳನ್ನು ಲಭ್ಯವಾಗಿಸುವ ಬಹುವಲಯಗಳ ಮೈತ್ರಿ ಸಾಧಿಸುವಲ್ಲಿ ಪಾತ್ರ ವಹಿಸುವುದು ನಮ್ಮ ಗುರಿಯಾಗಿದೆ ಎಂದರು.

ನಮ್ಮ ಉದ್ದೇಶ ಸಾಧಿಸಲು ಅನುದಾನ ಮುಖ್ಯವಾದ ಅಂಶ. ಆದರೆ, ನಮ್ಮ ಬದ್ದತೆಯು ಹಣಕಾಸು ನೆರವಿನ ಆಚೆಗೂ ವಿಸ್ತರಿಸಿರುತ್ತದೆ. ನಮ್ಮ ಜೀವವೈದ್ಯಕೀಯ ಸಂಶೋಧನೆ ಮತ್ತು ಆವಿಷ್ಕಾರ ವಿಭಾಗ, ಜಿಲ್ಲಾಮಟ್ಟದ ಪಾಲುದಾರಿಕೆಗಳು ಹಾಗೂ ಪ್ರಕ್ರಿಯೆ ನಿರ್ದೇಶಿತ ಅನುದಾನ ನೆರವಿನ ಮೂಲಕ ಭಾರತದ ಆರೋಗ್ಯ ಸೇವಾ ಮೂಲಸೌಕರ್ಯದಲ್ಲಿನ ಕೊರತೆಗಳನ್ನು ನಿವಾರಿಸಲು ನಾವು ಕಾರ್ಯನಿರ್ವಹಿಸುತ್ತೇವೆ. ಈ ನಿಟ್ಟಿನಲ್ಲಿ, ಬಿಎಫ್ಐ-ಬಯೋಮ್ ವರ್ಚುಯಲ್ ನೆಟ್ವರ್ಕ್ ಕಾರ್ಯಕ್ರಮವು ಗಮನಾರ್ಹ ಹೆಜ್ಜೆಯಾಗಿದೆ ಎಂದು ವಿವರಿಸಿದರು.

ಐಐಎಸ್‌ಸಿ ನಿರ್ದೇಶಕ ಪ್ರೊಫೆಸರ್ ಗೋವಿಂದನ್ ರಂಗರಾಜನ್ ಅವರು ಆವಿಷ್ಕಾರ ಮುನ್ನಡೆಸುವಲ್ಲಿ ಸಹಭಾಗಿತ್ವದ ಪ್ರಾಮುಖ್ಯದ ಬಗ್ಗೆ ಒತ್ತಿ ಹೇಳಿದರು. ಬಿಎಫ್ಐ ಜೊತೆ ಸಹಭಾಗಿತ್ವ ಸಾಧಿಸಿರುವುದು ನಮಗೆ ಹರ್ಷ ತಂದಿದೆ. ನಮ್ಮ ಸಂಶೋಧಕರ ಪರಿಣತಿ ಹಾಗೂ ಬಿಎಫ್ಐ ಒದಗಿಸುವ ಅನುದಾನದ ನೆರವಿನಿಂದ ವೈಜ್ಞಾನಿಕ ಆವಿಷ್ಕಾರಗಳನ್ನು ಪರಿಣಾಮಕಾರಿ ಆರೋಗ್ಯಸೇವಾ ಪರಿಹಾರಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ವೇಗ ನೀಡಲು ಬಯಸುತ್ತೇವೆ. ಪ್ರಯೋಗಾಲಯಗಳ ಫಲಿತಾಂಶಗಳನ್ನು ಚಿಕಿತ್ಸೆಯಾಗಿ ಮಾರ್ಪಡಿಸುವಲ್ಲಿ ಈ ಸಹಭಾಗಿತ್ವವು ಪ್ರಮುಖ ನಡೆಯಾಗಿದೆ. ಜ್ಞಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜೊತೆಗೆ ಧನಾತ್ಮಕ ಸಾಮಾಜಿಕ ಪರಿಣಾಮ ಉಂಟುಮಾಡುವಲ್ಲಿನ ನಮ್ಮ ಬದ್ಧತೆಗೆ ಇದು ಉದಾಹರಣೆಯಾಗಿದೆ ಎಂದರು.

ಬಿಎಫ್ಐ ಹಿರಿಯ ಸಲಹೆಗಾರ ಡಾ. ಸತ್ಯಪ್ರಕಾಶ್ ದಾಶ್ ಅವರು ಐಐಎಸ್‌ಸಿ ಸಾಧನೆಗಳ ಬಗ್ಗೆ ಮೆಚ್ಚುಗೆಯ ಮಾತುಗಳಾನ್ನಾಡಿದರು.‌ ಐ.ಐ.ಎಸ್‌.ಸಿ.ಯನ್ನು ಪ್ರತಿಭಾವಂತ ನಾಯಕತ್ವ ಗುಣ ಇರುವವರು ಮುನ್ನಡೆಸುತ್ತಿದ್ದಾರೆ. ವಿಜ್ಞಾನದ ಎಲ್ಲೆಗಳನ್ನು ವಿಸ್ತರಿಸುವ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಐಐಎಸ್‌ಸಿ ಮೊದಲಿನಿಂದಲೂ ಮುಂಚೂಣಿಯ ಪಾತ್ರ ನಿರ್ವಹಿಸುತ್ತಿದೆ. ದೊಡ್ಡಮಟ್ಟದಲ್ಲಿ ಸಾಮಾಜಿಕ ಅನುಕೂಲಕ್ಕಾಗಿ ವೈಜ್ಞಾನಿಕ ಉಪಕ್ರಮಗಳನ್ನು ಉತ್ತೇಜಿಸುತ್ತಾ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಐಐಎಸ್‌ಸಿ ಅಂತರಶಿಸ್ತೀಯ ವಿಜ್ಞಾನಗಳ ಡೀನ್ ಪ್ರೊಫೆಸರ್ ನವಕಾಂತ ಭಟ್ ಅವರು, ಬಿಎಫ್ಐ-ಬಯೋಮ್ ನೆಟ್ವರ್ಕ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಪ್ರಸ್ತುತ ಆರೋಗ್ಯಸೇವಾ ಸವಾಲುಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕೆಂಬ ಐಐಎಸ್‌ಸಿ ಪ್ರಯತ್ನಗಳಿಗೆ ಬಿಎಫ್ಐ ದೂರದೃಷ್ಟಿಯು ಪೂರಕವಾಗಿರುತ್ತದೆ. ಐಐಎಸ್‌ಸಿ ತನ್ನ ವೈದ್ಯಕೀಯ ಕಾಲೇಜಿನ ಮೂಲಕ ಅಂತರಶಿಸ್ತೀಯ ಸಂಶೋಧನೆಯನ್ನು ಉತ್ತೇಜಿಸಿ ಮುಂಬರುವ ತಲೆಮಾರಿಗೆ ಅಗತ್ಯವಿರುವ ವೈದ್ಯಕೀಯ ವಿಜ್ಞಾನಿಗಳನ್ನು ರೂಪಿಸಲಿದೆ. ಈ ಗುರಿಗಳನ್ನು ಸಾಧಿಸಲು ಅನುದಾನದ ಅಗತ್ಯವಿರುತ್ತದೆ ಎಂದರು‌.

ಐಐಎಸ್‌ಸಿ ಹಾಗೂ ಬಿಎಫ್ಐ ನಡುವಿನ ಈ ಸಹಭಾಗಿತ್ವವು ಭಾರತದಲ್ಲಿ ಜೀವವೈದ್ಯಕೀಯ ಸಂಶೋಧನೆ ಮತ್ತು ಆವಿಷ್ಕಾರದ ಭವಿಷ್ಯಕ್ಕೆ ಕೊಡುಗೆ ನೀಡುವ ಸಹಭಾಗಿತ್ವಗಳಿಗೆ ಬುನಾದಿಯಾಗಲಿದೆ. ಈ ಮೂಲಕ, ಭಾರತದಲ್ಲಿ ಸಂಶೋಧನೆಗಳನ್ನು ಚಿಕಿತ್ಸೆಯಾಗಿ ಪರಿವರ್ತಿಸಿ ಆರೋಗ್ಯಸೇವಾ ಕಾರ್ಯಪರಿಸರದಲ್ಲಿ ಧನಾತ್ಮಕ ಬದಲಾವಣೆ ಉಂಟುಮಾಡುವಲ್ಲಿ ಮುಖ್ಯ ಪಾತ್ರ ವಹಿಸುವುದು ಬಿಎಫ್ಐ ಧ್ಯೇಯವಾಗಿದೆ.

ಐಐಎಸ್‌ಸಿ ಬಗ್ಗೆ:

ಉದ್ಯಮಿ ಜಮ್ ಷೇಟ್ ಜಿ ನಸರ್ ವಾಂಜಿ ಟಾಟಾ, ಮೈಸೂರು ರಾಜಸಂಸ್ಥಾನ ಮತ್ತು ಭಾರತ ಸರ್ಕಾರಗಳ ದೂರದರ್ಶಿತ್ವದ ಪಾಲುದಾರಿಕೆಯಲ್ಲಿ ಭಾರತ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.ಯಲ್ಲಿ) 1909ರಲ್ಲಿ ಸ್ಥಾಪನೆಗೊಂಡಿತು. ಕಳೆದ 115 ವರ್ಷಗಳಲ್ಲಿ ಐ.ಐ.ಎಸ್.ಸಿ.ಯು ಆಧುನಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಭಾರತದ ಭೌತಿಕ ಹಾಗೂ ಕೈಗಾರಿಕಾ ಅಭ್ಯುದಯಕ್ಕೆ ಕಾರಣವಾಗುವಂತಹ ಉನ್ನತ ಬೋಧನೆಗೆ ಹಾಗೂ ಸ್ವೋಪಜ್ಞ ಪರಿವೀಕ್ಷಣೆಗಳಿಗೆ ಎಲ್ಲಾ ಜ್ಞಾನಶಾಖೆಗಳಲ್ಲಿ ಅವಕಾಶ ಕಲ್ಪಿಸುವುದಕ್ಕೆ” ಸಂಸ್ಥೆಯ ಕಟಿಬದ್ಧವಾಗಿದೆ. ಭಾರತ ಸರ್ಕಾರವು 2018ರಲ್ಲಿ ಐ.ಐ.ಎಸ್ ಸಿ.ಯನ್ನು “ಇನ್ಸ್ ಟಿಟ್ಯೂಟ್ ಆಫ್ ಎಮೆನೆನ್ಸ್” ಎಂದು ಆಯ್ಕೆಮಾಡಿತು. ಸಂಸ್ಥೆಯು ನಿರಂತರವಾಗಿ, ಜಾಗತಿಕ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ನಲ್ಲಿ ಭಾರತದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದು ಎಂಬ ಸ್ಥಾನಮಾನಕ್ಕೆ ಪಾತ್ರವಾಗುತ್ತಿದೆ.

ಬ್ಲಾಕ್ ಚೈನ್ ಫಾರ್ ಇಂಪ್ಯಾಕ್ಟ್ (ಬಿಎಫ್ಐ) ಬಗ್ಗೆ:

ಬ್ಲಾಕ್ ಚೈನ್ ಫಾರ್ ಇಂಪ್ಯಾಕ್ಟ್ ಅನ್ನು ಭಾರತದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ನೆರವಿನ ಅಗತ್ಯವಿರುವವರನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ಥಾಪಿಸಲಾಯಿತು. ಜಗತ್ತಿನ ಅತ್ಯಂತ ಪಾರದರ್ಶಕ ಆರೋಗ್ಯಸೇವಾ ನಿಧಿ ಎಂದು ಹೆಸರಾಗಿರುವ ಬಿಎಫ್ಐ ಆರಂಭಿಕ ಹಂತದಲ್ಲಿ ವೈದ್ಯಕೀಯ ಉಪಕರಣ, ಲಸಿಕೆಗಳು ಮತ್ತು ಪರಿಹಾರ ಕಿಟ್‌ಗಳ ಸುಸ್ಥಿರ ಪೂರೈಕೆ ಮೂಲಕ ಭಾರತದ ಆರೋಗ್ಯಸೇವಾ ವ್ಯವಸ್ಥೆಯನ್ನು ಬಲಗೊಳಿಸಲು ತೊಡಗಿಸಿಕೊಂಡಿತು. ಆದರೆ, ಕೋವಿಡ್ ಸೋಂಕಿನ ಅಲೆಯ ನಂತರ ಅದು ಆರಂಭಿಕ ಹಂತದಲ್ಲಿ ರೋಗಗಳ ಪತ್ತೆ ಹಾಗೂ ಮುಂಜಾಗ್ರತಾ ಚಟುವಟಿಕೆಗಳ ಬಗ್ಗೆ ಗಮನ ಕೇಂದ್ರೀಕರಿಸಲು ನಿರ್ಧರಿಸಿತು. ಅಂದರೆ, ಸಾಮರ್ಥ್ಯ ವೃದ್ಧಿ, ಜೀನೋಮ್ ಅನುಕ್ರಮಣಿಕೆ, ಆಸ್ಪತ್ರೆ ಹಾಸಿಗೆಗಳ ಸಂಖ್ಯೆ ಹೆಚ್ಚಳ, ಲಸಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಒತ್ತು ನೀಡಿತು.

ತುರ್ತು ಸಂದರ್ಭದಲ್ಲಿ ಸದ್ಭಾವನೆಯಿಂದ ಆರಂಭವಾದ ಸಂಸ್ಥೆಯ ಕಾರ್ಯಕ್ರಮವು ಇದೀಗ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸೂಕ್ಷ್ಮ ಹಾಗೂ ಸ್ಥೂಲ ಹಂತಗಳಲ್ಲಿ ವ್ಯವಸ್ಥಿತ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವ ವ್ಯವಸ್ಥೆಯಾಗಿ ಮಾರ್ಪಾಡಾಗಿದೆ. ನಿರ್ಲಕ್ಷಿತ ಹಾಗೂ ವಂಚಿತ ಸಮುದಾಯಗಳಿಗೆ ನೆರವು ನೀಡುವ ದಿಸೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸವಾಲುಗಳನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಕೊರತೆಗಳನ್ನು ನಿವಾರಿಸಲು ಕೌಶಲಗಳು ಮತ್ತು ತಾಂತ್ರಿಕತೆಯನ್ನು ಆಧರಿಸಿ ಬದ್ಧತೆಯಿಂದ ಕಾರ್ಯನಿರ್ವಹಿಸುವುದು ಬಿಎಫ್ಐ ಸಂಕಲ್ಪವಾಗಿದೆ. ಜೀವವೈದ್ಯಕೀಯ ಸಂಶೋಧನೆ ಹಾಗೂ ಆವಿಷ್ಕಾರ, ಜಿಲ್ಲಾಮಟ್ಟದ ಫುಲ್ -ಸ್ಟ್ಯಾಕ್ ಕಾರ್ಯಕ್ರಮ, ಪ್ರಕ್ರಿಯೆ ನಿರ್ದೇಶಿತ ಆವಿಷ್ಕಾರ ಮತ್ತು ಪರಿಹಾರ ಕಾರ್ಯದ ಬಗ್ಗೆ ವಿಶೇಷ ಗಮನ ನೀಡುವುದರೊಂದಿಗೆ ಭಾರತದ ಆರೋಗ್ಯಸೇವಾ ವ್ಯವಸ್ಥೆಯನ್ನು ಎದುರಾಗಬಹುದಾದ ಅನಿವಾರ್ಯ ಸೋಂಕುಗಳ ಸನ್ನಿವೇಶಗಳಿಗೆ ಸನ್ನದ್ಧಗೊಳಿಸಲು ಬಿಎಫ್ಐ ರೂಪುರೇಷೆ ಸಿದ್ದಪಡಿಸಿ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ.

ತುರ್ತುಪರಿಹಾರ ಕ್ರಮಗಳನ್ನು ರೂಪಿಸುವುದರಿಂದ ಹಿಡಿದು ವ್ಯವಸ್ಥಿತ ಚಿಕಿತ್ಸೆಗಳವರೆಗೆ “ಬ್ಲಾಕ್ ಚೈನ್ ಫಾರ್ ಇಂಪ್ಯಾಕ್ಟ್” ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಿರ್ಲಕ್ಷ್ಯಿತ ಸಮುದಾಯಗಳ ಸ್ವಾಸ್ಥ್ಯವನ್ನು ಸುಧಾರಣೆಗೊಳಿಸುವಲ್ಲಿ ತೊಡಗಿಸಿಕೊಂಡು ಭಾರತದ ಭವಿಷ್ಯದ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಸಮಗ್ರ ಬೆಂಬಲ ವ್ಯವಸ್ಥೆಯಾಗಿ ರೂಪುಗೊಳ್ಳುವ ಧ್ಯೇಯವನ್ನು ಹೊಂದಿದೆ.

ಸಂಪರ್ಕ:

ಬಿಎಫ್ಐ-ಬಯೋಮ್ ವರ್ಚುಯಲ್ ನೆಟ್ವರ್ಕ್ ಪ್ರೋಗ್ರಾಮ್|

bfi.biome@blockchainforimpact.in

ಸಂವಹನಗಳ ಕಚೇರಿ, ಐಐಎಸ್‌ಸಿ|

news@iisc.ac.in

———————-000————————