ಬಂಡೆ ಹಲ್ಲಿಗಳು ನಗರ ಪ್ರದೇಶಗಳಲ್ಲಿ ಎಂತಹ ನಿದ್ರಾ ನೆಲೆ ಅರಸುತ್ತವೆ?


-ಕಾರ್ತಿಕ ಕಾವೇರಿ ಮೈಯಪ್ಪನ್

ನಿದ್ರೆಯು ಎಲ್ಲಾ ಜೀವಿಗಳಿಗೂ ಮೂಲಭೂತ ಪ್ರವೃತ್ತಿಗಳಲ್ಲಿ ಒಂದಾಗಿದೆ. ಯಾವುದೇ ಜೀವಿಯು ಮಲಗಿದ್ದಾಗ ಮಿದುಳು ನೆನಪುಗಳನ್ನು ಜೋಡಿಸಿ, ವರ್ಗೀಕರಿಸುವ ಜೊತೆಗೆ ಶಕ್ತಿಯ ಪುನರ್ ದಾಸ್ತಾನು ಮಾಡಿಕೊಳ್ಳುತ್ತದೆ. ಆದರೆ ನಗರಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪ್ರಾಣಿಗಳ ನಿದ್ರೆಯ ಗುಣಮಟ್ಟಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಹೆಚ್ಚಿನ ತಾಪಮಾನ, ಮನುಷ್ಯ ನಿರ್ಮಿತ ಸಂರಚನೆಗಳಾದ ಗೋಡೆಗಳು, ಕಟ್ಟಡಗಳು ಹಾಗೂ ರಾತ್ರಿ ವೇಳೆಯಲ್ಲೂ ಕಣ್ಣು ಕೋರೈಸುವ ಕೃತಕ ಬೆಳಕು ಇತ್ಯಾದಿ ಇದಕ್ಕೆ ಕಾರಣಗಳಾಗಿವೆ.

ಆದರೆ ನಗರ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿರುವ ದ್ವೀಪಕಲ್ಪದ ಬಂಡೆ ಹಲ್ಲಿಗಳು (ರಾಕ್ ಆಗಮ) ಈ ತೊಂದರೆಗಳಿಂದ ಪಾರಾಗಲು ತಾವು ನಿದ್ರೆಸುವ ಜಾಗಗಳನ್ನು ಆಯ್ಕೆ ಮಾಡುವಾಗ ಬಹಳ ಜಾಣ್ಮೆಯನ್ನು ತೋರುತ್ತವೆ. ತಾವು ನಿದ್ರಿಸುವ ಜಾಗದ ಮೇಲ್ಮೈ, ಬೆಳಕಿನ ಪ್ರಮಾಣ, ತಾಪಮಾನ ಇವೆಲ್ಲವುದರಲ್ಲಿ ಗ್ರಾಮ್ಯ ಪರಿಸರವನ್ನೇ ಹೋಲುವಂತಹ ಜಾಗಗಳನ್ನು ಅವು ಆಯ್ದುಕೊಳ್ಳುತ್ತವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ ಸಿ.) ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ (ಸಿ.ಇ.ಎಸ್) ಸಂಶೋಧಕರು ಇತ್ತೀಚೆಗೆ ಅಧ್ಯಯನದಲ್ಲಿ ಪತ್ತೆಹಚ್ಚಿದ್ದಾರೆ. ಈ ಕುರಿತ ಅಧ್ಯಯನ ವರದಿಯು ‘ಬಿಹೇವಿಯರಲ್ ಎಕಾಲಜಿ ಮತ್ತು ಸೋಷಿಯೋಬಯಾಲಜಿ’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

Is the city too hot for lizards (Credit: Maria Thaker)
Hot and cold – thermal image of a sleeping rock agama (Credit: Nitya Mohanty)
Nocturnal sampling for sleeping rock agamas in their natural habitat comprising boulder formations, outside Bangalore city (Credit: Tanmay Wagh)
A juvenile rock agama sleeping in rural Bangalore (Credit: Mihir Joshi)

“ನಿದ್ರೆಗೆ ಜಾರಿದಾಗ ಪ್ರಾಣಿಗಳ ಮಿದುಳು ಹೇಗೆ ಕೆಲಸ ಮಾಡುತ್ತದೆ ಎಂಬುದು ವಿಜ್ಞಾನಗಳಿಗೆ ಸಾಕಷ್ಟು ಮಟ್ಟಿಗೆ ತಿಳಿದಿದೆ. ಆದರೆ ಅವು ವಾಸ್ತವ ಜಗತ್ತಿನಲ್ಲಿ ಹೇಗೆ ನಿದ್ರಿಸುತ್ತವೆ ಎಂಬ ಬಗ್ಗೆ ಅವರಿಗೆ ಅಷ್ಟಾಗಿ ತಿಳಿದಿಲ್ಲ“ ಎನ್ನುತ್ತಾರೆ ಸಿ.ಇ.ಎಸ್.ನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಹಾಗೂ ಈ ಅಧ್ಯಯನದ ಹಿರಿಯ ಲೇಖಕರಾದ ಮರಿಯಾ ಠಾಕೆರ್. ಕೆಲವು ಪರಿಸ್ಥಿತಿಗಳು ನಮಗೆ ಒಳ್ಳೆಯ ನಿದ್ರೆ ಬರಿಸಿದರೆ ಇನ್ನು ಕೆಲವು ಪರಿಸ್ಥಿತಿಗಳು ನಿದ್ರೆಗೆ ಭಂಗವುಂಟಮಾಡುತ್ತವೆ ಎಂಬುದು ಮನುಷ್ಯನ ಮೇಲೆ ನಡೆಸಿರುವ ಅಧ್ಯಯನಗಳಿಂದಾಗಿ ನಮಗೆ ದೃಢಪಟ್ಟಿದೆ. “ಆದರೆ, ಪ್ರಾಣಿಗಳು ವಾಸ್ತವ ಜಗತ್ತಿನಲ್ಲಿ ಎಲ್ಲಿ ಹಾಗೂ ಹೇಗೆ ನಿದ್ರೆಸುತ್ತವೆ ಎಂಬುದನ್ನು ತಿಳಿಯುವುದು ನಮ್ಮ ಉದ್ದೇಶವಾಗಿತ್ತು” ಎನ್ನುತ್ತಾರೆ ಅವರು.

ಇದಕ್ಕಾಗಿ, ಹಲ್ಲಿ ಜಾತಿಯ ಪ್ರಾಣಿಗಳು ನಗರ-ಪಟ್ಟಣ ಹಾಗೂ ಗ್ರಾಮ್ಯ ಪರಿಸರದಲ್ಲಿ ನಿದ್ರಿಸಲು ಎಂತಹ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂಬುದನ್ನು ಹೋಲಿಕೆ ಮಾಡಿ ತಜ್ಞರು ಅಧ್ಯಯನ ನಡೆಸಿದರು. ಈ ವಿಭಿನ್ನ ಪರಿಸರಗಳಲ್ಲಿನ ಹಲ್ಲಿ ಜಾತಿಯ ಪ್ರಾಣಿಗಳು ನಿದ್ರಿಸಲು ಆಯ್ಕೆ ಮಾಡಿಕೊಳ್ಳುವ ಜಾಗದ ಮೇಲ್ಮೈ, ಅಲ್ಲಿರುವ ಮುಚ್ಚಟೆಯ ಪ್ರಮಾಣ, ತಾಪಮಾನ ಹಾಗೂ ಅಲ್ಲಿಗೆ ಬೀಳುವ ಬೆಳಕಿನ ಪ್ರಮಾಣಗಳನ್ನು ಆಧರಿಸಿ ಈ ಅಧ್ಯಯನ ನಡೆಸಿದರು.

ಮೌನ ಪರಿಸರದಿಂದ ಕೂಡಿದ ಗ್ರಾಮೀಣ ಪ್ರದೇಶಗಳಲ್ಲಿ ಈ ಹಲ್ಲಿಗಳು ನಿದ್ರಿಸಲು ಆಯ್ಕೆ ಮಾಡಿಕೊಳ್ಳುವ ಬಂಡೆಗಲ್ಲುಗಳು, ಕಲ್ಲು ಗವಿಗಳು, ನೆಲ ಹಾಗೂ ಪೊದೆಗಳನ್ನೆಲ್ಲಾ ಅಧ್ಯಯನಕ್ಕಾಗಿ ಜಾಲಾಡಲಾಯಿತು. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮನೆ ಹಿಂಭಾಗದ ಅಂಗಳದ ಬಗ್ಗೆ ಗಮನ ಹರಿಸಲಾಯಿತು. ಜೊತೆಗೆ, ನಗರ ಪ್ರದೇಶಗಳಲ್ಲಿ ಈ ಹಲ್ಲಿಗಳು ಬೀಳು ಬಿಟ್ಟಿರುವ ಖಾಲಿ ನಿವೇಶನಗಳಲ್ಲಿ ಒಂದಷ್ಟು ಕಾಂಕ್ರೀಟ್ ಸಂರಚನೆ ಇದ್ದರೆ ಅಂತಹ ಸ್ಥಳವನ್ನು ನಿದ್ರೆಯ ನೆಲೆಯನ್ನಾಗಿಸಿಕೊಳ್ಳುತ್ತವೆ.” ಎನ್ನುತ್ತಾರೆ ಅಧ್ಯಯನದ ಮೊದಲ ಲೇಖಕಿ ನಿತ್ಯಾ ಮೊಹಂತಿ. “ಬೆಂಗಳೂರಿನಲ್ಲಿ ರಾತ್ರಿಯ ಹೊತ್ತು ತಲೆಗೆ ಹೆಡ್ ಲೈಟ್ ಬಿಗಿದುಕೊಂಡು ಹಾಗೂ ಕ್ಯಾಮೆರಾ ಇಳಿಬಿಟ್ಟುಕೊಂಡು ಹಲ್ಲಿಗಳ ನೆಲೆಗಳಿಗಾಗಿ ಹುಡುಕಾಡುವಾಗ ಜನರು ಮತ್ತು ಪೊಲೀಸರು ನಮ್ಮನ್ನು ಸಾಕಷ್ಟು ಸಲ ಅನುಮಾನದಿಂದ ನೋಡುತ್ತಿದ್ದುದುಂಟು. ಅಂತಹ ಸಂದರ್ಭಗಳಲ್ಲೆಲ್ಲಾ, ನಾವೇನು ಮಾಡಲು ಹೊರಟಿದ್ದೇವೆ ಎಂಬುದನ್ನು ವಿವರಿಸಬೇಕಾಗಿ ಬರುತ್ತಿತ್ತು” ಎಂದೂ ಅವರು ಹೇಳುತ್ತಾರೆ.

ಗ್ರಾಮ ಪರಿಸರದ ನೆಲೆಗಳಿಗೆ ಹೋಲಿಸಿದರೆ ನಗರ ಪ್ರದೇಶಗಳ ನೆಲೆಗಳಲ್ಲಿ ಮಲಗಬೇಕಾದ ಜಾಗದ ರಚನೆಗಳು ವಿಭಿನ್ನವಾಗಿರುವುದರ ಜೊತೆಗೆ ರಾತ್ರಿಯ ಹೊತ್ತು ಹೆಚ್ಚು ಪ್ರಕಾಶಮಾನವಾದ ಬೆಳಕು ಇರುತ್ತದೆ. ಈ ವ್ಯತ್ಯಾಸದ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಪರಿಸ್ಥಿತಿ ನಗರಗಳಲ್ಲಿ ನೆಲೆಯಾಗಿರುವ ಹಲ್ಲಿಗಳಿಗೆ ಇರುತ್ತದೆ. “ಒಂದೋ, ಅವು ಇಂತಹ ಪರಿಸ್ಥಿತಿಯೊಂದಿಗೆ ಹೊಂದಿಕೊಂಡೇ ನಿದ್ರಿಸಬೇಕು ಅಥವಾ ಗ್ರಾಮ್ಯ ಪರಿಸರವನ್ನು ಹೋಲುವ ಪರಿಸರವನ್ನು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ಗಮನಕ್ಕೆ ಬಂದ ಅಂಶವೇನೆಂದರೆ, ಹಲ್ಲಿಗಳು ಇವೆರಡರ ನಡುವೆ ಒಂದು ಸಮತೋಲನವನ್ನು ಕಾಯ್ದುಕೊಳ್ಳುವಂತಹ ರೀತಿಯಲ್ಲಿ ನಿದ್ರೆಯ ನೆಲೆಯನ್ನು ಆಯ್ದುಕೊಳ್ಳುತ್ತವೆ” ಎಂದೂ ಅವರು ವಿವರಿಸುತ್ತಾರೆ.

“ನಗರ ಪ್ರದೇಶಗಳಲ್ಲಿನ ಬಂಡೆ ಹಲ್ಲಿಗಳು ಗ್ರಾಮ್ಯ ಪರಿಸರದ ನೆಲೆಯನ್ನೇ ಹೋಲುವಂತಹ ನೆಲೆಗಳನ್ನು ಆಯ್ದುಕೊಳ್ಳುವುದು ಕಂಡುಬಂತು. ಗ್ರಾಮ್ಯ ಪರಿಸರದಲ್ಲಿ ಬಂಡೆಗಲ್ಲುಗಳ ಮೇಲೆ ನಿದ್ರಿಸಲು ಇಚ್ಛಿಸುವ ಈ ಹಲ್ಲಿಗಳು ನಗರ ಪ್ರದೇಶಗಳಲ್ಲಿ ಒರಟು ಮೇಲ್ಮೈನಿಂದ ಕೂಡಿದ ಕಾಂಕ್ರೀಟ್ ಸಂರಚನೆಯನ್ನು ಆಯ್ದುಕೊಳ್ಳುತ್ತವೆ ಎಂಬುದು ದೃಢಪಟ್ಟಿತು. ಹಾಗೆಯೇ, ನಗರ ಹಾಗೂ ಗ್ರಾಮ್ಯ ಪರಿಸರಗಳಲ್ಲಿನ ನಿದ್ರಾ ನೆಲೆಗಳ ತಾಪಮಾನ ಕೂಡ ಹೆಚ್ಚುಕಡಿಮೆ ಒಂದೇ ಆಗಿರುವುದು ಕಂಡುಬಂತು. ಆದರೆ ನಗರ ಪ್ರದೇಶಗಳಲ್ಲಿನ ನಿದ್ರಾ ನೆಲೆಗಳು ಗ್ರಾಮೀಣ ಪರಿಸರದ ನಿದ್ರಾ ನೆಲೆಗಳಿಗಿಂತ ಒಂಬತ್ತು ಪಟ್ಟು ಹೆಚ್ಚು ಮುಚ್ಚಟೆಯಾಗಿರುವುದು ಕಂಡುಬಂದಿತು. ನಗರ ಪ್ರದೇಶಗಳಲ್ಲಿನ ಕಣ್ಣು ಕೋರೈಸುವ ಪ್ರಕಾಶಮಾನ ಬೆಳಕಿನಿಂದ ಪಾರಾಗಲು ಅವು ಇಂತಹ ತಾಣಗಳನ್ನು ಆಯ್ಕೆ ಮಾಡುತ್ತವೆ. ನಗರ ಪ್ರದೇಶಗಳಲ್ಲಿನ ಅನಪೇಕ್ಷಿತ ಪರಿಸ್ಥಿತಿಯನ್ನು ನಿಭಾಯಿಸಲು ಅವು ಈ ರೀತಿಯ ಹೊಂದಾಣಿಕೆ ಮಾಡಿಕೊಳ್ಳುತ್ತವೆ” ಎನ್ನುತ್ತಾರೆ ಸಂಶೋಧಕರು.

ಮನುಷ್ಯ ಚಟುವಟಿಕೆಗಳ ಹಸ್ತಕ್ಷೇಪವನ್ನು ನಿಭಾಯಿಸುವ ಪ್ರಾಣಿಗಳನ್ನು ಅಧ್ಯಯನ ಮಾಡುವುದು ತುಂಬಾ ಪ್ರಮುಖವಾದ ವಿಷಯ ಎನ್ನುವ ಠಾಕೆರ್ ಅವರ ಪ್ರಕಾರ, “”ಪ್ರಪಂಚವು ಬದಲಾಗುತ್ತಿದ್ದು, ಈ ಬದಲಾವಣೆ ಹೀಗೆಯೇ ಮುಂದುವರಿಯುತ್ತಿರುತ್ತಲೇ ಇರುತ್ತದೆ. ಹೀಗಾಗಿ, ಬದಲಾಗುವ ಪರಿಸ್ಥಿತಿಯಲ್ಲಿ ಬೇರೆ ಜೀವಿಗಳಿಗೆ ಬದುಕುಳಿಯಲು ಏನು ಬೇಕು ಎಂಬುದನ್ನು ನಾವು ತಿಳಿದುಕೊಂಡರೆ ಅವುಗಳ ಸಂರಕ್ಷಣೆಗಾಗಿ ನಮ್ಮದೇ ಆದ ಕೆಲವು ಆಯ್ಕೆಗಳನ್ನು ಮಾಡಲು ಸಾಧ್ಯವಾಗುತ್ತದೆ” ಎಂದು ಹೇಳುತ್ತಾರೆ.

 

ಉಲ್ಲೇಖ:ಮೊಹಂತಿ ಎನ್.ಪಿ., ಜೋಷಿ ಎಂ ಮತ್ತು ಠಾಕೆರ್ ಎಂ. Urban lizards use sleep sites that mirror the structural, thermal, and light properties of natural sites. Behav Ecol Sociobiol, 2021, 75, 166. https://doi.org/10.1007/s00265-021-03101-5
https://link.springer.com/article/10.1007%2Fs00265-021-03101-5#citeas

ಸಂಪರ್ಕಿಸಿ:
ಮರಿಯಾ ಠಾಕೆರ್
ಸಹ ಪ್ರಾಧ್ಯಾಪಕರು
ಜೀವವೈವಿಧ್ಯತಾ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ
mthaker@iisc.ac.in

ನಿತ್ಯಾ ಪ್ರಕಾಶ್ ಮೊಹಂತಿ
ಪೋಸ್ಟ್ ಡಾಕ್ಟೋರಲ್ ಫೆಲೊ
ಜೀವವೈವಿಧ್ಯತಾ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)

ಪತ್ರಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಬಿಡುಗಡೆಯ ಯಾವುದೇ ಪಠ್ಯ ಭಾಗವನ್ನು ಯಥಾವತ್ತಾಗಿ ಬಳಸಿಕೊಂಡರೆ, ದಯವಿಟ್ಟು ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆ ಹೆಸರಿನಲ್ಲಿ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆ ಕೇಳುವುದಿದ್ದರೆ ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.
——000——