ಬೌದ್ಧಿಕ ಸ್ವತ್ವು (ಐಪಿ) ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ProrIISeTM ಸಾಫ್ಟ್‌ವೇರ್‌ ಲೋಕಾರ್ಪಣೆ


ಬೌದ್ಧಿಕ ಸ್ವತ್ತುಗಳನ್ನು ಸಂರಕ್ಷಿಸುವ ಹಾಗೂ ಅವುಗಳನ್ನು ವಾಣಿಜ್ಯಿಕ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ನೆರವಾಗುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಪರಿಹಾರವನ್ನು ಭಾರತೀಯ ವಿಜ್ಞಾನ ಸಂಸ್ಥೆಯ (..ಎಸ್‌.ಸಿ.) ನಿರ್ದೇಶಕ ಪ್ರೊಫೆಸರ್‌ ಗೋವಿಂದನ್‌ ರಂಗರಾಜನ್‌ ಅವರು ಇಂದು ಲೋಕಾರ್ಪಣೆಗೊಳಿಸಿದರು.

ಯಾವುದೇ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೃಜನೆಯಾಗುವ ಜ್ಞಾನವನ್ನು ಐ.ಪಿ. ಅಥವಾ ಬೌದ್ಧಿಕ ಸ್ವತ್ತು ಎಂದು ಪರಿಗಣಿಸಲಾಗುತ್ತದೆ. ಹೀಗೆ ಸೃಜನೆಗೊಳ್ಳುವ ಜ್ಞಾನವು ಅಮೂರ್ತ ಸ್ವರೂಪದಲ್ಲಿದ್ದರೂ, ಅದು ಒಬ್ಬ ಕಾನೂನುಬದ್ಧ ವಾರಸುದಾರರನ್ನು ಹೊಂದಿರಬೇಕಾಗುತ್ತದೆ. ಭಾರತದಲ್ಲಿ, ಸಾಮಾನ್ಯವಾಗಿ, ಉದ್ಯೋಗಿಗಳು ಸೃಜಿಸುವ ಜ್ಞಾನಕ್ಕೆ, ಉದ್ಯೋಗದಾತರು ವಾರಸುದಾರರಾಗಿರುತ್ತಾರೆ. ಸಾರ್ವಜನಿಕ ಅನುದಾನಿತ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ತಮ್ಮ ಕಾರ್ಯನೀತಿಗೆ ಅನುಗುಣವಾಗಿ ಬೌದ್ಧಿಕ ಸ್ವತ್ತನ್ನು ನಿಯತಕಾಲಿಕಗಳ ಮೂಲಕ ಪ್ರಚುರಗೊಳಿಸುವ ಅಥವಾ ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಮುನ್ನ ಪೇಟೆಂಟ್‌ಗಳ ಸ್ವರೂಪದಲ್ಲಿ ಸಂರಕ್ಷಿಸಿಕೊಳ್ಳುವ ಸ್ವಾತಂತ್ರ್ಯವನ್ನು ಸಂಶೋಧಕರಿಗೆ ನೀಡುತ್ತವೆ. ಯಾವುದೇ ಬೌದ್ಧಿಕ ಸ್ವತ್ತನ್ನು ಉದ್ಯಮದ ಮೂಲಕ ವಾಣಿಜ್ಯಕ ಉದ್ದೇಶಕ್ಕೆ ಪರಿವರ್ತಿಸಲು ಹಾಗೂ ಅಂತಿಮವಾಗಿ ಸಮಾಜದ ಉಪಯೋಗಕ್ಕೆ ಬಳಸುವಂತಾಗಲು ಇಂತಹ ಪೇಟೆಂಟ್‌ ಸಂರಕ್ಷಣೆಯು ಮಹತ್ವದ ಅಂಶವಾಗಿರುತ್ತದೆ. ಉದಾಹರಣೆಗೆ, ಒಬ್ಬ ಪ್ರೊಫೆಸರ್‌/ವಿಜ್ಞಾನಿಯು ಕ್ಯಾನ್ಸರ್‌ಗೆ ಔಷಧವೊಂದನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಕಲ್ಪಿಸಿಕೊಳ್ಳೋಣ. ಅಂತಹ ಸಂದರ್ಭದಲ್ಲಿ, ಆ ಕುರಿತ ಸಂಶೋಧನೆಯು ಪೇಟೆಂಟ್‌ ಸುರಕ್ಷತೆ ಹೊಂದಿದ್ದರೆ ಉದ್ಯಮವೊಂದು ಅದರ ವಾಣಿಜ್ಯೀಕರಣಕ್ಕೆ ಹೆಚ್ಚಿನ ಆಸಕ್ತಿ ತೋರುತ್ತದೆ. ಆದರೆ, ಅದೇ ಸಂಶೋಧನೆಗೆ ಸಂಬಂಧಿಸಿದ ಅಧ್ಯಯನ ವಿವರಗಳು ಮುಕ್ತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡರೆ ಉದ್ಯಮಗಳು ಅದರ ವಾಣಿಜ್ಯೀಕರಣಕ್ಕೆ ತೋರುವ ಆಸಕ್ತಿ ಕಡಿಮೆ ಇರುತ್ತದೆ. ಇದಕ್ಕೆ ಕಾರಣವೇನೆಂದರೆ, ಯಾವುದೇ ಒಂದು ಆವಿಷ್ಕಾರವು ಶಿಕ್ಷಣ ಸಂಸ್ಥೆಯೊಂದರಲ್ಲಿ ಹುಟ್ಟುಪಡೆದ ಅವಧಿಯಿಂದ ಹಿಡಿದು, ಅದನ್ನು ವಾಣಿಜ್ಯಕವಾಗಿ ಸಿದ್ಧಗೊಳಿಸುವ ಅವಧಿಯವರೆಗೆ ಸಾಕಷ್ಟು ಬಂಡವಾಳವನ್ನು ಹೂಡಬೇಕಾಗುತ್ತದೆ. ಉದಾಹರಣೆಗೆ, ಕ್ಯಾನ್ಸರ್‌ ಔಷಧದ ಸಂದರ್ಭದಲ್ಲಿ, ಚಿಕಿತ್ಸಕ ಪ್ರಯೋಗಗಳನ್ನು ಮಾಡಲು ಭರಿಸಬೇಕಾದ ವೆಚ್ಚವನ್ನು ಗಮನಿಸಬಹುದು. ಹೀಗಾಗಿ, ಉದ್ಯಮಗಳು, ಇಂತಹ ಆವಿಷ್ಕಾರವನ್ನು ಬೇರೆ ಯಾರೂ ನಕಲು ಮಾಡಲಾರರು ಎಂಬ ಖಾತರಿ ಇಲ್ಲದಿದ್ದರೆ, ಬಂಡವಾಳ ಹೂಡುವ ಬಗ್ಗೆ ಹಿಂಜರಿಕೆಯನ್ನು ತೋರುತ್ತವೆ.

ಐಐಎಸ್‌ಸಿಯಲ್ಲಿರುವ ಬೌದ್ಧಿಕ ಸ್ವತ್ತು ಹಾಗೂ ತಾಂತ್ರಿಕ ಪರವಾನಗಿ ಕಚೇರಿ (IPTeL) ಮತ್ತು ಭಾರತದ ಇತರ ಸಂಸ್ಥೆಗಳಲ್ಲಿರುವ ಇದೇ ರೀತಿಯ ಇತರ ಕಚೇರಿಗಳು , ಹೀಗೆ ಜ್ಞಾನ ಸೃಜನೆಯನ್ನು ವಾಣಿಜ್ಯಿಕ ಉದ್ದೇಶಕ್ಕೆ ಪರಿವರ್ತನೆಗೊಳಿಸುವುದಕ್ಕೆ ಪೂರಕವಾಗಿ ಪೇಟೆಂಟ್‌ ಸುರಕ್ಷತೆ ಒದಗಿಸುವ ಕಾರ್ಯವನ್ನು ಮಾಡುತ್ತಿವೆ. ಈ ರೀತಿಯ ವಾಣಿಜ್ಯಿಕ ಪರಿವರ್ತನೆಯಲ್ಲಿ ಎರಡು ರೀತಿಗಳಿವೆ. ಒಂದು, ಸಂಸ್ಥೆಗಳಿಂದಲೇ ನವೋದ್ಯಮಗಳಿಗೆ ಸಿಗುವಂಥದ್ದು. ಮತ್ತೊಂದು, ಸ್ಥಾಪಿತ ಉದ್ಯಮಗಳಿಗೆ ತಾಂತ್ರಿಕತೆಯನ್ನು ವರ್ಗಾಯಿಸುವಂಥದ್ದು. ಭಾರತದ ಮಟ್ಟಿಗೆ ಹೇಳುವುದಾದರೆ, ಬೌದ್ಧಿಕ ಸ್ವತ್ತಿನ ಸಂರಕ್ಷಣೆ ಹಾಗೂ ಅದರ ವಾಣಿಜ್ಯಿಕ ಪರಿವರ್ತನೆಯ ಪ್ರಮಾಣವು ತುಂಬಾ ಕಳಪೆ ಮಟ್ಟದಲ್ಲಿದೆ.

..ಎಸ್‌.ಸಿ. 2016ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ, ಯಾವುದೇ ಆವಿಷ್ಕಾರವನ್ನು ವಾಣಿಜ್ಯಿಕವಾಗಿ ಪರಿವರ್ತಿಸಲು ಹಿಡಿಯುವ ಸಮಯಕ್ಕಿಂತ ಅದಕ್ಕೆ ಪೇಟೆಂಟ್‌ ಪಡೆಯಲು ಹಿಡಿಯಲು ಸಮಯವೇ ಇದಕ್ಕೆ ಕಾರಣ ಎಂಬುದು ದೃಢಪಟ್ಟಿದೆ. ಈ ಪೇಟೆಂಟ್‌ ಪಡೆಯುವ ಪ್ರಕ್ರಿಯೆಯು ಹಲವಾರು ಹಂತಗಳನ್ನು ಒಳಗೊಂಡಿದ್ದು ಕೆಲವೊಮ್ಮೆ 20 ವರ್ಷಗಳಷ್ಟು ಸುದೀರ್ಘಾವಧಿಯನ್ನು ತೆಗೆದುಕೊಳ್ಳುತ್ತದೆ. ಇದರ ಕಾನೂನಾತ್ಮಕ, ಆರ್ಥಿಕ ಹಾಗೂ ಆಡಳಿತಾತ್ಮಕ ಜಟಿಲತೆಗಳು ಎಷ್ಟೋ ಸಲ ಸಂಶೋಧಕರಿಗೆ ರೇಜಿಗೆ ಹುಟ್ಟಿಸಿ, ಪೇಟೆಂಟ್‌ ಪಡೆಯುವ ಆಸಕ್ತಿಯನ್ನೇ ಕುಂದಿಸಿಬಿಡುತ್ತವೆ. ಆದರೆ ದಕ್ಷತೆಯಿಂದ ಕೂಡಿದ ಸ್ವಯಂಚಾಲಿತ ವ್ಯವಸ್ಥೆಯು ಬೌದ್ಧಿಕ ಸ್ವತ್ತಿನ ಸಂರಕ್ಷಣೆಗೆ ಹಾಗೂ ಅದರ ವಾಣಿಜ್ಯೀಕರಣಕ್ಕೆ ಅನುವು ಮಾಡಿಕೊಡುತ್ತದೆ.

ಸಾಫ್ಟ್‌ವೇರ್‌ IISc-Prorigo 1ನೇ ಆವೃತ್ತಿಯು ಈ ಪ್ರಕ್ರಿಯೆಯ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಮೂರು ವರ್ಷಗಳ ಪರೀಕ್ಷೆಯ ನಂತರ ಇದನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು. ಈ ಸಾಫ್ಟ್‌ವೇರ್‌ನ 2ನೇ ಆವೃತ್ತಿಯು ಆರ್ಥಿಕ ಸಂಬಂಧಿ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲಿದ್ದು, 2021ರಲ್ಲಿ ಲೋಕಾರ್ಪಣೆಗೊಳ್ಳಲಿದೆ. 3ನೇ ಆವೃತ್ತಿಯು ಪೇಟೆಂಟ್‌ನ ಮೌಲ್ಯಮಾಪನಕ್ಕೆ ಪೂರಕವಾಗಿ ಕೃತಕ ಬುದ್ಧಿಮತೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಿದ್ದು, ಇದು 2022ರಲ್ಲಿ ಅನಾವರಣಗೊಳ್ಳಲಿದೆ.

ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸಾಫ್ಟ್‌ವೇರ್‌ ಉತ್ಪನ್ನವಾಗಿದೆ. ಸದ್ಯ ಇರುವ ಸಾಫ್ಟ್‌ವೇರ್‌ ಪರಿಹಾರಗಳು ಭಾರತೀಯ ಶಿಕ್ಷಣ ಸಂಸ್ಥೆಗಳಿಗೆ ದುಬಾರಿ ಎನ್ನಿಸಿದ್ದರಿಂದ ಈ ಹೊಸ ಸಾಫ್ಟ್‌ವೇರ್‌ ಅನ್ನು ಐಐಎಸ್‌ಸಿ ಅಭಿವೃದ್ಧಿಪಡಿಸಿದೆ. ಮೊದಲ ಹಂತದಲ್ಲಿ, ಭಾರತದ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಸಣ್ಣ ಮಟ್ಟದ ಕಾನೂನು ಕಂಪನಿಗಳನ್ನು ತಲುಪುವ ಗುರಿ ಇರಿಸಿಕೊಳ್ಳಲಾಗಿದ್ದು, ನಂತರ ಕ್ರಮೇಣವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೋಗುವ ಉದ್ದೇಶವಿದೆ. ಈ ಉತ್ಪನ್ನದಿಂದಾಗಿ, ಬೌದ್ಧಿಕ ಸ್ವತ್ತಿನ ಸ್ವಾಮ್ಯ (ಐಪಿ) ಪಡೆಯಲು ಹಿಡಿಯುವ ಸಮಯವು ಕಡಿಮೆಯಾಗಿ, ಅದೇ ಸಮಯವು ಉದ್ಯಮದ ವಾಣಿಜ್ಯಿಕ ಪರಿವರ್ತನೆಗೆ ಲಭ್ಯವಾಗುತ್ತದೆ ಎಂಬುದು ತಜ್ಞರ ವಿಶ್ವಾಸವಾಗಿದೆ.

ಶಿಕ್ಷಣ ಸಂಸ್ಥೆಗಳಿಗೆ ತಮ್ಮಲ್ಲಿ ಸೃಜನೆಯಾಗುವ ಜ್ಞಾನವನ್ನು ಸಂರಕ್ಷಿಸಿಕೊಳ್ಳುವ ಜೊತೆಗೆ ಐ.ಪಿ.ಯನ್ನು ವಾಣಿಜ್ಯಿಕವಾಗಿ ಪರಿವರ್ತಿಸಲು ಈ ಸಾಫ್ಟ್‌ವೇರ್‌ ಸಹಕರಿಸುತ್ತದೆ. ಜೊತೆಗೆ, ವ್ಯವಸ್ಥಿತ ಐ.ಪಿ.ಕಚೇರಿಗಳನ್ನು ಹೊಂದುವಷ್ಟು ಸಂಪನ್ಮೂಲಗಳ ಬಲವಿಲ್ಲದ ಸಣ್ಣ ವಿಶ್ವವಿದ್ಯಾಲಯಗಳಿಗೆ ಕೂಡ ತುಂಬಾ ಅನುಕೂಲಕರವಾಗುತ್ತದೆ ಎಂದೂ ಅಭಿಪ್ರಾಯಪಡಲಾಗಿದೆ.

—–೦೦೦—-