04ನೇ ಏಪ್ರಿಲ್ 2023
ಭಾರತದ ಅಗತ್ಯಗಳಿಗೆ ಪ್ರಸ್ತುತವಾದ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉನ್ನತೀಕರಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ), ಗೀತಂ (GITAM- Gandhi Institute of Technology and Management) ವಿಶ್ವವಿದ್ಯಾಲಯ ಮತ್ತು ಎಲ್ ಅಂಡ್ ಟಿ ಯ ನೀರು ಮತ್ತು ತ್ಯಾಜ್ಯ ಸಂಸ್ಕರಣೆ ವಿಭಾಗ (WET IC), ಇವು ಒಡಂಬಡಿಕೆಗೆ ಸಹಿ ಹಾಕಿವೆ.
ಐಐಎಸ್‌ಸಿ ಬೆಂಗಳೂರು ಕ್ಯಾಂಪಸ್ಸಿನಲ್ಲಿ 2023ರ ಮಾರ್ಚ್ 24ರಂದು ಈ ಒಡಂಬಡಿಕೆ ಏರ್ಪಟ್ಟಿತು. ಐಐಎಸ್‌ಸಿ ನಿರ್ದೇಶಕ ಪ್ರೊಫೆಸರ್ ಜಿ ರಂಗರಾಜನ್ ಅವರ ಸಮ್ಮುಖದಲ್ಲಿ ಸಂಸ್ಥೆಯ ಕುಲಸಚಿವ ಕ್ಯಾಪ್ಟನ್ ಶ್ರೀಧರ್ ವಾರಿಯರ್, ಗೀತಂ (GITAM) ವಿವಿಯ ಸಮ-ಕುಲಾಧಿಪತಿ ಪ್ರೊಫೆಸರ್ ಎಂ ಎಸ್ ಮೋಹನ್ ಕುಮಾರ್ ಮತ್ತು ಎಲ್ ಅಂಡ್ ಟಿ ನೀರು ಹಾಗೂ ತ್ಯಾಜ್ಯ ಸಂಸ್ಕರಣೆ ವಿಭಾಗದ ಮುಖ್ಯ ತಾಂತ್ರಿಕ ಅಧಿಕಾರಿ ಎಸ್ ಜಗನ್ನಾಥನ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.
ಈ ಒಡಂಬಡಿಕೆ ಪ್ರಕಾರ ಈ ಮೂರೂ ಸಂಸ್ಥೆಗಳು ನೀರು ಮತ್ತು ನೀರಿನ ಸಾಗಣೆ ಹಾಗೂ ಸಂಸ್ಕರಣೆ, ಹೈಡ್ರಾಲಜಿ (ಜಲ ಅಧ್ಯಯನ) , ನೀರು ಮತ್ತು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷೀನ್ ಲರ್ನಿಂಗ್ (ಎಂಎಲ್) ಆನ್ವಯಿಕತೆ ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಲಿವೆ. ಈ ಮಹತ್ವದ ವಲಯಗಳಲ್ಲಿ ಭಾರತದ ಮುಂದಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ನಾವೀನ್ಯತಾ ಮತ್ತು ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಸಹಭಾಗಿತ್ವ ಅನುವು ಮಾಡಿಕೊಡಲಿದೆ.
ಈ ಸಂದರ್ಭದಲ್ಲಿ ಪ್ರೊಫೆಸರ್ ರಂಗರಾಜನ್ ಅವರು ಮಾತನಾಡಿ, ಭಾರತ-ಪ್ರಸ್ತುತ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉನ್ನತೀಕರಿಸುವ ಸಲುವಾಗಿ ಗೀತಂ ವಿವಿ ಮತ್ತು ಎಲ್ ಅಂಡ್ ಟಿ ಜಲತಂತ್ರಜ್ಞಾನ ಕೇಂದ್ರವಾದ WET IC ಜೊತೆ ಐಐಎಸ್‌ಸಿ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಮೂರೂ ಸಂಸ್ಥೆಗಳ ಒಟ್ಟುಗೂಡಲ್ಪಟ್ಟ ಪರಿಣತಿ ಹಾಗೂ ಸಂಪನ್ಮೂಲಗಳನ್ನು ಆಧರಿಸಿ ನಮ್ಮ ದೇಶವು ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಗೀತಂ ವಿ.ವಿ.ಯ ಸಮ-ಕುಲಾಧಿಪತಿ ಪ್ರೊಫೆಸರ್ ಎಂಎಸ್ ಮೋಹನ್ ಕುಮಾರ್ ಅವರು ಮಾತನಾಡಿ, ಪ್ರಮುಖ ರಾಷ್ಟ್ರೀಯ ಅಭಿಯಾನಕ್ಕೆ ಪೂರಕವಾಗಿ ಐಐಎಸ್‌ಸಿ ಮತ್ತು ಎಲ್ ಅಂಡ್ ಟಿ ಯ ಜಲ ತಂತ್ರಜ್ಞಾನ ಕೇಂದ್ರವಾದ WET IC ಜೊತೆ ಕೈಜೋಡಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದರು.
ಎಲ್ ಅಂಡ್ ಟಿ ಯ ಎಸ್ ಜಗನ್ನಾಥನ್ ಅವರೂ ಕಾರ್ಯಕ್ರಮದಲ್ಲಿ ಮಾತನಾಡಿದರು. ನೀರಿಗೆ ಸಂಬಂಧಿಸಿದ ಈ ಪ್ರಮುಖ ವಲಯದಲ್ಲಿ ಐಐಎಸ್‌ಸಿ ಮತ್ತು ಗೀತಂ ವಿವಿ ಜೊತೆ ಭಾಗಿಯಾಗುತ್ತಿರುವುದು ನಮಗೆ ಹೆಮ್ಮೆ ಮೂಡಿಸುತ್ತಿದೆ ಎಂದರು.
ನೀರು ಮತ್ತು ತ್ಯಾಜ್ಯನೀರಿನ ಸಾಗಣೆ ಹಾಗೂ ಸಂಸ್ಕರಣೆ, ನೀರಿನ ಸ್ಮಾರ್ಟ್ ನಿರ್ವಹಣೆ, ಎನರ್ಜಿ ನ್ಯೂಟ್ರಲ್ ಸಂಸ್ಕರಣಾ ಘಟಕಗಳು, ನೀರಿನ ವಲಯದಲ್ಲಿ ಡಿಜಿಟಲ್ ಪರಿಹಾರಗಳ ಅನುಷ್ಠಾನ ಹಾಗೂ ವಿಸ್ತೃತವಾಗಿ ಪರಿಸರ ಸಂರಕ್ಷಣೆಯಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳಿಗೆ ಹೊಸತನದಿಂದ ಕೂಡಿದ ದೊಡ್ಡಮಟ್ಟದ ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಒಡಂಬಡಿಕೆ ವೇದಿಕೆ ಕಲ್ಪಿಸುತ್ತದೆ ಎಂದು ಅವರು ವಿವರಿಸಿದರು.
ಶೈಕ್ಷಣಿಕ ಹಾಗೂ ಉದ್ಯಮ ವಲಯಗಳ ಸಹಭಾಗಿತ್ವದ ಮೂಲಕ ನೀರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಭಾರತಕ್ಕೆ ಪ್ರಸ್ತುತವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉನ್ನತೀಕರಿಸಲು ಈ ಒಡಂಬಡಿಕೆಯು ಗಮನಾರ್ಹ ಮೈಲುಗಲ್ಲಾಗಿದೆ.
ಸಂಪರ್ಕಿಸಿ:
ಸಂವಹನಗಳ ಕಚೇರಿ
news@iisc.ac.in