ಮಣ್ಣಿನಲ್ಲಿನ ಇಂಗಾಲದ ದೀರ್ಘಾವಧಿ ಸ್ಥಿರತೆಯಲ್ಲಿ ಮೇವು ಪ್ರಾಣಿಗಳ ಮಹತ್ವದ ಪಾತ್ರ 


ರಂಜಿನಿ ರಘುನಾಥ್ 

ದೊಡ್ಡ ಸಸ್ಯಾಹಾರಿ  ಸಸ್ತನಿಗಳಾದ ಚಮರಿಮೃಗ (ಯಾಕ್) ಮತ್ತು  ಕಾಡುಮೇಕೆ (ಐಬೆಕ್ಸ್) ಯಂತಹ ಪ್ರಾಣಿಗಳು ಹಿಮಾಲಯದ ಸ್ಪೀತಿ ವಲಯದಂತಹ ಮೇವು ಪ್ರದೇಶಗಳಲ್ಲಿನ ಮಣ್ಣಿನಲ್ಲಿ ಇಂಗಾಲ ಸಂಪನ್ಮೂಲದ ಸ್ಥಿರತೆಯನ್ನು ಉಂಟುಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ (ಸಿಇಎಸ್) ಹಾಗೂ ದೈವೇಚ ಹವಾಮಾನ ವೈಪರೀತ್ಯ ಅಧ್ಯಯನ ಕೇಂದ್ರದ (ಡಿಸಿಸಿಸಿ) ಸಂಶೋಧಕರು ಸುಮಾರು 16 ವರ್ಷಗಳ ಅಧ್ಯಯನ ನಡೆಸಿ ಈ ಅಂಶವನ್ನು ದೃಢೀಕರಿಸಿಕೊಂಡಿದ್ದಾರೆ. 

ಮೇವಿನ ಪ್ರದೇಶದಲ್ಲಿ ಮೇಲೆ ತಿಳಿಸಿದಂತಹ ಸಸ್ಯಹಾರಿ ಪ್ರಾಣಿಗಳ ಪ್ರವೇಶಕ್ಕೆ  ತಡೆಯೊಡ್ಡಿ ನಡೆಸಲಾದ ಪ್ರಯೋಗದಿಂದ ಮಣ್ಣಿನಲ್ಲಿನ ಇಂಗಾಲದ  ಪ್ರಮಾಣದಲ್ಲಿ ಹೆಚ್ಚಿನ ಏJರುಪೇರಾಗುತ್ತದೆ ಎಂಬುದು ಕಂಡುಬಂದಿದೆ. ಇದು ಜಾಗತಿಕ ಇಂಗಾಲ ಆವರ್ತನದ ಮೇಲೆ ಅಹಿತಕರವಾದ  ದುಷ್ಪರಿಣಾಮಗಳನ್ನು ಉಂಟುಮಾಡಬಹುದಾಗಿರುತ್ತದೆ. 

ಭೂ ಗ್ರಹದ ಮೇಲಿನ ಎಲ್ಲಾ ಸಸ್ಯರಾಶಿ ಹಾಗೂ ವಾಯುಮಂಡಲ ಸೇರಿ ಒಟ್ಟಾಗಿ ಇರುವುದಕ್ಕಿಂತ ಹೆಚ್ಚಿನ ಇಂಗಾಲವು ಮಣ್ಣಿನಲ್ಲಿ ಇದೆ. ಹೀಗಾಗಿ ಇದರ ಸಂರಕ್ಷಣೆಯನ್ನು ಖಾತ್ರಿಗೊಳಿಸುವುದು ಮುಖ್ಯವಾಗುತ್ತದೆ. ಸಸ್ಯಗಳು ಹಾಗೂ ಪ್ರಾಣಿಗಳು ಸಾವಿಗೀಡಾದ ಮೇಲೆ ಮೃತ ಸಾವಯವ ಸಾರಾಂಶವು ದೀರ್ಘಾವಧಿಯವರೆಗೆ ಮಣ್ಣಿನಲ್ಲಿ ಉಳಿದುಕೊಂಡಿರುತ್ತದೆ. ಸೂಕ್ಷ್ಮಾಣು ಜೀವಿಗಳು ಅವನ್ನು ವಿಘಟನೆಗೊಳಿಸಿ ಇಂಗಾಲವನ್ನು ವಾಯುಮಂಡಲಕ್ಕೆ ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿ ಹೊರಸೂಸಿದ ನಂತರವಷ್ಟೇ ಅದು ಮಣ್ಣಿನಿಂದ ಬಿಡುಗಡೆಗೊಂಡು ಹೊರಬರುತ್ತದೆ. ಈ ರೀತಿಯಾಗಿ ಮಣ್ಣಿನ ಸಂಪನ್ಮೂಲವು ಇಂಗಾಲವನ್ನು ಸೆಳೆಯುವ ಬಹುದೊಡ್ಡ ಹೀರುಕ ಆಗಿದೆ ಎಂದು ಸಿಇಎಸ್ ಸಹ ಪ್ರಾಧ್ಯಾಪಕರಾದ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಕಲಾಪ ವರದಿಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಹಿರಿಯ ಲೇಖಕರಾದ ಸುಮಂತ ಬಾಗ್ಚಿ ಅಭಿಪ್ರಾಯಪಡುತ್ತಾರೆ. ಆದ್ದರಿಂದ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಮಣ್ಣಿನಲ್ಲಿನ ಇಂಗಾಲದ ಮಟ್ಟವನ್ನು ಸೂಕ್ತ ಪ್ರಮಾಣದಲ್ಲಿ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. 

 ಬಾಗ್ಚಿಯವರು ಹಿಮಾಲಯದ ಮೇವು ಪ್ರದೇಶಗಳಲ್ಲಿ ಸಸ್ಯಾಹಾರಿ ಮೇವು ಪ್ರಾಣಿಗಳು ಇರುವ ಪರಿಣಾಮದ ಬಗ್ಗೆ 2005ರಲ್ಲಿ ತಮ್ಮ ಪಿಎಚ್.ಡಿ. ಭಾಗವಾಗಿ ಅಧ್ಯಯನ ಮಾಡಲು ಆರಂಭಿಸಿದರು. ಈ ಕಾರ್ಯದಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರ ಸ್ಥಳೀಯ ಆಡಳಿತಗಳು ಹಾಗೂ ಪ್ರೀತಿ ಪ್ರದೇಶದ ಕಿಬ್ಬರ್ ಗ್ರಾಮದ ಜನರ ನೆರವು ಪಡೆದರು. ಇವರ ಸಹಕಾರದಿಂದ ಕೆಲವು ಪ್ರದೇಶಗಳಿಗೆ ಬೇಲಿಯನ್ನು ಹಾಕಿ ಚಮರಿಮೃಗ ಹಾಗೂ ಕಾಡುಮೇಕೆಯಂತಹ ಪ್ರಾಣಿಗಳು ಒಳಪ್ರವೇಶಿಸಿದಂತೆ ತಡೆಯೊಡ್ಡಿದರು. ಇನ್ನು ಕೆಲವು ನಿಶ್ಚಿತ ಪ್ರದೇಶಗಳಲ್ಲಿ ಯಾವ ಬೇಲಿಯನ್ನೂ ಹಾಕದೆ ಪ್ರಾಣಿಗಳು ಮುಕ್ತವಾಗಿ ಮೇಯಲು ಅವಕಾಶ ಮಾಡಿಕೊಟ್ಟರು. ನಂತರ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ನಮ್ಮ ವಿದ್ಯಾರ್ಥಿಗಳ ನೆರವಿನಿಂದ ಆ ಪ್ರದೇಶಗಳಲ್ಲಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಅವುಗಳ ರಾಸಾಯನಿಕ ಸಂಯೋಜನೆಯನ್ನು ವಿಶ್ಲೇಷಿಸಿದರು. ಜೊತೆಗೆ, ವರ್ಷ ವರ್ಷವೂ ಆ ಮಣ್ಣಿನಲ್ಲಿನ ಇಂಗಾಲ ಮತ್ತು ಸಾರಜನಕದ ಪ್ರಮಾಣವನ್ನು ಅಳೆದು ಅವುಗಳ ಹೋಲಿಕೆ ಮಾಡಿದರು. 

 ಯಾಕ್ ನಂತಹ ಪ್ರಾಣಿಗಳು ಎಲ್ಲಿ ಮೇಯುತಿದ್ದವೋ ಆ ಜಾಗದ ಮಣ್ಣಿನಲ್ಲಿನ ಇಂಗಾಲದ ಪ್ರಮಾಣಕ್ಕೆ ಹೋಲಿಸಿದರೆ ಪ್ರಾಣಿಗಳು ಮೇಯಲಾಗದ ಬೇಲಿ ಹಾಕಿದ ಭಾಗದ ಮಣ್ಣಿನಲ್ಲಿನ ಇಂಗಾಲದ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 30ರಿಂದ 40 ರಷ್ಟು ಏರುಪೇರು ಕಂಡುಬಂದಿತು. ಇದಕ್ಕೆ ಬದಲಾಗಿ ಪ್ರಾಣಿಗಳು ಮೇಯುತ್ತಿದ್ದ ಪ್ರದೇಶದಲ್ಲಿನ ಮಣ್ಣಿನಲ್ಲಿ ಇಂಗಾಲದ ಸ್ಥಿರತೆ ಒಂದೇ ಸಮನೆ ಹೆಚ್ಚುತ್ತಿರುವುದು ಕಂಡುಬಂದಿತು.‌ ಈ ಏರುಪೇರಿನ ಹಿಂದಿನ ಬಹು ಮುಖ್ಯ ಕಾರಣವು ಸಾರಜನಕ ಆಗಿತ್ತು. ಸಾರಜನಕವು ಮಣ್ಣಿನ ಸ್ಥಿತಿಗತಿಯನ್ನು ಆಧರಿಸಿ  ಅದರಲ್ಲಿನ ಇಂಗಾಲವನ್ನು ಸ್ಥಿರಗೊಳಿಸುತ್ತದೆ ಅಥವಾ ಅಸ್ಥಿರಗೊಳಿಸುತ್ತದೆ. ಆದರೆ ಯಾಕ್ನಂತಹ ಮೇವು ಪ್ರಾಣಿಗಳು ಅಂತಹ ಜಾಗದಲ್ಲಿ ಇಂಗಾಲದ ಸ್ಥಿರತೆ ಮೂಡಿಸುವ ರೀತಿಯ ಚಟುವಟಿಕೆಗಳಿಗೆ  ಕಾರಣವಾಗಬಹುದು ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. 

 ಈ ಮುಂಚೆ ನಡೆಸಲಾಗಿದ್ದ ಅಧ್ಯಯನಗಳಲ್ಲಿ  ಮಣ್ಣಿನಲ್ಲಿನ ಇಂಗಾಲ ಮತ್ತು ಸಾರಜನಕದ ಪ್ರಮಾಣಗಳನ್ನು ದೀರ್ಘಾವಧಿಯ ನಂತರ ಅಳೆಯಲಾಗುತ್ತಿತ್ತು. ಇಂಗಾಲದ ಶೇಖರಣೆ ಅಥವಾ ನಷ್ಟವು ನಿಧಾನ ಪ್ರಕ್ರಿಯೆ ಎಂಬ ಅಭಿಪ್ರಾಯವಿದ್ದುದು ಇದಕ್ಕೆ ಕಾರಣ ಎನ್ನುತ್ತಾರೆ ಡಿಸಿಸಿಸಿ ಪಿಎಚ್.ಡಿ. ವಿದ್ಯಾರ್ಥಿ ಹಾಗೂ ಈ ಅಧ್ಯಯನ ವರದಿಯ ಮೊದಲ ಲೇಖಕ ದಿಲೀಪ್ ಜಿಟಿ ನಾಯ್ಡು. ಆದರೆ ತಾವು ಒಂದೇ ವರ್ಷದೊಳಗಿನ ಅವಧಿಯಲ್ಲಿ ನಡೆಸಿದ ಅಧ್ಯಯನಗಳಲ್ಲಿ ಬೆಳಕಿಗೆ ಬಂದಿದ್ದೇ ಬೇರೆ ಸಂಗತಿ ಎಂದು ಅವರು ತಿಳಿಸುತ್ತಾರೆ. ಆದರೆ ದೊಡ್ಡ ಸಸ್ಯಾಹಾರಿ ಸಸ್ತನಿ ಪ್ರಾಣಿಗಳು ಮಣ್ಣಿನ ಮೇಲೆ ತಮ್ಮದೇ ಪ್ರಭಾವ ಬೀರುವುದರಿಂದ ಅಂತಿಮವಾಗಿ ಈ ಏರುಪೇರುಗಳು ಹವಾಮಾನದ ಮೇಲೆ ಕೂಡ ಪ್ರಭಾವ ಬೀರಬಲ್ಲವು. 

ಭೂಮಿಯ ಮೇಲ್ಮೈನ ಶೇಕಡ 40ರಷ್ಟು ಪ್ರದೇಶವು ಪ್ರಾಣಿಗಳ ಮೇವಿಗೆ ಸೂಕ್ತವಾದ ಪ್ರದೇಶವಾಗಿದೆ. ಆದ್ದರಿಂದ ಮಣ್ಣಿನಲ್ಲಿನ ಇಂಗಾಲವನ್ನು ಸ್ಥಿರವಾಗಿ ಇರಿಸಲು ಸಹಕಾರಿಯಾದ ಸಸ್ಯಹಾರಿ ಪ್ರಾಣಿಗಳನ್ನು ಸಂರಕ್ಷಿಸುವುದು ಹವಾಮಾನ ವೈಪರೀತ್ಯದ ಹೊಡೆತವನ್ನು ಮಿತಗೊಳಿಸಲು ಪ್ರಮುಖವಾದ ಅಂಶವಾಗಿರುತ್ತದೆ ಎಂಬುದು ತಜ್ಞರ  ಪ್ರತಿಪಾದನೆಯಾಗಿದೆ. 

ಸಸ್ಯಹಾರಿ ಸಾಕು ಪ್ರಾಣಿಗಳು ಹಾಗೂ ವನ್ಯಜೀವಿ ಸಸ್ಯಹಾರಿ ಪ್ರಾಣಿಗಳು, ಇವೆರಡೂ, ಮಣ್ಣಿನಲ್ಲಿನ ಇಂಗಾಲದ ಪ್ರಮಾಣದ ಮೇಲೆ ಉಂಟುಮಾಡುವ ಪರಿಣಾಮಗಳ ಮೂಲಕ ಹವಾಮಾನ ವೈಪರೀತ್ಯದ ಮೇಲೆ ತಮ್ಮದೇ ಪ್ರಭಾವ ಬೀರುತ್ತವೆ ಎಂದು ವಿವರಿಸುತ್ತಾರೆ ಸಿಇಎಸ್ ನ  ಪಿಎಚ್.ಡಿ. ಹಳೆಯ ವಿದ್ಯಾರ್ಥಿ ಹಾಗೂ ಅಧ್ಯಯನದ ಮತ್ತೊಬ್ಬ ಲೇಖಕ ಶಮಿಕ್ ರಾಯ್. ಬಾಗ್ಚಿ ಮತ್ತು ತಂಡದವರು ಮೇಕೆ ಹಾಗೂ ಕುರಿಗಳಂತಹ ಸಸ್ಯಹಾರಿ ಸಾಕು ಪ್ರಾಣಿಗಳು ಹಾಗೂ ಅವುಗಳ ವನ್ಯ ಪ್ರಭೇದದ ಪ್ರಾಣಿಗಳು ಮೇವಿನ ಪರಿಸರದ ಮೇಲೆ ವಿಭಿನ್ನ ಪರಿಣಾಮಗಳನ್ನು ಉಂಟುಮಾಡಲು ಕಾರಣಗಳೇನು ಎಂಬುದನ್ನು ಮುಂದುವರಿದ ಸಂಶೋಧನೆಯಲ್ಲಿ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸಸ್ಯಾಹಾರಿ ಸಾಕುಪ್ರಾಣಿಗಳು ಹಾಗೂ ಸಸ್ಯಾಹಾರಿ ವನ್ಯಪ್ರಾಣಿಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಆದರೂ ಅವು ಹೇಗೆ ಸಸ್ಯಗಳು ಹಾಗೂ ಮಣ್ಣಿನ ಮೇಲೆ ವಿಭಿನ್ನ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ಅರ್ಥೈಸಿಕೊಂಡರೆ ಇನ್ನಷ್ಟು ಪರಿಣಾಮಕಾರಿಯಾಗಿ ಮಣ್ಣಿನಲ್ಲಿನ ಇಂಗಾಲದ ಸಂರಕ್ಷಣೆ ಸಾಧ್ಯವಾಗಬಹುದು ಎಂದು ರಾಯ್ ಅಭಿಪ್ರಾಯಪಡುತ್ತಾರೆ.

ಉಲ್ಲೇಖ:

ಡಿ ಜಿ ಟಿ ನಾಯ್ಡು, ಎಸ್. ರಾಯ್, ಎಸ್. ಬಾಗ್ಚಿ  Loss of grazing by large mammalian herbivores can destabilize the soil carbon pool. Proceedings of the National Academy of sciences 119 (43), e 2211317119 (2022) 

https://doi.org/10.1073/pnas.22113171 19 

 ಸಂಪರ್ಕಿಸಿ: 

ಸುಮಂತ ಬಾಗ್ಚಿ 
ಸಹ ಪ್ರಾಧ್ಯಾಪಕರು 
ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿಇಎಸ್), 
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) 
sbagchi@iisc.ac.in 
080-22933528 

 ಪತ್ರಕರ್ತರ ಗಮನಕ್ಕೆ 

1) ಈ ಪತ್ರಿಕಾ ಪ್ರಕಟಣೆಯ ಯಾವುದಾದರೂ ಪಠ್ಯವನ್ನು ಯಥಾವತ್ತಾಗಿ ಪ್ರಕಟಿಸಿದರೆ ದಯವಿಟ್ಟು,  ‘ಕೃಪೆ- ಐಐಎಸ್ ಸಿ ಪತ್ರಿಕಾ ಪ್ರಕಟಣೆಯ’ ಎಂದು ಉಲ್ಲೇಖಿಸಿ. 

 2) ಐಐಎಸ್‌ಸಿ ಪತ್ರಿಕಾ ಪ್ರಕಟಣೆಗಳ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.