ವಿಪ್ರೊ ಜಿಇ ಹೆಲ್ತ್‌ಕೇರ್‌- ಐ.ಐ.ಎಸ್‌ಸಿ. ಸಹಭಾಗಿತ್ವ: ಹೆಲ್ತ್‌ಕೇರ್‌ ನಾವೀನ್ಯತಾ ಪ್ರಯೋಗಾಲಯ ಸ್ಥಾಪನೆ


ಉದ್ಯಮ- ಶೈಕ್ಷಣಿಕ ವಲಯದ ಈ ಸಹಭಾಗಿತ್ವವು ಕೃತಿಕ ಬುದ್ಧಿಮತ್ತೆ/ ಮಷೀನ್‌ ಲರ್ನಿಂಗ್‌ ಅನ್ನು (ಎಐ/ಎಂಎಲ್‌) ಬಳಸಿಕೊಂಡು ಆರೋಗ್ಯ ಕ್ಷೇತ್ರದ ಅತ್ಯಂತ ಕಠಿಣ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ಗುರಿ ಹೊಂದಿದೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ವಿಪ್ರೊ ಜಿ.ಇ. ಹೆಲ್ತ್‌ಕೇರ್‌, ಇವು, ನಾವೀನ್ಯತೆ ಮತ್ತು ಸಂಶೋಧನೆಗಾಗಿ ಉನ್ನತ ಕೇಂದ್ರದ ಸ್ಥಾಪನೆಯನ್ನು ಇಂದು ಪ್ರಕಟಿಸಿದವು. ಹೊಸದಾಗಿ ಆರಂಭವಾಗಿರುವ, ʼವಿಪ್ರೊ ಜಿಇ ಹೆಲ್ತ್‌ಕೇರ್‌- ಕಾಂಪ್ಯುಟೇಷನಲ್‌ ಮತ್ತು ದತ್ತಾಂಶ ವಿಜ್ಞಾನಗಳ ಸಹಭಾಗಿತ್ವದ ವೈದ್ಯಕೀಯ ಮತ್ತು ಹೆಲ್ತ್‌ಕೇರ್‌ ಇಮೇಜಿಂಗ್‌ʼ  ಕೇಂದ್ರವು ಬೆಂಗಳೂರಿನ ಐ.ಐ.ಎಸ್‌.ಸಿ. ಆವರಣದಲ್ಲಿ ಕಾರ್ಯನಿರ್ವಹಿಸಲಿದೆ.

ಐ.ಐ.ಎಸ್‌.ಸಿ.ಯ ಕಾಂಪ್ಯುಟೇಷನಲ್‌ ಮತ್ತು ದತ್ತಾಂಶ ವಿಜ್ಞಾನಗಳ (ಸಿಡಿಎಸ್‌) ವಿಭಾಗದಲ್ಲಿರುವ ಈ ಕೇಂದ್ರವು ರೋಗ ದೃಢೀಕರಣಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಸ್ತರದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ. ಇದು, ಡೀಪ್‌ ಲರ್ನಿಂಗ್‌ ತಾಂತ್ರಿಕತೆ, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್‌ ಇಂಟರ್‌ಫೇಸ್‌ಗಳನ್ನು ಆಧರಿಸಿ ಕಾರ್ಯನಿರ್ವಹಿಸಲಿದೆ. ಆ ಮೂಲಕ, ಛಾಯಾ ದೃಶ್ಯಗಳನ್ನು ತ್ವರಿತವಾಗಿ ಹಾಗೂ ಸುಧಾರಿತವಾದ ರೀತಿಯಲ್ಲಿ ಸೆರೆ ಹಿಡಿದು ಅತ್ಯಂತ ಆಧುನಿಕ ವಿಧಾನಗಳೊಂದಿಗೆ ರೋಗ ದೃಢೀಕರಣವನ್ನು ಮತ್ತು ವೈದ್ಯಕೀಯ ಛಾಯಾದೃಶ್ಯ ಮರುಸಂರಚನಾ ತಾಂತ್ರಿಕತೆಗಳನ್ನು ಸಾಧ್ಯವಾಗಿಸಲಿದೆ. ಇದು ಸದ್ಯಕ್ಕೆ, ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಐ.ಐ.ಎಸ್‌.ಸಿ.ಯ ಮೂವರು ಬೋಧಕ ಸಿಬ್ಬಂದಿಯೊಂದಿಗೆ ಆರಂಭಗೊಂಡಿದೆ. ಚಿಕಿತ್ಸಕ ವೈದ್ಯರೊಂದಿಗೆ ಹಾಗೂ ವಿಪ್ರೊ ಜಿಇ ಹೆಲ್ತ್‌ಕೇರ್‌ನೊಂದಿಗೆ ಕಾರ್ಯನಿರ್ವಹಿಸುವ ಈ ಪ್ರಯೋಗಾಲಯವು ರೋಗಿಗಳಿಗೆ ನೀಡಲಾಗುವ ಚಿಕಿತ್ಸಾ ಫಲಿತಾಂಶವನ್ನು ಸುಧಾರಿಸುವುದಕ್ಕೆ ಪೂರಕವಾಗಿ ಕಾಂಪ್ಯುಟೇಷನಲ್‌ ಮಾದರಿಗಳನ್ನು ಸಂಯೋಜನೆಗೊಳಿಸಲಿದೆ.

ಈ ಸಹಭಾಗಿತ್ವದಲ್ಲಿ ನಡೆಯಲಿರುವ ಸಂಶೋಧನೆಗಳು ಹೀಗಿವೆ: ೧) ಲಂಗ್‌ ಅಲ್ಟ್ರಾಸೌಂಡ್‌ ಮತ್ತು ಸಿ.ಟಿ. ಇಮೇಜ್‌ಗಳಲ್ಲಿ ಕೋವಿಡ್‌-೧೯ ಅಸಹಜತೆಗಳ ವರ್ಗೀಕರಣಕ್ಕಾಗಿ ಮತ್ತು ಸೆಗ್ಮೆಂಟೇಷನ್‌ಗಾಗಿ ಲೈಟ್‌-ವೈಟ್‌ ಡೀಪ್‌ ಲರ್ನಿಂಗ್‌ ಮಾದರಿಗಳು ೨) ನೇತ್ರ ರೋಗಶಾಸ್ತ್ರದಲ್ಲಿ  ಸ್ಪೆಕ್ಟ್ರಲ್‌ ಡೊಮೈನ್‌ ಆಪ್ಟಿಕಲ್‌ ಕೊಹೆರೆನ್ಸ್‌ ಟೋಮೋಗ್ರಫಿ ಇಮೇಜ್‌ಗಳನ್ನು ಸುಧಾರಿಸಲು ಹಾಗೂ ವರ್ಗೀಕರಿಸಲು ಡೀಪ್‌ ಲರ್ನಿಂಗ್‌ ಮಾದರಿಗಳು ೩) ಡೀಪ್‌ ಲರ್ನಿಂಗ್‌ ಆಧಾರಿತ ವೈದ್ಯಕೀಯ ಛಾಯಾದೃಶ್ಯ ಮರುಸಂರಚನಾ ವಿಧಾನಗಳು ಮತ್ತು ೪) ೩-ಡಿ ವಾಲ್ಯೂಮ್‌ ದತ್ತಾಂಶವನ್ನು ಬಳಸಿಕೊಳ್ಳುವುದು.

ಐ.ಐ.ಎಸ್‌.ಸಿ.ಯು ಈ ಪ್ರಯೋಗಾಲಯಕ್ಕೆ ಸೂಕ್ತವೆನ್ನಿಸುವ ರೀತಿಯಲ್ಲಿ ಒಳಾಂಗಣವನ್ನು ವಿನ್ಯಾಸಗೊಳಿಸುವ ಜೊತೆಗೆ ಪವರ್‌ ಬ್ಯಾಕಪ್‌, ಅಂತರ್ಜಾಲ ಸಂಪರ್ಕ, ಹವಾ ನಿಯಂತ್ರಣ ವ್ಯವಸ್ಥೆ ಇತ್ಯಾದಿಯನ್ನು ಒದಗಿಸಲಿದೆ. ದೇಶದಲ್ಲಿ ೩೦ ವರ್ಷಗಳಿಂದ ಸೇವೆಯಲ್ಲಿ ತೊಡಗಿರುವ ವಿಪ್ರೊ ಜಿಇ ಹೆಲ್ತ್‌ಕೇರ್‌, ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ ಒಂದಾವರ್ತಿ ಅನುದಾನವನ್ನು ನೀಡಲಿದೆ. ಈ ಅನುದಾನದ ನೆರವಿನಿಂದ ಪ್ರಯೋಗಾಲಯಕ್ಕೆ ಅಗತ್ಯವಾದ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ಗಳನ್ನು ಅನುಸ್ಥಾಪಿಸಲಾಗುವುದು. ಅತ್ಯಾಧುನಿಕ ಡೀಪ್‌ ಲರ್ನಿಂಗ್‌ ಸರ್ವರ್‌ಗಳು, ಉತ್ಕೃಷ್ಟ ದೃಗ್ಗೋಚರ ಕಾರ್ಯನೆಲೆ (ವಿಷುಯಲೈಸೇಷನ್‌ ವರ್ಕ್‌ಸ್ಟೇಷನ್‌), ಎಲ್‌ಇಡಿ ಪರದೆಗಳು ಮತ್ತು ಪೈಟಾರ್ಚ್‌, ಟೆನ್ಸಾರ್‌ ಫ್ಲೋ, ಕೇರಸ್‌ ಹಾಗೂ ಪೈಚಾರ್ಮ್‌ನಂತಹ ತಂತ್ರಾಂಶಗಳನ್ನು ಇದು ಒಳಗೊಳ್ಳುತ್ತದೆ.

 “ನಿಖರತೆ ಸಾಧಿಸಲು ಸಹಕಾರಿಯಾಗುವ ಡಿಜಿಟಲ್‌ ತಾಂತ್ರಿಕತೆಗಳಿಂದಾಗಿ ಆರೋಗ್ಯಸೇವಾ ಕ್ಷೇತ್ರವು ಪರಿವರ್ತನೆಯ ಹಾದಿಯಲ್ಲಿದೆ. ಉದ್ಯಮ ಹಾಗೂ ಶೈಕ್ಷಣಿಕ ವಲಯದ ಸಹಭಾಗಿತ್ವದಲ್ಲಿ ಸೂಕ್ತ ಪರ್ಯಾವರಣವನ್ನು ಕಲ್ಪಿಸುವ ಮೂಲಕ ಈ ಪರಿವರ್ತನೆಯನ್ನು ತ್ವರಿತಗೊಳಿಸಬಹುದು. ಐ.ಐ.ಎಸ್‌.ಸಿ.ಯಲ್ಲಿ ಸ್ಥಾಪಿಸಲಾಗಿರುವ ಈ ನಾವೀನ್ಯತಾ ಪ್ರಯೋಗಾಲಯವು ಆರೋಗ್ಯಸೇವಾ ಕ್ಷೇತ್ರಕ್ಕೆ ವಿಶಿಷ್ಟವಾದ ಡಿಜಿಟಲ್‌ ಪರಿಹಾರಗಳನ್ನು ಸೃಷ್ಟಿಸಲು ನೆರವಾಗಲಿದೆ. ಇವುಗಳನ್ನು ಎಡಿಸನ್‌ ವೇದಿಕೆಯೊಂದಿಗೆ ಹಾಗೂ ಚತುರ ಸಾಧನಗಳೊಂದಿಗೆ ಸಂಯೋಜಿಸಲಾಗುವುದು. ಇದರಿಂದಾಗಿ, ಕಠಿಣ ಆರೋಗ್ಯಸೇವಾ ಸವಾಲುಗಳನ್ನು ಪರಿಹರಿಸಲು ಚಿಕಿತ್ಸಕರಿಗೆ ಅನುಕೂಲವಾಗುತ್ತದೆ” ಎನ್ನುತ್ತಾರೆ ಜಿಇ ಹೆಲ್ತ್‌ಕೇರ್‌ನ ದಕ್ಷಿಣ ಏಷ್ಯಾದ ಮುಖ್ಯ ತಾಂತ್ರಿಕ ಅಧಿಕಾರಿ ದಿಲೀಪ್‌ ಮಂಗ್ಸುಲಿ.

 “ಖಾಸಗಿ-ಸಾರ್ವಜನಿಕ ಸಹಭಾಗಿತ್ವವು ಐ.ಐ.ಎಸ್‌.ಸಿ.ಯಲ್ಲಿ ಮೊದಲಿನಿಂದಲೂ ಹಾಸುಹೊಕ್ಕಾಗಿದೆ. ವಿಪ್ರೋ ಜಿಇ ಹೆಲ್ತ್‌ಕೇರ್‌ ಅನುದಾನದೊಂದಿಗೆ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕಾಗಿ ಈ ಪ್ರಯೋಗಾಲಯ ಸ್ಥಾಪನೆಯಾಗಿರುವುದು ಡಿಜಿಟಲ್‌ ತಾಂತ್ರಿಕತೆಗಳ ಈ ಸಂದರ್ಭದಲ್ಲಿ ಅತ್ಯಂತ ಸಕಾಲಿಕವಾಗಿದೆ. ಪ್ರಯೋಗಾಲಯದಲ್ಲಿನ ಸಂಶೋಧನೆಯನ್ನು ರೋಗಿಗಳ ಚಿಕಿತ್ಸೆಯ ಭಾಗವಾಗುವಂತೆ ಮಾಡುವುದಕ್ಕೆ ಆದ್ಯತೆ ಕೊಡಲಾಗುವುದು. ಈ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುವುದಕ್ಕೆ ವಿಪ್ರೊ ಜಿಇ ಹೆಲ್ತ್‌ಕೇರ್‌ ಅತ್ಯುತ್ತುಮ ಪಾಲುದಾರನಾಗಲಿದೆ. ಮುಂಬರುವ ದಿನಗಳಲ್ಲಿ ಸಂಶೋಧನಾ ಕಾರ್ಯಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು” ಎನ್ನುತ್ತಾರೆ ಈ ಪ್ರಯೋಗಾಲಯದ ಸಂಚಾಲಕರೂ ಆದ ಐಐಎಸ್‌ಸಿ ಅಭಿವೃದ್ಧಿ ಹಾಗೂ ಅಲ್ಯುಮ್ನಿ ಕಾರ್ಯಗಳ ಕಚೇರಿಯ ಮುಖ್ಯಸ್ಥರಾದ ಪ್ರೊ.ಫಣೀಂದ್ರ ಯಲವರ್ತಿ.

ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ಉನ್ನತ ಶಿಕ್ಷಣ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಮುಂಚೂಣಿ ಸಂಸ್ಥೆಯಾದ ಐಐಎಸ್‌ಸಿ ಹಾಗೂ ಜಿಇ ಹೆಲ್ತ್‌ಕೇರ್‌ಗಳು ಬಹುದೀರ್ಘಕಾಲದಿಂದ ಕಾರ್ಯಬಾಂಧವ್ಯ ಹೊಂದಿವೆ. ಇದರಿಂದ, ಐಐಎಸ್‌ಸಿ ಬೋಧಕರ ಹಾಗೂ ವಿದ್ಯಾರ್ಥಿಗಳ ಮತ್ತು / ವಿಪ್ರೊ ಜಿಇ ಉದ್ಯೋಗಿಗಳ ಸಂಶೋಧನೆ ಕಾರ್ಯಯೋಜನೆಗಳು, ಸ್ನಾತಕೋತ್ತರ ಕೋರ್ಸ್‌ಗಳಿಗೆ ಹಾಗೂ ಇಂಟರ್ನ್‌ಷಿಪ್‌ಗಳಿಗೆ ಫೆಲೋಷಿಪ್‌ಗಳ ಪ್ರಾಯೋಜಕತ್ವ,  ವಿಪ್ರೊ ಜಿಇ ಉದ್ಯೋಗಿಗಳಿಗೆ ಐಐಎಸ್‌ಸಿಯಲ್ಲಿ ಪಿಎಚ್‌.ಡಿ. ವ್ಯಾಸಂಗ ಮಾಡಲು ಅವಕಾಶ ಸೇರಿದಂತೆ ಹಲವಾರು ಅನುಕೂಲಗಳಾಗಲಿವೆ. ಹೊಸದಾಗಿ ಹೊರಹೊಮ್ಮುತ್ತಿರುವ ಡಿಜಿಟಲ್‌ ಆರೋಗ್ಯ ಕ್ಷೇತ್ರದಲ್ಲಿನ ನಮ್ಮ ಬಾಂಧವ್ಯವನ್ನು ಈ ಪ್ರಯೋಗಾಲಯವು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದೂ ಅವರು ಹೇಳುತ್ತಾರೆ.

ಜಿಇ ಹೆಲ್ತ್‌ಕೇರ್‌ ಬಗ್ಗೆ

ಜಿ.ಇ. ಸಮೂಹದ (NYSE: GE) ಜಿಇ ಹೆಲ್ತ್‌ಕೇರ್‌, ೧೬.೭ ಶತಕೋಟಿ ಡಾಲರ್‌ಗಳ ವಹಿವಾಟು ನಡೆಸುವ ಘಟಕವಾಗಿದೆ.  ಇದು, ವೈದ್ಯಕೀಯ ತಂತ್ರಜ್ಞಾನಗಳನ್ನು ಹಾಗೂ ಡಿಜಿಟಲ್‌ ಪರಿಹಾರಗಳನ್ನು ಆವಿಷ್ಕರಿಸುವುದರಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಚತುರ ಸಾಧನಗಳು, ದತ್ತಾಂಶ ವಿಷ್ಲೇಷಣೆ, ಆನ್ವಯಿಕತೆಗಳು ಮತ್ತು ಸೇವೆಗಳ ಮೂಲಕ ಹಾಗೂ ಎಡಿಸನ್‌ ಇಂಟೆಲಿಜೆನ್ಸ್‌ ವೇದಿಕೆಯ ಬೆಂಬಲದೊಂದಿಗೆ ವೈದ್ಯರಿಗೆ ತ್ವರಿತವಾಗಿ ಕರಾರುವಾಕ್ಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಆರೋಗ್ಯಸೇವಾ ಉದ್ಯಮದಲ್ಲಿ ೧೦೦ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದು, ಪ್ರಪಂಚದಾದ್ಯಂತ ಸುಮಾರು ೫೦,೦೦೦ ಉದ್ಯೋಗಿಗಳನ್ನು ಹೊಂದಿದೆ. ಚಿಕಿತ್ಸಾ ನಿಖರತೆ, ಆರೋಗ್ಯಸೇವೆಗಳ ಡಿಜಿಟಲೀಕರಣ, ರೋಗಿಗಳಲ್ಲಿ ಚಿಕಿತ್ಸಾ ಫಲಿತಾಂಶದ ಯಶಸ್ಸನ್ನು ಹೆಚ್ಚಿಸುವುದು, ವೈದ್ಯಕೀಯ ಸಂಶೋಧಕರಿಗೆ ಪೂರಕವಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಇತ್ಯಾದಿ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ FacebookTwitterLinkedin ಮತ್ತು Insights  ಅಥವಾ ವೆಬ್‌ಸೈಟ್‌ www.gehealthcare.in/ ಗೆ ಭೇಟಿ ಕೊಡಬಹುದು.

 

ಐಐಎಸ್‌ಸಿ ಬಗ್ಗೆ:

ಉದ್ಯಮಿ ಜಮಷೇಟ್‌ಜಿ ನಸ್ಸರ್‌ವಾಂಜಿ ಟಾಟಾ, ಆಗಿನ ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವಿನ ದೂರದೃಷ್ಟಿಯ ಪಾಲುದಾರಿಕೆಯೊಂದಿಗೆ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ೧೯೦೯ರಲ್ಲಿ ಸ್ಥಾಪನೆಗೊಂಡಿತು. ಸ್ಥಾಪನೆಯಾಗಿ ೧೧೧ ವರ್ಷಗಳನ್ನು ಕಂಡಿರುವ ಈ ಸಂಸ್ಥೆಯು ಭಾರತದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆಗಳ ಹಾಗೂ ಅಧ್ಯಯನದ ಅಗ್ರಗಣ್ಯ ಸಂಸ್ಥೆಯಾಗಿದೆ. ಆರಂಭದಿಂದಲೂ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ಮೂಲಭೂತ ಅಧ್ಯಯನದ ಜೊತೆಗೆ, ಸಂಶೋಧನೆಗಳ ಆನ್ವಯಿಕತೆಗಳನ್ನು ಔದ್ಯೋಗಿಕ ಹಾಗೂ ಸಾಮಾಜಿಕ ಉಪಯೋಗಕ್ಕೆ ಬಳಸುವುದರ ಬಗೆಗೂ ಒತ್ತು ನೀಡುತ್ತಾ ಬಂದಿದೆ.

ಮಾಧ್ಯಮ ಸಂಪರ್ಕ:

ಎಸ್‌.ರಾಜನ್‌, ಮುಖ್ಯಸ್ಥರು- ಕಾರ್ಪೊರೇಟ್‌ ಕಮ್ಯುನಿಕೇಷನ್ಸ್‌, ಜಿಇ ಹೆಲ್ತ್‌ಕೇರ್‌, ದಕ್ಷಿಣ ಏಷ್ಯಾ Rajan.S@ge.com / +91 9930109372

ಶಂಖದೀಪ ತಾಲೂಕ್‌ದಾರ್‌, ಜೆನೆಸಿಸ್‌ ಬಿಸಿಡಬ್ಲ್ಯು Shankhadipa.talukdar@genesis-bcw.com/ +91 9999956546

——-೦೦೦——