ಸೋಂಕಿನ ಮೂಲ ಬ್ಯಾಕ್ಟೀರಿಯಾವೋ ಅಥವಾ ವೈರಾಣುವೋ? ವ್ಯತ್ಯಾಸ ತಿಳಿಸುವ ರಕ್ತ ಆಧಾರಿತ ಜೈವಿಕ ಸೂಚಕ ಅಭಿವೃದ್ಧಿ


  • ದೇಬಯಾನ್‌ ದಾಸ್‌ಗುಪ್ತ (ಲೇಖಕರುನೀಡಿದಮಾಹಿತಿಆಧರಿಸಿ)

 

ತೀವ್ರವಾಗಿ ಕಾಡುತ್ತಿರುವ ಸೋಂಕಿನ ಮೂಲ ಬ್ಯಾಕ್ಟೀರಿಯಾವೋ ಮತ್ತು ವೈರಾಣುವೋ ಎಂಬುದನ್ನು ದೃಢೀಕರಿಸಿಕೊಳ್ಳಲು ಸಾಧ್ಯವಾಗಿಸುವ ಆ ಣ್ವಿಕ ಜೈವಿಕ ಸೂಚಕಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ)ಯ ಹೊಸ ಅಧ್ಯಯನವೊಂದರಲ್ಲಿ ಪತ್ತೆ ಹಚ್ಚಲಾಗಿದೆ. ಈ ಜೈವಿಕ ಸೂಚಕಗಳು ರಕ್ತದಲ್ಲಿ ಕಂಡು ಬರುವ ವಿಶಿಷ್ಟ ಮೆಸ್ಸೆಂಜರ್‌  ಆರ್‌ಎನ್‌ಎ(mRNA) ಅಣುಗಳಾಗಿವೆ.  ಈ ಅಣುಗಳ ಪ್ರಮಾಣದಲ್ಲಿನ ವ್ಯತ್ಯಾಸವು ಸೋಂಕಿನ ಮೂಲವು ವೈರಾಣುವೋ ಅಥವಾ ಬ್ಯಾಕ್ಟೀರಿಯಾವೋ ಎಂಬುದನ್ನು ಹೆಚ್ಚು ನಿಖರತೆಯೊಂದಿಗೆ ಗುರುತಿಸಲಿದೆ.

ಸೋಂಕು ಕಾಯಿಲೆಯೊಂದು ಮನುಷ್ಯನ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಎಷ್ಟರ ಮಟ್ಟಿಗೆ ಹಾನಿಯುಂಟು ಮಾಡಬಹುದು ಎಂಬುದಕ್ಕೆ ಈಗಿನ ಕೋವಿಡ್‌ — 19 ಸನ್ನಿವೇಶವು ನಿದರ್ಶನವಾಗಿದೆ.

ಇಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮುನ್ನ ತಪ್ಪಾಗಿ ರೋಗ ದೃಢೀಕರಣಗೊಳ್ಳುವ ಸಾಧ್ಯತೆಯು ದೊಡ್ಡ  ಸವಾಲಾಗಿದೆ. ಇದರಿಂದಾಗಿ ಚಿಕಿತ್ಸೆಯಲ್ಲಿ ʼಪರೀಕ್ಷೆ ಮತ್ತು ಪ್ರಯೋಗʼಗಳನ್ನು (ಟ್ರಯಲ್‌ ಅಂಡ್‌ ಎರರ್‌) ಮಾಡುವುದು ಅನಿವಾರ್ಯವಾಗುವ ಜೊತೆಗೆ ಪ್ರತಿ ಜೈವಿಕ ಔಷಧಗಳ ಅಸಮರ್ಪಕ ಬಳಕೆ ಮಾಡಬೇಕಾಗುತ್ತದೆ. ಈ ಎಲ್ಲಾ ತೊಡಕುಗಳನ್ನೂ ನಿವಾರಿಸಬೇಕೆಂದರೆ ಸೋಂಕಿನ ಬಗೆ ಯಾವುದೆಂಬುದನ್ನು ನಿರ್ಧರಿಸುವುದು ಮಹತ್ವದ ಅಂಶವಾಗಿರುತ್ತದೆ.

ಮನುಷ್ಯ ದೇಹವು ಬ್ಯಾಕ್ಟೀರಿಯಾ ಸೋಂಕು ಮತ್ತು ವೈರಾಣು ಸೋಂಕಿಗೆ ಪ್ರತಿಕ್ರಿಯಿಸುವ ರೀತಿಯಲ್ಲಿ ವ್ಯತ್ಯಾಸವಿರುತ್ತದೆ. ಇದು ಸೋಂಕಿನ ಬಗೆಯನ್ನು ಆಧರಿಸಿ, ರಕ್ತದಲ್ಲಿ, ವಿಭಿನ್ನ ಬಗೆಯ ಅಣುಗಳನ್ನು, ಅಂದರೆ, ವಿಭಿನ್ನ ಬಗೆಯ ಪ್ರೋಟೀನ್‌ಗಳ ಮತ್ತು ಆರ್‌.ಎನ್‌.ಎ.ಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ವ್ಯತ್ಯಾಸವನ್ನು ತಿಳಿಯದೇ,  ಪ್ರತಿ ಜೈವಿಕ ಔಷಧಗಳನ್ನು ಕೊಟ್ಟರೆ, ಅದು ಬ್ಯಾಕ್ಟೀರಿಯಾ ಮೂಲದ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆಯೇ ಹೊರತು,  ವೈರಾಣು ಮೂಲದ ಸೋಂಕಿನ ವಿರುದ್ಧ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗೆ, ಸೋಂಕಿನ ಮೂಲವನ್ನು ದೃಢ ಪಡಿಸಿಕೊಳ್ಳದೇ, ಎಲ್ಲಾ ಬಗೆಯ ಸೋಂಕುಗಳಿಗೂ ಪ್ರತಿ ಜೈವಿಕ ಔಷಧಗಳನ್ನು ಕೊಡುವುದರಿಂದ ಹೊಸ ಚಹರೆಯ ಬ್ಯಾಕ್ಟೀರಿಯಾಗಳ ಸೃಷ್ಟಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲದೇ, ಈ ಹೊಸ ಚಹರೆಯ ಬ್ಯಾಕ್ಟೀರಿಯಾಗಳು ಯಾವುದೇ ಬಗೆಯ ಪ್ರತಿ ಜೈವಕಕ್ಕೂ ಜಗ್ಗದಂತಹ ಪ್ರತಿರೋಧಕತೆಯನ್ನು ಹೊಂದಿರುತ್ತವೆ. “ರೋಗದ ತಪ್ಪಾದ ದೃಢೀಕರಣದಿಂದಾಗಿ ವೈರಾಣು ಮೂಲದ ಸೋಂಕುಗಳಿಗೂ ಪ್ರತಿ ಜೈವಿಕ ಔಷಧಿಗಳನ್ನು ಕೊಡಲಾಗುತ್ತಿದೆ. ಈಗಿರುವ ವಿಧಾನಗಳಲ್ಲಿ, ಸೋಂಕಿನ ಮೂಲವು ಬ್ಯಾಕ್ಟೀರಿಯಾವೋ ಅಥವಾ ವೈರಾಣುವೋ ಎಂಬುದನ್ನು ದೃಢೀಕರಿಸಲು ತುಂಬಾ ಸಮಯ ಹಿಡಿಯುತ್ತದೆ” ಎಂದು ಜೀವರಾಸಾಯನಿಕ ವಿಭಾಗದ ಪ್ರೊಫೆಸರ್‌ ನಾಗಸುಮಚಂದ್ರ ಅವರ ಪ್ರಯೋಗಾಲಯದಲ್ಲಿ ಸಹಸಂಶೋಧಕರಾಗಿರುವ ಪ್ರಥಮ ಲೇಖಕರಾದ ಸತ್ಯಭಾರತಿ ರವಿಚಂದ್ರನ್‌ ಹೇಳುತ್ತಾರೆ.


VB 10, a new blood biomarker for differential diagnosis and recovery monitoring of acute viral and bacterial infections

ಸೋಂಕಿನ ಮೂಲವು ವೈರಾಣುವೋ ಅಥವಾ ಬ್ಯಾಕ್ಟೀರಿಯಾವೋ ಎಂಬುದನ್ನು ಶೀಘ್ರವಾಗಿ ಪತ್ತೆ ಹಚ್ಚಬಲ್ಲ ವಿಧಾನವು ಚಿಕಿತ್ಸಾಲಯಗಳಲ್ಲಿ ತುಂಬಾ ಪ್ರಯೋಜನಕ್ಕೆ ಬರುತ್ತದೆ. ಏಕೆಂದರೆ, ನಿಖರವಾದ ದೃಢೀಕರಣವೇ ಚಿಕಿತ್ಸೆಯ ಸಂದರ್ಭದಲ್ಲಿಅರ್ಧಯುದ್ಧವನ್ನು ಗೆದ್ದಂತೆ. ಇದರಿಂದಾಗಿ, ವೈದ್ಯರಿಗೆ ಗರಿಷ್ಠ ಪ್ರಯೋಜನವಾಗುವಂತೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿ ಜೈವಿಕ ಪ್ರತಿರೋಧಕತೆ ಬೆಳೆಯುವುದನ್ನೂ ತಡೆಯಬಹುದಾಗಿರುತ್ತದೆ.

ಇದೀಗ ʼಇ-ಬಯೋಮೆಡಿಸನ್‌ʼ (EBioMedicine) ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ಬಾಧಿತ ವ್ಯಕ್ತಿಗಳ ರಕ್ತದ ಟ್ರಾನ್ಸ್ಕ್ರಿಪ್ಟೋಮ್‌ಗಳು ಮತ್ತು ಅತ್ಯಾಧುನಿಕ ಕಾಂಪ್ಯುಟೇಷನಲ್‌ ಮಾಡೆಲಿಂಗ್‌ ಬಳಸಿ ಅಂತಹ ಪರೀಕ್ಷಾ ನಮೂನೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಟ್ರ್ಯಾನ್ಸ್ಕ್ರಿಪ್ಟೋಮ್‌ ಎಂದರೆ ಜೀವಕೋಶವೊಂದು ಪ್ರಕಟಗೊಳಿಸುವ ಎಂಆರ್‌ಎನ್‌ಎ ಅಣುಗಳ ಸಂಪೂರ್ಣ ಗಣವಾಗಿದೆ. ಮುಂದಿನ ತಲೆಮಾರಿನ ಅನುಕ್ರಮಣಿಕೆ(NGS- Next-Generation Sequencing) ತಾಂತ್ರಿಕತೆಗಳನ್ನು ಬಳಸಿ ಇದನ್ನು ಮಾಪನ ಮಾಡಬಹುದಾಗಿದೆ. ಸೋಂಕಿನ ಸಂದರ್ಭದಲ್ಲಿ ಪ್ರಚೋದಿತಗೊಳ್ಳುವ ನಿರ್ದಿಷ್ಟವಂಶವಾಹಿನಿಗಳಿದ್ದು, ಇವು ನಿರ್ದಿಷ್ಟ ಎಂ.ಆರ್‌.ಎನ್‌.ಎ.ಗಳ ಸಂಚಯಕ್ಕೆ, ಅಂದರೆ, ಅಂತಿಮವಾಗಿ, ಆಯಾ ಪ್ರೋಟೀನ್‌ಗಳ ಅಧಿಕ ಸಂಚಯಕ್ಕೆ ಎಡೆಮಾಡಿಕೊಡುತ್ತವೆ. ಬಾಧಿತ ವ್ಯಕ್ತಿಗಳ ಟ್ರ್ಯಾನ್ಸ್ಕ್ರಿಪ್ಟೋಮ್ಯಾಟಿಕ್‌ ದತ್ತಾಂಶವನ್ನು (ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳು ಹಾಗೂ ಚಿಕಿತ್ಸಕ ತಂಡದೊಂದಿಗಿನ ಸಹಭಾಗಿತ್ವದೊಂದಿಗೆ ಎಂ.ಎಸ್‌.ರಾಮಯ್ಯ ಕಾಲೇಜಿನಲ್ಲಿ ಸಂಗ್ರಹಿಸಲಾದ ಮಾದರಿಗಳಿಂದ ಪಡೆಯಲಾಗಿತ್ತು) ಬಳಸಿ, ವೈರಾಣು ಹಾಗೂ ಬ್ಯಾಕ್ಟೀರಿಯಾ ಸೋಂಕುಗಳಿಗೆ ವಿಭಿನ್ನ ಪ್ರಮಾಣದಲ್ಲಿ ಸೃಷ್ಟಿಯಾಗುವ ಹತ್ತು ವಂಶವಾಹಿನಿಗಳನ್ನು ಒಳಗೊಂಡ ಆರ್‌.ಎನ್‌.ಎ. ಮುದ್ರೆಯನ್ನು ಆವಿಷ್ಕರಿಸಲಾಗಿದೆ.

ಚಿಕಿತ್ಸಾಲಯದಲ್ಲಿಇದನ್ನು ಹೆಚ್ಚು ಉಪಯುಕ್ತವಾಗಿಸುವ ಸಲುವಾಗಿ VB10 ಎಂಬ ವಿಶಿಷ್ಟ ಮಾಪನಾಂಕ ಕ್ರಮವನ್ನು ಸಂಶೋಧಕರು ರೂಪಿಸಿದ್ದಾರೆ. ಇದರ ನೆರವಿನಿಂದ ರೋಗದೃಢೀಕರಣ,  ಸೋಂಕಿನ ನಂತರ ಚೇತರಿಕೆಯಹಂತ, ಸೋಂಕಿನ ತೀವ್ರತೆ, ಇವುಗಳನ್ನು ತಿಳಿಯಲು ಸಾಧ್ಯವಾಗುತ್ತದೆ.  ವಿವಿಧ ವಯೋಮಾನಗಳ ವರ್ಗಕ್ಕೆ ಸೇರಿದವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ,  ಸೋಂಕಿನ ಮೂಲವು ಬ್ಯಾಕ್ಟೀರೀಯಾವೋ ಅಥವಾ ವೈರಾಣುವೋ ಎಂಬುದನ್ನು VB10 ವಿಧಾನವು ನಿಖರವಾಗಿ ಗುರುತಿಸಿದೆ.

ಇದರಿಂದಾಗಿ, ಕೋವಿಡ್‌—19 ಹಾಗೂ ಬ್ಯಾಕ್ಟೀರಿಯಾ ಸೋಂಕಿನ ವ್ಯತ್ಯಾಸಗಳನ್ನೂ ತಿಳಿಯಬಹುದಾಗಿರುತ್ತದೆ. ಟ್ರ್ಯಾನ್ಸ್ಕ್ರಿಪ್ಟೋಮಿಕ್‌ ದತ್ತಾಂಶಗಳು ಮುಕ್ತವಾಗಿ ಲಭ್ಯವಿರುವ ವೈರಾಣು ಸೋಂಕುಗಳನ್ನು ಸಂಶೋಧಕರು ಅಧ್ಯಯನದ ವೇಳೆ ಅವಲೋಕಿಸಿದ್ದಾರೆ. ಇದರ ಫಲವಾಗಿ ವೈರಾಣು ಸೋಂಕುಗಳಿಗೆ VB10 ಪರೀಕ್ಷಾ ಮಾಪನಾಂಕ ಕ್ರಮವನ್ನು ರೂಪಿಸಲು ಸಾಧ್ಯವಾಗಿದೆ. ನಂತರ, ಇದನ್ನು ಕೋವಿಡ್‌—19 ಪ್ರಕರಣಗಳಿಗೆ ಲಭ್ಯವಾದ ಟ್ರ್ಯಾನ್ಸ್ಕ್ರಿಪ್ಟೋಮಿಕ್‌ ದತ್ತಾಂಶಗಳೊಂದಿಗೆ ಪರೀಕ್ಷೆಗೆ ಒಳಪಡಿಸಿದಾಗ, ಮಾಪನಾಂಕದಲ್ಲಿನ ವ್ಯತ್ಯಾಸವು, ಸಾರ್ಸ್‌-ಕೋವ್‌-2 ಸೋಂಕು ಹಾಗೂ ಸಾಮಾನ್ಯ ಬ್ಯಾಕ್ಟೀರಿಯಾದಿಂದ ಉಂಟಾದ ಶ್ವಾಸ ಸಂಬಂಧಿ ಸೋಂಕುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಯಶಸ್ವಿಯಾಗಿ.

ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನ ಚಿಕಿತ್ಸಕರು ಹಾಗೂ ಐಐಎಸ್‌ಸಿ ಸಂಶೋಧಕರಾದ ಅಮಿತ್‌ ಸಿಂಗ್‌, ದೀಪ್ಶಿಕಾ ಚಕ್ರವರ್ತಿ ಮತ್ತು ಕೆ.ಎನ್‌.ಬಾಲಾಜಿ ಅವರ ಸಹಯೋಗದಲ್ಲಿ ಈ ಅಧ್ಯಯನ ನಡೆದಿದೆ. ಈ ಸಂಶೋಧನೆಯನ್ನು ಪ್ರಯೋಗಾಲಯದಿಂದ ಚಿಕಿತ್ಸಾಲಯದ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಾಯೋಗಿಕ ಅಧ್ಯಯನ ಆರಂಭಿಸುವ ವಿಶ್ವಾಸವನ್ನು ತಜ್ಞರ ತಂಡ ಹೊಂದಿದೆ. “ಈ ಪರೀಕ್ಷೆಯನ್ನು qRT-PCR ಬಳಸಿಕೊಂಡು ಮಾಡಬಹುದು. ಕೋವಿಡ್‌ನಿಂದಾಗಿ ಈಗ RT-PCR ವ್ಯಾಪಕವಾಗಿರುವುದರಿಂದ ಇದರ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ಕೊಡುವುದು ಅಂತಹ ದೊಡ್ಡ ಸವಾಲಾಗದು” ಎನ್ನುತ್ತಾರೆ ಚಂದ್ರ. ಸೋಂಕಿನ ಸಂದರ್ಭದಲ್ಲಿಉಪಯುಕ್ತವಾಗುವ ಈ ಮಾಪನಾಂಕ ಕ್ರಮವು ವೈರಾಣುವಿನ ಯಾವುದೇ ರೂಪಾಂತರದ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದು, ಈಗಿನ ಕೋವಿಡ್‌-19ರ ರೋಗ ದೃಢೀಕರಣ ಪರೀಕ್ಷೆಗಳಿಗೆ ಇನ್ನೊಂದು ವಿಧಾನವಾಗಿ ಸೇರ್ಪಡೆಯಾಗಲಿದೆಎಂಬುದು ಸಂಶೋಧಕರ ವಿಶ್ವಾಸವಾಗಿದೆ.

ಉಲ್ಲೇಖ:

ಸತ್ಯಭಾರತಿ ರವಿಚಂದ್ರನ್‌, ಉಷಾಶಿ ಬ್ಯಾನರ್ಜಿ, ಗಾಯತ್ರಿ ದೇವಿ ಡಿ.ಆರ್‌., ರೂಪಾರಾಣಿ ಕಂದುಕೂರು, ಚಂದ್ರಾಣಿ ಠಾಕೂರ್‌, ದೀಪ್ಶಿಕಾ ಚಕ್ರವರ್ತಿ, ಕಿತ್ತಿಗಾನಹಳ್ಳಿ ನಾರಾಯಣಸ್ವಾಮಿ ಬಾಲಾಜಿ, ಅಮಿತ್‌ ಸಿಂಗ್‌, ನಾಗಸುಮ ಚಂದ್ರ, ತೀವ್ರವಾದ ಸೋಂಕಿನ ಮೂಲವು ವೈರಾಣುವೋ ಅಥವಾ ಬ್ಯಾಕ್ಟೀರಿಯಾವೋಎಂಬುದನ್ನು ದೃಢೀಕರಿಸಲು ನೆರವಾಗುವ ಹೊಸ ರಕ್ತ ಜೈವಿಕ ಸೂಚಕವಾದ ವಿಬಿ10, ಇಬಯೋ ಮೆಡಿಸಿನ್‌ (2021)

https://www.thelancet.com/journals/ebiom/article/PIIS2352-3964(21)00145-6/fulltext

ಸಂಪರ್ಕಿಸಿ:

ನಾಗಸುಮಚಂದ್ರ
ಪ್ರೊಫೆಸರ್‌
ಜೀವರಸಾಯನಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ(IISc)
nchandra@iisc.ac.in
080-22932892

ಸತ್ಯಭಾರತಿ ರವಿಚಂದ್ರನ್‌
ಸಹಸಂಶೋಧಕರು
ಜೀವರಸಾಯನಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ(IISc)

ಪತ್ರಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಬಿಡುಗಡೆಯಲ್ಲಿನ ಯಾವುದೇ ಪಠ್ಯ ಭಾಗವನ್ನು ಯಥಾವತ್‌ ಬಳಸಿದ ಸಂದರ್ಭದಲ್ಲಿ, ಆ ಕುರಿತು ʼಕೃಪೆ – ಐಐಎಸ್‌ಸಿ ಪತ್ರಿಕಾ ಬಿಡುಗಡೆʼ ಎಂದು ಉಲ್ಲೇಖಿಸಿ

ಆ) ಐಐಎಸ್‌ಸಿ ಪತ್ರಿಕಾ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು news@iisc.ac.in  ಅಥವಾ  pro@iisc.ac.in ಗೆ ಬರೆಯಿರಿ.