ಉಸಿರಾಟ ಆರೋಗ್ಯಸೇವೆ ಮತ್ತು ಸಂಶೋಧನೆ ಉನ್ನತಿಗೆ ಪಲ್ಮನರಿ ಮೆಡಿಸಿನ್ ಸೆಂಟರ್ ಸ್ಥಾಪನೆ; ಸಿಪ್ಲಾ ಪ್ರತಿಷ್ಠಾನ-ಟಾಟಾ ಐ.ಐ.ಎಸ್.ಸಿ. ಮೆಡಿಕಲ್ ಸ್ಕೂಲ್ ಸಹಭಾಗಿತ್ವ


11 ಫೆಬ್ರುವರಿ 2026

ಬೆಂಗಳೂರಿನ ಟಾಟಾ ಐಐಎಸ್ ಸಿ ಮೆಡಿಕಲ್ ಸ್ಕೂಲ್ ನಲ್ಲಿ ಅತ್ಯಾಧುನಿಕ ಸಿಪ್ಲಾ ಫೌಂಡೇಷನ್ ಸೆಂಟರ್ ಫಾರ್ ಪಲ್ಮನರಿ ಮೆಡಿಸನ್ ಸ್ಥಾಪನೆಗೆ ನೆರವು ನೀಡಲು ಸಿಪ್ಲಾ ಪ್ರತಿಷ್ಠಾನವು ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ (ಐ.ಐ.ಎಸ್.ಸಿ) ಪಾಲುದಾರಿಕೆಯನ್ನು ಇಂದು ಘೋಷಿಸಿದೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗಿಸುವ ಸಲುವಾಗಿ ಕೇಂದ್ರವು ಡಯೋಗ್ನೋಸ್ಟಿಕ್ಸ್ (ರೋಗ ದೃಢೀಕರಣ ವ್ಯವಸ್ಥೆ), ಹೊರರೋಗಿ ಹಾಗೂ ಒಳರೋಗಿ ಸೇವೆಗಳು, ನಿಯೋಜಿತ ಐಸಿಯು ಹಾಗೂ ಮತ್ತು ತೀವ್ರ ಅವಲಂಬನಾ (ಹೈ-ಡಿಪೆಂಡೆನ್ಸಿ) ಘಟಕಗಳನ್ನು ಹೊಂದಿರಲಿದೆ.

ಈ ಪಲ್ಮನರಿ ಮೆಡಿಸಿನ್ ಕೇಂದ್ರವು ಆರಂಭಿಕ ಹಂತದಲ್ಲೇ ರೋಗ-ದೃಢೀಕರಣ, ಉನ್ನತ ಸಂಶೋಧನೆ ಹಾಗೂ ಕೌಶಲಾಭಿವೃದ್ಧಿ ಮೂಲಕ ಭಾರತದ ಉಸಿರಾಟ ಸ್ವಾಸ್ಥ್ಯ ಚಿಕಿತ್ಸಾ ಕಾರ್ಯಪರಿಸರವನ್ನು ಸದೃಢಗೊಳಿಸಲಿದೆ. ಇದು ಕ್ರಾನಿಕ್ ಅಬ್ ಸ್ಟ್ರಕ್ಟೀವ್ ಪಲ್ಮನರಿ ಡಿಸೀಸ್ (ಸಿಒಪಿಡಿ), ಇಂಟರ್ ಸ್ಟಿಶಿಯಲ್ ಲಂಗ್ ಡಿಸೀಸ್ (ಐಎಲ್ ಡಿ) ಹಾಗೂ ಅಸ್ತಮಾಗೆ ಭಾರತ-ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಜೊತೆಗೆ, ಜೈವಿಕಚಹರೆಗಳು, ಫಾರ್ಮಕೊಜೆನೊಮಿಕ್ಸ್ (ಶರೀರವು ಔಷಧಿಗಳಿಗೆ ಸ್ಪಂದಿಸುವ ರೀತಿಯನ್ನು ವಂಶವಾಹಿನಿಗಳು ಪ್ರಭಾವಿಸುವ ಕುರಿತ ಅಧ್ಯಯನ), ಎಐ ಆಧಾರಿತ ಶ್ವಾಸಕೋಶ ರೋಗದೃಢೀಕರಣ ಹಾಗೂ ಉಪಶಮನ ವಿಧಾನಗಳಿಗೂ ದೇಶನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಅನುವು ಮಾಡಿಕೊಡಲಿದೆ. ಅಲ್ಲದೆ, ಪಲ್ಮನಾಲಜಿಸ್ಟ್ ಗಳು ಮತ್ತು ಸಹವರ್ತಿ ತಜ್ಞರಿಗೆ ತರಬೇತಿ ಲಭ್ಯವಾಗಿಸಲು, ಕಾರ್ಯಾಗಾರಗಳನ್ನು ಆಯೋಜಿಸಲು ಹಾಗೂ ಜಾಗತಿಕ ಸಹಭಾಗಿತ್ವಗಳ ಮೂಲಕ ಜ್ಞಾನ ವಿನಿಮಯಉತ್ತೇಜಿಸಲು ಸಹಕಾರಿಯಾಗಲಿದೆ. ಜೊತೆಗೆ ಆರಂಭಿಕ ಹಂತದಲ್ಲೇ ಸ್ಕ್ರೀನಿಂಗ್, ಗಾಳಿ ಗುಣಮಟ್ಟದ ಬಗ್ಗೆ ಜಾಗೃತಿ, ಧೂಮಪಾನ ತ್ಯಜಿಸುವಿಕೆ ಹಾಗೂ ಶ್ವಾಸಕೋಶ ಸ್ವಾಸ್ಥ್ಯಕ್ಕಾಗಿ ಮುಂಜಾಗ್ರತೆ ಕುರಿತು ಸಮುದಾಯದ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

ಸಿಒಪಿಡಿ ಹಾಗೂ ಅಸ್ತಮಾ ಸೇರಿದಂತೆ ಭಾರತದಲ್ಲಿ ಉಸಿರಾಟ ಸಂಬಂಧಿ ಕಾಯಿಲೆಗಳ ಹೊರೆಯು ಗಮನಾರ್ಹವಾಗಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ, ಶ್ವಾಸಕೋಶ-ಸ್ವಾಸ್ಥ್ಯವು ಸಾರ್ವಜನಿಕ ಆರೋಗ್ಯದ ಮಹತ್ವದ ವಿಷಯವಾಗಿದೆ. ಹೆಚ್ಚುತ್ತಿರುವ ಗಾಳಿಯ ಮಾಲಿನ್ಯ, ತಂಬಾಕು ಬಳಕೆ, ಔದ್ಯೋಗಿಕ ಪರಿಸರಕ್ಕೆ ಒಡ್ಡಿಕೊಳ್ಳುವಿಕೆ ಹಾಗೂ ಸೀಮಿತ ಮಟ್ಟದ ಅರಿವು ಈ ಪರಿಸ್ಥಿತಿಗೆ ಕಾರಣವಾಗಿವೆ. ಇದೇ ವೇಳೆ, ಸೂಕ್ತ ತರಬೇತಿ ಪಡೆದ ಪಲ್ಮಲಾಜಿಸ್ಟ್ ಗಳ ಲಭ್ಯತೆ ಮತ್ತು ವಿಶೇಷ ಶುಶ್ರೂಷಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಪ್ರದೇಶದಿಂದ ಪ್ರದೇಶಕ್ಕೆ ತುಂಬಾ ವ್ಯತ್ಯಾಸಗಳಿವೆ. ಹೀಗಾಗಿ, ಮುಖ್ಯ ನಗರಗಳಿಗೆ ಹೊರತಾದ ಸ್ಥಳಗಳಲ್ಲಿ ಗುಣಮಟ್ಟದ ಶುಶ್ರೂಷೆ ಹಾಗೂ ಸಕಾಲಿಕ ಚಿಕಿತ್ಸಾ ಲಭ್ಯತೆಯ ಮೇಲೆ ಇವು ದುಷ್ಪರಿಣಾಮ ಬೀರಿವೆ.

“ಸಿಪ್ಲಾ ಫೌಂಡೇಷನ್ ಪಾಲಿಗೆ ‘ಕೇರಿಂಗ್ ಫಾರ್ ಲೈಫ್’ ಎಂದರೆ ಸಮುದಾಯಗಳಿಗೆ ಒತ್ತಾಸೆಯಾಗಿ ನಿಂತು, ಅವು ಅವಲಂಬಿಸಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಸಶಕ್ತಗೊಳಿಸುವುದು ಎಂದರ್ಥ. ಐ.ಐ.ಎಸ್.ಸಿ.ಯಲ್ಲಿನ ಪಲ್ಮನರಿ ಮೆಡಿಸಿನ್ ಸೆಂಟರ್ ಸ್ಥಾಪನೆಗಾಗಿ ನೀಡಲಾಗುವ ನಮ್ಮ ನೆರವು ಈ ನಂಬಿಕೆಯಿಂದ ಪ್ರೇರಿತವಾಗಿದೆ. ಇದು ಗುಣಮಟ್ಟದ ಶ್ವಾಸಕೋಶ ಶುಶ್ರೂಷೆಯನ್ನು ಜನರಿಗೆ ಹತ್ತಿರವಾಗಿಸಲಿದೆ. ಜೊತೆಗೆ, ಉತ್ತಮ ಸೇವೆಗೆ ಅಗತ್ಯವಿರುವ ಕೌಶಲಗಳು ಹಾಗೂ ಸಾಮರ್ಥ್ಯಗಳನ್ನು ಚಿಕಿತ್ಸಕರಲ್ಲಿ ಮೈಗೂಡಿಸಲಿದೆ. ಉಸಿರಾಟದ ಕಾಯಿಲೆಗಳು ಲಕ್ಷಾಂತರ ಜನರನ್ನು, ಮುಖ್ಯವಾಗಿ, ಅತ್ಯಂತ ದುರ್ಬಲ ವರ್ಗದವರನ್ನು ಬಾಧಿಸುತ್ತಿರುವ ಸಂದರ್ಭದಲ್ಲಿ ಈ ಪಾಲುದಾರಿಕೆಯು ಮುಂಬರುವ ತಲೆಮಾರಿನ ಉಸಿರಾಟ-ಸ್ವಾಸ್ಥ್ಯ ಮುಂದಾಳುಗಳನ್ನು ರೂಪಿಸಲು ಕೊಡುಗೆ ನೀಡಲಿದೆ. ಶುಶ್ರೂಷೆ, ತರಬೇತಿ ಹಾಗೂ ಸಂಶೋಧನೆಯ ಸಂಯೋಜನೆಗಳ ಮೂಲಕ ಅನ್ವೇಷಣೆಯು ವಾಸ್ತವದಲ್ಲಿ ಫಲಪ್ರದವಾಗುವುದನ್ನು, ಅಂದರೆ ಅತ್ಯಂತ ಅಗತ್ಯವಿರುವ ಸಮುದಾಯಗಳ ಮೇಲೆ ಶಾಶ್ವತ ಪರಿಣಾಮ ಬೀರುವುದನ್ನು ಖಾತರಿಗೊಳಿಸುವುದು ನಮ್ಮ ಗುರಿಯಾಗಿದೆ” ಎಂದು ಸಿಪ್ಲಾ ಫೌಂಡೇಷನ್ ಮುಖ್ಯಸ್ಥರಾದ ಅನುರಾಗ್ ಮಿಶ್ರಾ ವಿವರಿಸಿದರು.

ಐ.ಐ.ಎಸ್.ಸಿ. ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್ ಅವರು ಸಹಭಾಗಿತ್ವದ ದೀರ್ಘಾವಧಿ ಪರಿಣಾಮದ ಬಗ್ಗೆ ಒತ್ತಿ ಹೇಳಿ, “ಮುಖ್ಯವಾಗಿ, ಗಾಳಿಯ ಗುಣಮಟ್ವವು ಕುಸಿಯುತ್ತಿರುವ ಪ್ರದೇಶಗಳಲ್ಲಿ ಉಸಿರಾಟದ ಕಾಯಿಲೆಗಳು 7 ಶತಕೋಟಿ ಜನರನ್ನು ತೀವ್ರವಾಗಿ ಬಾಧಿಸುತ್ತಿದ್ದು, ಸಾರ್ವಜನಿಕ ಆರೋಗ್ಯ ಸಮಸ್ಯೆಗಳಾಗಿ ಸವಾಲೊಡ್ಡಿವೆ. ಉಸಿರಾಟ ಸಂಬಂಧಿ ಶುಶ್ರೂಷೆ, ಅಂತರಶಿಸ್ತೀಯ ಸಂಶೋಧನೆ ಮತ್ತು ಸ್ಥಳೀಯ ಹಾಗೂ ಜಾಗತಿಕ ಲಾಭಕ್ಕಾಗಿ ಭಾರತದಲ್ಲಿ ಅನ್ವೇಷಿಸಲಾಗುವ ನಾವೀನ್ಯತಾ ವೈದ್ಯಕೀಯ ಪರಿಹಾರಗಳನ್ನು ಸಿಪ್ಲೌ ಫೌಂಡೇಷನ್ ಜತೆಗಿನ ನಮ್ಮ ಪಾಲುದಾರಿಕೆಯ ಮೂಲಕ ಟಾಟಾ ಐ.ಐ.ಎಸ್.ಸಿ. ಮೆಡಿಕಲ್ ಸ್ಕೂಲ್ ಸದೃಢಗೊಳಿಸಲಿದೆ ಈ ಸಹಭಾಗಿತ್ವವು ಆರೋಗ್ಯಶುಶ್ರೂಷಾ ವೃತ್ತಿಪರರ ತರಬೇತಿಗೆ ಅನುವು ಮಾಡಿಕೊಡಲಿದೆ. ಜೊತೆಗೆ, ಸೌಲಭ್ಯ ವಂಚಿತ ಜನಸಮುದಾಯಗಳಿಗೆ ಸಮಾನಮಟ್ಟದ ಸೌಕರ್ಯಗಳನ್ನು ಲಭ್ಯವಾಗಿಸಲಿದೆ” ಎಂದರು.

ಸಂಪರ್ಕ:

ಸಿಪ್ಲಾ ಫೌಂಡೇಷನ್
ಕಾರ್ಪೊರೇಟ್ ಸಂವಹನಗಳು
ಹೀನಾ ಕನಾಲ್ ಇಮೇಲ್: CorpComm@cipla.com
ಇನ್ವೆಸ್ಟರ್ ರಿಲೇಷನ್ಸ್
ದೀಕ್ಷಾ ಮಹೇಶ್ವರಿ ಇಮೇಲ್: Investor.Relations@cipla.com
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ)

ಸಂವಹನಗಳ ಕಚೇರಿ, ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ)

ಇಮೇಲ್: news@iisc.ac.in

ಸಿಪ್ಲಾ ಫೌಂಡೇಷನ್ ಬಗ್ಗೆ:

ಯಾವುದೇ ವ್ಯಕ್ತಿಯು ಆರೋಗ್ಯ ತುರ್ತುಸ್ಥಿತಿಯ ವೇಳೆ ನಿರ್ವಹಿಸಲಾಗದ ರೋಗಲಕ್ಷಣಗಳಿಂದ ಅಥವಾ ಒಬ್ಬಂಟಿತನದಿಂದ ಬಾಧಿತವಾಗಬಾರದು ಎಂಬ ಧ್ಯೇಯದೊಂದಿಗೆ ಸಿಪ್ಲಾ ಫೌಂಡೇಷನ್ ಸಕ್ರಿಯವಾಗಿ ತೊಡಗಿಸಿಕೊಂಡಿದೆ. 20 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದು, 60ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಿಗೆ ನೆರವು ಕಲ್ಪಿಸುವ ಸಹಭಾಗಿತ್ವ ಹೊಂದಿದೆ. ಪ್ರತಿಷ್ಠಾನವು ‘ಕೇರಿಂಗ್ ಫಾರ್ ಲೈಫ್’ ತತ್ತ್ವದಿಂದ ಪ್ರೇರಿತವಾಗಿ ಭಾರತದ ರೋಗಲಕ್ಷಣ ಆಧಾರಿತ ಶುಶ್ರೂಷಾ ಚಿತ್ರಣವನ್ನು ಪರಿವರ್ತಿಸುವ ದಿಸೆಯಲ್ಲಿ ತನ್ನ ಕಾರ್ಯಚಟುವಟಿಗಳನ್ನು ಮುಂದುವರಿಸಲಿದೆ ಹೆಚ್ಚಿನ ಮಾಹಿತಿಗಾಗಿ ಅಥವಾ ಪ್ಯಾಲಿಯೇಟಿವ್ ಶುಶ್ರೂಷಾ ನೆರವಿಗಾಗಿ ದಯವಿಟ್ಟು 1800-202-7777 ಮೂಲಕ ಸಿಪ್ಲಾ ಫೌಂಡೇಷನ್ ಪ್ಯಾಲಿಯೇಟಿವ್ ಹೆಲ್ಪ್ ಲೈನ್ ಅನ್ನು ಸಂಪರ್ಕಿಸಿ ಅಥವಾ www.ciplapalliativecare.org.ಗೆ ಭೇಟಿ ನೀಡಿ.

ಐ.ಐ.ಎಸ್.ಸಿ. ಬಗ್ಗೆ:

ಉದ್ಯಮಿ ಜಮ್ ಷೇಟ್ ಜಿ ನಸರ್ ವಾಂಜಿ ಟಾಟಾ, ಮೈಸೂರು ರಾಜಸಂಸ್ಥಾನ ಮತ್ತು ಭಾರತ ಸರ್ಕಾರಗಳ ದೂರದರ್ಶಿತ್ವದ ಪಾಲುದಾರಿಕೆಯಲ್ಲಿ ಭಾರತ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.) 1909ರಲ್ಲಿ ಸ್ಥಾಪನೆಗೊಂಡಿತು. ಕಳೆದ 115 ವರ್ಷಗಳಲ್ಲಿ ಐ.ಐ.ಎಸ್.ಸಿ.ಯು ಆಧುನಿಕ ವಿಜ್ಞಾನ ಹಾಗೂ ತಾಂತ್ರಿಕ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಭಾರತದ ಭೌತಿಕ ಹಾಗೂ ಕೈಗಾರಿಕಾ ಪ್ರಗತಿಗೆ ಕಾರಣವಾಗುವಂತಹ ಉನ್ನತ ಬೋಧನೆಗೆ ಹಾಗೂ ಸ್ವೋಪಜ್ಞ ಪರಿವೀಕ್ಷಣೆಗಳಿಗೆ ಎಲ್ಲಾ ಜ್ಞಾನಶಾಖೆಗಳಲ್ಲಿ ಅವಕಾಶ ಕಲ್ಪಿಸಲು ಸಂಸ್ಥೆಯು ಕಟಿಬದ್ಧವಾಗಿದೆ. ಸಂಸ್ಥೆಯು ಭಾರತ ಸರ್ಕಾರದಿಂದ 2018ರಲ್ಲಿ “ಇನ್ ಸ್ಟಿಟ್ಯೂಟ್ ಆಫ್ ಎಮಿನೆನ್ಸ್” ಎಂದು ಆಯ್ಕೆಯಾಗಿದೆ. ಸಂಸ್ಥೆಯು ಜಾಗತಿಕ ವಿಶ್ವವಿದ್ಯಾಲಯಗಳ ರಾಂಕಿಂಗ್ ನಲ್ಲಿ ಸತತವಾಗಿ ಭಾರತದ ಅಗ್ರಮಾನ್ಯ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯು ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ನೆರವಿನೊಂದಿಗೆ ಟಾಟಾ ಐ.ಐ.ಎಸ್.ಸಿ. ಮೆಡಿಕಲ್ ಸ್ಕೂಲ್ ಸ್ಥಾಪಿಸುವ ಕಾರ್ಯವನ್ನೂ ಕೈಗೊಂಡಿದೆ. ವಿಶಾಲ ಜನಸಮುದಾಯಕ್ಕೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಿಸುವ ಜೊತೆಗೆ ರೋಗ ದೃಢೀಕರಣ (ಡಯಾಗ್ನೋಸ್ಟಿಕ್ಸ್), ಚಿಕಿತ್ಸೆ ಮತ್ತು ಸಂಶೋಧನೆಗೆ ಉತ್ಕೃಷ್ಟ ಸೌಕರ್ಯಗಳನ್ನು ಲಭ್ಯವಾಗಿಸುವ ಗುರಿಯನ್ನೂ ಇದು ಹೊಂದಿದೆ.