ಐ.ಐ.ಎಸ್ ಸಿ-ಐ.ಬಿ.ಎಂ. ಸಹಭಾಗಿತ್ವ: ಹೈಬ್ರಿಡ್ ಕ್ಲೌಡ್ ಸಂಶೋಧನೆಗಾಗಿ ಪ್ರಯೋಗಾಲಯ ಆರಂಭ


ಹೈಬ್ರಿಡ್ ಕ್ಲೌಡ್ ಗಾಗಿ ಕೃತಕ ಬುದ್ಧಿಮತ್ತೆಯಲ್ಲಿ (ಎ.ಐ.) ಆವಿಷ್ಕಾರವನ್ನು ತ್ವರಿತಗೊಳಿಸುವುದಕ್ಕಾಗಿ ಮತ್ತು ಹೆಚ್ಚಿನ ಅಳವಡಿಕೆಗಾಗಿ ಸಂಶೋಧನಾ ಕಾರ್ಯದಲ್ಲಿ ಕಂಡುಕೊಂಡ ಅಂಶಗಳನ್ನು ಮುಕ್ತ-ಆಕರ ಸಮುದಾಯಕ್ಕೆ ಲಭ್ಯವಾಗಿಸಲಾಗುತ್ತದೆ.

ಐಬಿಎಂ (ಎನ್ ವೈಎಸ್ಇ: ಐಬಿಎಂ) ಮತ್ತು ಭಾರತದ ಪ್ರಮುಖ ಶೈಕ್ಷಣಿಕ ಸಂಶೋಧನಾ ಸಂಸ್ಥೆಯಾದ ಐ.ಐ.ಎಸ್ ಸಿ. ಸಹಯೋಗದಲ್ಲಿ  ಸ್ಥಾಪಿಸಲಾಗಿರುವ ಐ.ಬಿ.ಎಂ.-ಐ.ಐ.ಎಸ್ ಸಿ. ಹೈಬ್ರಿಡ್ ಕ್ಲೌಡ್ ಪ್ರಯೋಗಾಲಯವನ್ನು ಇಂದು ಉದ್ಘಾಟಿಸಲಾಯಿತು.

ಹೈಬ್ರಿಡ್ ಕ್ಲೌಡ್ ತಾಂತ್ರಿಕತೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಹಾಗೂ ಈ ಕ್ಷೇತ್ರದಲ್ಲಿ ಮಹತ್ವದ ಆವಿಷ್ಕಾರಗಳನ್ನು ಮಾಡುವ ಗುರಿಯನ್ನು ಇದು ಹೊಂದಿದೆ. ಬೆಂಗಳೂರಿನ ಐ.ಐ.ಎಸ್ ಸಿ. ಕ್ಯಾಂಪಸ್ ನಲ್ಲಿ ಸ್ಥಾಪಿಸಲಾಗಿರುವ ಈ ಪ್ರಯೋಗಾಲಯದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದದವರು ಐ.ಬಿ.ಎಂ. ಸಂಶೋಧಕ ವಿಜ್ಞಾನಿಗಳೊಂದಿಗೆ ಕೆಲಸ ಮಾಡಲಿದ್ದಾರೆ. ಸಂಸ್ಥೆಗಳಿಗೆ ಹೈಬ್ರಿಡ್ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಾಂತ್ರಿಕತೆಯನ್ನು ತ್ವರಿತವಾಗಿ, ಅಡೆತಡೆಯಿಲ್ಲದೆ ಹಾಗೂ ಹೆಚ್ಚಿನ ಭದ್ರತೆಯೊಂದಿಗೆ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಹೈಬ್ರಿಡ್ ಕ್ಲೌಡ್ ನ ನಿಜವಾದ ಸಾಮರ್ಥ್ಯದ ಪ್ರಯೋಜನ ದಕ್ಕುವಂತೆ ಮಾಡುವ ದಿಸೆಯಲ್ಲಿ ಅತ್ಯಾಧುನಿಕ ಸಂಶೋಧನೆಗಳನ್ನು ಇಲ್ಲಿ ನಡೆಸಲಾಗುವುದು.

ಮಲ್ಟಿ-ಕ್ಲೌಡ್ ವೇದಿಕೆಯ ತಾಂತ್ರಿಕತೆ ಹಾಗೂ ಕಾರ್ಯಾಚರಣಾ ಮಾದರಿಯಿಂದ ದಕ್ಕುವ ಮೌಲ್ಯವು ಏಕ ವೇದಿಕೆಯ ಸಿಂಗಲ್ ಕ್ಲೌಡ್ ನಿಂದ ದಕ್ಕುವ ಮೌಲ್ಯಕ್ಕಿಂತ 2.5 ಪಟ್ಟು ಅಧಿಕವಿರುತ್ತದೆ ಎಂಬುದು ಐಬಿಎಂ ಇನ್ಸ್ ಟಿಟ್ಯೂಟ್ ಫಾರ್ ಬಿಸಿನೆಸ್ ವ್ಯಾಲ್ಯೂ (ಐ.ಬಿ.ಬಿ.) ನಡೆಸಿರುವ ಅಧ್ಯಯನದಿಂದ ದೃಢಪಟ್ಟಿದೆ. ಆದ್ದರಿಂದ, ವ್ಯಾಪಾರೋದ್ದಿಮೆಗಳು ಹೆಚ್ಚಿನ ಮೌಲ್ಯದ ಸದ್ಬಳಕೆ ಮಾಡಿಕೊಂಡು ವ್ಯಾಪಾರ ಪರಿವರ್ತನೆಯನ್ನು ಮುನ್ನಡೆಸುವ ಸಲುವಾಗಿ ಹೈಬ್ರಿಡ್ ಮಲ್ಟಿ-ಕ್ಲೌಡ್ ವೇದಿಕೆಯ ಸಾಮರ್ಥ್ಯಗಳಿಗಾಗಿ ಹೆಚ್ಚೆಚ್ಚು ಬಂಡವಾಳ ಹೂಡುತ್ತಿವೆ.

ಐಬಿಎಂ-ಐಐಎಸ್ ಸಿ ಹ್ರೈಬ್ರಿಡ್ ಕ್ಲೌಡ್ ಪ್ರಯೋಗಾಲಯವು ಪ್ರತಿಭಾವಂತ ವಿಜ್ಞಾನಿಗಳು, ಬೋಧಕ ವೃಂದ ಮತ್ತು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಲಿದೆ. ವ್ಯಾಪಾರೋದ್ದಿಮೆಗಳು ಪ್ರಸ್ತುತ ಎದುರಿಸುತ್ತಿರುವ ಅತ್ಯಂತ ಕಠಿಣವಾದ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವುದಕ್ಕೆ ಹಾಗೂ ವಿವಿಧ ಉದ್ದಿಮೆಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಅಳವಡಿಕೆ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಪೂರಕವಾದ ಸಂಶೋಧನೆಗಳಲ್ಲಿ ತೊಡಗಲು ಇದು ಸಹಕಾರಿಯಾಗಲಿದೆ. ಈ ಪ್ರಯೋಗಾಲಯವು ಕೇವಲ ಶಿಕ್ಷಣ ಸಂಸ್ಥೆಗಳೊಂದಿಗೆ ಮಾತ್ರವಲ್ಲದೆ, ವಿಶಾಲವಾದ ಮುಕ್ತ-ಆಕರ (ಓಪನ್ ಸೋರ್ಸ್) ಸಮುದಾಯದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ನಾವೀನ್ಯತೆಯ ಹೆಚ್ಚಿನ ಅಳವಡಿಕೆಯನ್ನು ಹಾಗೂ ತ್ವರಿತತೆಯನ್ನು ಉತ್ತೇಜಿಸಲಿದೆ. ಐ.ಐ.ಎಸ್ ಸಿ.ಯ ಬೇರೆ ಬೇರೆ ವಿಭಾಗಗಳಾದ ಕಾಂಪ್ಯೂಟೇಷನಲ್ ಅಂಡ್ ಡ್ಯಾಟಾ ಸೈನ್ಸಸ್, ಕಂಪ್ಯೂಟರ್ ವಿಜ್ಞಾನ & ಆಟೊಮೇಷನ್, ಸೂಪರ್ ಕಂಪ್ಯೂಟಿಂಗ್ ಎಜುಕೇಷನ್ & ರೀಸರ್ಚ್ ಸೆಂಟರ್ ನ ಬೋಧಕ ವೃಂದದವರು ಹಾಗೂ ವಿದ್ಯಾರ್ಥಿಗಳು ಐ.ಬಿ.ಎಂ. ರೀಸರ್ಚ್ ಇಂಡಿಯಾ ಲ್ಯಾಬ್ ನ ವಿಜ್ಞಾನಿಗಳ ಜೊತೆ ಸೇರಿ ಈ ಕೆಳಕಂಡ ವಲಯಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ:

  • ಮುಂದೆ ಬರಬಹುದಾದ ಸಮಸ್ಯೆಗಳನ್ನು ಊಹಿಸಿ, ಲೋಪಗಳನ್ನು ನಿವಾರಿಸುವ ಮೂಲಕ ಲಭ್ಯತೆಯ ಗರಿಷ್ಠ ಸದ್ಬಳಕೆಗೆ ಅವಕಾಶ ಮಾಡಿಕೊಡುವ ಹಾಗೂ ಕಾರ್ಯಾಚರಣೆ ವೆಚ್ಚವನ್ನು ಕನಿಷ್ಠಗೊಳಿಸುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಆಟೊನಾಮಸ್, ಸೆಲ್ಫ್-ಹೀಲಿಂಗ್ ಕಂಪ್ಯೂಟಿಂಗ್ ಸಿಸ್ಟಮ್ ‘ಗಳನ್ನು ಅಭಿವೃದ್ಧಿಗೊಳಿಸುವುದು.
  • ಕ್ಯುಬೆರ್ ನೆಟೆಸ್ ಮತ್ತು ಸರ್ವರ್ ಲೆಸ್ ನಂತಹ ಕ್ಲೌಡ್-ನೇಟಿವ್ ತಾಂತ್ರಿಕತೆಯ ಪ್ರಯೋಜನಗಳನ್ನು ಪಡೆಯುವ ನಿಟ್ಟಿನಲ್ಲಿ ‘ಕ್ಲೌಡ್-ನೇಟಿವ್ ಆನ್ವಯಿಕತೆಗಳ ಆಪ್ಟಿಮೈಸೇಜನ್ ಮತ್ತು ಮೈಕ್ರೋಸರ್ವೀಸ್ ಗಳ ಅನುಸರಣೆ. ಇದರಿಂದಾಗಿ ಉದ್ದಿಮೆಗಳ ಐ.ಟಿ. ಸೇವೆಗಳಿಗೆ ಗಣನೀಯ ಚುರುಕುತನವನ್ನು ನೀಡಿ ಹೊಸ ಕ್ಲೌಡ್ ಆಧಾರಿತ ವ್ಯಾಪಾರ ನಮೂನೆಗಳನ್ನು ಮುನ್ನಡೆಸಲಿದೆ.
  • ಎಡ್ಜ್, ಕ್ಲೌಡ್ ಮತ್ತು ವಿವಿಧ ದತ್ತಾಂಶ ಮೂಲಗಳಿಂದ ಲಭ್ಯವಾಗುವ ದತ್ತಾಂಶಗಳಿಂದ ಉದ್ದಿಮೆಗಳನ್ನು ನಡೆಸಲು ಪೂರಕವಾದ ದೃಷ್ಟಿಕೋನಗಳನ್ನು ರೂಪಿಸಿಕೊಳ್ಳಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧಾರಿತ ಮಾಹಿತಿ ವ್ಯವಸ್ಥಾಪನೆಯನ್ನು ರೂಪಿಸುವುದು.
  • ಕೃತಕ ಬುದ್ಧಿಮತ್ತೆ ಪ್ರಗತಿಯೊಂದಿಗೆ ಕಂಪ್ಯೂಟಿಂಗ್ ಸಿಸ್ಟಮ್ ಗಳ ಗರಿಷ್ಠ ಕಾರ್ಯಾಚರಣೆಗಾಗಿ ಮನುಷ್ಯರ ಭಾಷೆಗಳನ್ನು ಮತ್ತು ಯಂತ್ರ ಭಾಷೆಗಳನ್ನು ವಿಶ್ಲೇಷಿಸಬಲ್ಲ ಎ.ಐ.ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು. ಈ ಮೇಲಿನ ಕ್ಷೇತ್ರಗಳಲ್ಲಿ ನಾವೀನ್ಯತೆಗಳು ಮತ್ತು ಸ್ವಯಂ-ಪ್ರಕ್ರಿಯೆಗೆ ಅನುವು ಮಾಡಿಕೊಡಲು ಇದು ಮೂಲಭೂತ ಅಗತ್ಯವಾಗಿರುತ್ತದೆ.

ಹೈಬ್ರಿಡ್ ಕ್ಲೌಡ್ ತಾಂತ್ರಿಕತೆಯನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಆವಿಷ್ಕಾರಗಳನ್ನು ಉತ್ತೇಜಿಸುವುದು ಐಬಿಎಂ ದೃಢಸಂಕಲ್ಪವಾಗಿದೆ. ಇದರ ಜೊತೆಗೆ, ಈ ಪ್ರಯೋಗಾಲಯವು, ಸಂಶೋಧನೆಯಲ್ಲಿ ಕಂಡುಬರುವ ಅಂಶಗಳನ್ನು ಪ್ರಮುಖ ಸಮಾವೇಶಗಳಲ್ಲಿ ಮಂಡಿಸಲು, ಕಾರ್ಯಾಗಾರಗಳನ್ನು ಆಯೋಜಿಸಲು ಹಾಗೂ ಸಮುದಾಯಕ್ಕೆ ಮುಕ್ತ-ಆಕರ ಪರಿಕರಗಳನ್ನು ಬಿಡುಗಡೆಗೊಳಿಸಲು ಒತ್ತು ನೀಡಲಿದೆ. ಇದರಿಂದಾಗಿ ಐ.ಐ.ಎಸ್ ಸಿ. ವಿದ್ಯಾರ್ಥಿ ವೃಂದಕ್ಕೆ ಉದ್ದಿಮೆಗಳಿಗೆ ಎದುರಾಗುವ ಸವಾಲುಗಳೇನು ಎಂಬುದನ್ನು ಅರಿಯಲು ಅವಕಾಶವಾಗಲಿದೆ. ಜೊತೆಗೆ, ಸಂಶೋಧನೆ ಹಾಗೂ ಮುಕ್ತ-ಆಕರಕ್ಕೆ ಸಂಬಂಧಿಸಿದಂತೆ ಐ.ಬಿ.ಎಂ. ತಜ್ಞರ ಮಾರ್ಗದರ್ಶನ ಲಭ್ಯವಾಗುತ್ತದೆ. ಈ ಪ್ರಯೋಗಾಲಯವು ಎರಡೂ ಸಂಸ್ಥೆಗಳ ನಡುವೆ ಪರಿಕಲ್ಪನೆಗಳ ವಿನಿಮಯವನ್ನು ಉತ್ತೇಜಿಸುವ ಜೊತೆಗೆ ಪ್ರಾದೇಶಿಕ ವ್ಯಾಪ್ತಿಯಲ್ಲಿ ಸಂಶೋಧನಾ ಹಾಗೂ ಉದ್ಯಮ ಸಮುದಾಯದ ನಡುವೆ ಆಲೋಚನೆಗಳ ವಿನಿಮಯಕ್ಕೂ ಅನುಕೂಲ ಮಾಡಿಕೊಡುತ್ತದೆ.

“ಐ.ಬಿ.ಎಂ.- ಐ.ಐ.ಎಸ್ ಸಿ. ಪ್ರಯೋಗಾಲಯವು ಉದ್ಯಮ ಮತ್ತು ಶೈಕ್ಷಣಿಕ ವಲಯದ ಎರಡು ಮುಂಚೂಣಿ ಸಂಶೋಧನಾ ಸಂಸ್ಥೆಗಳನ್ನು ಒಂದೆಡೆ ಸೇರಿಸುತ್ತದೆ. ಇದು ಭಾರತ ಮಾತ್ರವಲ್ಲದೆ ಜಗತ್ತಿಗೆ ಅಗತ್ಯವಿರುವ ಹೈಬ್ರಿಡ್ ಕ್ಲೌಡ್ ಸಂಶೋಧನೆಯ ಪರ್ಯಾವರಣವನ್ನು ರೂಪಿಸಲು ಸಹಕಾರಿ. ಹೈಬ್ರಿಡ್  ಕ್ಲೌಡ್, ಕೃತಕ ಬುದ್ಧಿಮತ್ತೆ, ಭದ್ರತೆಯಂತಹ ವಲಯಗಳಲ್ಲಿ ಐ.ಐ.ಎಸ್ ಸಿ. ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯೊಂದಿದೆ. ನಾವೀನ್ಯತೆಯಿಂದ ಕೂಡಿದ ಉದ್ಯಮಕ್ಕೆ ಪ್ರಸ್ತುತವೆನ್ನಿಸುವ ಪರಿಹಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಐ.ಐ.ಎಸ್ ಸಿ. ಜೊತೆ ಸಹಭಾಗಿತ್ವ ಮಾಡಿಕೊಂಡಿರುವುದು ನಮಗೆ ಹೆಚ್ಚಿನ ಖುಷಿ ಕೊಟ್ಟಿದೆ. ನಮ್ಮ ಹೈಬ್ರಿಡ್ ಕ್ಲೌಡ್ ವೇದಿಕೆಯು ಮುಕ್ತ ಮಾದರಿಯದ್ದಾಗಿದೆ. ನಾವಿಬ್ಬರೂ ಜೊತೆ ಸೇರಿ ಅಂತರ ಕಾರ್ಯಾಚರಣೆ, ವರ್ಗಾವಣೆ ಮತ್ತು ಭದ್ರತೆಯನ್ನು ಒದಗಿಸುವಂತಹ ಮುಕ್ತ-ಮೂಲದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತೇವೆ” ಎನ್ನುತ್ತಾರೆ ಐ.ಬಿ.ಎಂ. ರೀಸರ್ಚ್ ಇಂಡಿಯಾ ನಿರ್ದೇಶಕ ಗರ್ಗಿ ದಾಸ್ ಗುಪ್ತ.

“ನಮ್ಮ ಕ್ಯಾಂಪಸ್ ನಲ್ಲಿ ಮಹತ್ವಾಕಾಂಕ್ಷೆಯ ಈ ಅತ್ಯಾಧುನಿಕ ಪ್ರಯೋಗಾಲಯವನ್ನು ಆರಂಭಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದಕ್ಕೆ ಐ.ಐ.ಎಸ್ ಸಿ. ಪರವಾಗಿ ಐ.ಬಿ.ಎಂ.ಗೆ ಕೃತಜ್ಞತೆಗಳು. ಇದರಿಂದಾಗಿ ಹೊಸದಾಗಿ ಹೊರಹೊಮ್ಮುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಹೈಬ್ರಿಡ್ ಕ್ಲೌಡ್ ಕ್ಷೇತ್ರಗಳಲ್ಲಿ ನಾವೀನ್ಯತೆಯು ಗಣನೀಯವಾಗಿ ವೇಗ ಪಡೆದುಕೊಳ್ಳಲಿದೆ. ಸಂಶೋಧನೆಯ ಪರಿಣಾಮಗಳನ್ನು ಉತ್ತೇಜಿಸುವಲ್ಲಿ ಇಂತಹ ಉದ್ದಿಮೆ- ಶೈಕ್ಷಣಿಕ ಸಂಸ್ಥೆಗಳ ಪಾಲುದಾರಿಕೆಯು ಮಹತ್ವದ್ದಾಗಿರುತ್ತದೆ. ಐ.ಬಿ.ಎಂ. ನಂತಹ ಅಗ್ರಮಾನ್ಯ ತಾಂತ್ರಿಕ ಸಂಸ್ಥೆಯೊಂದಿಗೆ ಕೆಲಸ ಮಾಡಲು ನಮಗೆ ಹೆಮ್ಮೆ” ಎನ್ನುತ್ತಾರೆ ಐ.ಐ.ಎಸ್ ಸಿ. ಅಂತರಶಿಸ್ತೀಯ ವಿಜ್ಞಾನಗಳ ನಿಕಾಯದ ಡೀನ್ ನವಕಾಂತ ಭಟ್.

ಐ.ಐ.ಎಸ್ ಸಿ. ಕಾಂಪ್ಯುಟೇಷನಲ್ ಅಂಡ್ ಡ್ಯಾಟಾ ಸೈನ್ಸಸ್ ನ ಸಹ ಪ್ರಾಧ್ಯಾಪಕ ಪ್ರೊ.ಯೋಗೇಶ್ ಸಿಂಹನ್ ಮತ್ತು ಐಬಿಎಂ ರೀಸರ್ಚ್ (ಭಾರತ) ಹಿರಿಯ ಮ್ಯಾನೇಜರ್ ಹಾಗೂ ಹಿರಿಯ ತಾಂತ್ರಿಕ ಸಲಹಾ ಸದಸ್ಯರಾದ ಡಾ.ಅಮಿತ್ ಸಿಂಘೀ ಅವರು ಈ ಪ್ರಯೋಗಾಲಯದ ಸಹ-ಅಧ್ಯಕ್ಷರಾಗಿರುತ್ತಾರೆ. ಸುಮಾರು 15 ವರ್ಷಗಳಿಂದ ಪರಸ್ಪರ ಜ್ಞಾನ ವಿನಿಮಯದಲ್ಲಿ ತೊಡಗಿರುವ ಐ.ಬಿ.ಎಂ. ರೀಸರ್ಚ್ ಮತ್ತು ಐ.ಐ.ಎಸ್ ಸಿ. ಈಗ ಈ ಪ್ರಯೋಗಾಲಯ ಆರಂಭಿಸುವ ಮೂಲಕ ಮತ್ತೊಂದು ಹೆಜ್ಜೆ ಇರಿಸಿವೆ. ಇವೆರಡೂ ಸಂಸ್ಥೆಗಳು ಸೇರಿ 2020ರಲ್ಲಿ ಹೈಬ್ರಿಡ್ ಕ್ಲೌಡ್ ಕುರಿತ ನಡೆಸಿದ್ದ ಎಸಿಎಂ ಚಳಿಗಾಲದ ಶಿಬಿರವು ವಿದ್ಯಾರ್ಥಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ನ ಮೂಲತತ್ವಗಳ ಕುರಿತು ತಿಳಿದುಕೊಳ್ಳಲು ಅವಕಾಶ ಒದಗಿಸಿತ್ತು. ಇದರ ಜೊತೆಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಐ.ಐ.ಎಸ್ ಸಿ.ಯಲ್ಲಿ ‘ಸ್ಟೆಮ್’ ಶಿಕ್ಷಣವನ್ನು ಐ.ಬಿ.ಎಂ. ಪ್ರಾಯೋಜಿಸುತ್ತಿದೆ.

 ಐ.ಬಿ.ಎಂ. ಇಂಡಿಯಾ ಬಗ್ಗೆ

ಐ.ಬಿ.ಎಂ. ಇಂಡಿಯಾ ಬಗ್ಗೆ ಹೆಚ್ಚಿನ ಮಾಹಿತಿಗೆ http://www.ibm.com/in/en ಗೆ ಭೇಟಿ ಕೊಡಿ

 ಐ.ಐ.ಎಸ್ ಸಿ. ಬಗ್ಗೆ

ಐ.ಐ.ಎಸ್ ಸಿ ಬಗ್ಗೆ ಹೆಚ್ಚಿನ ಮಾಹಿತಿಗೆ  https://www.iisc.ac.in/ ಗೆ ಭೇಟಿ ಕೊಡಿ

ಮಾಧ್ಯಮ ಸಂಪರ್ಕ

ಐಬಿಎಂ

ಆಂಟೊನೆಟ್ಟ ಕುಮಾರ್| antonkum@in.ibm.com

ಐ.ಐ.ಎಸ್ ಸಿ.

 ಕಚೇರಿ ಸಂಪರ್ಕಗಳು | news@iisc.ac.in

ಸಾರ್ವಜನಿಕ ಸಂಪರ್ಕ ಕಚೇರಿ | pro@iisc.ac.in

—–000——