ಐ.ಐ.ಎಸ್.ಸಿ. 2020ನೇ ಸಾಲಿನ ಅಲ್ಯುಮ್ನಸ್/ಅಲ್ಯುಮ್ನಾ ಪುರಸ್ಕಾರ


ನಾಲ್ವರು ವಿಶಿಷ್ಟ ಸಾಧಕರು ಪುರಸ್ಕಾರಕ್ಕೆ ಆಯ್ಕೆ.

ಗಮನ ಸೆಳೆಯುವಂತಹ ಸಾಧನೆ ಮಾಡಿದ ನಾಲ್ವರು ವಿಜ್ಞಾನಿಗಳು ಹಾಗೂ ಎಂಜಿನಿಯರುಗಳು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) 2020ನೇ ಸಾಲಿನ ‘ಅಲ್ಯುಮ್ನಸ್/ ಅಲ್ಯುಮ್ನಾ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಡಾ.ಕೆ.ರಾಜಲಕ್ಷ್ಮಿ ಮೆನನ್, ಪ್ರೊ,ಬಿ.ಎಸ್.ಮೂರ್ತಿ, ಪ್ರೊ.ಸೇತುರಾಮನ್ ಪಂಚನಾಥನ್ ಮತ್ತು ಡಾ.ಕೇಶಬ್ ಪಾಂಡಾ ಅವರು 2020ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಐ.ಐ.ಎಸ್.ಸಿ.ಯಲ್ಲಿ ವ್ಯಾಸಂಗ ಮಾಡಿದರು ತಮ್ಮ ವೃತ್ತಿ ಕ್ಷೇತ್ರದಲ್ಲಿ ನೀಡುವ ವಿಶಿಷ್ಟ ಕೊಡುಗೆಗಳನ್ನು ಪರಿಗಣಿಸಿ ಈ ವಾರ್ಷಿಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಐ.ಐ.ಎಸ್.ಸಿ. ನಿರ್ದೇಶಕರು ನೇಮಿಸುವ ಸಮಿತಿಯು ಸ್ವೀಕೃತಗೊಂಡ ನಾಮನಿರ್ದೇಶನಗಳನ್ನು ಅವಲೋಕಿಸಿ ಪುರಸ್ಕೃತರ ಹೆಸರನ್ನು ಅಂತಿಮಗೊಳಿಸುತ್ತದೆ.

“ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವವರು ತಮ್ಮ ವೃತ್ತಿ ಕ್ಷೇತ್ರಕ್ಕೆ ಹಾಗೂ ಆ ಮೂಲಕ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದ ಸಾಧಕರಾಗಿದ್ದಾರೆ. ಅವರ ಸಾಧನೆಗಳನ್ನು ಗುರುತಿಸಿ ಈ ಪುರಸ್ಕಾರಗಳನ್ನು ಅವರಿಗೆ ಪ್ರದಾನ ಮಾಡುವುದು ಹೆಮ್ಮೆಯ ಸಂಗತಿ ” ಎಂದು ಐ.ಐ.ಎಸ್.ಸಿ. ನಿರ್ದೇಶಕರಾದ ಪ್ರೊ.ಗೋವಿಂದ ರಂಗರಾಜನ್ ಹೇಳಿದ್ದಾರೆ.

ಮೇಧಾವಿ ವಿಜ್ಞಾನಿಯಾಗಿರುವ ಡಾ.ರಾಜಲಕ್ಷ್ಮಿ ಮೆನನ್ ಅವರು ಪ್ರಸ್ತುತ ರಕ್ಷಣಾ ಸಂಶೋಧನಾ ಮತ್ತು ಅಭಿವದ್ಧಿ ಸಂಸ್ಥೆಯ (ಡಿ.ಆರ್.ಡಿ.ಒ) “ಚತುರ, ವಿಚಕ್ಷಣಾ, ಗುರಿ ನಿರ್ದೇಶಿತ ಹಾಗೂ ನಿಗಾನುಸರಣೆ” (ISTAR) ಯೋಜನಾ ಕಾರ್ಯದ ನಿರ್ದೇಶಕರಾಗಿದ್ದಾರೆ. ಭಾರತೀಯ ವಾಯುಪಡೆಗೆ ಸೇರಿಸಲಾಗಿರುವ ದೇಶೀಯವಾದ  ವೈಮಾನಿಕ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ವ್ಯವಸ್ಥೆಯ ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ, ನಿಯೋಚನೆ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಹತ್ವದ ಕಾಣಿಕೆಗಳನ್ನು ಅವರು ನೀಡಿದ್ದಾರೆ. ಇದರ ಜೊತೆಗೆ, ಡಿ.ಆರ್.ಡಿ.ಒ.ದ ಇನ್ನಿತರ ಮಹತ್ವದ ಕಾರ್ಯಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಐ.ಐ.ಎಸ್.ಸಿ.ಯಲ್ಲಿ 1994ರಲ್ಲಿ ಎಂ.ಎಸ್ಸಿ. (ಎಂಜಿನಿಯರಿಂಗ್) ಪದವಿ ಪಡೆದ ಅವರು, ಇದೇ ಸಂಸ್ಥೆಯಲ್ಲಿ 2002ರಲ್ಲಿ ವೈಮಾಂತರಿಕ್ಷ ಎಂಜಿನಿಯರಿಂಗ್ (ಏರೋಸ್ಪೇಸ್ ಎಂಜಿನಿಯರಿಂಗ್) ನಲ್ಲಿ ಪಿಎಚ್.ಡಿ. ಮಾಡಿದ್ದಾರೆ.

ಪ್ರೊ.ಬಿ.ಎಸ್.ಮೂರ್ತಿ ಅವರು ಪ್ರಸ್ತುತ ಹೈದರಾಬಾದ್ ನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅಧಿಕ ಜಡೋಷ್ಣತೆಯಿಂದ ಕೂಡಿದ ಮಿಶ್ರಲೋಹಗಳು, ಯಾಂತ್ರಿಕ ಮಿಶ್ರಲೋಹೀಕರಣದಿಂದ ವಸ್ತುಗಳ ಅಸಮತೋಲಿತ ಸಂಸ್ಕರಣೆ ಹಾಗೂ ಬೃಹತ್ ಲೋಹೀಯ ಗಾಜುಗಳ ಕ್ಷೇತ್ರದಲ್ಲಿ ಅವರು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಲೋಹಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಸೌಲಭ್ಯಗಳ ಸ್ಥಾಪನೆಗೆ, ಸಹಭಾಗಿತ್ವಗಳು ಹಾಗೂ ಸಮಾವೇಶಗಳು ಏರ್ಪಡಲು ಕಾರಣಕರ್ತರಾಗಿದ್ದಾರೆ. ಐ.ಐ.ಎಸ್.ಸಿ.ಯಲ್ಲಿ 1988ರಲ್ಲಿ ಎಂ.ಇ. ಪದವಿ ಹಾಗೂ 1992ರಲ್ಲಿ ಲೋಹಶಾಸ್ತ್ರದಲ್ಲಿ ಪಿಎಚ್.ಡಿ. ಪಡೆದಿದ್ದಾರೆ.

ಪ್ರೊಫೆಸರ್ ಸೇತುರಾಮನ್ ಪಂಚನಾಥನ್ ಅವರು ಪ್ರಸ್ತುತ ಅಮೆರಿಕದ ನ್ಯಾಷನಲ್ ಸೈನ್ಸ್ ಫೌಂಡೇಷನ್ ನ (ಎನ್.ಎಸ್.ಎಫ್.) ನಿರ್ದೇಶಕರಾಗಿದ್ದಾರೆ. ಅಂಗವಿಕಲರಿಗೆ ಉಪಯುಕ್ತವಾದ ಮಾನವ ಕೇಂದ್ರಿತ ಕಂಪ್ಯೂಟಿಂಗ್ ಪರಿಹಾರಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಅವರು ಉನ್ನತವಾದ ಸಾಧನೆ ಮಾಡಿದ್ದಾರೆ. ಆವಿಷ್ಕಾರಿ ಪ್ರವೃತ್ತಿಯ ಅವರು ಉದ್ಯಮಶೀಲರೂ ಹಾಗೂ ಸಾಂಸ್ಥಿಕ ನಿರ್ಮಾತೃವೂ ಆಗಿದ್ದಾರೆ. ಅಮೆರಿಕ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ನೇಮಕಗೊಂಡಿದ್ದ ಅವರು ನಾವೀನ್ಯತೆ ಹಾಗೂ ಉದ್ಯಮಶೀಲತೆಗಾಗಿ ಇರುವ ರಾಷ್ಟ್ರೀಯ ಸಲಹಾ ಮಂಡಳಿಗೂ ನೇಮಕಗೊಂಡಿದ್ದರು. ಐ.ಐ.ಎಸ್.ಸಿ.ಯಲ್ಲಿ 1984ರಲ್ಲಿ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ನಲ್ಲಿ ಬಿ.ಇ.ಪದವಿ ಪಡೆದಿದ್ದಾರೆ.

ಡಾ.ಕೇಶಬ್ ಪಾಂಡಾ ಅವರು ಪ್ರಸ್ತುತ ಎಲ್ ಅಂಡ್ ಟೆ ಟೆಕ್ನಾಲಜಿ ಸರ್ವೀಸಸ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿ.ಇ.ಒ.) ಹಾಗೂ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.)ರಾಗಿದ್ದಾರೆ. ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ, ವಿಶೇಷವಾಗಿ ಸತ್ಯಂ ಹಾಗೂ ಎಲ್ ಅಂಡ್ ಟಿ ಗಳಲ್ಲಿ ಎಂಜಿನಿಯರಿಂಗ್ ಸೇವಾ ವಹಿವಾಟುಗಳ ಬೆಳವಣಿಗೆಯನ್ನು ಮುನ್ನಡೆಸುವುದರಲ್ಲಿ ಅವರು ನೀಡಿರುವ ಕಾಣಿಕೆ ಗಣನೀಯವಾದುದು. ನ್ಯಾಸ್ ಕಾಂ, ಸಿಐಐ ಮತ್ತು ಇಂಡೋ ಅಮೆರಿಕನ ಚೇಂಬರ್ ಆಫ್ ಕಾಮರ್ಸ್ ಗಳೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿದ್ದಾರೆ. ಅವರು ಐ.ಐ.ಎಸ್.ಸಿ.ಯಲ್ಲಿ 1985ರಲ್ಲಿ ವೈಮಾಂತರಿಕ್ಷ ಎಂಜಿನಿಯರಿಂಗ್ ನಲ್ಲಿ (ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ) ಎಂ.ಇ. ಪದವಿ ಪಡೆದಿದ್ದಾರೆ.

ಐ.ಐ.ಎಸ್.ಸಿ. ಯು ಹಿಂದಿನಿಂದಲೂ ತನ್ನ ತರಬೇತಿ ಹಾಗೂ ಮಾರ್ಗದರ್ಶನದಿಂದಾಗಿ ಇಡೀ ಜಗತ್ತಿನ ಗಮನಸೆಳೆಯುವಂತಹ ಯುವ ವಿಜ್ಞಾನಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 1909ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯಿಂದ ಇದುವರೆಗೆ ವಿವಿಧ ವಿಭಾಗಗಳಲ್ಲಿ 20,000ಕ್ಕೂ ಹೆಚ್ಚು ಪದವೀಧರರು ಹೊರಹೊಮ್ಮಿದ್ದಾರೆ.

—-000—–