ಕಾವೇರಿ ನದಿಯಲ್ಲಿ ಮೈಕ್ರೊಪ್ಲ್ಯಾಸ್ಟಿಕ್: ಮೀನುಗಳ ಅಸ್ಥಿಪಂಜರ ವಿರೂಪ?


– ಪ್ರವೀಣ್ ಜಯಕುಮಾರ್

ಮೈಕ್ರೋಪ್ಲ್ಯಾಸ್ಟಿಕ್ (ಪ್ಲ್ಯಾಸ್ಟಿಕ್ ನ ಸೂಕ್ಷ್ಮ ಕಣಗಳು) ನಂತಹ ಮಾಲಿನ್ಯಕಾರಕಗಳು ಕಾವೇರಿ ನದಿಯ ಮೀನುಗಳಲ್ಲಿ ಅಸ್ಥಿಪಂಜರ ವಿರೂಪ ಸೇರಿದಂತೆ ಬೆಳವಣಿಗೆಗೆ ಸಂಬಂಧಿಸಿದ ಹಲವಾರು ನ್ಯೂನತೆಗಳಿಗೆ ಎಡೆಮಾಡಿಕೊಡುತ್ತಿರಬಹುದು ಎಂಬ ಸಂಗತಿ ಹೊಸ ಅಧ್ಯಯನದಿಂದ ದೃಢಪಟ್ಟಿದೆ.

“ಎಕೊಟಾಕ್ಸಾಲಜಿ ಅಂಡ್ ಎನ್ವಿರಾನ್ ಮೆಂಟಲ್ ಸೇಫ್ಟಿ” ಎಂಬ ನಿಯತಕಾಲಿಕದಲ್ಲಿ ಈ ಬಗ್ಗೆ ಅಧ್ಯಯನ ವರದಿ ಪ್ರಕಟವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್. ಸಿ.), “ಮಾಲಿಕ್ಯುಲಾರ್ ರಿಪ್ರೊಡಕ್ಷನ್, ಡೆವಲಪ್ ಮೆಂಟ್ ಅಂಡ್ ಜೆನೆಟಿಕ್ಸ್” (ಎಂ.ಆರ್.ಡಿ.ಜಿ.) ವಿಭಾಗದ ಪ್ರೊಫೆಸರ್ ಉಪೇಂದ್ರ ನೊಂಗ್ ತೊಂಬಾ ಈ ಅಧ್ಯಯನದ ನೇತೃತ್ವ ವಹಿಸಿದ್ದರು.


—————-

ನೊಂಗ್ ತೊಂಬಾ ಅವರಿಗೆ ಮೀನು ತುಂಬಾ ಇಷ್ಟದ ಆಹಾರ. “ಕಳೆದ ಕೆಲವಾರು ವರ್ಷಗಳಿಂದ ಕೃಷ್ಣರಾಜ ಸಾಗರ ಅಣೆಕಟ್ಟೆಯ (ಕೆ.ಆರ್.ಎಸ್.) ಹಿನ್ನೀರಿನ ಜಾಗಗಳಿಗೆ ಹೋಗಿ ಅಲ್ಲಿ ಕಾವೇರಿ ನದಿ ದಂಡೆಯಲ್ಲಿ ಹುರಿದ ಮೀನು ತಿಂದು ಖುಷಿಪಟ್ಟಿದ್ದೇನೆ” ಎನ್ನುತ್ತಾರೆ ಅವರು. ಆದರೆ, ಅವರು ಮುಂದುವರಿದು ಹೇಳುವ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಇಲ್ಲಿನ ಕೆಲವು ಮೀನುಗಳಲ್ಲಿ ದೈಹಿಕ ನ್ಯೂನತೆಗಳು ಕಂಡುಬರುತ್ತಿವೆ. ಈ ನ್ಯೂನತೆಗಳಿಗೂ ನೀರಿನ ಗುಣಮಟ್ಟಕ್ಕೂ ಏನೋ ಸಂಬಂಧವಿರಬಹುದು ಎಂದು ಅವರಿಗೆ ಅನ್ನಿಸಲು ಶುರುವಾಯಿತು.

“ಪ್ರಾಣಿಗಳು, ಗಿಡಮರಗಳು ಸೇರಿದಂತೆ ಎಲ್ಲಾ ಜೀವಿಗಳಿಗೂ ನೀರು ಅತ್ಯವಶ್ಯಕ. ಅದು ಮಲಿನಗೊಂಡಾಗ ಕ್ಯಾನ್ಸರ್ ಸೇರಿದಂತೆ ಯಾವುದೇ ರೀತಿಯ ಕಾಯಿಲೆಗಳನ್ನು ತಂದೊಡ್ಡಬಹುದು” ಎಂದು ಅಭಿಪ್ರಾಯಪಡುತ್ತಾರೆ ನೊಂಗ್ ತೊಂಬಾ ಅವರ ಪ್ರಯೋಗಾಲಯದ ಪಿಎಚ್.ಡಿ. ಅಧ್ಯಯನಾರ್ಥಿ ಹಾಗೂ ಈ ಅಧ್ಯಯನದ ಮೊದಲ ಲೇಖಕ ಅಬ್ಯಾಸ್ ಟೋಬಾ ಅನಿಫೋವೋಷೆ.


———————-

ನೊಂಗ್ ತೊಂಬಾ ಅವರ ಪ್ರಯೋಗಾಲಯ ತಂಡದವರು ಕೆ.ಆರ್.ಎಸ್.ಅಣೆಕಟ್ಟೆಯಲ್ಲಿ ಮಾಲಿನ್ಯ ಹಾಗೂ ಮೀನುಗಳ ಮೇಲೆ ಅದು ಬೀರಬಹುದಾದ ಪರಿಣಾಮಗಳು” ಕುರಿತು ಸಮಗ್ರ ಅಧ್ಯಯನ ನಡೆಸಿದರು. ಇದಕ್ಕಾಗಿ ಅವರು, ನೀರಿನ ಹರಿವಿನ ವೇಗದಲ್ಲಿ ವ್ಯತ್ಯಾಸವಿರುವ ಮೂರು ಬೇರೆ ಬೇರೆ ಸ್ಥಳಗಳಿಂದ, ಅಂದರೆ, ನೀರಿನ ಹರಿವು ವೇಗವಾಗಿರುವ, ನಿಧಾನವಾಗಿರುವ ಹಾಗೂ ನೀರು ಒಂದೆಡೆ ನಿಂತಿರುವ ಜಾಗಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿದರು. ನೀರಿನ ಹರಿವಿನ ವೇಗವು ಮಾಲಿನ್ಯಕಾರಕಗಳ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತಾದ್ದರಿಂದ ಪ್ರತ್ಯೇಕ ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಲಾಯಿತು.

ಅಧ್ಯಯನದ ಮೊದಲ ಭಾಗದಲ್ಲಿ, ನೊಂಗ್ ತೊಂಬಾ ಅವರ ತಂಡದವರು ನೀರಿನ ಮಾದರಿಗಳ ಭೌತಿಕ ಹಾಗೂ ರಾಸಾಯನಿಕ ಮಾನದಂಡಗಳನ್ನು ವಿಶ್ಲೇಷಿಸಿದರು. ಒಂದು ಅಂಶವನ್ನು ಹೊರತುಪಡಿಸಿ ಉಳಿದ ಮಾಪನಾಂಕಗಳು ನಿಗದಿತ ಮಿತಿಯೊಳಗೆ ಇದ್ದವು. ನೀರಿನಲ್ಲಿ ಕರಗಿದ ಆಮ್ಲಜನಕದ (ಡಿಒ) ಮಟ್ಟ‌ ಮಾತ್ರ ನಿಧಾನ ಹರಿವಿನ ಮತ್ತು ನಿಂತ ನೀರಿನ ಮಾದರಿಗಳಲ್ಲಿ ಅಗತ್ಯಕ್ಕಿಂತ ಕಡಿಮೆ ಮಟ್ಟದಲ್ಲಿತ್ತು.
ಅಲ್ಲದೇ, ಈ ನೀರಿನ ಮಾದರಿಗಳಲ್ಲಿ, ನೀರಿನ ಮಾಲಿನ್ಯದ ಪ್ರಮುಖ ಜೈವಿಕ ಸೂಚಕಗಳಾದ ಸೈಕ್ಲಾಪ್ಸ್, ಡ್ಯಾಫ್ನಿಯಾ, ಸ್ಪೈರೊಗೈರಾ, ಸ್ಪೈರೊಚೇಟಾ ಮತ್ತು ಇ.ಕೊಲೈನಂತಹ ಸೂಕ್ಷ್ಮಾಣುಜೀವಿಗಳು ಕೂಡ ಇದ್ದವು.


———————-

ಸಂಶೋಧಕರು ರಾಮನ್ ಸ್ಪೆಕ್ಟೊಸ್ಕೋಪಿ ಎಂಬ ತಾಂತ್ರಿಕತೆ ಬಳಸಿ ಹೆಚ್ಚಿನ ಅಧ್ಯಯನ ನಡೆಸಿದರು. ಹೀಗೆ ಪರೀಕ್ಷಿಸಿದಾಗ, ನೀರಿನಲ್ಲಿ ಬರಿಗಣ್ಣಿಗೆ ಕಾಣದ ಮೈಕ್ರೊಪ್ಲ್ಯಾಸ್ಟಿಕ್ ಗಳು ಇರುವುದು ಪತ್ತೆಯಾಯಿತು. ಅಂದರೆ, ಇವುಗಳಲ್ಲಿ ಸೆಕ್ಲೊಹೆಕ್ಸಿಲ್ ಕಾರ್ಯಾಚರಣೆ ಗುಂಪನ್ನು (ಸಂಯುಕ್ತ ವಸ್ತುವೊಂದರಲ್ಲಿ ಅದರ ರಾಸಾಯನಿಕ ಗುಣಗಳನ್ನು ನಿರ್ಧರಿಸುವ ಪರಮಾಣುಗಳಿಗೆ ಕಾರ್ಯಾಚರಣೆ ಗುಂಪು ಎಂದು ಕರೆಯಲಾಗುತ್ತದೆ) ಹೊಂದಿರುವ ವಿಷಕಾರಿ ರಾಸಾಯನಿಕಗಳು ಇದ್ದವು. ಹಲವಾರು ಮನೆ ಬಳಕೆಯ ಹಾಗೂ ಕೈಗಾರಿಕಾ ಉತ್ಪನ್ನಗಳಲ್ಲಿ ಮೈಕ್ರೊಪ್ಲ್ಯಾಸ್ಟಿಕ್ ಗಳು ಇರುತ್ತವೆ. ಜೊತೆಗೆ, ಸೈಕ್ಲೊಹೆಕ್ಸಿಲ್ ಐಸೋ ಸಯನೇಟ್ ನಂತಹ ಸೈಕ್ಲೊಹೆಕ್ಸಿಲ್ ಗುಂಪನ್ನು ಹೊಂದಿರುವ ರಾಸಾಯನಿಕಗಳು ಕೃಷಿಯಲ್ಲಿ ಹಾಗೂ ಔಷಧೋದ್ಯಮದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತವೆ ಎಂಬುದು ಇಲ್ಲಿ ಗಮನಾರ್ಹ.

ಅಧ್ಯಯನದ ಎರಡನೇ ಭಾಗದಲ್ಲಿ, ನೊಂಗ್ ತೊಂಬಾ ಅವರ ತಂಡದವರು ಮೀನುಗಳಲ್ಲಿ ಕಂಡುಬರುತ್ತಿರುವ ನ್ಯೂನತೆಗಳಿಗೆ ನೀರಿನ ಮಾಲಿನ್ಯ ಕಾರಣವೇ ಎಂಬುದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು. ಮಾದರಿ ಜೀವಿ ಎಂದೇ ಹೆಸರಾಗಿರುವ ಜೀಬ್ರಾ ಫಿಷ್ ನ ಭ್ರೂಣಗಳ್ನು ಮೇಲೆ ತಿಳಿಸಲಾದ ನೀರಿನ ಮೂರು ಮಾದರಿಗಳಿಂದ ಉಪಚರಿಸಿದರು. ನೀರಿನ ಹರಿವು ನಿಧಾನವಾಗಿರುವ ಹಾಗೂ ನಿಂತ ನೀರಿನ ಮಾದರಿಗಳೊಂದಿಗೆ ಸಂಪರ್ಕಕ್ಕೆ ಬಂದ ಮೀನುಗಳಲ್ಲಿ ಅಸ್ಥಿಪಂಜರದ ನ್ಯೂನತೆಗಳು, ಡಿಎನ್ಎ ಹಾನಿ, ಜೀವಕೋಶಗಳ ಅಕಾಲಿಕ ಮರಣ, ಹೃದಯ ಸಮಸ್ಯೆ ಹಾಗೂ ಸಾಯುವ ದರ ಹೆಚ್ಚಾಗಿರುವುದು ಕಂಡುಬಂದಿತು.
ಸೂಕ್ಷ್ಮಾಣುಜೀವಿಗಳನ್ನು ಸೋಸುವಿಕೆಗೆ ಒಳಪಡಿಸಿದ ಮೇಲೂ ಈ ನ್ಯೂನತೆಗಳು ಕಂಡುಬಂದವು. ಅಂದರೆ, ನೀರಿನಲ್ಲಿರುವ ಮೈಕ್ರೊಪ್ಲ್ಯಾಸ್ಟಿಕ್ ಗಳು ಮತ್ತು ಸೈಕ್ಲೊಹೆಕ್ಸಿಲ್ ಕಾರ್ಯಾಚರಣೆ ಗುಂಪುಗಳು ಮೀನುಗಳಲ್ಲಿನ ಈ ನ್ಯೂನತೆಗೆ ಕಾರಣವೆಂಬುದು ದೃಢಪಟ್ಟಿತು.

ಅಸಹಜವಾಗಿ ಬೆಳೆದ ಮೀನುಗಳ ಜೀವಕೋಶಗಳಲ್ಲಿ ಆರ್ ಒ ಎಸ್ (ರಿಯಾಕ್ಟೀವ್ ಆಕ್ಸಿಜನ್ ಸ್ಪೀಷೀಸ್) ಎಂದು ಕರೆಯಲಾಗುವ ಅಸ್ಥಿರ ಅಣುಗಳ ಇರುವಿಕೆಯನ್ನೂ ತಜ್ಞರು ಪತ್ತೆಹಚ್ಚಿದರು. ಅಬ್ಯಾಸ್ ಮತ್ತು ನೊಂಗ್ ತೊಂಬಾ ಅವರು ನಿಧಾನ ಹರಿವಿನ ಹಾಗೂ ನಿಂತ ನೀರಿನ ಮಾದರಿಗಳಿಂದ ಉಪಚರಿಸಿದ ಮೀನುಗಳಲ್ಲಿ ಏನು ಕಂಡುಬಂದಿತ್ತೋ ಅದೇ ರೀತಿಯಲ್ಲಿ ಆರ್ ಒ ಎಸ್ ಶೇಖರಣೆಯು ಡಿಎನ್ಎ ಯನ್ನು ಹಾನಿಗೊಳಿಸುವ ಜೊತೆಗೆ ಪ್ರಾಣಿಗಳ ಮೇಲೆ ಇನ್ನಿತರ ದುಷ್ಪರಿಣಾಮಗಳನ್ನು ಬೀರುತ್ತದೆ. ನೀರಿನಲ್ಲಿ ಮೈಕ್ರೊಪ್ಲ್ಯಾಸ್ಟಿಕ್ ಗಳು ಹಾಗೂ ಸೈಕ್ಲೊಹೆಕ್ಸಿಲ್ ವರ್ಗದ ರಾಸಾಯನಿಕಗಳಿರುವುದು ಕರಗಿದ ಆಮ್ಲಜನಕ ಪ್ರಮಾಣವನ್ನು ತಗ್ಗಿಸಿ, ಆ ಮೂಲಕ ಮೀನಿನಂತಹ ಜೀವಿಗಳಲ್ಲಿ ಆರ್ ಎ ಎಸ್ ಶೇಖರಣೆಯನ್ನು ಪ್ರಚೋದಿಸುತ್ತದೆ ಎಂಬುದು ಬೇರೆ ಅಧ್ಯಯನಗಳಿಂದ ಈಗಾಗಲೇ ದೃಢಪಟ್ಟಿದೆ.

ನೆದರ್ ಲ್ಯಾಂಡ್ಸ್ ನಲ್ಲಿ ಇತ್ತೀಚೆಗೆ ನಡೆದಿರುವ ಅಧ್ಯಯನವು, ಮೈಕ್ರೊಪ್ಲ್ಯಾಸ್ಟಿಕ್ ಗಳು ಮನುಷ್ಯನ ರಕ್ತಪರಿಚಲನಾ ವ್ಯವಸ್ಥೆಯನ್ನು ಪ್ರವೇಶಿಸಬಲ್ಲವು ಎಂಬುದನ್ನು ತೋರಿಸಿವೆ. ಹಾಗಾದರೆ, ಕಾವೇರಿ ನೀರನ್ನು ಬಳಸುವ ಕೋಟ್ಯಂತರ ಜನರಿಗೆ ನೊಂಗ್ ತೊಂಬಾ ತಂಡದವರು ನಡೆಸಿದ ಪ್ರಯೋಗದ ಫಲಿತಾಂಶಗಳು ಕೊಡುವ ಸಂದೇಶವಾದರೂ ಏನು? ಈಗ ಕಂಡುಬಂದಿರುವ ಸಾಂದ್ರತೆಯ ಪ್ರಮಾಣವು ಮನುಷ್ಯರ ಮೇಲೆ ಬೀರುವ ಪರಿಣಾಮವು ಆತಂಕಕಾರಿ ಮಟ್ಟದಲ್ಲಿ ಇಲ್ಲದಿದ್ದರೂ ಅದರ ದೀರ್ಘಾವಧಿ ದುಷ್ಪರಿಣಾಮಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು. ಆದರೆ, ಈ ಪ್ರಶ್ನೆಗೆ ಖಚಿತ ಉತ್ತರ ಕೊಡುವ ಮುನ್ನ ಮೈಕ್ರೊಪ್ಲ್ಯಾಸ್ಟಿಕ್ ಗಳು ಯಾವ ರೀತಿಯಲ್ಲಿ ಜೀವಿಗಳ ದೇಹವನ್ನು ಪ್ರವೇಶಿಸಿ ದುಷ್ಪರಿಣಾಮ ಬೀರಬಹುದು ಎಂಬುದನ್ನು ನಿರ್ದಿಷ್ಟವಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಈಗ ನಾವು ಇದರ ಬಗ್ಗೆ ಗಮನ ಕೇಂದ್ರೀಕರಿಸಿದ್ದೇವೆ” ಎಂದೂ ಅವರು ಹೇಳುತ್ತಾರೆ.

ಉಲ್ಲೇಖ:
ಅನಿಫೊವೊಷೆ ಎ.ಟಿ., ರಾಯ್ ಡಿ, ದತ್ತಾ ಎಸ್, ನೊಂಗ್ ತೊಂಬಾ ಯು, , Evaluation of cytogenotoxic potential and embryotoxicity of KRS-Cauvery River water in zebrafish (Danio rerio), Ecotoxicology and Environmental Safety, Volume 233, 2022, 113320, ISSN 0147-6513,
https://doi.org/10.1016/j.ecoenv.2022.113320

ಸಂಪರ್ಕಿಸಿ:
ಉಪೇಂದ್ರ ನೊಂಗ್ ತೊಂಬಾ
ಪ್ರಾಧ್ಯಾಪಕರು, ಮಾಲಿಕ್ಯುಲಾರ್ ರಿಪ್ರೊಡಕ್ಷನ್, ಡೆವಲಪ್ಮೆಂಟ್ ಅಂಡ್ ಜೆನೆಟಿಕ್ಸ್ ವಿಭಾಗ (ಎಂ.ಆರ್.ಡಿ.ಜಿ.)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
upendra@iisc.ac.in
+91-80-22933258

ಅಬ್ಯಾಸ್ ಟೋಬ ಅನಿಫೊವೊಷೆ
ಪಿಎಚ್.ಡಿ. ವಿದ್ಯಾರ್ಥಿ, ಮಾಲಿಕ್ಯುಲಾರ್ ರಿಪ್ರೊಡಕ್ಷನ್, ಡೆವಲಪ್ಮೆಂಟ್ ಅಂಡ್ ಜೆನೆಟಿಕ್ಸ್ ವಿಭಾಗ (ಎಂ.ಆರ್.ಡಿ.ಜಿ.)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
anifowoshea@iisc.ac.in
ಚಿತ್ರ ಕೃಪೆ: ಅಬ್ಯಾಸ್ ಅನಿಪೊವೊಷೆ ಮತ್ತು ಉಪೇಂದ್ರ ನೊಂಗ್ ತೊಂಬಾ

ಪತ್ರಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಬಿಡುಗಡೆಯ ಯಾವುದೇ ಪಠ್ಯ ಭಾಗವನ್ನು ಯಥಾವತ್ತಾಗಿ ಬಳಸಿಕೊಂಡರೆ, ದಯವಿಟ್ಟು ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆ ಹೆಸರಿನಲ್ಲಿ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆ ಕೇಳುವುದಿದ್ದರೆ ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.
——000——