-ರಂಜಿನಿ ರಘುನಾಥ್
ನಮ್ಮ ನಕ್ಷತ್ರಪುಂಜ ‘ಕ್ಷೀರಪಥ’ದಲ್ಲಿ ನಕ್ಷತ್ರಗಳು ಹೇಗೆ ರೂಪುಗೊಳ್ಳುತ್ತವೆ ಹಾಗೂ ಅವಸಾನ ಹೊಂದುತ್ತವೆ ಎಂಬ ಬಗ್ಗೆ ಹೊಸ ಸುಳಿವುಗಳನ್ನು ನೀಡುವ ಹಾಗೂ ಈ ಹಿಂದೆ ಗೊತ್ತಿರದಿದ್ದ ಹಲವಾರು ಸೂಕ್ಷ್ಮ ಅಂಶಗಳನ್ನು ಅಂತರರಾಷ್ಟ್ರೀಯ ಖಗೋಳವಿಜ್ಞಾನಿಗಳ ತಂಡವೊಂದು ನಡೆಸಿದ ಹೊಸ ಸಂಶೋಧನೆಯು ಹೊರಗೆಡವಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ ಸಿ.) ತಜ್ಞರನ್ನೂ ಒಳಗೊಂಡ ಈ ತಂಡವು ನಡೆಸಿದ ಅಧ್ಯಯನವು ನೂರಾರು ವರ್ಷಗಳಿಂದ ಕುತೂಹಲದಿಂದ ಕಾಡುತ್ತಿದ್ದ ಸಂಕೀರ್ಣ ಪ್ರಕ್ರಿಯೆಗಳ ಬಗೆಗೂ ಬೆಳಕು ಚೆಲ್ಲಿದೆ. ‘ಭಾರತೀಯ ಅಂತರಿಕ್ಷ ವಿಜ್ಷಾನ ಮತ್ತು ತಂತ್ರಜ್ಞಾನ ಸಂಸ್ಥೆ’ಯ (ಐ.ಐ.ಎಸ್.ಟಿ.) ವಿಜ್ಞಾನಿಗಳೂ ಕೂಡ ಭಾಗಿಯಾಗಿದ್ದ ಈ ಕುರಿತ ಅಧ್ಯಯನ ವರದಿಯ ಸರಣಿಯು ‘ಅಸ್ಟ್ರಾನಮಿ & ಆಸ್ಟ್ರೋಫಿಸಿಕ್ಸ್’ನಲ್ಲಿ ಪ್ರಕಟವಾಗಿದೆ.
ಸಂಶೋಧನೆಯ ಭಾಗವಾಗಿ ‘ಕ್ಷೀರಪಥ’ದ ಬಹುಪಾಲು ವ್ಯಾಪ್ತಿಗೆ ಸಂಬಂಧಿಸಿದ ದತ್ತಾಂಶಗಳನ್ನು ಎರಡು ಪ್ರಬಲ ರೇಡಿಯೊ ದೂರದರ್ಶಕಗಳನ್ನು ಬಳಸಿ ಕಲೆಹಾಕಿ ಒಟ್ಟುಗೂಡಿಸಲಾಯಿತು. ಇದರಲ್ಲಿ ಒಂದು, ಅಮೆರಿಕದ ರಾಷ್ಟ್ರೀಯ ರೇಡಿಯೊ ಖಗೋಳವಿಜ್ಞಾನ ವೀಕ್ಷಣಾಲಯ (NRAO- National Radio Astronomy Observatory) ದಲ್ಲಿರುವ ‘ದಿ ಕಾರ್ಲ್ ಜಿ.ಜಾನ್ ಸ್ಕೈ ಲಾರ್ಜ್ ಅರೇ (VLA) ಆಗಿದ್ದರೆ, ಮತ್ತೊಂದು,
ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ರೇಡಿಯೊ ಖಗೋಳವಿಜ್ಞಾನ ಸಂಸ್ಥೆಯು (MPIfR- the Max Planck Institute for Radio Astronomy) ನಿರ್ವಹಿಸುವ ‘ಎಫೆಲ್ಸ್ ಬರ್ಗ್ 100-m ರೇಡಿಯೊ ದೂರದರ್ಶಕ’ವಾಗಿದೆ. ‘ಎಫೆಲ್ಸ್ ಬರ್ಗ್ 100-m ರೇಡಿಯೊ ದೂರದರ್ಶಕ’ವು ‘ಗ್ಲೋಸ್ಟಾರ್’ (GLOSTAR-Global View on Star formation in the Milky Way- ‘ಕ್ಷೀರಪಥ’ದಲ್ಲಿ ನಕ್ಷತ್ರ ರೂಪುಗೊಳ್ಳುವಿಕೆ ಕುರಿತು ಜಾಗತಿಕ ನೋಟ) ಕಾರ್ಯಯೋಜನೆಯ ಭಾಗವಾಗಿದೆ.
ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ನಿರುಪಮ್ ರಾಯ್, ಐ.ಐ.ಎಸ್ ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವರ ಪದವಿ ವಿದ್ಯಾರ್ಥಿಯಾಗಿದ್ದ ರೋಹಿತ್ ಡೋಕರ, ಐ.ಐ.ಎಸ್.ಟಿ.ಯಲ್ಲಿ ಭೂ ಮತ್ತು ಅಂತರಿಕ್ಞ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಜಗದೀಪ್ ಡಿ.ಪಾಂಡ್ಯನ್ ಅವರು ‘ಗ್ಲೋಸ್ಟಾರ್’ ಕಾರ್ಯಯೋಜನೆಯಲ್ಲಿ ಸೇರಿರುವ ಭಾರತೀಯ ವಿಜ್ಞಾನಿಗಳ ಪೈಕಿ ಕೆಲವರಾಗಿದ್ದಾರೆ.
MPIfR ನಲ್ಲಿ ಈಗ ಪಿಎಚ್.ಡಿ. ವಿದ್ಯಾರ್ಥಿಯಾಗಿರುವ ಡೋಕರ ಅವರು ಹೊಸ ಸೂಪರ್ ನೋವಾದ ಅವಶೇಷಗಳನ್ನು (SNR ಗಳುs) ಪತ್ತೆಹಚ್ಚಿರುವ ಬಗೆಗೆ ಮಂಡಿಸಲಾದ ವಿಚಾರ ಪ್ರಬಂಧಗಳ ಪ್ರಥಮ ಲೇಖಕರಾಗಿದ್ದಾರೆ. (ನಮ್ಮ ‘ಕ್ಷೀರಪಥ’ದಲ್ಲಿ ದೈತ್ಯ ನಕ್ಷತ್ರಗಳ ಸ್ಫೋಟಕ ಅವಸಾನದಿಂದ ಹುಟ್ಟುವ ರಚನೆಗಳನ್ನು ಸೂಪರ್ ನೋವಾ ಅವಶೇಷಗಳು ಎನ್ನಲಾಗುತ್ತದೆ.)
The figure shows the GLOSTAR image of radio emission from a part of the plane of our Milky Way galaxy. The image showcases a wide range of astrophysical objects, from newly forming massive stars to remnants of supernova explosions (Credit: GLOSTAR team).
ಈ ಮುಂಚೆ ನಡೆಸಲಾಗಿದ್ದ ಸಮೀಕ್ಷೆಗಳು, ‘ಕ್ಷೀರಪಥ’ದಲ್ಲಿ ನಿರೀಕ್ಷಿಸಲಾಗಿದ್ದ ಸಂಖ್ಯೆಯ ಕೇವಲ 1/3ರಷ್ಟು SNR ಗಳನ್ನು (ಸುಮಾರು 1000 ದಷ್ಟು) ಪತ್ತೆಹಚ್ಚಿದ್ದವು. ಇದೀಗ ‘ಗ್ಲೋಸ್ಟಾರ್’ ಸಂಶೋಧಕರ ತಡವು VLA ದತ್ತಾಂಶವೊಂದರಲ್ಲೇ ಹೊಸದಾಗಿ 80 SNR ಗಳನ್ನು ಗುರುತಿಸಿದೆ. ಅಷ್ಟೇ ಅಲ್ಲದೇ, ಎಫೆಲ್ಸ್ ಬರ್ಗ್ ಮತ್ತು ವಿಎಲ್ಎ ದತ್ತಾಂಶಗಳನ್ನು ಒಟ್ಟು ಸೇರಿಸಿದರೆ ಮತ್ತಷ್ಟು SNR ಗಳು ಕಂಡುಬರಬಹುದು ಎನ್ನಲಾಗಿದೆ. ಇದೇ ವೇಳೆ, ತಜ್ಞರು ಈ ಹಿಂದೆ ಅಂದಾಜಿಸಲಾಗಿದ್ದ 77 SNR ಗಳ ಇರುವಿಕೆಯನ್ನು ಕೂಡ ದೃಢಪಡಿಸಿದ್ದಾರೆ. ಜೊತೆಗೆ, ಈ ಮುಂಚೆ ತಪ್ಪಾಗಿ ಗುರುತಿಸಲಾಗಿದ್ದ ಕೆಲವು SNR ಗಳ ಪುನರ್ ವರ್ಗೀಕರಣವನ್ನು ಕೂಡ ಮಾಡಿದ್ದಾರೆ. ‘ಗ್ಲೋಸ್ಟಾರ್’ನಲ್ಲಿ ಬಳಸಲಾಗುತ್ತಿರುವ ಉತ್ತರ ಭಾಗದ ದೂರದರ್ಶಕಗಳು ‘ಕ್ಷೀರಪಥ’ದ ಒಳಾವರಣದ ಕೇವಲ ಅರ್ಧಭಾಗವನ್ನಷ್ಟೇ ನೋಡಬಲ್ಲವಾದ್ದರಿಂದ ಈ ಮೇಲಿನ ಅಂಶಗಳು ತುಂಬಾ ಗಮನಾರ್ಹವಾಗಿವೆ. “ಈವರೆಗೆ ಕಣ್ಣಿಗೆ ಕಾಣದಿದ್ದ ಸೂಪರ್ ನೋವಾ ಅವಶೇಷಗಳ ನಿಗೂಢತೆಯನ್ನು ಭೇದಿಸುವಲ್ಲಿ ಇದೊಂದು ಪ್ರಮುಖ ಬೆಳವಣಿಗೆಯಾಗಿದೆ” ಎನ್ನುತ್ತಾರೆ ಡೋಕರ.
ನಕ್ಷತ್ರ ರೂಪುಗೊಳ್ಳುವ ಹಂತದ ಇತರ ಸುಳಿವುಗಳನ್ನು ಗುರುತಿಸುವುದರಲ್ಲೂ ಸಂಶೋಧಕರು ಯಶಸ್ವಿಯಾಗಿದ್ದಾರೆ. ನಮಗೆ ಸಮೀಪದಲ್ಲಿರುವ, ನಕ್ಷತ್ರ ರೂಪುಗೊಳ್ಳುವ ದೊಡ್ಡ ವಲಯವಾದ ‘ಸೈಗ್ನಸ್ ಎಕ್ಸ್’ನಲ್ಲಿ ಮೆಥನಾಲ್ ಅಣುಗಳಿಂದ ರೇಡಿಯೊ ವಿಕಿರಣಗಳ ಹೊರಸೂಸುವಿಕೆ ಆಗುತ್ತಿರುವುದು ಇದಕ್ಕೊಂದು ಉದಾಹರಣೆಯಾಗಿದೆ. ಬೃಹತ್ ನಕ್ಷತ್ರಗಳಿಂದ ಅವು ರೂಪುಗೊಳ್ಳುವ ಅತ್ಯಂತ ಆರಂಭಿಕ ಹಂತಗಳಲ್ಲಿ ಈ ವಿಕಿರಣಗಳು ಹೊರಸೂಸಲ್ಪಡುವುದು ಅತ್ಯಂತ ಸಾಮಾನ್ಯ ವಿದ್ಯಮಾನವಾಗಿದೆ. ದೈತ್ಯ ಗಾತ್ರದ ಪ್ರಾಯಾವಸ್ಥೆಯ ನಕ್ಷತ್ರಗಳ ಇರುವಿಕೆಯ ಮತ್ತೊಂದು ಖಚಿತ ಸೂಚನೆಯಾದ ಅಯಾನೀಕರಣಗೊಂಡ ಜಲಜನಕದ ದಟ್ಟ ನೆಲೆಗಳನ್ನು ಕೂಡ ಸಂಶೋಧಕರು ಪತ್ತೆಹಚ್ಚಿದ್ದಾರೆ.
ಹೊಸ ತಾರೆಗಳು ಸಾಮಾನ್ಯವಾಗಿ ದಟ್ಟೈಸಿದ ಮೋಡಗಳು ಮತ್ತು ಅನಿಲಗಳಿಂದ ಸುತ್ತುವರಿದಿರುತ್ತವೆ. “ನಕ್ಷತ್ರಗಳ ಸುತ್ತಲ ಈ ದಟ್ಟವಾದ ಮೋಡಗಳು ಗೋಚರ ಬೆಳಕನ್ನು ಹೀರಿಕೊಳ್ಳುವುದರಿಂದ ಬಹುತೇಕ ದೂರದರ್ಶಕಗಳು ಹಲವಾರು ಅಂಶಗಳ ಬಗ್ಗೆ ಬೆಳಕು ಚೆಲ್ಲಲು ಅಸಮರ್ಥವಾಗಿರುತ್ತವೆ. ಆದ್ದರಿಂದ ತಜ್ಞರು, ರೇಡಿಯೊ ವಿಕಿರಣಗಳ ಸುಳಿವಿನ ಬಗ್ಗೆ ಗಮನ ಕೇಂದ್ರೀಕರಿಸಿರುತ್ತಾರೆ” ಎನ್ನುತ್ತಾರೆ NRAO ಮತ್ತು MPIfR ಗಳಲ್ಲಿ ಕೆಲಸ ಮಾಡಿ ಅನುಭವವಿರುವ ರಾಯ್ ಅವರು.
“ಗ್ಲೋಸ್ಟಾರ್ ಸರ್ವೇಕ್ಷಣೆಯು ಮೆಥನಾಲ್ ಅಣುಗಳಿಂದ ಹಿಡಿದು ಅಯಾನೀಕರಣಗೊಂಡ ಜಲಜನಕದವರೆಗೆ ವಿಶಾಲ ವ್ಯಾಪ್ತಿಯ ರೇಡಿಯೊ ವಿಕಿರಣಗಳನ್ನು ಪತ್ತೆಹಚ್ಚಬಲ್ಲದು. ಹೀಗಾಗಿ, ದೈತ್ಯ ನಕ್ಷತ್ರಗಳು ರೂಪುಗೊಳ್ಳುವ ಅತ್ಯಂತ ಆರಂಭಿಕ ಹಂತದಿಂದ ಹಿಡಿದು ಆನಂತರದ ಹಂತಗಳವರೆಗೆ ಇದು ಖಚಿತ ಸುಳಿವುಗಳನ್ನು ಒದಗಿಸುತ್ತದೆ. ‘ಕ್ಷೀರಪಥ’ದಲ್ಲಿ ನಕ್ಷತ್ರ ರೂಪುಗೊಳ್ಳುವ ಪ್ರಕ್ರಿಯೆಯ ಇಡಿಯಾದ ಚಿತ್ರಣವನ್ನು ಪಡೆಯಲು ಇದು ಅತ್ಯಂತ ಮುಖ್ಯವಾದುದು” ಎನ್ನುತ್ತಾರೆ MPIfR ನಲ್ಲಿ ಈ ಮುಂಚೆ ಉದ್ಯೋಗಿಯಾಗಿದ್ದ ಪಾಂಡ್ಯನ್.
ಎಫೆಲ್ಸ್ ಬರ್ಗ್, 100 ಮೀ ವ್ಯಾಸದ ಒಂದೇ ದೊಡ್ಡ ಗಾತ್ರದ ಡಿಷ್ ಇರುವ ರೇಡಿಯೊ ದೂರದರ್ಶಕವಾಗಿದ್ದು, ಬೃಹತ್ ಗಾತ್ರದ ರಚನೆಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಆದರೆ, VLA ಯು ಸಣ್ಣ ಆಂಟೆನಾಗಳ ಸಮೂಹವಾಗಿದ್ದು, ಅಧಿಕ ರೆಸಲ್ಯೂಷನ್ ನಿಂದ ಕೂಡಿದ ಚಿತ್ರಗಳನ್ನು ಸೆರೆಹಿಡಿಯಬಲ್ಲ ಇಂಟರ್ ಫೆರೊಮೀಟರ್ ನಂತೆ ಕೆಲಸ ಮಾಡುತ್ತದೆ. ಈ ಎರಡೂ ದೂರದರ್ಶಕಗಳಿಂದ ಕಲೆಹಾಕಲಾದ ದತ್ತಾಂಶಗಳ ಸಹಾಯದಿಂದ ತಜ್ಞರು ಈ ಅಂತರಿಕ್ಷ ವಲಯದ ಬೇರೆ ಬೇರೆ ಖಭೌತ ಕಾಯಗಳ ಬಗ್ಗೆ ಸಮಗ್ರ ಚಿತ್ರಣ ಹೊಂದಲು ಸಾಧ್ಯವಾಗಿದೆ. “50 ವರ್ಷಗಳ ಕಾರ್ಯಾಚರಣೆ ನಂತರವೂ ಎಫೆಲ್ಸ್ ಬರ್ಗ್ ದೂರದರ್ಶಕವು ಅತ್ಯಂತ ಮಹತ್ವದ್ದಾಗಿದೆ ಎಂಬುದಕ್ಕೆ ಇದು ಸ್ಪಷ್ಟ ಪುರಾವೆ” ಎನ್ನುತ್ತಾರೆ ಪ್ರಾಜೆಕ್ಟ್ ಲೀಡರ್ ಮತ್ತು ಸರ್ವೇಕ್ಷಣೆಯ ಸಮಗ್ರ ಅಧ್ಯಯನ ವರದಿ ಮಂಡನೆಯ ಪ್ರಥಮ ಲೇಖಕರಾದ MPIfR ನ ಆಂಡ್ರಿಯಾಸ್ ಬ್ರುಂಥಾಲೆರ್.
“ನಮ್ಮ ಎರಡು ನೆಚ್ಚಿನ ರೇಡಿಯೊ ದೂರದರ್ಶಕಗಳ ದತ್ತಾಂಶಗಳನ್ನು ಒಟ್ಟು ಸೇರಿಸುತ್ತಿರುವುದರಿಂದ ವಿಜ್ಞಾನದ ಕುರಿತಾದ ಹೊಸ ಅಂಶಗಳು ಹೊರಹೊಮ್ಮುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ” ಎಂದು ದನಿಗೂಡಿಸುತ್ತಾರೆ ‘ಗ್ಲೋಸ್ಟಾರ್’ಗೆ ಚಾಲನೆ ನೀಡಿದ MPIfR ನಿರ್ದೇಶಕ ಕಾರ್ಲ್ ಮೆಂಟೆನ್.
ಪಾಂಡ್ಯನ್ ಮತ್ತು ರಾಯ್ ಅವರಿಬ್ಬರೂ ಸದ್ಯ ಮೆಂಟೆನ್ ರೊಂದಿಗೆ ಮ್ಯಾಕ್ ಪ್ಲ್ಯಾಂಕ್- ಇಂಡಿಯಾ ಸಹಭಾಗಿತ್ವ ಸಮೂಹಗಳನ್ನು ನಿರ್ವಹಿಸುತ್ತಿದ್ದು, ಸಕ್ರಿಯ ಸಹಭಾಗಿತ್ವವನ್ನು ಮುಂದುವರಿಸುವ ನಿಟ್ಟಿನಲ್ಲಿ, ವಿಶೇಷವಾಗಿ ‘ಗ್ಲೋಸ್ಟಾರ್’ ಕಾರ್ಯಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ಸಂಬಂಧ ಕಾರ್ಯನಿರತರಾಗಿದ್ದಾರೆ.
MPIfR ಮತ್ತು NRAO ವಿಜ್ಞಾನಿಗಳು, ಯು.ಕೆ., ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾದ ಸಹಭಾಗಿಗಳು ಈ ಸಂಶೋಧಕರ ತಂಡದ ಸದಸ್ಯರಲ್ಲಿ ಸೇರಿದ್ದಾರೆ. ಪರಿವೀಕ್ಷಣೆಗಳು ಮತ್ತು ವಿಶ್ಲೇಷಣೆಗಳು ಮುಂದುವರಿದಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚೆಚ್ಚು ಫಲಿತಾಂಶಗಳು ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಉಲ್ಲೇಖಗಳು:
A Global View on Star Formation: The GLOSTAR Galactic Plane Survey. I. Overview and first results for the Galactic longitude range 28°< l < 36°, Brunthaler, A. et al. 2021, Astronomy & Astrophysics (July 22, 2021). DOI: 10.1051/0004-6361/202039856
https://www.aanda.org/10.1051/0004-6361/202039856
Astro-ph: https://arxiv.org/abs/2106.00377
Global View on Star Formation: The GLOSTAR Galactic Plane Survey. II. Supernova remnants in the first quadrant of the Milky Way?, Dokara, R. et al., 2021, Astronomy & Astrophysics (July 22, 2021). DOI: 10.1051/0004-6361/202039873
https://www.aanda.org/10.1051/0004-6361/202039873
Astro-ph: https://arxiv.org/abs/2103.06267
A Global View on Star Formation: The GLOSTAR Galactic Plane Survey. III. 6.7 GHz Methanol maser survey in Cygnus X, Ortiz-León, G.N. et al., 2021, Astronomy & Astrophysics (July 22, 2021). DOI: 10.1051/0004-6361/202140817
https://www.aanda.org/10.1051/0004-6361/202140817
Astro-ph: https://arxiv.org/abs/2105.07471
A Global View on Star Formation: The GLOSTAR Galactic Plane Survey. IV. Radio continuum detections of young stellar objects in the Galactic Centre Region, Nguyen, H. et al. 2021, Astronomy & Astrophysics (July 22, 2021). DOI: 10.1051/0004-6361/202140802
https://www.aanda.org/10.1051/0004-6361/202140802
Astro-ph: https://arxiv.org/abs/2105.03212
ಹೆಚ್ಚಿನ ಮಾಹಿತಿ:
Global view on Star formation in the Milky Way (GLOSTAR): https://glostar.mpifr-bonn.mpg.de/glostar/
Karl G Jansky Very Large Array (VLA): https://public.nrao.edu/telescopes/vla/
Effelsberg 100-m Radio Telescope: https://www.mpifr-bonn.mpg.de/en/effelsberg
ಸಂಪರ್ಕಿಸಿ:
ನಿರುಪಮ್ ರಾಯ್
ಸಹಾಯಕ ಪ್ರಾಧ್ಯಾಪಕರು
ಭೌತಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
nroy@iisc.ac.in
+91-80-22932056
ಜಗದೀಪ್ ಡಿ. ಪಾಂಡ್ಯನ್
ಸಹಾಯಕ ಪ್ರಾಧ್ಯಾಪಕರು
ಭೂ ಮತ್ತು ಅಂತರಿಕ್ಷ ವಿಜ್ಞಾನಗಳ ವಿಭಾಗ
ಭಾರತೀಯ ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐ.ಐ.ಎಸ್.ಟಿ.)
jagadheep@iist.ac.in
+91-471-2568526
ಪರ್ತಕರ್ತರಿಗೆ ಸೂಚನೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or>pro@iisc.ac.in ಗೆ ಬರೆಯಿರಿ.
—-000—-