ಗ್ರಾಮೀಣ ಶಾಲೆಯಲ್ಲಿ ತ್ಯಾಜ್ಯ ನೀರಿನ ವಿಕೇಂದ್ರೀಕೃತ ಸಂಸ್ಕರಣೆ


-ಶತರೂಪ ಸರ್ಕಾರ್

ಕರ್ನಾಟಕದ ಹಳ್ಳಿಗಾಡಿನ ಗ್ರಾಮವಾದ ಬೆರಂಬಾಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ದಕ್ಷತೆಯಿಂದ ಕೂಡಿದ ತ್ಯಾಜ್ಯನೀರಿನ ವಿಕೇಂದ್ರೀಕೃತ ಸಂಸ್ಕರಣಾ ವ್ಯವಸ್ಥೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ತಾಂತ್ರಿಕತೆಗಳ ಕೇಂದ್ರದ (ಸಿ.ಎಸ್.ಟಿ.) ಸಂಶೋಧಕರು  ಅಭಿವೃದ್ಧಿಪಡಿಸಿದ್ದಾರೆ.

ಸಂಯುಕ್ತ ಸಂಸ್ಥಾನದ (ಯು.ಕೆ.) ಸಂಶೋಧಕರ ಸಹಭಾಗಿತ್ವದಲ್ಲಿ ಮಾಡಿರುವ ಈ ಸಂಶೋಧನೆ ಕುರಿತ ಅಧ್ಯಯನ ವರದಿಯು ‘ಜರ್ನಲ್ ಆಫ್ ವಾಟರ್ ಪ್ರೊಸೆಸ್ ಎಂಜಿನಿಯರಿಂಗ್’ನಲ್ಲಿ ವರದಿ ಪ್ರಕಟವಾಗಿದೆ. ಈ ವ್ಯವಸ್ಥೆಯು ಹೇಗೆ ಕಳೆದ ಒಂದು ವರ್ಷ ಅವಧಿಯಿಂದ ತ್ಯಾಜ್ಯನೀರಿನ ಮರುಬಳಕೆಗೆ ಅನುವು ಮಾಡಿಕೊಟ್ಟಿದೆ ಹಾಗೂ ಶುದ್ಧನೀರಿನ ಮೂಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿದೆ ಎಂಬುದನ್ನು ಈ ಅಧ್ಯಯನವು ದೃಢಪಡಿಸಿದೆ. “ ಗ್ರಾಮೀಣ ಪರಿಸರದಲ್ಲಿ ವಿಕೇಂದ್ರೀಕೃತ ತ್ಯಾಜ್ಯನೀರಿನ ಸಂಸ್ಕರಣಾ ವ್ಯವಸ್ಥೆಯನ್ನು ಹೇಗೆ ಆರ್ಥಿಕವಾಗಿ ಕಾರ್ಯಸಾಧುವಾದ ರೀತಿಯಲ್ಲಿ ಅಳವಡಿಸಬಹುದು ಎಂಬುದನ್ನು ಮೊದಲ ಬಾರಿಗೆ ನೇರವಾಗಿ ತೋರಿಸಿದ್ದೇವೆ” ಎನ್ನುತ್ತಾರೆ ಸಿ.ಎಸ್.ಟಿ. ಸಹಾಯಕ ಪ್ರಾಧ್ಯಾಪಕರೂ ಆದ ಪ್ರೌಢಪ್ರಬಂಧದ ಹಿರಿಯ ಲೇಖಕ ಲಕ್ಷ್ಮಿನಾರಾಯಣ ರಾವ್.

ಸಂಶೋಧಕರು ತಂಡವು ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆ ಕುರಿತು ಸುಮಾರು ಒಂದು ವರ್ಷ ಕಾಲ ಅಧ್ಯಯನ ನಡೆಸಿದೆ. ತ್ಯಾಜ್ಯನೀರಿನ ಮೂಲ ಹಾಗೂ ನಿರ್ಗಮನ ನೆಲೆಗಳಲ್ಲಿ ತ್ಯಾಜ್ಯನೀರಿನ ವಿವಿಧ ಭೌತಿಕ-ರಾಸಾಯನಿಕ ಹಾಗೂ ಜೈವಿಕ ಗುಣ ಲಕ್ಷಣಗಳನ್ನು ಅವಲೋಕಿಸಲಾಗಿದೆ. ಸಂಸ್ಕರಣೆಯ ಪ್ರತಿಯೊಂದು ಹಂತದ ನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ಪ್ರತಿಯೊಂದು ಹಂತದಲ್ಲಿ ಕಷ್ಮಲ ನಿವಾರಣಾ ದಕ್ಷತೆ, ಒಟ್ಟಾರೆ ನಿಲಂಬಿತ ಘನ ಕಣಗಳು (ಟಿ.ಎಸ್.ಎಸ್.), ನೈಟ್ರೇಟ್, ರಂಜಕದ ಪ್ರಮಾಣ, ಜೈವಿಕ ಆಮ್ಲಜನಕ ಬೇಡಿಕೆ (ಬಿ.ಒ.ಡಿ.), ರಾಸಾಯನಿಕ ಆಮ್ಮಜನಕ ಬೇಡಿಕೆ (ಸಿ.ಒ.ಡಿ.), ಫೀಕಲ್ ಕೋಲಿಫಾರ್ಮ್ (ಮಾನವ ಹಾಗೂ ಪ್ರಾಣಿಗಳ ಶೌಚದಿಂದ ಉಂಟಾಗುವ ಬ್ಯಾಕ್ಟೀರಿಯಾಗಳು), ಇವುಗಳನ್ನು ಅವಲೋಕಿಸಲಾಗಿದೆ.  ಒಟ್ಟಾರೆ, ವ್ಯವಸ್ಥೆಯು, ಬಹುತೇಕ ಮಾನದಂಡಗಳಿಗೆ ಸಂಬಂಧಿಸಿದಂತೆ ಶೇ 90ಕ್ಕೂ ಹೆಚ್ಚು ಆರ್.ಇ.ಗಳನ್ನು ನೀಡಿದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ಪ್ರತಿದಿನವೂ 667 ಲೀಟರ್ ಗಳಷ್ಟು ತ್ಯಾಜ್ಯನೀರನ್ನು ಸಂಸ್ಕರಿಸಲಾಗುತ್ತಿತು. ಇದರಿಂದ ವಾರ್ಷಿಕ 1,80,000 ಲೀಟರ್ ಗಳಷ್ಟು ನೀರು ಉಳಿತಾಯವಾಗಿದೆ.


New toilets using recycled and treated grey water

ಬೆರಂಬಾಡಿ ಪ್ರಾಥಮಿಕ ಶಾಲೆಯಲ್ಲಿ ಕೈತೊಳೆಯುವ ಸಿಂಕ್ ಹಾಗೂ ಅಡುಗೆ ಕೋಣೆಯ ವಾಷ್ ಸಿಂಕ್ ನಿಂದ ಹೆಚ್ಚಾಗಿ ಮಧ್ಯಾಹ್ನದ ಊಟದ ಅವಧಿಯಲ್ಲಿ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿತ್ತು. ಹೀಗೆ ಕೈತೊಳೆಯುವ ಸಿಂಕ್ ನಿಂದ ಹೊರಬರುತ್ತಿದ್ದ ತ್ಯಾಜ್ಯನೀರನ್ನು ಮೊದಲು ಸ್ಟ್ರೈನರ್ ಗಳ ಮೂಲಕ ಹರಿಯುವಂತೆ ಮಾಡಲಾಗುತ್ತಿತ್ತು. ಹೀಗೆ ಮಾಡುವುದರಿಂದ ನೀರಿನಲ್ಲಿದ್ದ ದೊಡ್ಡ ಗಾತ್ರದ ಆಹಾರದ ಕಣಗಳು ಪ್ರತ್ಯೇಕಗೊಳ್ಳುತ್ತಿದ್ದವು. ಆಮೇಲೆ ನೀರನ್ನು ಆಮ್ಲಜನಕರಹಿತವಾದ  ಮೂರು ಮರಳಿನ ಜೈವಿಕ-ಶೋಧಕ ಟ್ಯಾಂಕ್ಗಳ ಮೂಲಕ ಹಾಯುವಂತೆ ಮಾಡಲಾಗಿತ್ತು. ಈ ಟ್ಯಾಂಕ್ ಗಳಿಗೆ ಸ್ಥಳೀಯವಾಗಿ ಸಿಗುವ ಜಲ್ಲಿ ಕಲ್ಲು, ಮಧ್ಯಮ ಗಾತ್ರದ ಜಲ್ಲಿ ಹಾಗೂ ಮರಳನ್ನು ತುಂಬಲಾಗಿತ್ತು. ತ್ಯಾಜ್ಯ ನೀರು ಈ ಟ್ಯಾಂಕುಗಳ ಮೂಲಕ ಹಾದು ಹೋಗುವಾಗ ಅದರಲ್ಲಿನ ಬ್ಯಾಕ್ಟೀರಿಯಲ್ ಜೈವಿಕ ಪದರಗಳು ತ್ಯಾಜ್ಯನೀರಿನ ಪೌಷ್ಟಿಕಾಂಶಗಳನ್ನು ವಿಘಟಿತಗೊಳಿಸುತ್ತಿದ್ದವು” ಎಂದು ಪ್ರೌಢಪ್ರಬಂಧದ ಮೊದಲ ಲೇಖಕರಾದ ಸಿ.ಎಸ್.ಟಿ. ಸಹಾಯಕ ಪ್ರಾಧ್ಯಾಪಕರಾಗಿದ್ದ ಪಿ.ಎಸ್.ಗಣೇಶ್ ಸುಬ್ರಮಣಿಯನ್ ವಿವರಿಸುತ್ತಾರೆ.


High throughput plasma ozonator

ಮತ್ತೊಂದೆಡೆ ಅಡುಗೆ ಕೋಣೆಯ ಸಿಂಕ್ ನಿಂದ ಹೊರಬರುತ್ತಿದ್ದ ತ್ಯಾಜ್ಯ ನೀರನ್ನು ಮೊದಲಿಗೆ ಗ್ರೀಸ್ ಟ್ರ್ಯಾಪ್ ಮೂಲಕ ಹರಿಯವಂತೆ ಮಾಡಲಾಗಿತ್ತು. ಇದು ನೀರಿನ ಮೇಲ್ಮೈನಲ್ಲಿದ್ದ ಎಣ್ಣೆಯ ಪದರ ಹಾಗೂ ಗ್ರೀಸ್ ಅನ್ನು ತೊಡೆದು ಹಾಕುತ್ತಿತ್ತು. ಆನಂತರ ಈ ನೀರನ್ನು ಆಮ್ಲಜನಕ ರಹಿತವಾದ ಮಡ್ಡಿ ಜೈವಿಕ ಕ್ರಿಯಾಕಾರಕದ ಮೂಲಕ ಹರಿಸಿ, ಆಮೇಲೆ ಸ್ತರೀಕೃತ ಜೈವಿಕ ಶುದ್ಧೀಕರಣ ಚೇಂಬರ್ ಮೂಲಕ ಹರಿಯುವಂತೆ ಮಾಡಲಾಗಿತ್ತು. ಕೊನೆಗೆ, ಕೈತೊಳೆಯುವ ಸಿಂಕ್ ಮತ್ತು ಅಡುಗೆ ಕೋಣೆಯ ಸಿಂಕ್, ಇವೆರಡರಿಂದ ಬಂದು ಶುದ್ಧಗೊಂಡ ನೀರನ್ನು ಕ್ರಮವಾಗಿ ಏರೇಷನ್ ಟ್ಯಾಂಕ್ ಮತ್ತು ಓಝೋನೇಷನ್ ಟ್ಯಾಂಕ್ ಗಳಿಗೆ ಹೋಗುವಂತೆ ಮಾಡಲಾಗಿತ್ತು. ಅಲ್ಲಿ ಅದನ್ನು ಓಜೋನ್ ಬಳಸಿ ಕ್ರಿಮಿಕಾರಕಗಳಿಂದ ಮುಕ್ತಗೊಳಿಸಲಾಗುತ್ತಿತ್ತು. ನೀರನ್ನು ಕ್ರಿಮಿಕಾರಕಗಳಿಂದ ಮುಕ್ತಗೊಳಿಸುವ ಸಲುವಾಗಿಯೇ ವಿನ್ಯಾಸಗೊಳಿಸಲಾದ ಕೋಲ್ಡ್ ಪ್ಲ್ಯಾಸ್ಮಾ ಓಜೋನೇಟರ್ ಬಳಸಿ ಓಜೋನ್ ಸೃಷ್ಟಿಯಾಗುವಂತೆ ಮಾಡಲಾಗಿತ್ತು. ಓಜೋನೇಷನ್ ಪ್ರಕ್ರಿಯೆಯು ನೀರಿನಲ್ಲಿರುವ ಯಾವುದೇ ವಾಸನೆಗಳು ಹಾಗೂ ಬಣ್ಣಗಳನ್ನು ನಿವಾರಣೆಗೊಳಿಸುತ್ತದೆ. ಇದು ಫೀಕಲ್ ಕೋಲೈಯನ್ನು ನಿವಾರಣೆಗೊಳಿಸುವ ಮೂಲಕ ನೀರನ್ನು ಕ್ರಿಮಿಕಾರಕಗಳಿಂದ ಮುಕ್ತಗೊಳಿಸಿ ಹಾನಿಕಾರಕವಲ್ಲದ ಉಪ-ಉತ್ಪನ್ನಗಳನ್ನು ನೀಡುತ್ತದೆ. ಇದು ನೀರಿನಲ್ಲಿನ ಕರಗಿದ ಆಮ್ಲಜನಕ (ಡಿ.ಒ.) ಮಟ್ಟವನ್ನು ಕೂಡ ಹೆಚ್ಚಿಸುತ್ತದೆ” ಎಂದು ವಿವರಿಸುತ್ತಾರೆ ಸುಬ್ರಮಣಿಯನ್. ಹೀಗೆ ಓವರ್ ಹೆಡ್ ತೊಟ್ಟಿಯಲ್ಲಿ ಸಂಗ್ರಹಗೊಂಡ ಸಂಸ್ಕರಿತ ನೀರನ್ನು ವಿದ್ಯಾರ್ಥಿಗಳು ಹಾಗೂ ಶಾಲೆಯ ಸಿಬ್ಬಂದಿಯು ಶೌಚಾಲಯ ಫ್ಲಷ್ ಮಾಡಲು ಹಾಗೂ ಕೈತೋಟಕ್ಕೆ ಬಳಸುತ್ತಿದ್ದರು.


Children using hand wash sinks at the school

 “ಇಲ್ಲಿ ನೀರನ್ನು ಪರಿಣಾಮಕಾರಿಯಾಗಿ ಸಂಸ್ಕರಣೆ ಮಾಡುವ ಸಲುವಾಗಿ ಸೋಲಾರ್ ಚಾಲಿತ ಓಜೋನೇಟರ್ ಅನ್ನು ಅಣಿಗೊಳಿಸಲು ಪ್ಲ್ಯಾಸ್ಮಾ ತಂತ್ರಜ್ಞಾನವನ್ನು ಬಳಸಲಾಗಿತ್ತು” ಎಂದು ತಿಳಿಸುತ್ತಾರೆ ರಾವ್. ಇಲ್ಲಿ ಬಳಸಲಾಗುವ ಓಜೋನೇಟರ್, ಆಮ್ಮಜನಕದ ಬದಲಿಗೆ ಪರಿಸರದ ಗಾಳಿಯನ್ನೇ ಒಳಪೂರಣ ಅನಿಲವನ್ನಾಗಿ ಬಳಸಿಕೊಂಡು ಕಾರ್ಯನಿರ್ವಹಿಸಿ ಓಜೋನ್ ಅನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಹಾನಿಕಾರಕ ಆಮ್ಲಜನಕ ಸಿಲಿಂಡರ್ ಗಳ ಅಗತ್ಯವೂ ಇಲ್ಲವಾಗುತ್ತದೆ. ಹೀಗಾಗಿ ಈ ವ್ಯವಸ್ಥೆಯನ್ನು ಶಾಲಾ ಸಿಬ್ಬಂದಿಯೇ ಸುಲಭವಾಗಿ ಬಳಸಿ ನಿರ್ವಹಿಸಲು ಕೂಡ ಸಾಧ್ಯವಾಗುತ್ತದೆ” ಎಂದೂ ಅವರು ವಿವರಣೆ ನೀಡುತ್ತಾರೆ.

ಈ ಸುಸ್ಥಿರ ಹಾಗೂ ಪರಿಣಾಮಕಾರಿಯಾದ ತ್ಯಾಜ್ಯ ನೀರು ನಿರ್ವಹಣಾ ವ್ಯವಸ್ಥೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಲೆಗಳಲ್ಲಿ ಅಳವಡಿಸಬಹುದು. ಹೀಗೆ ಮಾಡುವ ಮುನ್ನ ಲಭ್ಯ ಜಾಗದ ಪ್ರಮಾಣ, ತ್ಯಾಜ್ಯನೀರಿನ ಪ್ರಾಥಮಿಕ ಗುಣಮಟ್ಟ, ಪ್ರತಿದಿನ ಸೃಷ್ಟಿಯಾಗುವ ತ್ಯಾಜ್ಯ ನೀರಿನ ಪ್ರಮಾಣ, ಇವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. “ಬೆರಂಬಾಡಿ ಗ್ರಾಮಸ್ಥರು ಈ ವ್ಯವಸ್ಥೆಯ ಬಗ್ಗೆ ತುಂಬಾ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಈ ಸುಸ್ಥಿರ ನೀರು ನಿರ್ವಹಣಾ ಕಾರ್ಯಯೋಜನೆಯ ಯಶಸ್ಸನ್ನು ಗಮನಿಸಿ ಕರ್ನಾಟಕ ರಾಜ್ಯದ ಇನ್ನೂ ಹಲವಾರು ಶಾಲೆಗಳು ಈ ವ್ಯವಸ್ಥೆಯನ್ನು ತಮ್ಮ ಶಾಲೆಗಳಲ್ಲೂ ಅಳವಡಿಸಿಕೊಡುವಂತೆ ನಮಗೆ ಕೋರಿಕೆ ಸಲ್ಲಿಸಿವೆ” ಎಂದು ರಾವ್ ತಿಳಿಸುತ್ತಾರೆ.

ಉಲ್ಲೇಖ:

ಪಿ.ಎಸ್.ಗಣೇಶ್ ಸುಬ್ರಮಣಿಯನ್, ಅಂಜಲಿ ವಿ.ರಾಜ್, ಪ್ರಿಯಾಂಕಾ ಜಾಮ್ವಲ್, ಸ್ಟೆಫಾನಿ ಕೊನ್ನೆಲ್ಲಿ, ಜಗದೀಶ್ ಯಲುರಿಪತಿ, ಸಮಿಯಾ ರಿಚರ್ಡ್ಸ್, ರೋವನ್ ಎಲ್ಲಿಸ್, ಲಕ್ಷ್ಮಿನಾರಾಯಣ ರಾವ್. Decentralized treatment and recycling of greywater from a school in rural India, Journal of Water Process Engineering, ಸಂಚಿಕೆ 38, 101695, 2020.

https://doi.org/10.1016/j.jwpe.2020.101695

ಸಂಪರ್ಕಿಸಿ:

ಪಿ.ಎಸ್.ಗಣೇಶ್ ಸುಬ್ರಮಣಿಯನ್
ಪಿಎಚ್.ಡಿ. ವಿದ್ಯಾರ್ಥಿ
ಇಲಿನಾಯ್ ಯೂನಿವರ್ಸಿಟಿ, ಉರ್ಬಾನ-ಶಾಂಪೇನ್
ಇ-ಮೇಲ್: ganeshs@iisc.ac.inpsgs1996@gmail.com

ಲಕ್ಷ್ಮಿನಾರಾಯಣ ರಾವ್
ಸಹಾಯಕ ಪ್ರಾಧ್ಯಾಪಕರ, ಸುಸ್ಥಿರ ತಾಂತ್ರಿಕತೆಗಳ ಕೇಂದ್ರ (ಸಿ.ಎಸ್.ಟಿ.)
Email: narayana@iisc.ac.in
+91 80 2293 2051

ಚಿತ್ರ ಕೃಪೆ: ಪ್ಲ್ಯಾಸ್ಮಾ ಲ್ಯಾಬ್, ಸಿ.ಎಸ್.ಟಿ., ಐ.ಐ.ಎಸ್.ಸಿ.

ಪತ್ರಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಬಿಡುಗಡೆಯ ಯಾವುದೇ ಪಠ್ಯ ಭಾಗವನ್ನು ಯಥಾವತ್ತಾಗಿ ಬಳಸಿಕೊಂಡರೆ, ದಯವಿಟ್ಟು ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆ ಹೆಸರಿನಲ್ಲಿ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಬಿಡುಗಡೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆ ಕೇಳುವುದಿದ್ದರೆ ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.

—000—