ಪೂರ್ವ ಹಿಮಾಲಯದ ಹಕ್ಕಿಗಳ ಉಳಿವಿಗೆ ಭೀತಿಯೊಡ್ಡಿರುವ ಮನುಷ್ಯ ಚಟುವಟಿಕೆ ಪ್ರೇರಿತ ಬದಲಾವಣೆಗಳು


12 ನವೆಂಬರ್ 2025

-ಕವಿ ಭಾರತಿ ಆರ್

ಪೂರ್ವ ಹಿಮಾಲಯದಲ್ಲಿ ಕೆಳಸ್ತರದಲ್ಲಿ ಕಂಡುಬರುವ ಕೀಟಭಕ್ಷಕ ಹಕ್ಕಿಗಳು ಆವಾಸ ಸ್ಥಾನಗಳ ನಾಶದಿಂದಾಗಿ ಅಸ್ತಿತ್ವದ ಭೀತಿಗೆ ಸಿಲುಕಿವೆ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ಇತ್ತೀಚಿನ ಅಧ್ಯಯನದಿಂದ ದೃಢಪಟ್ಟಿದೆ.

ಆಯ್ದ ಮರಗಳ ಕಡಿತಲೆಯ (ಲಾಗಿಂಗ್) ನಂತರ ಕಾಡಿನ ಸ್ಥಳನಿರ್ದಿಷ್ಟ ವಾತಾವರಣದಲ್ಲಿ (ಮೈಕ್ರೊಕ್ಲೈಮೇಟ್) ಆಗುವ ಬದಲಾವಣೆಗಳು ಯಾವ ರೀತಿಯಲ್ಲಿ ಪಕ್ಷಿ ಸಂಕುಲದ ಉಳಿವನ್ನು ಪ್ರಭಾವಿಸುತ್ತವೆ ಎಂಬ ಬಗ್ಗೆ ಸಂಸ್ಥೆಯ ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ (ಸಿಇಎಸ್) ತಜ್ಞರು ಅರುಣಾಚಲ ಪ್ರದೇಶದ ಈಗಲ್ ನೆಸ್ಟ್ ಅಭಯಾರಣ್ಯ ವ್ಯಾಪ್ತಿಯಲ್ಲಿ 10 ವರ್ಷಗಳ ಕಾಲ (2011-2021) ನಡೆಸಿದ ಅಧ್ಯಯನದಿಂದ ಇದು ತಿಳಿದುಬಂದಿದೆ.

ಅಧ್ಯಯನದ ಭಾಗವಾಗಿ, ತಂಡದ ತಜ್ಞರು ಹಗುರವಾದ ಅಲ್ಯುಮಿನಿಯಂ ರಿಂಗುಗಳನ್ನು ಹಕ್ಕಿಗಳಿಗೆ ಕಟ್ಟಿದ್ದರು. ನಂತರ, ಆ ಹಕ್ಕಿಗಳು ಜೀವಂತ ಉಳಿದಿರುವುದನ್ನು ಹಾಗೂ ಅವುಗಳ ದೇಹತೂಕದಲ್ಲಿ ಕಂಡುಬಹುದಾದ ಬದಲಾವಣೆಗಳನ್ನು ಖಾತರಿಪಡಿಸಿಕೊಳ್ಳಲು ಅದೇ ಸ್ಥಳಗಳಿಗೆ ವರ್ಷಕ್ಕೊಮ್ಮೆ ಭೇಟಿ ನೀಡುತ್ತಿದ್ದರು. ಈ ದತ್ತಾಂಶಗಳನ್ನು ಮೂಲಕಾಡು ಹಾಗೂ ಕಡಿತಲೆ ನಂತರದ ಕಾಡಿನ ಉಷ್ಣತೆ-ಆರ್ದ್ರತೆಯ ದತ್ತಾಂಶಗಳೊಂದಿಗೆ ತುಲನೆ ಮಾಡಿ ವಿಶ್ಲೇಷಿಸಿದರು. ಈ ಮೂಲಕ, ಕೆಳಸ್ತರದ ಕೀಟಭಕ್ಷಕ ಹಕ್ಕಿಗಳು, ಅಂದರೆ, ಬೆಳೆದುನಿಂತ ಮರಗಳ ಅಡಿಭಾಗದಲ್ಲಿ ವಾಸಿಸುವ ಪಕ್ಷಿಗಳು, ಸ್ಥಳನಿರ್ದಿಷ್ಟ ವಾತಾವರಣದ ಬದಲಾವಣೆಗಳಗೆ ಯಾವ ರೀತಿಯಲ್ಲಿ ಹೊಂದಿಕೊಳ್ಳುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. “ಕೆಲವು ಪ್ರಭೇದಗಳು ಲಾಗಿಂಗ್ ನಂತರ ಉಳಿಯಲು ಹಾಗೂ ಇನ್ನು ಕೆಲವು ಗಣನೀಯವಾಗಿ ಕ್ಷೀಣಿಸಲು ಕಾರಣವೇನು ಎಂಬುದನ್ನು ಈ ದೀರ್ಘಾವಧಿ ದತ್ತಾಂಶಗಳನ್ನು ಆಧರಿಸಿ ನಾವು ಉತ್ತಮವಾಗಿ ಅರ್ಥ ಮಾಡಿಕೊಳ್ಳಬಹುದು” ಎನ್ನುತ್ತಾರೆ ಸಿಇಎಸ್ ನಲ್ಲಿ ಈ ಮುಂಚೆ ಎಂ.ಎಸ್ಸಿ. ವಿದ್ಯಾರ್ಥಿಯಾಗಿದ್ದ ಹಾಗೂ ಪ್ರಸ್ತುತ ಅಧ್ಯಯನ ವರದಿಯ ಪೂರಕ ಲೇಖಕರಾದ ಅಕ್ಷಯ್ ಭಾರದ್ವಾಜ್.

ಒಟ್ಟಾರೆ, ಮೂಲಕಾಡಿಗೆ ಹೋಲಿಸಿದರೆ ಆಯ್ದ ಮರಗಳ ಕಡಿತಲೆಯ ನಂತರದ ಕಾಡಿನಲ್ಲಿ ಹಗಲು ವೇಳೆ ಸತತವಾಗಿ ಹೆಚ್ಚಿನ ತಾಪಮಾನ, ಅಧಿಕ ಒಣಹವೆ ಹಾಗೂ ರಾತ್ರಿ ಹೊತ್ತು ಕಡಿಮೆ ತಾಪಮಾನವಿರುತ್ತದೆ ಎಂಬುದು ತಜ್ಞರಿಗೆ ಕಂಡುಬಂದಿತು. ಇದು, ಕಾಡಿನ ಹೊದಿಕೆಯ ನಾಶದ ಕಾರಣದಿಂದಾಗಿ ಪಕ್ಷಿಗಳನ್ನು ತ್ರಾಸದಾಯಕ ಏರಿಳಿತಗಳಿಗೆ ಒಳಪಡಿಸುತ್ತದೆ. ವಿಜ್ಞಾನಿಗಳ ಪ್ರಕಾರ, ಇಂತಹ ಪರಿಸ್ಥಿತಿಯು ಹವಮಾನ ವೈಪರೀತ್ಯದಿಂದಾಗಿ ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ; ಅದರಲ್ಲೂ, ತಾಪಮಾನ-ಸೂಕ್ಷ್ಮ ಪಕ್ಷಿ ಪ್ರಭೇದಗಳು ಸ್ಥಿರ ಹವಾಮಾನಗಳಿಗೆ ಒಗ್ಗಿರುವ ಪೂರ್ವ ಹಿಮಾಲಯದಲ್ಲಿ ಈ ಸಂಭಾವ್ಯತೆ ಅಧಿಕವಿರುತ್ತದೆ.

ಕಡಿತಲೆ ನಂತರದ ಕಾಡಿನಲ್ಲಿ ಸ್ಥಳನಿರ್ದಿಷ್ಟ ಹವಾಮಾನ ಸಂಬಂಧಿ ಅಂಶಗಳು ಮೂಲಕಾಡಿಗಿಂತ ತುಂಬಾ ವಿಭಿನ್ನವಾಗಿರುವ ಸಂದರ್ಭದಲ್ಲಿ ಲಾಗಿಂಗ್ ಕಾಡಿನ ಹಕ್ಕಿಗಳ ಮೇಲೆ ತೀವ್ರ ದುಷ್ಪರಿಣಾಮಗಳು ಕಂಡುಬರುತ್ತವೆ; ಅವುಗಳ ದೇಹತೂಕ ಇಳಿಕೆಯಾಗುತ್ತದೆ ಹಾಗೂ ಜೀವಿತಾವಧಿಯು ತಗ್ಗುತ್ತದೆ. “ಯಾವ ಪ್ರಭೇದಗಳಿಗೆ ಕಡಿತಲೆ ನಂತರದ ಕಾಡಿನಲ್ಲೂ ಮೂಲಕಾಡಿನ ನೆಲೆಗಳನ್ನು ಹೋಲುವಂತಹ ಸ್ಥಳನಿರ್ದಿಷ್ಟ ವಾತಾವರಣ ಲಭ್ಯವಿರುತ್ತದೋ ಅವು ಲಾಗಿಂಗ್ ನಂತರದಲ್ಲೂ ಬದುಕುಳಿಯಬಲ್ಲವು. ಆದರೆ, ಯಾವ ಪ್ರಭೇದಗಳಿಗೆ ತಮ್ಮ ಹಳೆಯ ಪರಿಸ್ಥಿತಿಗಳನ್ನು ಹೋಲುವ ವಾತಾವರಣ ಲಭ್ಯವಾಗುವುದಿಲ್ಲವೋ ಅಂಥವುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತದೆ” ಎಂದು ಭಾರದ್ವಾಜ್ ವಿವರಿಸುತ್ತಾರೆ.

“ಈ ಕುತೂಹಲಕರವಾದ ಪ್ರಾಣಿ-ಪಕ್ಷಿಗಳ ಅಧ್ಯಯನವೇ ಒಂದು ಬಗೆಯ ರೋಚಕತೆಯಾಗಿರುತ್ತದೆ. ಅರುಣಾಚಲ ಪ್ರದೇಶದ ದೂರದ ಕೊಂಪೆಯಲ್ಲಿ ಮಳೆ, ಜಿಗಣೆ ಹಾಗೂ ಆನೆಗಳ ಹಾವಳಿ ನಡುವೆ ಕ್ಷೇತ್ರ-ದತ್ತಾಂಶ ಸಂಗ್ರಹಿಸುವುದು ಕೆಲವೊಮ್ಮೆ ಸಾಕಷ್ಟು ಸವಾಲಿನಿಂದ ಕೂಡಿರುತ್ತದೆ” ಎನ್ನುತ್ತಾರೆ ಅಧ್ಯಯನ ವರದಿಯ ಸಹಲೇಖಕರಾದ ಸಿಇಎಸ್ ಸಹಾಯಕ ಪ್ರಾಧ್ಯಾಪಕ ಉಮೇಶ್ ಶ್ರೀನಿವಾಸನ್.

ತಾವು ಕಂಡುಕೊಂಡ ಅಂಶಗಳ ಆಧಾರದ ಮೇಲೆ, ವಿವಿಧ ಎತ್ತರಗಳ ಶ್ರೇಣಿಯಾದ್ಯಂತ ಮೂಲಕಾಡಿನ ಸಂರಕ್ಷಣೆಯ ಮಾರ್ಗೋಪಾಯಗಳು ಆದ್ಯತೆಯಾಗಿರಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. “ಆವಾಸ ಸ್ಥಾನಗಳಿಗೆ ಧಕ್ಕೆಯಾಗಿರುವ ಪ್ರದೇಶಗಳಲ್ಲಿ ನಾವು ಸ್ಥಳನಿರ್ದಿಷ್ಟ ವಾತಾವರಣಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಕಲ್ಪಿಸುವ ಬಗ್ಗೆ ಪರಿಗಣಿಸಬಹುದು; ಅಂದರೆ, ನೆರಳಿನ ಹೊದಿಕೆ ಅಥವಾ ನೀರಿನ ಮೂಲಗಳ ವ್ಯವಸ್ಥೆಯ ಮೂಲಕ ‘ಮೂಲ ಸ್ಥಳನಿರ್ದಿಷ್ಟ ನೆಲೆ’ಗಳನ್ನು ಹೋಲುವ ವಾತಾವರಣ ಸೃಷ್ಟಿಸಿ ಸಂಕಷ್ಟಕ್ಕೆ ಸಿಲುಕಿರುವ ಪ್ರಭೇದಗಳಿಗೆ ಬೆಂಬಲ ಕಲ್ಪಿಸಬಹುದು” ಎನ್ನುತ್ತಾರೆ ಭಾರದ್ವಾಜ್. “ಕಾಡಿನ ನಾಶವು ದೊಡ್ಡಮಟ್ಟದ ಜೀವವೈವಿಧ್ಯ ಪ್ರಕ್ರಿಯೆಗಳ ಭಾಗವಾದ ಆಹಾರ ಸರಪಳಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೀಟಭಕ್ಷಕ ಹಕ್ಕಿಗಳು ಕ್ಷೀಣಿಸುವುದು ಕೀಟಗಳ ಸಂಖ್ಯೆ ಹೆಚ್ಚಲು ಕಾರಣವಾಗಬಲ್ಲದು. ಇದರಿಂದಾಗಿ, ಜೀವವೈವಿಧ್ಯ ಸ್ಥಿರತೆಗೆ ಭಂಗ ಉಂಟಾಗಬಹುದು” ಎಂದು ಅವರು ಹೇಳುತ್ತಾರೆ.

ಕಾಡು ಕಡಿತಲೆಯ (ಲಾಗಿಂಗ್) ನಂತರ ಕೆಲವು ಪಕ್ಷಿ ಪ್ರಭೇದಗಳು ಕ್ಷೀಣಿಸುತ್ತಿರಲು ಕಾರಣವೇನು ಹಾಗೂ ತೊಂದರೆಗೊಳಗಾದ ಆವಾಸಸ್ಥಾನಗಳಲ್ಲಿ ಸ್ಥಳನಿರ್ದಿಷ್ಟ ವಾತಾವರಣದ ಅಂಶಗಳು ಯಾವ ರೀತಿಯಲ್ಲಿ ಪಕ್ಷಿ ಪ್ರಭೇದಗಳ ಸಂಖ್ಯೆಯನ್ನು ಪ್ರಭಾವಿಸುತ್ತವೆ ಎಂಬುದರ ಮಹತ್ವವನ್ನು ಈ ಅಧ್ಯಯನವು ಮನಗಾಣಿಸುತ್ತದೆ. “ಇದಕ್ಕೆ ದೀರ್ಘಾವಧಿಯ ದತ್ತಾಂಶಗಳು ನಿರ್ಣಾಯಕ. ಹೀಗಾಗಿ, ನಾವು ಈ ದತ್ತಾಂಶಗಳ ಸಂಗ್ರಹಣೆಯನ್ನು ಮುಂದುವರಿಸಿದ್ದು, ಈ ಪಕ್ಷಿ ಪ್ರಭೇದಗಳ ಪರಿಣಾಮಕಾರಿ ಸಂರಕ್ಷಣಾ ಕ್ರಮಗಳಿಗಾಗಿ ಪ್ರಯತ್ನಿಸುವ ಹಾಗೂ ಯೋಜನೆ ರೂಪಿಸುವ ಉದ್ದೇಶ ಹೊಂದಿದ್ದೇವೆ” ಎನ್ನುತ್ತಾರೆ ಶ್ರೀನಿವಾಸನ್. “ಹವಾಮಾನದಲ್ಲಿ ಬಿಸಿ ಹೆಚ್ಚುತ್ತಾ ಹೋದಂತೆ, ಅದರ ದುಷ್ಪರಿಣಾಮಗಳಿಗೆ ಪಕ್ಷಿಗಳು ಕ್ಷಮತೆ ಹೊಂದಿರಬೇಕೆಂದರೆ ಸ್ಥಳನಿರ್ದಿಷ್ಟ ಆವಾಸ-ಸ್ಥಾನಗಳನ್ನು ಕಾಯ್ದುಕೊಳ್ಳುವುದು ಹಲವು ಪ್ರಭೇದಗಳ ಉಳಿವಿನ ದೃಷ್ಟಿಯಿಂದ ನಿರ್ಣಾಯಕವಾಗುತ್ತದೆ” ಎಂದೂ ಅವರು ಸ್ಪಷ್ಟಪಡಿಸುತ್ತಾರೆ.

ಉಲ್ಲೇಖ:

ಭಾರದ್ವಾಜ್ ಎ, ಚಂದ ಆರ್, ಬಿಸ್ವಕರ್ಮ ಎ, ತಮಂಗ್ ಬಿ, ಮುಂಡಾ ಬಿ, ಪ್ರಧಾನ್ ಡಿಕೆ, ರಾಜ್ ಎಂ, ರೈ ಎಸ್, ಶ್ರೀನಿವಾಸನ್ ಯು, Microclimatic niche shifts predict long-term survival and body mass declines in a warmer and more degraded world, Journal of Applied Ecology (2025). https://besjournals.onlinelibrary.wiley.com/doi/10.1111/1365-2664.70192

ಸಂಪರ್ಕ:

ಅಕ್ಷಯ್ ಭಾರದ್ವಾಜ್
ಹಳೆಯ ಎಂ.ಎಸ್ಸಿ. ವಿದ್ಯಾರ್ಥಿ, ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ಇಮೇಲ್: munjurpet@unine.ch
ವೆಬ್ಸೈಟ್: akshay.munjurpet@unine.ch

ಉಮೇಶ್ ಶ್ರೀನಿವಾಸನ್
ಸಹಾಯಕ ಪ್ರೊಫೆಸರ್, ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.)
ಫೋನ್: +91 80 2293 2360
ವೆಬ್ಸೈಟ್: https://ces.iisc.ac.in/?q=user/408

ಪರ್ತಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.