ಬರಿದಾಗದ ಶಕ್ತಿ ಮೂಲವಾದ ಜೈವಿಕ ತ್ಯಾಜ್ಯದಿಂದ “ಹಸಿರು ಜನಜನಕ” ಉತ್ಪಾದನೆ



The oxy-steam gasification system at the Combustion, Gasification and Propulsion laboratory (CGPL), IISc

ಜೈವಿಕ ತ್ಯಾಜ್ಯದಿಂದ ಜಲಜನಕವನ್ನು ಉತ್ಪಾದಿಸುವ ಹೊಸ ತಾಂತ್ರಿಕತೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ ಸಿ.) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಪ್ರೊಫೆಸರ್ ಹಾಗೂ ಇಂಧನ ಸಂಶೋಧನಾ ಅಂತರಶಿಸ್ತೀಯ ಕೇಂದ್ರದ ಮುಖ್ಯಸ್ಥರಾದ ಎಸ್.ದಾಸಪ್ಪ ಅವರು ಈ ತಂಡವನ್ನು ಮುನ್ನಡೆಸಿದ್ದರು.

ಭಾರತದಲ್ಲಿ ಈಗ ಪ್ರತಿವರ್ಷ ಬೇರೆ ಬೇರೆ ವಲಯಗಳಲ್ಲಿ ಒಟ್ಟು 50 ಲಕ್ಷ ಟನ್ ಗಳಷ್ಟು ಜಲಜನಕ ಬಳಕೆಯಾಗುತ್ತಿದೆ. ಜೊತೆಗೆ, ಮುಂಬರುವ ದಿನಗಳಲ್ಲಿ ಜಲಜನಕ ಮಾರುಕಟ್ಟೆ ಗಣನೀಯವಾಗಿ ಬೆಳೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ದಾಸಪ್ಪ. ಈಗ ನಾವು ಉಪಯೋಗಿಸುತ್ತಿರುವ ಬಹುಪಾಲು ಜಲಜನಕವನ್ನು ಪಳೆಯುಳಿಕೆ ಇಂಧನಗಳಿಂದ ‘ಸ್ಟೀಮ್ ಮೀಥೇನ್’ ಪುನರ್ ರೂಪಿಸುವ ಪ್ರಕ್ರಿಯೆ ಮೂಲಕ ಉತ್ಪಾದಿಸಲಾಗುತ್ತದೆ. ಆದರೆ, ಇದೀಗ ದಾಸಪ್ಪ ಅವರ ತಂಡವು ಬರಿದಾಗದ ಶಕ್ತಿ ಮೂಲವಾದ ಜೈವಿಕ ತ್ಯಾಜ್ಯದಿಂದ ಪರಿಸರ ಸ್ನೇಹಿ ಜಲಜನಕವನ್ನು (ಹಸಿರು ಜಲಜನಕವನ್ನು) ಉತ್ಪಾದಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದೆ.

ಈ ಪ್ರಕ್ರಿಕೆಯು ಎರಡು ಹಂತಗಳನ್ನು ಒಳಗೊಂಡಿದೆ. ಮೊದಲನೇ ಹಂತದಲ್ಲಿ, ಜೈವಿಕ ತ್ಯಾಜ್ಯವನ್ನು, ಆಧುನಿಕ ಕ್ರಿಯಾಕಾರಿಯಲ್ಲಿ ಆಮ್ಲಜನಕ ಹಾಗೂ ನೀರಾವಿ ಬಳಸಿ ‘ಸಿನ್ ಗ್ಯಾಸ್’ ಎನ್ನಲಾಗುವ ಜಲಜನಕ ಅಧಿಕವಿರುವ ಇಂಧನ ಅನಿಲದ ಮಿಶ್ರಣವನ್ನಾಗಿ  ಪರಿವರ್ತಿಸಲಾಗುತ್ತದೆ. ಎರಡನೇ ಹಂತದಲ್ಲಿ, ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕಡಿಮೆ ಒತ್ತಡದ ಅನಿಲ ಬೇರ್ಪಡೆ ಘಟಕವನ್ನು ಬಳಸಿ ‘ಸಿನ್ ಗ್ಯಾಸ್’ ನಿಂದ ಶುದ್ಧ ಜಲಜನಕವನ್ನು ಪಡೆಯಲಾಗುತ್ತದೆ.

ದಾಸಪ್ಪ ಅವರ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಈ ತಾಂತ್ರಿಕತೆಗಳು, ಹಸಿರು ಜಲಜನಕವನ್ನು ಸೃಜಿಸುವ ಅತ್ಯಧಿಕ ಕ್ಷಮತೆಯ ವಿಧಾನ ಇದು ಎಂಬುದನ್ನು ಖಾತ್ರಿಗೊಳಿಸಿವೆ. ವಾಸವವಾಗಿ 1 ಕೆ.ಜಿ. ಜೈವಿಕತ್ಯಾಜ್ಯದಲ್ಲಿ ಇರುವ ಜಲಜನಕ ಪ್ರಮಾಣ 60 ಗ್ರಾಂ ಆಗಿರುತ್ತದೆ. ಆದರೆ ಇದು 1 ಕೆ.ಜಿ. ಜೈವಿಕತ್ಯಾಜ್ಯದಲ್ಲಿ 100 ಗ್ರಾಂ ಜಲಜನಕವನ್ನು ಉತ್ಪಾದಿಸುತ್ತದೆ. ಅಂದರೆ, ಈ ಪ್ರಕ್ರಿಯೆಯಲ್ಲಿ, ಜಲಜನಕವನ್ನು ಹೊಂದಿರುವ ನೀರಾವಿ ಕೂಡ ಏಕರೂಪಿ ಮತ್ತು ಬಹುರೂಪಿ ರಾಸಾಯನಿಕ ವರ್ತನೆಗಳಲ್ಲಿ ಪಾಲ್ಗೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ ಏಕರೂಪಿ ರಾಸಾಯನಿಕ ಕ್ರಿಯೆಗಳಲ್ಲಿ ಪ್ರತಿಕ್ರಿಯಾಕಾರಕಗಳು ಒಂದೇ ಅವಸ್ಥೆಯಲ್ಲಿರುತ್ತವೆ. ಆದರೆ, ಬಹುರೂಪಿ ರಾಸಾಯನಿಕ ಕ್ರಿಯೆಗಳಲ್ಲಿ ಈ ಪ್ರತಿಕ್ರಿಯಾಕಾರಕಗಳು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅವಸ್ಥೆಗಳಲ್ಲಿರುತ್ತವೆ)

ಈ ಪ್ರಕ್ರಿಯೆಯನ್ನು ಬಳಸಿ ಉತ್ಪಾದಿಸುವ ಹಸಿರು ಜಲಜನಕವು ಮತ್ತೊಂದು ಕಾರಣಕ್ಕಾಗಿಯೂ, ಅಂದರೆ ಇಂಗಾಲ ಮುಕ್ತವಾಗಿರುವುದರಿಂದ ಪರಿಸರ ಸ್ನೇಹಿಯಾಗಿರುತ್ತದೆ. ಘನ ಇಂಗಾಲ ಮತ್ತು ಇಂಗಾಲದ ಡೈ ಆಕ್ಸೈಡ್, ಇವೆರಡೂ ಇಂಗಾಲ ಆಧಾರಿತ ಉಪ ಉತ್ಪನ್ನಗಳಾಗಿದ್ದು, ಘನ ಇಂಗಾಲವನ್ನು ಕಾರ್ಬ ಸಿಂಕ್ (ಇಂಗಾಲದ ಹೀರುಕ) ಆಗಿ  ಹಾಗೂ ಇಂಗಾಲದ ಡೈ ಆಕ್ಸೈಡ್ ಅನ್ನು ಇತರ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಬಳಸಬಹುದು.

”ಈ ಸ್ವದೇಶಿ ತಂತ್ರಜ್ಞಾನವು ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತ ಗುರಿಯನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಇರಿಸಿರುವ ಹೆಜ್ಜೆಯಾಗಿದೆ” ಎನ್ನುತ್ತಾರೆ ದಾಸಪ್ಪ. ಈ ತಾಂತ್ರಿಕತೆಯು, ಜಲಜನಕವನ್ನು ಇಂಧನವಾಗಿ ಬಳಸುವುದನ್ನು ಉತ್ತೇಜಿಸುವ ಮೂಲಕ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕೆಂಬ ಭಾರತ ಸರ್ಕಾರದ “ರಾಷ್ಟ್ರೀಯ ಜಲಜನಕ ಇಂಧನ ನೀಲನಕ್ಷೆ ಉಪಕ್ರಮಕ್ಕೆ ಕೂಡ ಪೂರಕವಾಗಿದೆ.

ಭಾರತ ಸರ್ಕಾರದ ಹೊಸ ಹಾಗೂ ನವೀಕರಿಸಬಹುದಾದ ಇಂಧನಗಳ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಈ ಕಾರ್ಯಯೋಜನೆಗೆ ನೆರವು ಕೊಟ್ಟಿದ್ದವು. ಇದರ ಜೊತೆಗೆ. ಭಾರತೀಯ ತೈಲ ನಿಗಮ ನಿಯಮಿತವು ಜಲಜನಿಕ ಚಾಲಿತ ಇಂಧನ ಕೋಶ ಬಸ್ಸುಗಳಲ್ಲಿ ಪ್ರತಿದಿನಕ್ಕೆ 0.25 ಟನ್ ಗಳಷ್ಟು ಹಸಿರು ಜಲಜನಕ ಉತ್ಪಾದಿಸಲು ನೆರವು ನೀಡಿದ್ದನ್ನು ತಂಡವು ನೆನೆಯುತ್ತದೆ.

 

ಇನ್ನಿತರ ಉದ್ದಿಮೆಗಳಲ್ಲಿಯೂ ಹಸಿರು ಜಲಜನಕವನ್ನು ಬೇರೆ ಬೇರೆ ರೀತಿಗಳಲ್ಲಿ ಬಳಸಬಹುದು. ಉಕ್ಕು ಉದ್ದಿಮೆಯಲ್ಲಿ ಉಕ್ಕನ್ನು ಇಂಗಾಲಮುಕ್ತಗೊಳಿಸುವುದಕ್ಕೆ, ಕೃಷಿ ಉದ್ದಿಮೆಯಲ್ಲಿ ಪರಿಸರ ಸ್ನೇಹಿ ರಸಗೊಬ್ಬರಗಳನ್ನು ತಯಾರಿಸುವುದಕ್ಕೆ ಸೇರಿದಂತೆ ಸದ್ಯ ಪಳೆಯುಳಿಕೆ ಇಂಧನದಿಂದ ಉತ್ಪಾದಿಸುವ ಜಲಜನಕವನ್ನು ಅವಲಂಬಿಸಿರುವ ಹಲವು ವಲಯಗಳಲ್ಲಿ, ಬಳಸಬಹುದೆಂಬುದು ದಾಸಪ್ಪ ಅವರ ವಿಶ್ವಾಸವಾಗಿದೆ. “ಅಲ್ಲದೇ, ಇದೇ ತಾಂತ್ರಿಕ ವೇದಿಕೆಯನ್ನು ಮೆಥನಾಲ್ ಮತ್ತು ಎಥನಾಲ್ ಉತ್ಪಾದನೆಗೂ ಬಳಸಬಹುದು” ಎನ್ನುತ್ತಾರೆ ಅವರು.

 

ಸಂಪರ್ಕಿಸಿ:

ಎಸ್.ದಾಸಪ್ಪ

ಮುಖ್ಯಸ್ಥರು, ಇಂಧನ ಸಂಶೋಧನಾ ಅಂತರಶಿಸ್ತು ಕೇಂದ್ರ

ಪ್ರಾಧ್ಯಾಪಕರು,  ಸುಸ್ಥಿರ ತಂತ್ರಜ್ಞಾನಗಳ ಕೇಂದ್ರ

ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)

 

ಪತ್ರಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಬಿಡುಗಡೆಯ ಯಾವುದೇ ಪಠ್ಯ ಭಾಗವನ್ನು ಯಥಾವತ್ತಾಗಿ ಬಳಸಿಕೊಂಡರೆ, ದಯವಿಟ್ಟು ಐ.ಐ.ಎಸ್ ಸಿ. ಪತ್ರಿಕಾ ಬಿಡುಗಡೆ ಹೆಸರಿನಲ್ಲಿ ಪ್ರಕಟಿಸಿ.

ಆ) ಐ.ಐ.ಎಸ್ ಸಿ. ಪತ್ರಿಕಾ ಬಿಡುಗಡೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆ ಕೇಳುವುದಿದ್ದರೆ ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.

——000——