ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ (BeST) ಕ್ಲಸ್ಟರ್ ಲೋಕಾರ್ಪಣೆ


ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ (BeST) ವೃಂದ ಪರಿಕಲ್ಪನೆಯು ಸುಮಾರು 50ಕ್ಕೂ ಹೆಚ್ಚು ಸಂಸ್ಥೆಗಳ ಸಹಭಾಗಿತ್ವದ ಪರಿಶ್ರಮದ ಫಲಶ್ರುತಿಯಾಗಿದೆ. ಪ್ರಮುಖ ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಪಾಲುದಾರರು, ನವೋದ್ಯಮಗಳು, ನಾಗರಿಕ ಸಮುದಾಯ ಸಂಸ್ಥೆಗಳು ಹಾಗೂ ಸರ್ಕಾರದ ಸಂಸ್ಥೆಗಳನ್ನು ಇದು ಒಳಗೊಂಡಿದೆ.


__________________

ಬೆಸ್ಟ್ ಕ್ಲಸ್ಟರ್ ಅನುದಾನಕ್ಕಾಗಿ ಪ್ರಧಾನ ಮೇಲ್ವಿಚಾರಕ (PI) ಪ್ರೊಫೆಸರ್ ಗೋವಿಂದನ್ ರಂಗರಾಜನ್ (ಐಐಎಸ್‌ಸಿ ನಿರ್ದೇಶಕರು) ಸಹ- ಮೇಲ್ವಿಚಾರಕ ಪ್ರೊಫೆಸರ್ ಅಂಬರೀಶ್ ಘೋಷ್ (ಪ್ರೊಫೆಸರ್ ಐಐಎಸ್ ಸಿ) ಮತ್ತು ಡಾಕ್ಟರ್ ತಸ್ಲಿಮಾರಿಫ್ ಸೈಯದ್ (ಸಿಇಒ ಸಿ-ಕ್ಯಾಂಪ್) ಅವರಿಗೆ ಪ್ರಸ್ತಾವವನ್ನು ಸಲ್ಲಿಸಲಾಯಿತು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ (PSA) ಕಚೀರಿಯು ಇತ್ತೀಚೆಗೆ ಅನುದಾನವನ್ನು ಮಂಜೂರು ಮಾಡಿದೆ. ಬೆಸ್ಟ್ ಕ್ಲಸ್ಟರ್ ಅನ್ನು ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್ 22) ವಿದ್ವತ್ ಗೋಷ್ಠಿಯಲ್ಲಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊಫೆಸರ್ ಅಜಯ್ ಸೂದ್ ಅವರು ನ. 16, 2022 ರಂದು ವಿಧ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು. ಐಐಎಸ್‌ಸಿ ನಿವೃತ್ತ ನಿರ್ದೇಶಕ ಪ್ರೊಫೆಸರ್ ಇ. ಪದ್ಮನಾಭನ್ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎಸ್. ಗೋಪಾಲಕೃಷ್ಣ (ಕ್ರಿಸ್) ಅವರು ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.


_____________________

ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರೊಫೆಸರ್ ಸೂದ್ ಅವರು, ಬೆಂಗಳೂರು ನಗರವು ಅಪಾರ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಜೊತೆಗೆ, ಕರ್ನಾಟಕ ರಾಜ್ಯವು ವಿಜ್ಞಾನ ಮತ್ತು ತಾಂತ್ರಿಕ ಸಾಧನೆಗಳಲ್ಲಿ ಮುಂಚೂಣಿಯಲ್ಲಿದೆ‌ ಎಂದ ಅವರು, ಇದೀಗ ಸ್ಥಾಪನೆಯಾಗುತ್ತಿರುವ ಬೆಸ್ಟ್ ಕ್ಲಸ್ಟರ್ ಮುಂದೆ ಹಾಕಿಕೊಳ್ಳಲಾಗುವ ಉಪಕ್ರಮಗಳಿಗೆ ಅನುವು ಮಾಡಿಕೊಡುತ್ತದೆ ಎಂಬ ಆಶಾಭಾವವನ್ನು ವ್ಯಕ್ತಪಡಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಲಸ್ಟರ್ ಎಂದರೆ ಅದೊಂದು ಸಹಭಾಗಿತ್ವದ ಕಾರ್ಯ ಪರಿಸರವಾಗಿರುತ್ತದೆ. ಇಲ್ಲಿ ವಿಜ್ಞಾನಿಗಳು, ಎಂಜಿನಿಯರುಗಳು, ಸಮಾಜಶಾಸ್ತ್ರಜ್ಞರು ಹಾಗೂ ಶೈಕ್ಷಣಿಕ ವಲಯ, ಸರ್ಕಾರಿ ಪ್ರಯೋಗಾಲಯಗಳು ಮತ್ತು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಶೀಲರು ಸಾಮಾಜಿಕ ಪ್ರಸ್ತುತತೆಯ ಸಮಸ್ಯೆಯಗಳನ್ನು ಗುರುತಿಸಿ ಪರಿಹಾರ ಕಂಡುಹಿಡಿಯಲು ಹಿಡಿಯಲು ಸಹಭಾಗಿತ್ವ ಸಾಧಿಸುವ ವಲಯ ಇದಾಗಿರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ವೃಂದಗಳನ್ನು (ಕ್ಲಸ್ಟರ್ ಗಳನ್ನು) ಬೇರೆ ಬೇರೆ ನಗರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ ಒಕ್ಕೂಟ ಸಂರಚನೆಗಳಾಗಿ ಸ್ಥಾಪಿಸಲಾಗುತ್ತಿದೆ. ಈ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಂಡು ಒಟ್ಟಾಗಿ ಸೇರಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿರುತ್ತದೆ. ಪ್ರಧಾನಮಂತ್ರಿಯವರ ವಿಜ್ಞಾನ, ತಂತ್ರಜ್ಞಾನ ಹಾಗೂ ನಾವೀನ್ಯತಾ ಸಲಹಾ ಮಂಡಳಿಯ (ಪಿಎಂ- ಎಸ್‌ಟಿ ಐಎಸಿ) ಶಿಫಾರಸಿನ ಮೇರೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ‘ಆತ್ಮನಿರ್ಭರ ಭಾರತ’ವನ್ನು ನಿರ್ಮಿಸಲು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ಇಂತಹ ಉಪಕ್ರಮಗಳನ್ನು ಬೆಂಬಲಿಸುತ್ತದೆ.

ಸಹ ಮೇಲ್ವಿಚಾರಕ ಡಾಕ್ಟರ್ ಸೈಯದ್ ರವರು ಮಾತನಾಡಿ, ಬೆಂಗಳೂರು ನಗರವು ವಿಜ್ಞಾನ, ನಾವೀನ್ಯತೆ ಹಾಗೂ ಅವಕಾಶಗಳ ನಗರವಾಗಿದೆ ಎಂದರು. ಇಲ್ಲಿ ಆಗಿರುವ ಬೆಸ್ಟ್ ಕ್ಲಸ್ಟರ್ ಉದ್ಘಾಟನೆಯು ಭಾರತದಲ್ಲಿ ಹಾಗೂ ಪ್ರಾಯಶಃ ಇಡೀ ಪ್ರಪಂಚಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಕ್ಷಣವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

“ಸಮಾನ ಕಾರ್ಯ ಪರಿಸರದ ವಿವಿಧ ಹಿತಾಸಕ್ತಿದಾರರನ್ನು ಒಂದೇ ವೇದಿಕೆಯಡಿ ತಂದು ಸಮಸ್ಯೆಗಳನ್ನು ಗುರುತಿಸಿ, ಮೊದಲಿಗೆ ಸ್ಥಳೀಯವಾಗಿ ಪ್ರಸ್ತುತವೆನ್ನಿಸುವ ಪರಿಹಾರಗಳನ್ನು ಕಂಡುಹಿಡಿಯುವುದು ಹಾಗೂ ನಂತರ ಅವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಅಗತ್ಯಗಳಿಗೆ ತಕ್ಕಂತೆ ರೂಪಿಸಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಮೈಗೂಡುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಬೆಸ್ಟ್ ಕಾರ್ಯ ಚಟುವಟಿಕೆಗಳು ಹೀಗೆ ಮೇಲ್ಮುಖ ಪಿರಮಿಡ್ ಮಾದರಿಯನ್ನು ಆಧರಿಸಿರುತ್ತವೆ” ಎಂದು ಅವರು ವಿವರಿಸಿದರು.


_________________________

ಮತ್ತೊಬ್ಬ ಸಹ- ಮೇಲ್ವಿಚಾರಕ ಪ್ರೊಫೆಸರ್ ಅಂಬರೀಶ್ ಘೋಷ್ ಅವರು, ಬೆಸ್ಟ್ ಕ್ಲಸ್ಟರ್ ಗೆ ಚಾಲನೆ ನೀಡಲು ಬೆಂಗಳೂರು ತಂತ್ರಜ್ಞಾನ ಶೃಂಗವು ಅತ್ಯಂತ ಸೂಕ್ತ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಸ್ಟ್ ಕ್ಲಸ್ಟರ್ ನ ಪ್ರಭಾವವನ್ನು ಹಲವಾರು ರೀತಿಗಳಲ್ಲಿ ಗುರುತಿಸಬಹುದಾಗಿರುತ್ತದೆ. ನಗರದ ಮಟ್ಟದಲ್ಲಿ ತಕ್ಷಣದ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮವನ್ನು ಪರಿಗಣಿಸುವ ಜೊತೆಗೆ ಸುಸ್ಥಿರತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಮೇಲಿನ ಪರಿಣಾಮವನ್ನು ನಾವು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.

ಬೆಸ್ಟ್ ವೃಂದವು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ, ನಗರ ಜೀವನ ಹಾಗೂ ಭವಿಷ್ಯದ ತಂತ್ರಜ್ಞಾನಗಳನ್ನು ಆದ್ಯತಾವಲಯಗಳಾಗಿ ಗುರುತಿಸಿದೆ. ಜೊತೆಗೆ, ಒನ್ ಹೆಲ್ತ್, ಡಿಜಿಟಲ್ ಹೆಲ್ತ್, ನಿಖರ ಕೃಷಿ, ನಗರ ಸಂಚಾರ ವ್ಯವಸ್ಥೆ, ಮುಂಗಾರು ಹಾಗೂ ಹವಾಮಾನ ವೈಪರೀತ್ಯ, ಕ್ವಾಂಟಮ್ ತಾಂತ್ರಿಕತೆ, ಆಕ್ಟಿವ್ ಮ್ಯಾಟರ್ ಅಂಡ್ ರೋಬೋಟಿಕ್ಸ್ ಮತ್ತು ಜಟ್ ಎಂಜಿನ್ ವಲಯಗಳನ್ನು ಈ ಪಟ್ಟಿಯಲ್ಲಿ ಸೇರಿಸಿ ಇವುಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ತಂಡಗಳನ್ನು ರಚಿಸಿದೆ. ಒಂದು ಸ್ವತಂತ್ರ ಸಂಸ್ಥೆಯಾಗಿ ಸಹಭಾಗಿತ್ವವನ್ನು ತ್ವರಿತಗೊಳಿಸಲು, ಸಂಘಟನಾ ಬೆಂಬಲ ನೀಡಲು, ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಹಾಗೂ ಅವುಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಸೆಕ್ಷನ್ 8 ಕಂಪನಿ ಒಂದನ್ನು ಕೂಡ ಸ್ಥಾಪಿಸಲಾಗಿದೆ.

ಸಂಪರ್ಕಿಸಿ
ಐಎಎಸ್‌ಸಿ ಸಂವಹನ ಕಚೇರಿ | news@iisc.ac.in
ಬೆಸ್ಟ್ ಕಚೇರಿ | office.best@iisc.ac.in