ಬೇಗನೇ ಚಾರ್ಜ್ ಆಗುವ ಬ್ಯಾಟರಿ ತಯಾರಿಸಲು ಹೊಸ ಮಾರ್ಗೋಪಾಯ


– ರಂಜಿನಿ ರಘುನಾಥ್

ಆಧುನಿಕ ಘನಸ್ಥಿತಿ ಬ್ಯಾಟರಿಗಳು ಮುಂಬರುವ ದಿನಗಳಲ್ಲಿ ಹೇಗೆ ವಿಫಲಗೊಳ್ಳುತ್ತವೆ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ ಸಿ) ತಜ್ಞರು ಮಹತ್ವದ ಸಂಶೋಧನೆಯೊಂದರಲ್ಲಿ ಕಂಡುಕೊಂಡಿದ್ದಾರೆ. ಜೊತೆಗೆ, ಈ ಬ್ಯಾಟರಿಗಳ ಬಾಳಿಕೆ ಅವಧಿಯನ್ನು ಹೆಚ್ಚಿಸುವ ಹಾಗೂ ಅವುಗಳನ್ನು ವೇಗವಾಗಿ ಚಾರ್ಜ್ ಮಾಡುವ ವಿಧಾನವನ್ನು ಕೂಡ ಅವರು ಅಭಿವೃದ್ಧಿಪಡಿಸಿದ್ದಾರೆ.

 ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭವಾಗಿ ಕೊಂಡೊಯ್ಯಬಹುದಾದ, ಈಗ ಪ್ರತಿಯೊಂದು ಎಲೆಕ್ಟ್ರಾನಿಕ್ ಸಾಧನದಲ್ಲಿ ಅವಿಭಾಜ್ಯ ಅಂಗವಾಗಿರುವ ಲೀಥಿಯಂ ಅಯಾನ್ ಬ್ಯಾಟರಿಗಳಿಗೆ ಬದಲಿಯಾಗಿ ಘನಸ್ಥಿತಿ ಬ್ಯಾಟರಿಗಳು ಬಳಕೆಯಾಗುವ ದಿನಗಳು ದೂರವಿಲ್ಲ. ಆದರೆ, ಪುನರಾವರ್ತಿತ ಬಳಕೆಯಿಂದಾಗಿ ಅಥವಾ ಅಧಿಕ ಬಳಕೆಯಿಂದಾಗಿ ಇವುಗಳ ಮೇಲೆ ‘ಡೆಂಡ್ರೈಟ್ಸ್’ ಎಂದು ಕರೆಯಲಾಗುವ ತೆಳ್ಳನೆಯ ಪದರ ರೂಪುಗೊಳ್ಳುತ್ತದೆ. ಈ ‘ಡೆಂಡ್ರೈಟ್’ನಿಂದಾಗಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಅವು ನಿಷ್ಪ್ರಯೋಜಕಗೊಳ್ಳುತ್ತವೆ.

ಈ ಡೆಂಡ್ರೈಟ್ ರೂಪುಗೊಳ್ಳಲು, ಅಂದರೆ ವಿದ್ಯುತ್ ಧ್ರುವವೊಂದರ ಮೇಲೆ ಸೂಕ್ಷ್ಮವಾದ ಖಾಲಿ ಸ್ಥಳಗಳು ಕಾಣಿಸಿಕೊಳ್ಳಲು  ಮೂಲ ಕಾರಣವೇನೆಂಬುದನ್ನು ತಮ್ಮ ಹೊಸ ಅಧ್ಯಯನದಲ್ಲಿ ಪತ್ತೆಹಚ್ಚಿರುವುದಾಗಿ Nature Materials ನಿಯತಕಾಲಿಕದಲ್ಲಿ ಇತ್ತೀಚೆಗೆ ಪ್ರಕಟಿಸಲಾಗಿರುವ ಅಧ್ಯಯನ ವರದಿಯಲ್ಲಿ ತಜ್ಞರು ವಿವರಿಸಿದ್ದಾರೆ. ವಿದ್ಯುದ್ರಾವಕದ ಮೇಲ್ಮೈಗೆ ನಿರ್ದಿಷ್ಟ ಲೋಹಗಳ ತೆಳುವಾದ ಪದರವನ್ನು ಸೇರಿಸುವುದರಿಂದ ಡೆಂಡ್ರೈಟ್ ರೂಪುಗೊಳ್ಳುವಿಕೆ ಗಮನಾರ್ಹ ಪ್ರಮಾಣದಲ್ಲಿ ವಿಳಂಬವಾಗುತ್ತದೆ. ಇದರಿಂದಾಗಿ ಬ್ಯಾಟರಿ ಬಾಳಿಕೆ ಹೆಚ್ಚುವುದರ ಜೊತೆಗೆ ಅದರ ಚಾರ್ಜಿಂಗ್ ಕೂಡ ವೇಗಗೊಳ್ಳುತ್ತದೆ ಎಂಬುದು ಕೂಡ ದೃಢಪಟ್ಟಿದೆ ಎಂದಿದ್ದಾರೆ.

ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ಗಳಲ್ಲಿ ಬಳಕೆಯಾಗುವ ಸಾಂಪ್ರದಾಯಿಕ ಲೀಥಿಯಂ ಅಯಾನ್ ಬ್ಯಾಟರಿಗಳಲ್ಲಿ ಸ್ಥಿತ್ಯಂತರ ಲೋಹದಿಂದ (ಕಬ್ಬಿಣ ಮತ್ತು ಕೋಬಾಲ್ಟ್ ನಂತಹ) ಮಾಡಲಾದ ಧನ ವಿದ್ಯುದಾವಿಷ್ಟದ ಕ್ಯಾಥೋಡ್ ಮತ್ತು ಗ್ರಾಫೈಟ್ ನಿಂದ ಮಾಡಲಾದ ಋಣ ವಿದ್ಯುದಾವಿಷ್ಟದ ಆನೋಡ್ ನಡುವೆ ಎಲೆಕ್ಟ್ರಾನಿಕ್ ದ್ರಾವಣವನ್ನು ಸ್ಯಾಂಡ್ ವಿಚ್  ಮಾಡಲಾಗಿರುತ್ತದೆ. ಬ್ಯಾಟರಿಯು ವಿದ್ಯುತ್ ಬಳಸಿಕೊಂಡು ಉತ್ಸರ್ಜನೆ ಹಾಗೂ ವಿಸರ್ಜನೆ (ಚಾರ್ಜಿಂಗ್ ಅಂಡ್ ಡಿಸ್ಚಾರ್ಜಿಂಗ್) ಆಗುತ್ತಿರುವ ಸಂದರ್ಭದಲ್ಲಿ ಲೀಥಿಯಂ ಅಯಾನುಗಳು ಆನೋಡ್ ಹಾಗೂ ಕ್ಯಾಥೋಡ್ ನಡುವೆ ವಿರುದ್ಧ ದಿಕ್ಕುಗಳಲ್ಲಿ ಕುಪ್ಪಳಿಸುತ್ತಿರುತ್ತವೆ. ಈ ಬ್ಯಾಟರಿಗಳು ಸುರಕ್ಷತೆ ದೃಷ್ಟಿಯಿಂದ ಅಷ್ಟು ಉತ್ತಮವಲ್ಲ. ಏಕೆಂದರೆ, ಎಲೆಕ್ಟ್ರೋಲೈಟ್ ದ್ರಾವಣಕ್ಕೆ ಹೆಚ್ಚಿನ ಉಷ್ಣತೆಯಲ್ಲಿ ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ. ಮತ್ತೊಂದೆಡೆ, ಲೋಹೀಯ ಲೀಥಿಯಂಗೆ ಹೋಲಿಸಿದರೆ ಆನೋಡ್ ಗೆ ಬಳಸುವ ಗ್ರ್ಯಾಫೈಟ್ ನ ವಿದ್ಯುದಾವಿಷ್ಟ ಸಂಗ್ರಹ ಸಾಮರ್ಥ್ಯ ಕೂಡ ತುಂಬಾ ಕಡಿಮೆ ಇರುತ್ತದೆ.

Schematic (a) representing a Li-metal solid-state battery with a discontinuous interface. These voids and discontinuities are the main driving factor for dendrite growth through solid electrolytes. These voids can be minimised by using an appropriate interlayer (b) (Credit: Vikalp Raj)

ಹೀಗಾಗಿ, ಘನಸ್ಥಿತಿ ಬ್ಯಾಟರಿಗಳಲ್ಲಿ ಎಲೆಕ್ಟ್ರೊಲೈಟ್ ದ್ರಾವಣಕ್ಕೆ ಬದಲಾಗಿ ಘನೀಯ ಸೆರಾಮಿಕ್ ಎಲೆಕ್ಟ್ರೊಲೈಟ್ ಬಳಸುವುದು ಹಾಗೂ ಗ್ರ್ಯಾಫೈಟ್ ಗೆ ಬದಲಾಗಿ ಲೋಹೀಯ ಲೀಥಿಯಂ ಬಳಸುವುದು ಆಶಾದಾಯಕವಾದ ಪರ್ಯಾಯವೆಂಬುದು ಖಚಿತಪಟ್ಟಿದೆ. ಸೆರಾಮಿಕ್ ಎಲೆಕ್ಟ್ರೊಲೈಟ್ ಗಳು ಹೆಚ್ಚಿನ ಉಷ್ಣತೆಯಲ್ಲಿ ಕೂಡ ಅಧಿಕ ಕ್ಷಮತೆಯಿಂದ ಕೆಲಸ ಮಾಡುವುದರಿಂದ, ಮುಖ್ಯವಾಗಿ, ಭಾರತದಂತಹ ಉಷ್ಣವಲಯ ದೇಶಗಳಲ್ಲಿ ಹೆಚ್ಚು ಉಪಯುಕ್ತವೆನ್ನಿಸುತ್ತವೆ. ಲೀಥಿಯಂ ಲೋಹವು ಗ್ರ್ಯಾಫೈಟ್ ಗಿಂತ ಹಗುರವಾಗಿರುವುದಷ್ಟೇ ಅಲ್ಲದೆ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುದಾವಿಷ್ಟವನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಇದರಿಂದಾಗಿ ಬ್ಯಾಟರಿಯ ಬೆಲೆ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನಲಾಗಿದೆ.

“ಆದರೆ ತೊಡಕಿನ ವಿಷಯವೆಂದರೆ, ಲೀಥಿಯಂ ಸೇರಿಸಿದಾಗ ಘನೀಯ ಎಲೆಕ್ಟ್ರೊಲೈಟ್ ನಲ್ಲಿ ಮೇಲೆ ತಿಳಿಸಿದಂತೆ ಪದರಗಳು ರೂಪುಗೊಂಡು ಆನೋಡ್ ಹಾಗೂ ಕ್ಯಾಥೋಡ್ ಗಳನ್ನು ಶಾರ್ಟ್ ಸರ್ಕೀಟ್ ನಿಂದ ಹಾನಿಗೊಳಿಸುತ್ತವೆ ಎಂದು ವಿವರಿಸುತ್ತಾರೆ ಘನಸ್ಥಿತಿ ಮತ್ತು ಸಂರಚನಾ ರಸಾಯನಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು ಹಾಗೂ ಅಧ್ಯಯನದ ಸಂವಹನ ಲೇಖಕರೂ ಆದ ನಾಗ ಫಣಿ ಏತುಕುರಿ.

ಈ ವಿದ್ಯಮಾನವನ್ನು ದೃಢೀಕರಿಸಿಕೊಳ್ಳುವ ನಿಟ್ಟಿನಲ್ಲಿ ಏತುಕುರಿ ಅವರ ಪಿಎಚ್.ಡಿ. ವಿದ್ಯಾರ್ಥಿಯಾದ ವಿಕಲ್ಪ್ ರಾಜ್ ಅವರು ನೂರಾರು ವಿದ್ಯುತ್ ಕೋಶಗಳನ್ನು ಪುನಃ ಪುನಃ ಚಾರ್ಜಿಂಗ್ ಮಾಡುವ ಮೂಲಕ ಕೃತಕವಾಗಿ ಡೆಂಡ್ರೈಟ್ ರೂಪುಗೊಳ್ಳುವಿಕೆಯನ್ನು ಪ್ರಚೋದಿಸಿದರು. ನಂತರ, ಲೀಥಿಯಂ-ಎಲೆಕ್ಟ್ರೊಲೈಟ್ ಇಂಟರ್ ಫೇಸ್ ವಲಯವನ್ನು ತೆಳ್ಳಗೆ ಕತ್ತರಿಸಿ, ಅವುಗಳನ್ನು ಸ್ಕ್ಯಾನಿಂಗ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಅಡಿಯಿಟ್ಟು ಪರೀಕ್ಷಿಸಿದರು. ಹೀಗೆ ನೋಡಿದಾಗ ತಜ್ಞರ ತಂಡದವರಿಗೆ, ಡೆಂಡ್ರೈಟ್ ರೂಪುಗೊಳ್ಳುವುದಕ್ಕಿಂತ ಬಹು ಮುಂಚಿತವಾಗಿಯೇ ವಿಸರ್ಜನೆಯ ವೇಳೆ ಲೀಥಿಯಂ ಆನೋಡ್ ನಲ್ಲಿ ಸೂಕ್ಷ್ಮಾತಿಸೂಕ್ಷ್ಮ ‘ಖಾಲಿ ಸ್ಥಳ’ಗಳು ರೂಪುಗೊಳ್ಳುತ್ತವೆ ಎಂಬುದು ಕಂಡುಬಂದಿತು. ಈ ಸೂಕ್ಷ್ಮಾತಿಸೂಕ್ಷ್ಮ ಖಾಲಿ ಸ್ಥಳಗಳ ಅಂಚುಗಳಲ್ಲಿ ಸಾಂದ್ರಗೊಳ್ಳುವ ವಿದ್ಯುತ್ತಿನ ಪ್ರಮಾಣವು ವಿದ್ಯುತ್ ಕೋಶದ ಗುಂಟ ಇರುವ ಸರಾಸರಿ ವಿದ್ಯುತ್ತಿಗಿಂತ ಸುಮಾರು 10.000 ಪಟ್ಟು ಅಧಿಕವಿರುತ್ತದೆ. ಪ್ರಾಯಶಃ ಇದರಿಂದಾಗಿ ಘನೀಯ ಎಲೆಕ್ಟ್ರೋಲೈಟ್ ಮೇಲೆ ಒತ್ತಡ ಸೃಷ್ಟಿಯಾಗಿ ಡೆಂಡ್ರೈಟ್ ರೂಪುಗೊಳ್ಳುವಿಕೆ ತ್ವರಿತಗೊಳ್ಳುತ್ತದೆ ಎಂದು ತಜ್ಞರು ಊಹಿಸಿದ್ದಾರೆ.

“ಈ ಮೇಲಿನ ಅಂಶವನ್ನು ಕಂಡುಕೊಂಡಿರುವುದರಿಂದ ನಮಗೀಗ ಅತ್ಯುತ್ತಮ ಗುಣಮಟ್ಟದ ಬ್ಯಾಟರಿಗಳನ್ನು ತಯಾರಿಸುವುದು ಬಹಳ ಸುಲಭವಾಗಲಿದೆ. ಅದಕ್ಕಾಗಿ, ನಾವು ಖಾಲಿ ಸ್ಥಳಗಳು ರೂಪುಗೊಳ್ಳದಂತೆ ನೋಡಿಕೊಂಡರಷ್ಟೇ ಸಾಕು” ಎನ್ನುತ್ತಾರೆ ಏತುಕುರಿ.


Advanced battery testing facility at IISc (Credit: Naga Phani Aetukuri)

ಇದನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಸಂಶೋಧಕರು ಲೀಥಿಯಂ ಆನೋಡ್ ಹಾಗೂ ಘನೀಯ ಎಲೆಕ್ಟ್ರೋಲೈಟ್ ನಡುವೆ ತಾಪನಿರೋಧಕ ಲೋಹದ, ಅಂದರೆ, ಉಷ್ಣ ಹಾಗೂ ಸವಕಳಿ ನಿರೋಧಕ ಲೋಹವೊಂದರ ಅತ್ಯಂತ ತೆಳ್ಳನೆಯ ಪದರವನ್ನು ಸೇರಿಸಬೇಕಾಗುತ್ತದೆ. ಈ ತಾಪನಿರೋಧಕ (ರಿಫ್ರ್ಯಾಕ್ಟರಿ) ಲೋಹವು ಘನೀಯ ಎಲೆಕ್ಟ್ರೋಲೈಟ್ ಗೆ ಒತ್ತಡದಿಂದ ರಕ್ಷಣೆ ಒದಗಿಸಿ, ಒಂದು ಮಟ್ಟದವರೆಗೆ ವಿದ್ಯುತ್ತನ್ನು ಮರುವಿತರಣೆಗೊಳಿಸುತ್ತದೆ ಎನ್ನುತ್ತಾರೆ ಏತುಕುರಿ. ಐಐಎಸ್ ಸಿ ನೇತೃತ್ವದ ತಂಡದವರು ಅಮೆರಿಕದ ಕಾನೆಜಿ ಮೆಲನ್ ವಿಶ್ವವಿದ್ಯಾಲಯದ ತಜ್ಞರ ಸಹಭಾಗಿತ್ವದಲ್ಲಿ ಕಾಂಪ್ಯುಟೇಷನಲ್ ವಿಶ್ಲೇಷಣೆ ನಡೆಸಿದ್ದು, ತಾಪನಿರೋಧಕ ಲೋಹದ ಇರುವಿಕೆಯು ಸೂಕ್ಷ್ಮಾತಿಸೂಕ್ಷ್ಮ ಲೀಥಿಯಂ ಖಾಲಿ ಸ್ಥಳಗಳು ಗಳು ರೂಪುಗೊಳ್ಳುವುದನ್ನು ವಿಳಂಬಗೊಳಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದಿದ್ದಾರೆ.

ಅಧಿಕ ಒತ್ತಡವನ್ನು ಹಾಕುವ ಮೂಲಕವೂ ಲೀಥಿಯಂ ಕಣಗಳು ಹಾಗೂ ಘನೀಯ ಎಲೆಕ್ಟ್ರೋಲೈಟ್ ನಡುವೆ ಪರಸ್ಪರ ಅಂತರವುಂಟುಮಾಡಿ ‘ಖಾಲಿ ಸ್ಥಳ’ಗಳು ರೂಪುಗೊಳ್ಳುವುದನ್ನು, ಅಂದರೆ, ಡೆಂಡ್ರೈಟ್ ರೂಪುಗೊಳ್ಳುವುದನ್ನು ವಿಳಂಬಗೊಳಿಸಬಹುದು. ಆದರೆ ದಿನನಿತ್ಯದ ಆನ್ವಯಿಕತೆಗಳಿಗೆ ಅದು ಅಷ್ಟು ಕಾರ್ಯಸಾಧು ಎನ್ನಿಸಲಾರದು. ಹೀಗಾಗಿ ಸಂಶೋಧಕರು, ಇಂಟರ್ ಫೇಸ್ ವಲಯದಲ್ಲಿ ಲೀಥಿಯಂ ಜೊತೆ ಚೆನ್ನಾಗಿ ಮಿಶ್ರಣಗೊಳ್ಳುವ ಅಲ್ಯುಮಿನಿಯಂನಂತಹ ಲೋಹಗಳನ್ನು ಬಳಸುವ ಆಲೋಚನೆಯನ್ನು ಮುಂದಿಟ್ಟರು. ಆದರೆ, ಕಾಲಕ್ರಮೇಣ, ಲೋಹದ ಈ ಪದರವು ಲೀಥಿಯಂ ಜೊತೆ ಮಿಶ್ರಣಗೊಂಡು ಒಂದಾಗುವುದರಿಂದ ಡೆಂಡ್ರೈಟ್ ರೂಪುಗೊಳ್ಳುವುದನ್ನು ತಡೆಯಲು ವಿಫಲವಾಗುತ್ತದೆ. “ನಾವು ಈಗ ವಿಭಿನ್ನವಾದುದನ್ನು ಹೇಳುತ್ತಿದ್ದೇವೆ. ಅದೇನೆಂದರೆ, ಟಂಗ್ ಸ್ಟನ್ ಅಥವಾ ಮಾಲಿಬ್ಡೆನಂ ನಂತಹ ಲೋಹವನ್ನು ಬಳಸಿದರೆ ಅದು ಲೀಥಿಯಂನೊಂದಿಗೆ ಮಿಶ್ರಣಗೊಂಡು ಒಂದಾಗುವುದಿಲ್ಲ. ಇದರಿಂದಾಗಿ ವಿದ್ಯುತ್ ಕೋಶದ ಕಾರ್ಯಕ್ಷಮತೆಯು ತುಂಬಾ ಸುಧಾರಣೆಗೊಳ್ಳುತ್ತದೆ” ಎನ್ನುತ್ತಾರೆ ರಾಜ್.

ಅಧ್ಯಯನದಿಂದ ಕಂಡುಕೊಳ್ಳಲಾಗಿರುವ ಈ ಅಂಶಗಳು ಘನಸ್ಥಿತಿ ಬ್ಯಾಟರಿಗಳ ಪ್ರಾಯೋಗಿಕ ಹಾಗೂ ವಾಣಿಜ್ಯಿಕ ಉಪಯೋಗಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ತುಂಬಾ ಮಹತ್ವದ್ದಾಗಿವೆ. ಇದೇ ಮಾರ್ಗೋಪಾಯವನ್ನು ಸೋಡಿಯಂ, ಸತು, ಮೆಗ್ನೀಷಿಯಂನಂತಹ ಲೋಹಗಳನ್ನು ಒಳಗೊಂಡ ಬ್ಯಾಟರಿಗಳ ಬಾಳಿಕೆ ಅವಧಿಯನ್ನು ಹೆಚ್ಚಿಸಲು ಕೂಡ ಬಳಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

 ಉಲ್ಲೇಖ:

ವಿಕಲ್ಪ್ ರಾಜ್, ವಿಕ್ಟರ್ ವೆಂಚುರಿ, ವರುಣ್ ಆರ್.ಕಂಕನಲ್ಲು, ಬಿಭತ್ಸು ಕುಯಿರಿ, ವೆಂಕಟಸುಬ್ರಮಣಿಯನ್ ವಿಶ್ವನಾಥನ್ ಮತ್ತು ನಾಗ ಫನಿ ಬಿ. ಏತುಕುರಿ, Direct Correlation Between Void Formation and Lithium Dendrite Growth in Solid State Electrolytes with Interlayers, Nature Materials (2022).
DOI: 10.1038/s41563-022-01264-8
https://www.nature.com/articles/s41563-022-01264-8

 

ಸಂಪರ್ಕಿಸಿ:

ನಾಗ ಫಣಿ ಏತುಕುರಿ
ಸಹಾಯಕ ಪ್ರಾಧ್ಯಾಪಕ
ಘನಸ್ಥಿತಿ ಮತ್ತು ಸಂರಚನಾ ರಸಾಯನಶಾಸ್ತ್ರ ವಿಭಾಗ (ಎಸ್.ಎಸ್.ಸಿ.ಯು.)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
phani@iisc.ac.in
+91-80-2293 3534
https://sites.google.com/view/qlab-iisc/home

 

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್ ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್ ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or>pro@iisc.ac.in ಗೆ ಬರೆಯಿರಿ.

—–000—–