ಭಾರತದಲ್ಲಿ ಜಾನುವಾರುಗಳಿಗೆ ಚರ್ಮಗಂಟು ಸಂಕಷ್ಟ: ವೈರಾಣು ಅವಲೋಕನ


02 ಏಪ್ರಿಲ್ 2024
-ಅಮೃತ್ ದೀಪಕ್ ಭಟ್

ವರ್ಷ 2022ರ ಮೇ ತಿಂಗಳಲ್ಲಿ ಭಾರತದಾದ್ಯಂತ ಜಾನುವಾರುಗಳು ನಿಗೂಢ ಕಾಯಿಲೆಯಿಂದಾಗಿ ಸಾವಿಗೀಡಾಗುವ ಪ್ರಕರಣಗಳು ಶುರುವಾದವು. ಆಗಿನಿಂದ ಇದುವರೆಗೆ ಸುಮಾರು 1,00,000 ಜಾನುವಾರುಗಳು ಇದಕ್ಕೆ ಬಲಿಯಾಗಿದ್ದು, ವಿಜ್ಞಾನಿಗಳು ಚರ್ಮಗಂಟು ಕಾಯಿಲೆಯೇ ಇದಕ್ಕೆ ಕಾರಣವೆಂದು ಗುರುತಿಸಿದ್ದಾರೆ. ಈ ಸೋಂಕು ರೋಗವು ಭಾರತದ ಕೃಷಿ ವಲಯದ ಮೇಲೆ ತೀವ್ರ ದುಷ್ಪರಿಣಾಮ ಬೀರಿದ್ದು ದೊಡ್ಡಮಟ್ಟದ ಆರ್ಥಿಕ ನಷ್ಟ ಉಂಟುಮಾಡಿದೆ.

“ಇದು ಒಂದು ರೀತಿಯ ವಿಪತ್ತೇ ಹೌದು…. ಅಷ್ಟೇ ಏಕೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದೇ ಹೇಳಬಹುದು” ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೀವರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಉತ್ಪಲ್ ತಾಟು.

ತಾಟು ಅವರು ಈ ರೋಗಸ್ಪೋಟದ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿದ ಬಹು ಸಾಂಸ್ಥಿಕ ತಂಡದಲ್ಲಿ ಒಬ್ಬರಾಗಿದ್ದಾರೆ. ಈ ತಂಡದವರು ನಡೆಸಿದ ಅಧ್ಯಯನ ವರದಿಯು ಬಿಎಂಸಿ ಜೀನೋಮಿಕ್ಸ್ ನಲ್ಲಿ ಪ್ರಕಟವಾಗಿದ್ದು, ಇದು ರೋಗ ತಂದೊಡ್ಡುವ ವೈರಾಣು ವಿಭೇದಗಳ ವಿಕಾಸ ಮತ್ತು ಹುಟ್ಟಿನ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡುತ್ತದೆ.

ಚರ್ಮಗಂಟು ರೋಗ ವೈರಾಣು (ಎಲ್‌ಎಸ್‌ಡಿವಿ)ವಿನಿಂದ ಉಂಟಾಗುವ ಈ ಸೋಂಕು, ನೊಣಗಳು ಮತ್ತು ಸೊಳ್ಳೆಗಳಂತಹ ಕೀಟಗಳಿಂದ ಪ್ರಸರಣಗೊಳ್ಳುತ್ತದೆ. ಇದು ಜ್ವರವನ್ನು ಮತ್ತು ಚರ್ಮದ ಗಂಟುಗಳನ್ನು ತಂದೊಡ್ಡುವ ಮೂಲಕ ಜಾನುವಾರುಗಳಿಗೆ ಮಾರಣಾಂತಿಕವಾಗಿ ಪರಿಣಮಿಸಬಹುದು. ಜಾಂಬಿಯಾದಲ್ಲಿ 1931ರಲ್ಲಿ ಮೊದಲ ಬಾರಿಗೆ ಕಂಡುಬಂದ ಎಲ್ ಎಸ್ ಡಿ ವಿ ನಂತರ 1989ರವರೆಗೆ ಆಫ್ರಿಕಾ ಉಪಖಂಡ ಪ್ರದೇಶಕ್ಕೆ ಸೀಮಿತಗೊಂಡಿತ್ತು. ಅದಾದ ಮೇಲೆ, ಮಧ್ಯಪ್ರಾಚ್ಯ, ರಷ್ಯಾ ಮತ್ತು ಇತರ ನೈರುತ್ಯ ಯುರೋಪಿನ ರಾಷ್ಟ್ರಗಳಲ್ಲಿ ಕಾಣಿಸಿಕೊಂಡು ತರುವಾಯ ದಕ್ಷಿಣ ಏಷ್ಯಾಗೆ ಚಾಚಿಕೊಂಡಿತು. ಭಾರತದಲ್ಲಿ ಇದುವರೆಗೆ ಈ ಕಾಯಿಲೆಯು ಎರಡು ಬಾರಿ ದೊಡ್ಡಮಟ್ಟದಲ್ಲಿ ಸ್ಪೋಟಿಸಿದ್ದು, ಮೊದಲ ಬಾರಿಗೆ 2019ರಲ್ಲಿ ಹಾಗೂ ನಂತರ 2022ರಲ್ಲಿ ಇನ್ನಷ್ಟು ತೀವ್ರ ಸ್ವರೂಪದಲ್ಲಿ ವ್ಯಾಪಿಸಿತು. ಈ ವೇಳೆ ಸುಮಾರು 20 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿಗೆ ಈ ಸೋಂಕು ವ್ಯಾಪಿಸಿತು.

ಈ ಸೋಂಕಿನ ಬಗ್ಗೆ ಪರಿಶೀಲಿಸುವ ಸಲುವಾಗಿ ತಂಡದ ತಜ್ಞರು ವಿವಿಧ ರಾಜ್ಯಗಳಲ್ಲಿ ಸೋಂಕಿತ ಜಾನುವಾರುಗಳ ಚರ್ಮಗಂಟಿನ ಮಾದರಿ, ರಕ್ತ ಮಾದರಿ ಮತ್ತು ಮೂಗಿನ ಹೊಳ್ಳೆಗಳಿಂದ ದ್ರವದ ಅಂಶದ ಮಾದರಿಗಳನ್ನು ಸಂಗ್ರಹಿಸಿದರು. ಪಶು ಸಂಬಂಧಿ ಸಂಸ್ಥೆಗಳ ನೆರವಿನೊಂದಿಗೆ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಈ ಸಂಗ್ರಹಣೆ ನಡೆಸಿದರು. ನಂತರ, 22 ಮಾದರಿಗಳಿಂದ ಹೆಕ್ಕಲಾದ ಡಿ.ಎನ್.ಎ.ದ (ವರ್ಣತಂತುವಿನ) ಆಧುನಿಕ ಸಂಪೂರ್ಣ ವಂಶವಾಹಿನಿ ಅನುಕ್ರಮಣಿಕೆ ಸಿದ್ಧಪಡಿಸಿದರು.

“ಸ್ಥಾಪಿತ ಎಲ್ಎಸ್ ಡಿವಿ ವಂಶವಾಹಿನಿ ಅನುಕ್ರಮಣಿಕೆ ಹಾಗೂ ವಿಶ್ಲೇಷಣಾ ವ್ಯವಸ್ಥೆ ಇಲ್ಲದಿದ್ದುದು ಬಹಳ ದೊಡ್ಡ ತೊಡಕಾಗಿತ್ತು. ಕೋವಿಡ್-19ರ ಸಂದರ್ಭದಲ್ಲಿ ನಡೆಸಲಾಗಿದ್ದ ಸಂಶೋಧನೆಗಳ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕಾಯಿತು” ಎಂದು ವಿವರಿಸುತ್ತಾರೆ ಐಐಎಸ್‌ಸಿ ಪಿಎಚ್‌.ಡಿ. ವಿದ್ಯಾರ್ಥಿ ಹಾಗೂ ಅಧ್ಯಯನದ ಸಹ-ಮುಖ್ಯ ಲೇಖಕ ಅಂಕಿತ್ ಕುಮಾರ್. “ದತ್ತಾಂಶಗಳು ಕೂಡ ಸೀಮಿತ ಪ್ರಮಾಣದಲ್ಲಿದ್ದವು. ಹೀಗಾಗಿ, ನಾವು ನಮ್ಮ ವಿಶ್ಲೇಷಣೆಯನ್ನು ಸಶಕ್ತಗೊಳಿಸುವ ಉದ್ದೇಶದಿಂದ ಲಭ್ಯವಿರುವ ಎಲ್ಲಾ ಜಾಗತಿಕ ಎಲ್ಎಸ್ ಡಿವಿ ವಂಶವಾಹಿನಿ ಅನುಕ್ರಮಣಿಕೆಗಳನ್ನು ಒಟ್ಟುಗೂಡಿಸಿದೆವು” ಎಂದೂ ಅವರು ಹೇಳುತ್ತಾರೆ.

“ಭಾರತದಲ್ಲಿ ಎರಡು ಪ್ರತ್ಯೇಕ ಎಲ್ಎಸ್ ಡಿವಿ ರೂಪಾಂತರಿಗಳು ಪ್ರಸರಣಗೊಳ್ಳುತ್ತಿರುವುದನ್ನು ವಂಶವಾಹಿನಿ ವಿಶ್ಲೇಷಣೆ ಅನಾವರಣಗೊಳಿಸಿತು. ಒಂದನೆಯದು, ಕಡಿಮೆ ಸಂಖ್ಯೆಯ ವಂಶವಾಹಿನಿ ಭಿನ್ನತೆಗಳದ್ದಾದರೆ, ಎರಡನೆಯದು, ಅಧಿಕ ಸಂಖ್ಯೆಯ ವಂಶವಾಹಿನಿ ಭಿನ್ನತೆಗಳದ್ದಾಗಿದೆ. ಕಡಿಮೆ ಸಂಖ್ಯೆಯ ಭಿನ್ನತೆಗಳ ಅನುಕ್ರಮಣಿಕೆಯು ಆನುವಂಶಿಕವಾಗಿ 2019ರ ರಾಂಚಿ ಮತ್ತು 2020ರ ಹೈದರಾಬಾದ್ ವಿಭೇದಗಳಿಗೆ ಹೋಲುವಂತಿದ್ದವು. ಅಧಿಕ ಭಿನ್ನತೆಗಳ ಮಾದರಿಗಳು ರಷ್ಯಾದಲ್ಲಿ 2015ರಲ್ಲಿ ಸ್ಫೋಟಗೊಂಡಾಗ ಕಂಡುಬಂದಿದ್ದ ಎಲ್ಎಸ್ ಡಿವಿ ವಿಭೇದಗಳಿಗೆ ಹೋಲುವಂತಿದ್ದವು.

ಭಾರತದಲ್ಲಿ ಅಧಿಕ ಭಿನ್ನತೆಯ ಎಲ್ಎಸ್‌ಡಿವಿ ವಿಭೇದಗಳು ಈ ಮುಂಚೆ ವರದಿಯಾಗಿರಲಿಲ್ಲ ಎನ್ನುತ್ತಾರೆ ಕುಮಾರ್. ಎಲ್‌ಎಸ್‌ಡಿವಿಯಂತೆ ಡಿ.ಎನ್.ಎ. ಯನ್ನು ಆನುವಂಶಿಕ ದ್ರವ್ಯವಾಗಿ ಹೊಂದಿರುವ ವೈರಾಣುಗಳು ಸಾಮಾನ್ಯವಾಗಿ ಆರ್ ಎನ್ ಎ ವೈರಾಣುಗಳಿಗಿಂತ ಹೆಚ್ಚು ಸ್ಥಿರವಾಗಿರುತ್ತವೆ. ಆದ್ದರಿಂದ, ಹೀಗಾಗಿ, ಅಷ್ಟೊಂದು ಸಂಖ್ಯೆಯಲ್ಲಿ ಆನುವಂಶಿಕ ಭಿನ್ನತೆಗಳು ಕಂಡುಬಂದದು ಅಚ್ಚರಿಯ ಸಂಗತಿಯಾಗಿದ್ದು, ರೋಗದ ತೀವ್ರತೆಯ ಕಾರಣವನ್ನು ವಿವರಿಸಬಲ್ಲದು ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಸಂಶೋಧಕರ ತಂಡದವರು 1800ಕ್ಕೂ ಹೆಚ್ಚು ವಂಶವಾಹಿನಿ ಭಿನ್ನತೆಗಳನ್ನು ಗುರುತಿಸಿದರು. ವಿವಿಧ ವಂಶವಾಹಿನಿಗಳಲ್ಲಿ ಡಿಲೀಷನ್ ಗಳು ಮತ್ತು ಸೇರ್ಪಡೆಗಳು, ವಂಶವಾಹಿನಿಗಳ ನಡುವಿನ ನೆಲೆಗಳಲ್ಲಿ ಆನುವಂಶಿಕ ಭಿನ್ನತೆಗಳು ಇತ್ಯಾದಿಗಳನ್ನು ಇವು ಒಳಗೊಂಡಿವೆ. ಮುಖ್ಯವಾಗಿ, ಆಶ್ರಯದಾತ ಜೀವಕೋಶಗಳಿಗೆ ಅಂಟಿಕೊಳ್ಳುವುದರಲ್ಲಿ(ಬಂಧಗೊಳ್ಳುವುದರಲ್ಲಿ), ಪ್ರತಿರೋಧಕತೆಯಿಂದ ಪಾರಾಗುವಲ್ಲಿ ಹಾಗೂ ದಕ್ಷತೆಯಿಂದ ಪ್ರತಿಸೃಷ್ಟಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ವೈರಾಣು ವಂಶವಾಹಿನಿಗಳಲ್ಲಿ ಹೆಚ್ಚಿನ ಸಂಖ್ಯೆಯ ಭಿನ್ನತೆಗಳನ್ನು ಅವರು ಪತ್ತೆ ಹಚ್ಚಿದರು. ಇದು ರೋಗವನ್ನು ಉಂಟುಮಾಡುವ ವೈರಾಣುವಿನ ಸಾಮರ್ಥ್ಯ ಹೆಚ್ಚಳಗೊಳಿಸಿರಬೇಕು ಎಂಬುದು ತಜ್ಞರ ಊಹೆಯಾಗಿದೆ. “ಎಲ್ಲಿ ನಮಗೆ ಅಧಿಕ ವೈವಿಧ್ಯಮಯ ವಿಭೇದಗಳು ಕಂಡುಬಂದವೋ ಅಲ್ಲಿನ ಜಾನುವಾರುಗಳಲ್ಲಿ ಹೆಚ್ಚು ತೀವ್ರತೆಯ ರೋಗಲಕ್ಷಣಗಳು ಇದ್ದವು. ಆನುವಂಶಿಕ ಭಿನ್ನತೆಗಳು ವೈರಾಣು ಸೋಂಕನ್ನು ಹೆಚ್ಚಿಸುವ ಸಾಧ್ಯತೆಯನ್ನು ಇದು ತೋರಿಸುತ್ತದೆ” ಎನ್ನುತ್ತಾರೆ ಕುಮಾರ್.

ಇಂತಹ ಒಳನೋಟಗಳು ಜಾನುವಾರುಗಳು ಮತ್ತು ಜೀವನೋಪಾಯಗಳಿಗೆ ಭೀತಿ ತಂದೊಡ್ಡುವ ಹೊಸ ಸಾಂಕ್ರಾಮಿಕ ರೋಗಗಳನ್ನು ಎದುರಿಸುವಲ್ಲಿ ಸುಧಾರಿತ ರೋಗದೃಢೀಕರಣ, ಲಸಿಕೆಗಳು ಮತ್ತು ಚಿಕಿತ್ಸೆ ಗಳ ಅಭಿವೃದ್ಧಿಗೆ ಎಡೆ ಮಾಡಿಕೊಡಬಹುದು. ತಾಟು ಅವರ ತಂಡವು ಇದೇ ತರಹದ ಅಧ್ಯಯನಗಳನ್ನು ಕೋವಿಡ್-19ರ ಸೋಂಕಿನ ಸಂದರ್ಭದಲ್ಲಿ ಹಾಗೂ ಇತ್ತೀಚೆಗೆ ರೇಬೀಸ್ ವೈರಾಣುವಿಗೆ ಸಂಬಂಧಿಸಿದಂತೆಯೂ ನಡೆಸಿದೆ ಎಂಬುದು ಇಲ್ಲಿ ಉಲ್ಲೇಖಿಸಬೇಕಾದ ಅಂಶವಾಗಿದೆ.

“ವಂಶವಾಹಿನಿ ದತ್ತಾಂಶವು ಗುರಿ ನಿರ್ದೇಶಿಸಬೇಕಾದ ಆಣ್ವಿಕ ಸಕ್ರಿಯ ನೆಲೆಗಳನ್ನು ಮತ್ತು ವಂಶವಾಹಿನಿ ಭಿನ್ನತೆಗಳನ್ನು ಅನಾವರಣಗೊಳಿಸುವ ಮೂಲಕ ಲಸಿಕೆ ಅಭಿವೃದ್ಧಿಯಲ್ಲಿ ಅಮೂಲ್ಯ ಪಾತ್ರ ವಹಿಸಲಿದೆ” ಎಂದು ಪ್ರತಿಪಾದಿಸುತ್ತಾರೆ ತಾಟು. “ಭಾರತದಲ್ಲಿ ಉಂಟಾದ ಸೋಂಕುಸ್ಫೋಟದ ವೇಳೆ ರಾಷ್ಟ್ರೀಯ ಮಟ್ಟದಲ್ಲಿ ಎಲ್ ಎಸ್ ಡಿವಿ ಯ ವಂಶವಾಹಿನಿ ಅನುಕ್ರಮಣಿಕೆ ಸಿದ್ಧಪಡಿಸಿರುವುದು ಇದೇ ಮೊದಲು” ಎಂದೂ ಅವರು ಹೇಳುತ್ತಾರೆ.

ರಾಷ್ಟ್ರೀಯ ಮಟ್ಟದ ಸಮಸ್ಯೆ ಪರಿಹರಿಸಲು ಮಾಲಿಕ್ಯುಲಾರ್ ಬಯಾಲಜಿಸ್ಟ್ ಗಳು, ಕಾಂಪ್ಯೂಟೇಷನಲ್ ತಜ್ಞರು ಮತ್ತು ಪಶುವೈದ್ಯರು ಸೇರಿದಂತೆ ಬಹುಶಿಸ್ತೀಯ ತಂಡಗಳು ಒಂದೆಡೆ ಸೇರಿದ ‘ಒನ್ ಹೆಲ್ತ್’ ಪರಿಕಲ್ಪನೆಗೆ ಈ ಅಧ್ಯಯನವು ಒಂದು ಉದಾಹರಣೆಯಾಗಿದೆ. ದೇಶದಾದ್ಯಂತದ ವೈರಾಣು ಭಿನ್ನತೆಗಳನ್ನು ಪತ್ತೆಹಚ್ಚುವಲ್ಲಿ ಪಶುತಜ್ಞರು ಹಾಗೂ ವಿವಿಧ ವೈಜ್ಞಾನಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವ ಎಷ್ಟು ಮಹತ್ವ ಎಂಬ ಬಗ್ಗೆಯೂ ತಾಟು ಆವರು ಒತ್ತಿ ಹೇಳುತ್ತಾರೆ. “ಪಶು ವೈದ್ಯರುಗಳಿಂದ ನಾವು ಸಾಕಷ್ಟು ಕಲಿತೆವು. ಅವರಿಗೆ ಕಾರ್ಯಕ್ಷೇತ್ರದಲ್ಲಿನ ಜ್ಞಾನ ಉತ್ತಮವಾಗಿರುತ್ತದೆ ಹಾಗೂ ರೋಗದ ಬಗೆಗಿನ ಅವರ ಗ್ರಹಿಕೆಯು ನಮಗೆ ತುಂಬಾ ಮುಖ್ಯವಾಗುತ್ತದೆ” ಎಂದು ಕೂಡ ತಾಟು ಅಭಿಪ್ರಾಯಪಡುತ್ತಾರೆ.

ಉಲ್ಲೇಖ:
ಯಾದವ್ ಪಿ, ಕುಮಾರ್ ಎ, ನಾಥ್ ಎಸ್ ಎಸ್, ದೇವಸುಮಠ್ ವೈ, ಶಶಿಧರ್ ಜಿ, ಜೋಶಿ ಎಂ, ಪುವರ್ ಎ, ಶರ್ಮಾ ಎಸ್, ರವಳ್ ಜೆ, ಪಂಡಿತ್ ಆರ್, ಚಾವ್ಡಾ ಪಿ, ನಾಗರಾಜ್ ಎಸ್, ರೇವಣ್ಣಯ್ಯ ವೈ, ಪಾಟೀಲ್ ಡಿ, ರವಳ್ ಎಸ್ ಕೆ, ಕನಾನಿ ಎ, ಥಾಕರ್ ಎಫ್, ಕುಮಾರ್ ಎನ್, ರೆಡ್ಡಿ ಜಿಬಿಎಂ, ಜೋಶಿ ಸಿ, ಗುಲಾಟಿ ಬಿ ಆರ್, ತಾಟು ಯು Unravelling the genomic origins of lumpy skin disease virus in recent outbreaks, BMC Genomics (2024)

ಸಂಪರ್ಕಿಸಿ:
ಉತ್ಫಲ್ ತಾಟು
ಪ್ರಾಧ್ಯಾಪಕರು
ಜೀವರಸಾಯನ ಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಇ-ಮೇಲ್: tatu@iisc.ac.in
ಫೋನ್: +91-80-2293 2823
ವೆಬ್ಸೈಟ್: http://utlab3.biochem.iisc.ernet.in/

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@