18 ಏಪ್ರಿಲ್ 2024
ಭಾರತೀಯ ವಿಜ್ಞಾನ ಸಂಸ್ಥೆಯು “ದೀರ್ಘಾಯುಷ್ಯ ಭಾರತ” ಉಪಕ್ರಮಕ್ಕೆ ಚಾಲನೆ ನೀಡಿರುವುದಾಗಿ ಪ್ರಕಟಿಸಿದ್ದು, ಇದು ಮನುಷ್ಯರ “ಆರೋಗ್ಯಯುತ ಬಾಳಿಕೆ ಅವಧಿ” ಹೆಚ್ಚಿಸುವ ಹಾಗೂ ವಯೋಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನಗಳ ಬಗ್ಗೆ ಗಮನ ಕೇಂದ್ರೀಕರಿಸುವ ಉದ್ದೇಶ ಹೊಂದಿದೆ.
ಈ ಉಪಕ್ರಮದ ಭಾಗವಾಗಿ ದೊಡ್ಡಮಟ್ಟದ ಚಿಕಿತ್ಸಾ ಅಧ್ಯಯನವನ್ನೂ ಆರಂಭಿಸಲಾಗಿದೆ. ಐಐಎಸ್‌ಸಿ ಯ ವಿವಿಧ ವಿಭಾಗಗಳ ಸಂಶೋಧಕರು, ಕ್ಲಿನಿಷಿಯನ್ ಗಳು, ಉದ್ಯಮತಜ್ಞರು, ಸಮಾಜ ಸೇವಾಸಕ್ತರು ಮತ್ತು ನಾಗರಿಕ ಸಮುದಾಯದ ಹಿತಾಸಕ್ತರನ್ನು ಇದು ಒಳಗೊಂಡಿದೆ.
ಈ ಉಪಕ್ರಮವು ವಯಸ್ಸಾಗುವಿಕೆಯ ಬಗೆಗಿನ ಜ್ಞಾನವನ್ನು, ಮೂಲಭೂತ ಮತ್ತು ಅನ್ವಯಿಕ, ಈ ಎರಡೂ ಬಗೆಯ ಸಂಶೋಧನೆಗಳಿಂದ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ. ಜೊತೆಗೆ, ಬದುಕಿನ ಗುಣಮಟ್ಟ ಸುಧಾರಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಧ್ಯೇಯವನ್ನೂ ಹೊಂದಿದೆ. ಆಕ್ಸೆಲ್ ಇಂಡಿಯಾದ ಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಅವರು ಈ ಉಪಕ್ರಮಕ್ಕೆ ಆರಂಭಿಕ ಅನುದಾನದ ನೆರವು ನೀಡಿದ್ದಾರೆ.
ಈ ಉಪಕ್ರಮವನ್ನು ಇಂದು ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಈ “ದೀರ್ಘಾಯುಷ್ಯ ಭಾರತ” ಉಪಕ್ರಮವು ವಯಸ್ಸಾಗುವಿಕೆಗೆ ಸಂಬಂಧಿಸಿದ ಜಟಿಲ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಶೈಕ್ಷಣಿಕ ವಲಯ, ಉದ್ಯಮ ವಲಯ ಮತ್ತು ಆರೋಗ್ಯಸೇವಾ ವಲಯದ ಪರಿಣತರನ್ನು ಒಂದೇ ವೇದಿಕೆಯಡಿ ತರಲಿದೆ. ಈ ಉಪಕ್ರಮವು ಭಾರತದ ಜನರಿಗೆ ವಯಸ್ಸಾದ ಹಂತದಲ್ಲಿ ಗುಣಮಟ್ಟದ ಆರೋಗ್ಯವನ್ನು ಉತ್ತೇಜಿಸುವುದರೊಂದಿಗೆ ವಯೋಸಂಬಂಧಿ ಕಾಯಿಲೆಗಳ ನಿರ್ವಹಣೆಯನ್ನು ಗಮನದಲ್ಲಿರಿಸಿಕೊಂಡುಅತ್ಯಾಧುನಿಕ ಸಂಶೋಧನೆಗಳನ್ನು ಆಧರಿಸಿ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲಿದೆ.
“ವಯಸ್ಸಾಗುವಿಕೆಯ ಹಂತದ ಸಮಸ್ಯೆಗಳು ಅನಿವಾರ್ಯವಾದ ವಿಧಿಬರಹ ಎಂಬ ದೃಷ್ಟಿಕೋನವನ್ನು ದೀರ್ಘಾಯುಷ್ಯ ಭಾರತ ಉಪಕ್ರಮವು ಸವಾಲಾಗಿ ಸ್ವೀಕರಿಸಲಿದೆ. ವಯಸ್ಸಾಗುವಿಕೆಯ ಸಂಕೀರ್ಣತೆಗಳನ್ನು ಅಧ್ಯಯನ ಮಾಡುತ್ತಾ ಹೋದಂತೆ ಅದನ್ನು ಪ್ರಭಾವಿಸುವ ವಿವಿಧ ಅಂಶಗಳನ್ನು ಪರಿಗಣಿಸಬೇಕಾದ ಪ್ರಾಮುಖ್ಯವನ್ನು ನಾವು ಮನಗಾಣುತ್ತೇವೆ. ಇದು ಜೀವನಶೈಲಿ, ಸಂಸ್ಕೃತಿ, ಆನುವಂಶೀಯತೆ, ಮತ್ತು ಪರಿಸರ ಇವೆಲ್ಲವನ್ನೂ ಒಳಗೊಂಡಿರುತ್ತದೆ. ಭಾರತದಲ್ಲಿರುವ ವಿಶಿಷ್ಟ ಜನ ಸಮುದಾಯದ ದೃಷ್ಟಿಯಿಂದ ನೋಡಿದರೆ ದೀರ್ಘಾಯುಷ್ಯಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳು ಸಾಕಷ್ಟು ನಡೆದಿಲ್ಲ ಎಂದೇ ಹೇಳಬಹುದು. ಈ ವಲಯದಲ್ಲಿ ಕಾರ್ಯನಿರತವಾಗಿರುವ ವಿವಿಧ ಹಿತಾಸಕ್ತಿದಾರರನ್ನು ಒಂದೆಡೆ ಒಗ್ಗೂಡಿಸಲು ಮತ್ತು ಭಾರತದ ನಿರ್ದಿಷ್ಟ ಹಾಗೂ ವೈವಿಧ್ಯಮಯ ಅಗತ್ಯಗಳನ್ನು ಶೋಧಿಸಲು ಈ ಉಪಕ್ರಮ ಪ್ರಯತ್ನಿಸಲಿದೆ ಎಂದು ವಿವರಿಸುತ್ತಾರೆ ಪ್ರಶಾಂತ್ ಪ್ರಕಾಶ್.
ಅತ್ಯಾಧುನಿಕ ವಯೋಸಂಬಂಧಿ ವೈಜ್ಞಾನಿಕ ಸಂಶೋಧನೆ ನಡೆಸುವುದು ಪ್ರಮುಖವಾಗಿದ್ದು, ಸಂಶೋಧನಾ ಆಧಾರಿತ ಚಿಕಿತ್ಸೆಗಳು ಭಾರತದ ಜನರಿಗೆ ವಯಸ್ಸಾಗುವ ಹಂತದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗಬಹುದು ಎಂಬ ವಿಶ್ವಾಸ ನಮಗಿದೆ” ಎಂದೂ ಪ್ರಕಾಶ್ ಹೇಳುತ್ತಾರೆ.
“ವಯಸ್ಸಾಗುವಿಕೆಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿ ಕಂಡುಬರುತ್ತಿದ್ದು, ಉದ್ಯಮ ಹಾಗೂ ಶೈಕ್ಷಣಿಕ ವಲಯದ ನಡುವೆ ಸಹಭಾಗಿತ್ವ ಅತ್ಯಗತ್ಯವಾಗಿರುತ್ತದೆ. ಭಾರತದಲ್ಲಿ ಹಿರಿಯ ವಯಸ್ಸಿನವರ ಜನಸಂಖ್ಯೆಯು 2050ರ ವೇಳೆಗೆ 347 ದಶಲಕ್ಷಕ್ಕೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ವಯೋಮಾನದವರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗುವಂತಾಗಲು ನಾವು ತಂತ್ರಜ್ಞಾನ ಬಳಸುವುದು ಅತ್ಯವಶ್ಯವಾಗಿರುತ್ತದೆ. ‘ಸಿಲ್ವರ್ ಎಕಾನಮಿ’ಗೆ ಒತ್ತಾಸೆ ನೀಡುವ ಜೊತೆಗೆ ವಯಸ್ಸಾದವರಿಗೆ ಪೂರಕವಾದ ಡಿಜಿಟಲ್ ವ್ಯವಸ್ಥೆಗಳ ಮೇಲೆ ಹೂಡಿಕೆ ಮಾಡುವುದಕ್ಕೂ ಇದು ಅತ್ಯಗತ್ಯ” ಎಂದು ಬಯೋಕಾನ್ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಹೇಳಿದರು.
ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ಮಾತನಾಡಿ, ಶೈಕ್ಷಣಿಕ ವಲಯ, ಆರೋಗ್ಯ ಸೇವಾ ಕ್ಷೇತ್ರ ಮತ್ತು ಉದ್ಯಮರಂಗದ ಹಿತಾಸಕ್ತಿದಾರರು ಒಗ್ಗೂಡಿ ತಾಂತ್ರಿಕ ಅಭಿವೃದ್ಧಿ ಹಾಗೂ ವಯಸ್ಸಾಗುವಿಕೆಯ ಹಂತದಲ್ಲಿನ ಗುಣಮಟ್ಟದ ಆರೋಗ್ಯಕ್ಕೆ ಸಂಬಂಧಿಸಿದಂತೆ ಗಹನವಾದ ಸಂಶೋಧನೆಗಳಿಗೆ ಒತ್ತು ನೀಡುವ ಜರೂರು ಇದೆ ಎಂದರು.
ಐಐಎಸ್‌ಸಿಯಲ್ಲಿ ಹಲವಾರು ಸಂಶೋಧಕರ ತಂಡಗಳು ವಯಸ್ಸಾಗುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ಸವಾಲುಗಳ ಕುರಿತಾಗಿ ಹಲವು ವರ್ಷಗಳಿಂದ ಅಧ್ಯಯನಗಳಲ್ಲಿ ತೊಡಗಿಸಿಕೊಂಡಿವೆ. ಸೂಕ್ತ ಕಾಲದಲ್ಲಿ ಚಾಲನೆಗೊಂಡಿರುವ ಈ ಉಪಕ್ರಮವು ದೇಶದಲ್ಲಿ ಹೆಚ್ಚಳವಾಗಲಿರುವ ವಯಸ್ಸಾದವರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಮಹತ್ವದ ಪ್ರಭಾವ ಬೀರಲಿದೆ ಎಂದೂ ಅವರು ಅಭಿಪ್ರಾಯ ಪಟ್ಟರು.
“ದೀರ್ಘಾಯುಷ್ಯ ಭಾರತ” ಉಪಕ್ರಮದ ಸಂಚಾಲಕ ದೀಪಕ್ ಸೈನಿ ಅವರು ಮಾತನಾಡಿ, “ದೀರ್ಘಾಯುಷ್ಯ ವಲಯಕ್ಕೆ ದೀರ್ಘಾವಧಿ ಹೂಡಿಕೆ ಮತ್ತು ನೆರವಿನ ಅಗತ್ಯವಿದೆ. ಈ ಮಹತ್ವದ ಉಪಕ್ರಮದಲ್ಲಿ ವಿವಿಧ ಹಿತಾಸಕ್ತಿದಾರರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ” ಎಂದರು.
ಎಂ ಎಸ್ ರಾಮಯ್ಯ ಆಸ್ಪತ್ರೆ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜು & ಸಂಶೋಧನಾ ಸಂಸ್ಥೆಗಳು ವಯಸ್ಸಾಗುವಿಕೆಯ ಜೈವಿಕ ಚಹರೆಗಳನ್ನು ಗುರುತಿಸಲು ಅಗತ್ಯವಾದ ಚಿಕಿತ್ಸಾ ಅಧ್ಯಯನಗಳನ್ನು ನಡೆಸಲು ಅಧಿಕೃತ ಪಾಲುದಾರರಾಗಿವೆ. ಜೊತೆಗೆ, ಬೆಕ್ಮ್ಯಾನ್ ಕೌಲ್ಟರ್, ಹೆಲ್ದಿಯನ್ಸ್, ವಲೇರಿಯನ್ ಪ್ರೋಟಿಯೋಮಿಕ್ಸ್, ಮತ್ತು ಡೀಕೋಡ್ಏಜ್ ಗಳು ತಮ್ಮ ತಾಂತ್ರಿಕತೆಗಳನ್ನು ಸುಲಭ ದರದಲ್ಲಿ ನೀಡುವ ಮೂಲಕ ಸಂಶೋಧನೆಗಳನ್ನು ತ್ವರಿತಗೊಳಿಸಲು ನಿರ್ಣಾಯಕವಾದ ಸಹಕಾರ ನೀಡಲಿವೆ.
ಉದ್ಘಾಟನಾ ಸಮಾರಂಭದ ಪ್ರಮುಖ ಅಂಶಗಳು:
ಐಐಎಸ್‌ಸಿ ಅಂತರಶಿಸ್ತೀಯ ವಿಜ್ಞಾನಗಳ ವಿಭಾಗದ ಡೀನ್ ನವಕಾಂತ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಐಐಎಸ್‌ಸಿ ನಿರ್ದೇಶಕ ಗೋವಿಂದ ರಂಗರಾಜನ್ ಅವರು “ದೀರ್ಘಾಯುಷ್ಯ ಭಾರತ” ಉಪಕ್ರಮದ ಮುನ್ನೋಟದ ಬಗ್ಗೆ ಗಮನ ಸೆಳೆದು, ಈ ಉಪಕ್ರಮವು ಮಹತ್ವದ ಪ್ರಭಾವ ಬೀರಲಿದೆ ಎಂದರು.
“ದೀರ್ಘಾಯುಷ್ಯ ಭಾರತ” ಉಪಕ್ರಮದ ಸಂಚಾಲಕ ದೀಪಕ್ ಸೈನಿ ಅವರು, ಉಪಕ್ರಮದ ಬಗ್ಗೆ ಸಮಗ್ರವಾಗಿ ವಿವರಿಸಿ, ಅದರ ಗುರಿಗಳು ಮತ್ತು ಯೋಜನೆಗಳ ಬಗ್ಗೆ ಗಮನಸೆಳೆದರು.
ಬಯೋಕಾನ್ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರು, ದೀರ್ಘಾಯುಷ್ಯಕ್ಕೆ ಸಂಬಂಧಿಸಿದ ಸಂಶೋಧನೆಗೆ ನೆರವಾಗುವಲ್ಲಿ ಉದ್ಯಮ ವಲಯದ ಪಾತ್ರದ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಭಾಗವಾಗಿ ಭಾರತದಲ್ಲಿ ದೀರ್ಘಾಯುಷ್ಯಕ್ಕೆ ಸಂಬಂಧಿಸಿದ ಸಂಶೋಧನೆಯ ಅಗತ್ಯ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಉದ್ಯಮಿಯಾಗಿರುವ ಆಕ್ಸೆಲ್ ವೆಂಚರ್ಸ್ ನ ಪ್ರಶಾಂತ್ ಪ್ರಕಾಶ್ ಮತ್ತು ಎಚ್ ಸಿ ಜಿ ಗ್ಲೋಬಲ್ ನ ಆರೋಗ್ಯಸೇವಾ ತಜ್ಞ ವಿಶಾಲ್ ರಾವ್ ಅವರು ಪಾಲ್ಗೊಂಡಿದ್ದರು.
ಈ ಉಪಕ್ರಮದ ಸಂಶೋಧನೆಯ ಕಾಯಿಲೆಯ ಆರಂಭಿಕ ಹಂತದ ಸೂಚಕಗಳ ಪತ್ತೆ, ವಯಸ್ಸಾಗುವಿಕೆಯ ಜೈವಿಕ ಚಹರೆಗಳ ಪರಿಶೀಲನೆ, ಮತ್ತು ವಯಸ್ಸಾಗುವಿಕೆಯ ಹಂತದಲ್ಲಿ ಗುಣಮಟ್ಟದ ಆರೋಗ್ಯಕ್ಕೆ ಪೂರಕವಾದ ಹೊಸ ಥೆರಪ್ಮೂಟಿಕ್ಸ್ ಹಾಗೂ ತಾಂತ್ರಿಕತೆಗಳ ಅಭಿವೃದ್ಧಿ ಬಗ್ಗೆ ಗಮನ ಕೇಂದ್ರೀಕರಿಸಲಿದೆ. ಜೀವಶಾಸ್ತ್ರೀಯ ಮತ್ತು ಅಂತರಶಿಸ್ತೀಯ ವಿಜ್ಞಾನಗಳ ಕ್ಷೇತ್ರದಲ್ಲಿ ಐಐಎಸ್‌ಸಿ ಹೊಂದಿರುವ ವಿಸ್ತೃತ ಅನುಭವವು ನಾವೀನ್ಯತೆಗಳ ಅಭಿವೃದ್ಧಿ, ಪರೀಕ್ಷೆ ಮತ್ತು ಅನುಷ್ಠಾನಕ್ಕೆ ಅನುವು ಮಾಡಿಕೊಡಲಿದೆ.
“ದೀರ್ಘಾಯುಷ್ಯ ಭಾರತ” ಉಪಕ್ರಮದ ಬಗ್ಗೆ ವಿವರವಾಗಿ ತಿಳಿಯಲು ಹಾಗೂ ಸಹಭಾಗಿತ್ವದ ಅವಕಾಶಗಳನ್ನು ಶೋಧಿಸಲು ದಯವಿಟ್ಟು https://longevity.iisc.ac.in/ಗೆ ಭೇಟಿ ಕೊಡಿ.
ಈ ಉಪಕ್ರಮದ ಬಗ್ಗೆ ಕೆಳಗೆ ನೀಡಿರುವ ಸಾಮಾಜಿಕ ಮಾಧ್ಯಮಗಳ ಮೂಲಕವೂ ತಿಳಿಯಬಹುದು:
Instagram: @Longevity_IISc
Twitter/X: @Longevity_IISc
LinkedIn: Longevity India
ಸಂಪರ್ಕಿಸಿ:
ದೀಪಕ್ ಕುಮಾರ್ ಸೈನಿ
ಸಂಯೋಜಕರು, ದೀರ್ಘಾಯುಷ್ಯ ಭಾರತ,
ಪ್ರಾಧ್ಯಾಪಕರು, ಡೆವಲಪ್ಮೆಂಟಲ್ ಬಯಾಲಜಿ ಮತ್ತು ಜೆನೆಟಿಕ್ಸ್ (ಡಿಬಿಜಿ) ವಿಭಾಗ,
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
Email: longevity@iisc.ac.in
ಫೋನ್: +91-80-22932574