– ಕಾರ್ತಿಕ ಕಾವೇರಿ ಮಯ್ಯಪ್ಪನ್
ಮಿದುಳಿನ ಗಡ್ಡೆಗಳ ಕಾಯಿಲೆ ಜಾಸ್ತಿಯಾಗುವ ಸಾಧ್ಯತೆಯನ್ನು ಹಾಗೂ ಕೊನೆಯ ಹಂತದಲ್ಲಿ ಬಾಧಿತ ವ್ಯಕ್ತಿಯು ಬದುಕುಳಿಯುವ ಸಾಧ್ಯತೆಯನ್ನು ಊಹಿಸಲು ನೆರವಾಗುವ ರಕ್ತ ಆಧಾರಿತ ಜೈವಿಕಸೂಚಕಗಳನ್ನು (ಬಯೋಮಾರ್ಕರ್ ಗಳನ್ನು) ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ ಸಿ) ವಿಜ್ಞಾನಿಗಳು ಇತರ ತಜ್ಞರ ಸಹಭಾಗಿತ್ವದಲ್ಲಿ ನಡೆಸಿದ ಸಂಶೋಧನೆಗಳಿಂದ ಪತ್ತೆಹಚ್ಚಿದ್ದಾರೆ.
ಐ.ಐ.ಎಸ್ ಸಿ.ಯ ‘ಜೈವಿಕವ್ಯವಸ್ಥೆಗಳ ವಿಜ್ಞಾನ ಮತ್ತು ಎಂಜಿನಿಯರಿಂಗ್’(BSSE), ಮಜುಂದಾರ್ ಷಾ ಸೆಂಟರ್ ಫಾರ್ ಟ್ರ್ಯಾನ್ಸ್ ಲೇಷನಲ್ ರೀಸರ್ಚ್ ಮತ್ತು ಮಜುಂದಾರ್ ಷಾ ವೈದ್ಯಕೀಯ ಪ್ರತಿಷ್ಠಾನದ ಸಂಶೋಧಕರು ಇದರಲ್ಲಿ ಭಾಗಿಯಾಗಿದ್ದರು.
ಮಿದುಳಿನಲ್ಲಿ ಗಡ್ಡೆಗಳಿರುವ, ಅಂದರೆ ಗ್ಲಿಯೋಮಾಗಳಿರುವ ವ್ಯಕ್ತಿಗಳ ಗಡ್ಡೆಗಳು ಮತ್ತು ರಕ್ತದ ಮಾದರಿಗಳನ್ನು ವಿಶ್ಲೇಷಿಸುವ ಮೂಲಕ ತಜ್ಞರು ಅಧ್ಯಯನ ನಡೆಸಿದರು. ಈ ಕ್ರಮವನ್ನು ಅನುಸರಿಸಿ ರಕ್ತದಲ್ಲಿನ ಪ್ರತಿರೋಧ ಜೀವಕೋಶಗಳಲ್ಲಿನ ಮೇಲ್ಮೈ ಪ್ರೊಟೀನ್ ಗಳನ್ನು ಅವರು ಪತ್ತೆಹಚ್ಚಿದರು. ಹೀಗೆ ಪತ್ತೆಯಾದ ಮೇಲ್ಮೈ ಪ್ರೊಟೀನ್ ಗಳ ಪ್ರಮಾಣಕ್ಕೂ ಮಿದುಳಿನ ಗಡ್ಡೆ ಬೆಳೆಯುತ್ತಾ ಹೋಗುವುದಕ್ಕೂ ಸಂಬಂಧವಿದೆ ಎಂಬುದು ಸಂಶೋಧಕರ ಪ್ರತಿಪಾದನೆಯಾಗಿದೆ. ಈ ಕುರಿತ ಅಧ್ಯಯನ ವರದಿಯು OncoImmunology ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಮೂರನೇ ಹಂತ ಹಾಗೂ ನಾಲ್ಕನೇ ಹಂತದಲ್ಲಿರುವ, ಅಂದರೆ, ನಾಲ್ಕನೇ ಹಂತದಲ್ಲಿರುವ ಗ್ಲಿಯೋಮಾಗಳು ಸಾಮಾನ್ಯವಾಗಿ ವಾಸಿಯಾಗುವ ಸಾಧ್ಯತೆ ಕಡಿಮೆ. ಇಂತಹ ಗಡ್ಡೆಗಳಿಗೆ ಚಿಕಿತ್ಸೆ ನೀಡುವುದು ಕಠಿಣ ಸವಾಲಾಗಿದ್ದು, ಬಾಧಿತ ವ್ಯಕ್ತಿಯು ಬದುಕುಳಿಯುವ ಸಾಧ್ಯತೆಯೂ ಕಡಿಮೆಯಿರುತ್ತದೆ. “ನಾವು ಅನುಸರಿಸುವ ನಿರ್ದಿಷ್ಟ ಚಿಕಿತ್ಸಾ ಕ್ರಮಗಳು ಯಾವ ಬಾಧಿತ ವ್ಯಕ್ತಿಯ ಮೇಲೆ ಅಷ್ಟಾಗಿ ಉತ್ತಮ ಪರಿಣಾಮ ಬೀರುವುದಿಲ್ಲ ಎಂಬುದನ್ನು ಅಂದಾಜಿಸಲು ಪ್ರತಿರೋಧ ಜೀವಕೋಶಗಳ ಮೇಲಿರುವ ಈ ಎರಡು ರಕ್ತ ಆಧಾರಿತ ಜೈವಿಸೂಚಕಗಳನ್ನು ಬಳಸಬಹುದಾದ ಸಾಧ್ಯತೆಗಳಿವೆ ಎಂಬುದು ನಮ್ಮ ಪ್ರಾಯೋಗಿಕ ಅಧ್ಯಯನದಿಂದ ಕಂಡುಬಂದಿದೆ” ಎನ್ನುತ್ತಾರೆ ಬಿಎಸ್ಎಸ್ಇ ಸಹಾಯಕ ಪ್ರಾಧ್ಯಾಪಕ ಹಾಗೂ ಅಧ್ಯಯನದ ಹಿರಿಯ ಲೇಖಕ ಸಿದ್ಧಾರ್ಥ ಜುಂಜುನ್ ವಾಲಾ. ಇಂತಹ ರಕ್ತ ಆಧಾರಿತ ಪರೀಕ್ಷಾ ವಿಧಾನವು ಚಿಕಿತ್ಸಕರಿಗೆ ಕಾಯಿಲೆಯ ಬೆಳವಣಿಗೆಯ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸಾ ಕ್ರಮವನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುವ ಸಾಧ್ಯತೆಗಳಿವೆ.
“ಕ್ಯಾನ್ಸರ್ ಚಿಕಿತ್ಸೆಗೆ ಅನುಸರಿಸುವ ರೂಢಿಗತವಾದ ಕೆಮೊಥೆರಪಿಯಂತಹ ಕ್ರಮಗಳು ಬಹುತೇಕ ಮಿದುಳು ಗಡ್ಡೆ ಚಿಕಿತ್ಸಾ ಪ್ರಕರಣಗಳಲ್ಲಿ ಯಾವುದೇ ಪರಿಣಾಮ ಬೀರದಿರುವುದು ವಾಸ್ತವವಾಗಿದೆ. ಹೀಗಾಗಿಯೇ, ನಮ್ಮದೇ ರೋಗ ನಿರೋಧಕ ವ್ಯವಸ್ಥೆಯನ್ನು ಗಡ್ಡೆ ಕೋಶಗಳ ಮೇಲೆ ದಾಳಿ ಎಸಗಲು ಪ್ರಚೋದಿಸುವ ಇಮ್ಯುನೋಥೆರಿಪಿಯಂತಹ ಹೊಸ ಚಿಕಿತ್ಸಾ ಮಾರ್ಗೋಪಾಯಗಳು ಪ್ರಚಲಿತಕ್ಕೆ ಬರುತ್ತಿವೆ. ಆದರೆ, ಕೆಲವು ಪ್ರಮಾಣೀಕರಣಗೊಂಡ ಇಮ್ಯುನೊಥೆರಪಿಗಳಿಗೆ ಗ್ಲಿಯೋಮಾ ಚಿಕಿತ್ಸೆಯಲ್ಲಿ ಸಿಗುತ್ತಿರುವ ಯಶಸ್ಸು ಸೀಮಿತವಾಗಿದೆ” ಎಂದು ಜುಂಜುನ್ ವಾಲಾ ವಿವರಿಸುತ್ತಾರೆ. “ಈ ಅಂಶವು ನಮ್ಮನ್ನು ಗಡ್ಡೆಯ ಸೂಕ್ಷ್ಮವಲಯದಲ್ಲಿ ಪ್ರತಿರೋಧ ಗುಣಲಕ್ಷಣಗಳನ್ನು ತಿಳಿದುಕೊಳ್ಳಬೇಕೆಂಬ ಆಲೋಚನೆಗೆ ದೂಡಿತು” ಎಂದೂ ಅವರು ಹೇಳುತ್ತಾರೆ.
ಸಂಶೋಧಕರು ತಂಡವು ಅಧ್ಯಯನದ ಭಾಗವಾಗಿ ಮೂರನೇ ಹಂತ ಹಾಗೂ ನಾಲ್ಕನೇ ಹಂತದ ಗ್ಲಿಯೋಮಾದಿಂದ ಬಾಧಿತರಾದವರ ರಕ್ತದ ಮತ್ತು ಗಡ್ಡೆಯ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿತ್ತು. ನಂತರ, ಈ ಮಾದರಿಗಳಲ್ಲಿನ ನಿರ್ದಿಷ್ಟ ಪ್ರತಿರೋಧ ಜೀವಕೋಶಗಳಾದ ಮೋನೋಸೈಟ್ ಹಾಗೂ ನ್ಯೂಟ್ರೋಫಿಲ್ ಗಳ ಸಂಖ್ಯೆಯನ್ನು ಹೋಲಿಕೆ ಮಾಡಿ ಪರಿಶೀಲನೆ ನಡೆಸಿತ್ತು.
“ಇವು ಜೈವಿಕ ಮಾದರಿಗಳಾದ್ದರಿಂದ ಜೀವಕೋಶಗಳ ಕ್ಷಮತೆ ನಷ್ಟವಾಗದಂತೆ ಅವನ್ನು ಸಂರಕ್ಷಿಸುವುದು ಹಾಗೂ ಸಂಸ್ಕರಿಸುವುದು ಅತ್ಯಗತ್ಯವಾಗಿತ್ತು” ಎನ್ನುತ್ತಾರೆ ಬಿಎಸ್ಎಸ್ಇ ಪಿಎಚ್.ಡಿ. ವಿದ್ಯಾರ್ಥಿ ಹಾಗೂ ಅಧ್ಯಯನದ ಮೊದಲ ಲೇಖಕರಾದ ಜಯಶ್ರೀ ವಿ.ರಾಘವನ್. “ಇದಕ್ಕಾಗಿ ನಾವು ಅನುಸರಿಸಿದ ವಿಧಾನವನ್ನು ಎರಡು ಸಂಸ್ಥೆಗಳ ನಡುವೆ ಹಂಚಿಕೊಳ್ಳಬೇಕಾಯಿತು (ಐ.ಐ.ಎಸ್ ಸಿ ಪ್ರಯೋಗಾಲಯ ಹಾಗೂ ಮಜುಂದಾರ್ ಷಾ ಪ್ರತಿಷ್ಠಾನಗಳ ನಡುವೆ). ಜೀವಕೋಶಗಳ ಕ್ಷಮತೆಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಸಂಸ್ಕರಣೆ ಇತ್ಯಾದಿಗಳನ್ನು ಮಜುಂದಾರ್ ಷಾ ಪ್ರತಿಷ್ಠಾನ ನಿರ್ವಹಿಸಿತು. ನಾವು ಇಲ್ಲಿ ಕ್ಯಾರೆಕ್ಟರೈಸೇಷನ್ ಮತ್ತು ಇಮ್ಯುನೊಸ್ಟೈನಿಂಗ್ ಮಾಡಿದೆವು” ಎನ್ನುವುದು ಅವರ ವಿವರಣೆ.
ಈ ಎರಡು ಹಂತಗಳ (3 ಮತ್ತು 4) ಮಿದುಳು ಗಡ್ಡೆಯ ಮೇಲ್ಮೈ ಪ್ರೊಟೀನ್ ಗಳಲ್ಲಿರುವ ಘಟಕಾಂಶಗಳಲ್ಲಿನ ವ್ಯತ್ಯಾಸಗಳನ್ನು ತಿಳಿಯುವ ಪ್ರಯತ್ನವನ್ನೂ ಸಂಶೋಧಕರು ಮಾಡಿದರು. ಇದರಿಂದ, ಮಾನೋಸೈಟ್ ನ ನಿರ್ದಿಷ್ಟ ಮಾದರಿಯ ಕೋಶಗಳು, ಅಂದರೆ M2 ಮಾನೋಸೈಟ್ ಗಳು, ನಾಲ್ಕನೇ ಹಂತದ ಗಡ್ಡೆಯ ಮಾದರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬಂತು. ಹೆಚ್ಚಿನ ಸಂಖ್ಯೆಯಲ್ಲಿರುವ M2 ಮಾನೋಸೈಟ್ ಗಳು ರೋಗ ನಿರೋಧಕತೆಯನ್ನು ತಗ್ಗಿಸುತ್ತವೆ ಎಂಬುದು ಈ ಹಿಂದಿನ ಅಧ್ಯಯನಗಳಿಂದ ದೃಢಪಟ್ಟಿದೆ. ಈ ಕುರಿತಾದ ತಿಳಿವಳಿಕೆಯು ಹೊಸ ಚಿಕಿತ್ಸಾ ಕ್ರಮಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡಬಹುದು. ಮಿದುಳುಗಡ್ಡೆಯ ಸೂಕ್ಷ್ಮವಲಯದಲ್ಲಿ M2 ಮಾನೋಸೈಟ್ ಗಳು ಸಂಖ್ಯೆಯನ್ನು ಕಡಿಮೆಗೊಳಿಸುವ ಬಗ್ಗೆ ಅಥವಾ ಅವುಗಳ ಕಾರ್ಯಾಚರಣೆಯನ್ನು ಬದಲಾಯಿಸುವ ಕುರಿತು ಭವಿಷ್ಯದ ಅಧ್ಯಯನಗಳು ಗಮನ ಕೇಂದ್ರೀಕರಿಸಬಹುದು” ಎಂದು ಜುಂಜುನ್ ವಾಲಾ ಅಭಿಪ್ರಾಯಪಡುತ್ತಾರೆ.
ನ್ಯೂಟ್ರೋಫಿಲ್ ಗಳು ಮತ್ತು ಮಾನೋಸೈಟ್ ಗಳ ಮೇಲಿನ ಎರಡು ಮೇಲ್ಮೈ ಪ್ರೊಟೀನ್ ಗಳಾದ CD86 ಮತ್ತು CD63 ಪ್ರಮಾಣಗಳ ನಡುವೆ ನಿಕಟ ಸಂಬಂಧವಿರುವುದು ರಕ್ತ ಹಾಗೂ ಮಿದುಳುಗಡ್ಡೆ ಮಾದರಿಗಳೆರಡರಲ್ಲೂ ಕಂಡುಬಂದಿದೆ. ಬೇರೆ ಬಗೆಯ ಗಡ್ಡೆಗಳಲ್ಲಿ ಪ್ರತಿರೋಧ ಜೀವಕೋಶಗಳ ಮೇಲೆ ಈ ಪ್ರೋಟೀನ್ ಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಚೇತರಿಕೆಯ ಸಾಧ್ಯತೆಯನ್ನು ತಗ್ಗಿಸುತ್ತದೆ ಅಥವಾ ಬಾಧಿತ ವ್ಯಕ್ತಿಯು ಬದುಕುಳಿಯುವ ಸಾದ್ಯತೆಯನ್ನು ಕಡಿಮೆಗೊಳಿಸುತ್ತದೆ ಎಂದು ಈ ಮುಂಚೆಯೇ ದೃಢಪಡಿತ್ತು. ಆದರೆ ಈಗ ನಮ್ಮ ಅಧ್ಯಯನವು ಈ ಸೂಚಕಗಳನ್ನು ಕೇವಲ ಗಡ್ಡೆಗಳಲ್ಲಿ ಮಾತ್ರವಲ್ಲದೆ ಕೇವಲ ರಕ್ತದಲ್ಲಿಯೇ ನೋಡಿ ಮುಂದಿನ ಪರಿಸ್ಥಿತಿಯನ್ನು ಅಂದಾಜಿಸಲು ಚಿಕಿತ್ಸಕರಿಗೆ ಅನುಕೂಲ ಮಾಡಿಕೊಡುತ್ತದೆ” ಎಂದು ಜುಂಜುನ್ ವಾಲಾ ಹೇಳುತ್ತಾರೆ.
ಆದರೆ, ಇದನ್ನು ಪ್ರಯೋಗಾಲಯದಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಹಂತಕ್ಕೆ ಕೊಂಡೊಯ್ಯುವ ಮುನ್ನ ಹೆಚ್ಚಿನ ಪ್ರಮಾಣದ ಪರೀಕ್ಷೆಗಳು ಹಾಗೂ ದೃಢೀಕರಣಗಳು ಅಗತ್ಯ ಎನ್ನುವುದು ಜುಂಜುನ್ ವಾಲಾ ಅವರ ಅಭಿಪ್ರಾಯವಾಗಿದೆ. “ನಮ್ಮ ತಂಡದ ಸದಸ್ಯರನ್ನು ಇನ್ನಷ್ಟು ಹೆಚ್ಚಿಸಿಕೊಂಡು ಮಿದುಳು ಗಡ್ಡೆಯ ಮೂರನೇ ಹಾಗೂ ನಾಲ್ಕನೇ ಹಂತದ ಬಾಧಿತರಲ್ಲಿ ಈ ಎರಡು ಸೂಚಕಗಳನ್ನು ಪರೀಕ್ಷಿಸಿ ಅವರು ಬದುಕುಳಿಯುವ ಅವಧಿ ಬಗ್ಗೆ ದತ್ತಾಂಶ ಕಲೆಹಾಕುವುದು ನಮ್ಮ ಸದ್ಯದ ಉದ್ದೇಶವಾಗಿದೆ” ಎಂದೂ ಅವರು ಹೇಳಿದ್ದಾರೆ.
ಉಲ್ಲೇಖ:
ಜಯಶ್ರೀ ವಿ.ರಾಘವನ್, ರಕ್ಷಾ ಎ.ಗಣೇಶ್, ಪ್ರಣಾಲಿ ಸೋನ್ ಪಟ್ಕಿ, ದಿವ್ಯಾ ನಾಯ್ಕ್, ಅರಿವುಸುಡರ್ ಎವೆರಡ್ ಜಾನ್, ಪ್ರಿಯಾಂಕಾ ಅರುಣಾಚಲಂ, ದರ್ಶತ್ ಷಾ, ಹರಿ ಪಿ.ಎಸ್., ಅಖಿಲ ಲಕ್ಷ್ಮಿಕಾಂತ, ಶಿಬು ಪಿಳ್ಳೈ, ಕೋಮಲ್ ಪ್ರಸಾದ್ ಚಂದ್ರಚಾರಿ, ಕಿರಣ್ ಮರಿಸ್ವಾಮಪ್ಪ, ಸತ್ಯನಾರಾಯಣ ಲಲೆ, ನಮೀತಾ ಷಾ ಮತ್ತು ಸಿದ್ಧಾರ್ಥ್ ಜುಂಜುನ್ ವಾಲಾ, Immuno-phenotyping of IDH-mutant grade 3 astrocytoma and IDH-wildtype glioblastoma reveals specific differences in cells of myeloid origin, OncoImmunology, 2021, 10(1), DOI: 10.1080/2162402X.2021.1957215
https://www.tandfonline.com/doi/full/10.1080/2162402X.2021.1957215
ಸಂಪರ್ಕಿಸಿ:
ಸಿದ್ಧಾರ್ಥ್ ಜುಂಜುನ್ ವಾಲಾ
ಸಹಾಯಕ ಪ್ರಾಧ್ಯಾಪಕರು
ಜೈವಿಕ-ವ್ಯವಸ್ಥೆಗಳ ವಿಜ್ಞಾನ ಮತ್ತು ಎಂಜಿನಿಯರಿಂಗ್ (BSSE) ಕೇಂದ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
siddharth@iisc.ac.in
+91 80 2293 2452
ಜಯಶ್ರೀ ವಿ.ರಾಘವನ್
ಪಿಎಚ್.ಡಿ. ವಿದ್ಯಾರ್ಥಿನಿ
ಜೈವಿಕ-ವ್ಯವಸ್ಥೆಗಳ ವಿಜ್ಞಾನ ಮತ್ತು ಎಂಜಿನಿಯರಿಂಗ್ (BSSE) ಕೇಂದ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
jayashreev@iisc.ac.in
ಪರ್ತಕರ್ತರಿಗೆ ಸೂಚನೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or>pro@iisc.ac.in ಗೆ ಬರೆಯಿರಿ.
—-000—