– ಮೊಹಮ್ಮದ್ ಅಷೆರುದ್ದೀನ್
ಸ್ಟ್ರೋಕ್ ಪುನರ್ವಸತಿಗಾಗಿ ಮೃದುವಾದ ಧರಿಸಬಹುದಾದ ಕೈಗವಸು (ಫೋಟೋ: ಮೆಸೊಸ್ಕೋಪಿಕ್ ಲ್ಯಾಬ್, ಭೌತಶಾಸ್ತ್ರ ವಿಭಾಗ, IISc
ಲಕ್ವವು ಭಾರತದಲ್ಲಿ ಸಾವಿನ ಪ್ರಕರಣಗಳಿಗೆ ಮೂರನೇ ಮುಖ್ಯ ಕಾರಣವಾಗಿದ್ದರೆ, ಅಂಗವಿಕಲತೆ ತಂದೊಡ್ಡುವುದರಲ್ಲಿ ಆರನೇ ಮುಖ್ಯ ಕಾರಣವಾಗಿದೆ. ಲಕ್ವ (ಪಾರ್ಶ್ವವಾಯು) ಬಾಧಿತರನ್ನು ಹಾಗೂ ದೈಹಿಕ ಪೆಟ್ಟಿಗೆ ಒಳಗಾದವರನ್ನು ಪುನಶ್ಚೇತನಗೊಳಿಸಲು ಇರುವ ಕೆಲವು ಚಿಕಿತ್ಸೆಗಳ ಪೈಕಿ ಫಿಸಿಯೊಥೆರಪಿ ಒಂದಾಗಿದೆ. ಆದರೆ, ಬಾಧಿತ ವ್ಯಕ್ತಿಯ ಅಂಗಊನತೆಯ ತೀವ್ರತೆಯನ್ನು ಅವಲಂಬಿಸಿ ಫಿಸಿಯೋಥೆರಪಿ ಅವಧಿಯು ಕೆಲವು ದಿನಗಳಿಂದ ಹಿಡಿದು ಕೆಲವಾರು ತಿಂಗಳುಗಳ ಅವಧಿಯವರೆಗೆ ಹಿಡಿಯಬಹುದು. ಇದು ನಿಜವಾಗಿಯೂ ಬಾಧಿತರಿಗೆ ಹಾಗೂ ಅವರ ಸಹಾಯಕರಿಗೆ ಒಂದು ಸವಾಲೇ ಸರಿ.
ಇಂತಹ ರೋಗಿಗಳಿಗೆ ಸಹಾಯವಾಗಲೆಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ ಸಿ.) ಭೌತಶಾಸ್ತ್ರ ವಿಭಾಗದ ಸಂಶೋಧಕರು ಮೃದುವಾದ ಹಾಗೂ ಧರಿಸಬಹುದಾದ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು, ಬೆಳಕಿನ ಮೂಲಭೂತ ಗುಣಲಕ್ಷಣಗಳನ್ನು ಆಧರಿಸಿ ಬಾಧಿತ ವ್ಯಕ್ತಿಯ ಬೆರಳುಗಳ ಚಲನೆಯನ್ನು ಗುರುತಿಸುತ್ತದೆ. ಆಯಾ ವ್ಯಕ್ತಿಯ ಅಗತ್ಯಕ್ಕೆ ತಕ್ಕಂತೆ ರೂಪುಗೊಳಿಸಬಹುದಾದ ಈ 3ಡಿ ಮುದ್ರಿತ ಕೈಗವಸುಗಳನ್ನು ದೂರದಿಂದಲೇ ನಿಯಂತ್ರಿಸಬಹುದು. ಹೀಗಾಗಿ, ಮುಂಬರುವ ದಿನಗಳಲ್ಲಿ ಫಿಸಿಯೊಥೆರಪಿಸ್ಟ್ ಗಳು ಕೂಡ ಟೆಲಿಕನ್ಸಲ್ಟೇಷನ್ ಸೇವೆ ಒದಗಿಸಲು ಸಾಧ್ಯವಾಗಲಿದೆ.
“ಸುಲಭ ದರದ ಹಾಗೂ ಯಾವುದೇ ಸಮಯದಲ್ಲಿ ಅನುಕೂಲಕರ ರೀತಿಯಲ್ಲಿ ಉಪಯೋಗಿಸಬಹುದಾದ ಸಾಧನವನ್ನು ಅಭಿವೃದ್ಧಿಪಡಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಇಂತಹ ಸಾಧನೆಯು ಬಳಸಲು ಸುಲಭವಾಗಿರುವ ಜೊತೆಗೆ ಅಗತ್ಯ ಮಾಹಿತಿಯನ್ನು (ಫೀಡ್ ಬ್ಯಾಕ್) ಕೂಡ ಕೊಡುವಂತಿರಬೇಕು” ಎನ್ನುತ್ತಾರೆ ಸಾಧನವನ್ನು ಅಭಿವೃದ್ಧಿಪಡಿಸಿರುವ ತಂಡದ ಮುಖ್ಯಸ್ಥರಾದ ಹಾಗೂ ಸಂಸ್ಥೆಯಲ್ಲಿ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಅವೀಕ್ ಬಿಡ್.
ಮೇಲೆ ತಿಳಿಸಿದಂತಹ ಬಾಧೆಗೊಳಗಾದ ರೋಗಿಗಳ ಮೇಲೆ ನಿಗಾ ಇಡಲು ಚೆಂಡೊಂದನ್ನು ಹಿಡಿದಾಗ ಅದರ ಮೇಲೆ ಬೀಳುವ ಒತ್ತಡ, ಮಂಡಿ ಬಾಗುವ ಕೋನದ ಪ್ರಮಾಣ ಇತ್ಯಾದಿಯನ್ನು ತಿಳಿಯುವುದು ವೈದ್ಯರಿಗೆ ಮಹತ್ವದ ಅಂಶಗಳಾಗಿರುತ್ತವೆ. ಇವು, ವೈದ್ಯರಿಗೆ ತಾವು ದೂರದಲ್ಲಿದ್ದರೂ ರೋಗಿಯ ಮೇಲೆ ನಿಗಾ ಇಡಲು ನೆರವಾಗುವ ಜೊತೆಗೆ ಬಾಧಿತ ವ್ಯಕ್ತಿಗಳಿಗೆ ಕೂಡ ಪುನಶ್ಚೇತನಗೊಳ್ಳಲು ಸ್ಫೂರ್ತಿ ತುಂಬುತ್ತವೆ.
ಫಿಸಿಯೊಥೆರಪಿಯಲ್ಲಿ ಮತ್ತೊಂದು ಮುಖ್ಯ ಸಂಗತಿಯೆಂದರೆ, ಫಿಸಿಯೊಥೆರಪಿಸ್ಟ್ ಗಳು ಆಸ್ಪತ್ರೆಗಳಿಗೆ ಅಥವಾ ಬಾಧಿತರ ಮನೆಗಳಿಗೆ ದಿನವೂ ಭೇಟಿ ಕೊಡಬೇಕಾಗುತ್ತದೆ. ದೂರದಿಂದಲೇ ಇಂತಹ ವ್ಯಕ್ತಿಯ ಮೇಲೆ ನಿಗಾ ಇರಿಸಲು ಅನುವು ಮಾಡಿಕೊಡುವ ಅತ್ಯಾಧುನಿಕ ಸಾಧನಗಳು ಇವೆಯಾದರೂ ಅವು ಬೇಕೆಂದ ಕ್ಷಣದಲ್ಲಿ ಸಿಗಲಾರವು. ಅಲ್ಲದೇ, ಅವುಗಳ ಬೆಲೆಯೂ ದುಬಾರಿ ಆಗಿರುತ್ತದೆ.
ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಐ.ಐ.ಎಸ್ ಸಿ. ಸಂಶೋಧಕರ ತಂಡವು ಧರಿಸಬಹುದಾದ, 3ಡಿ ಮುದ್ರಿತ ಹಾಗೂ ದೂರದಿಂದ ನಿಯಂತ್ರಿಸಬಹುದಾದ ಕೈಗವಸುಗಳನ್ನು ತಯಾರಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದೆ. “ಬಾಧಿತ ವ್ಯಕ್ತಿಯು ಕೈಗವಸುಗಳನ್ನು ಹಾಕಿಕೊಂಡರೆ ಫಿಸಿಯೊಥೆರಪಿಸ್ಟ್ ಅಂತರ್ಜಾಲದ ಮೂಲಕ ಅದನ್ನು ನಿಯಂತ್ರಿಸಬಹುದಾಗಿರುತ್ತದೆ. ಆ ಮೂಲಕ ಅದನ್ನು ಧರಿಸಿದ ವ್ಯಕ್ತಿಯ ಕೈಗಳನ್ನು ಹಾಗೂ ಬೆರಳುಗಳನ್ನು ಚಲಿಸುವಂತೆ ಮಾಡಬಹುದಾಗಿರುತ್ತದೆ” ಎಂದು ವಿವರಿಸುತ್ತಾರೆ ಬಿಡ್ ಅವರು. ಈ ಸಾಧನವು ಕೈಗಳ ಹಾಗೂ ಬೆರಳುಗಳ ಬೇರೆ ಬೇರೆ ರೀತಿಯ ಚಲನೆಗಳನ್ನು ಗುರುತಿಸಬಲ್ಲದಾಗಿರುತ್ತದೆ. ಇದರ ನೆರವಿನಿಂದ ಒತ್ತಡ, ಬಾಗಿದ ಕೋನ ಹಾಗೂ ಆಕಾರ ಇತ್ಯಾದಿಗಳನ್ನು ಕರಾರುವಾಕ್ಕಾಗಿ ಪತ್ತೆಹಚ್ಚುತ್ತದೆ ಎಂದೂ ಅವರು ವಿವರಿಸುತ್ತಾರೆ.
ಸ್ಟ್ರೋಕ್ ಪುನರ್ವಸತಿಯನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಮೃದುವಾದ ಧರಿಸಬಹುದಾದ ಕೈಗವಸುಗಳ ವಿಷುಯಲ್ ಸ್ಕೀಮ್ಯಾಟಿಕ್ (ಚಿತ್ರ: ಮೆಸೊಸ್ಕೋಪಿಕ್ ಲ್ಯಾಬ್, ಭೌತಶಾಸ್ತ್ರ ವಿಭಾಗ, IISc)
ಈ ಸಾಧನದ ತಂತ್ರಜ್ಞಾನವು ಬೆಳಕಿನ ಮೂಲಭೂತ ತತ್ವಗಳನ್ನು, ಅಂದರೆ, ವಕ್ರೀಭವನ ಮತ್ತು ಪ್ರತಿಫಲನಗಳನ್ನು ಆಧರಿಸಿದೆ. ಇಲ್ಲಿ, ಪಾರದರ್ಶಕವಾದ ರಬ್ಬರಿನಂತಹ ವಸ್ತುವಿನ ಒಂದು ಬದಿಯಲ್ಲಿ ಬೆಳಕು ಸೂಸುವ ಆಕರವಿರುತ್ತದೆ. ಇದರ ಮತ್ತೊಂದು ಬದಿಯಲ್ಲಿ, ಬೆಳಕಿನ ಕಿರಣಗಳನ್ನು ಪತ್ತೆಹಚ್ಚುವ ಲೈಟ್ ಡಿಟೆಕ್ಟರ್ ಇರುತ್ತದೆ. ಇದನ್ನು ಧರಿಸಿದ ವ್ಯಕ್ತಿಯ ಕೈಬೆರಳುಗಳ ಅಥವಾ ತೋಳುಗಳ ಚಲನೆಯಾಗುತ್ತಿದ್ದಂತೆಯೇ ಮೃದುವಾದ ಕೈಗವಿಸಿನ ಆಕಾರದಲ್ಲಿ ಬದಲಾವಣೆ ಉಂಟಾಗುತ್ತದೆ. ಹೀಗಾದಾಗ, ಬೆಳಕಿನ ಕಿರಣಗಳು ಹಾಯುವ ಪಥದಲ್ಲಿ ಬದಲಾವಣೆಯುಂಟಾಗಿ ಅದರ ಗುಣಲಕ್ಷಣಗಳೂ ಮಾರ್ಪಾಡಾಗುತ್ತವೆ. ಈ ಸಾಧನವು, ಹೀಗೆ ಉಂಟಾಗುವ ಬದಲಾವಣೆಗಳನ್ನು ಮಾಪನ ಮಾಡಬಹುದಾದ ಘಟಕವನ್ನಾಗಿ ಪರಿವರ್ತಿಸುತ್ತದೆ. ಬೆಳಕಿನ ಕಿರಣಗಳು ಇಡೀ ಸಾಧನದ ಉದ್ದಕ್ಕೂ ಸಾಗುವುದರಿಂದ ರೋಗಿಯ ಬೆರಳಿನ ಯಾವುದೇ ಭಾಗದಲ್ಲಿ ಅಥವಾ ತೋಳಿನ ಯಾವುದೇ ಭಾಗದಲ್ಲಿ ಆಗುವ ಚಲನೆಯನ್ನು ನಿಖರವಾಗಿ ಅಳೆಯಬಹುದಾಗಿರುತ್ತದೆ.
“ಈ ಸಾಧನವು ತುಂಬಾ ಸಂವೇದನಾಶೀಲವಾಗಿದೆ. ಚಿಟ್ಟೆಯೊಂದರ ಕೋಮಲ ಸ್ಪರ್ಶಕ್ಕೆ ಕೂಡ ಇದು ಸ್ಪಂದಿಸುತ್ತದೆ” ಎನ್ನುತ್ತಾರೆ ಭೌತಶಾಸ್ತ್ರ ವಿಭಾಗದಲ್ಲಿ ಡಿ.ಎಸ್.ಟಿ.- ಇನ್ ಸ್ಪೈರ್ ಫ್ಯಾಕಲ್ಟಿ ತಂಡದ ಸದಸ್ಯ ಹಾಗೂ ಈ ಕಾರ್ಯಯೋಜನೆಯ ಪರಿಕಲ್ಪನೆ ರೂಪಿಸಿದವರಲ್ಲಿ ಒಬ್ಬರಾದ ಅಭಿಜಿತ್ ಚಂದ್ರ ರಾಯ್. ಅಲ್ಲದೇ, ಹಾಲಿ ಬಳಕೆಯಲ್ಲಿರುವ ಸಾಧನಗಳು ಕೇವಲ ಬೆರಳಿನ ಬಾಗುವಿಕೆಯನ್ನು ಮಾತ್ರ ಪತ್ತೆಹಚ್ಚುತ್ತವೆ. ಆದರೆ ಹೊಸ ಸಾಧನವು ಬೆರಳಿನ ಪ್ರತಿಯೊಂದು ಕೀಲಿನ ಬಾಗುವಿಕೆಯ ಕೋನವನ್ನು ಅಳೆಯಬಲ್ಲದು” ಎಂದೂ ಅವರು ಹೇಳುತ್ತಾರೆ.
ಈ ಸಾಧನವನ್ನು ರೂಪಿಸಲು ಸಂಶೋಧಕರು ಪಾರದರ್ಶಕವಾದ (ಬೆಳಕನ್ನು ಹಾಯಗೊಡುವ), ಮೃದುವಾದ (ಅನುಕೂಲಕರ ಬಳಕೆಗೆ ಹಾಗೂ ಪುನರಾವರ್ತಿತ ಬಳಕೆಗೆ ಸೂಕ್ತವಾದ) ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ 3ಡಿ ಮುದ್ರಿತ ಸಿಲಿಕಾನ್ ನಿಂದ ಮಾಡಿದ ಪಾಲಿಮರ್ ವಸ್ತುವನ್ನು ಬಳಸಿದ್ದಾರೆ. ಹೀಗಾಗಿ, ಇದನ್ನು ಆಯಾ ವ್ಯಕ್ತಿಯ ಬೆರಳುಗಳು ಹಾಗೂ ತೋಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಬಹುದು. ಜೊತೆಗೆ, ಈ ಸಾಧನವು ದತ್ತಾಂಶಗಳನ್ನು ಸೆರೆಹಿಡಿದು ಸಂಗ್ರಹಿಸಿ ಅಂತರ್ಜಾಲದ ಮೂಲಕ ರವಾನಿಸಬಲ್ಲದು. ಹೀಗಾಗಿ, ಚಿಕಿತ್ಸಕರು ಹಾಗೂ ಫಿಸಿಯೊಥೆರಪಿಸ್ಟ್ ಗಳು ದೂರದ ಸ್ಥಳದಲ್ಲಿದ್ದುಕೊಂಡೇ ಇವನ್ನು ನಿಯಂತ್ರಿಸಬಹುದಾಗಿರುತ್ತದೆ.
ಈ ಸಾಧನವನ್ನು 10 ತಿಂಗಳುಗಳಿಗೂ ಹೆಚ್ಚು ಕಾಲ ಪರೀಕ್ಷಿಸಿ ಸ್ಥಿರತೆಯನ್ನು ದೃಢಪಡಿಸಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಸಾಧನದ ಸಂವೇದನಾಶೀಲತೆಯಲ್ಲಾಗಲೀ ಅಥವಾ ನಿಖರತೆಯಲ್ಲಾಗಲೀ ಯಾವುದೇ ಇಳಿಮುಖ ಕಂಡುಬರಲಿಲ್ಲ. ಸಂಪೂರ್ಣವಾಗಿ ನಮ್ಮ ದೇಶದಲ್ಲೇ ತಯಾರಿಸಿ ವಿನ್ಯಾಸಗೊಳಿಸಲಾಗಿದ್ದು, ಇದರ ಬೆಲೆ ರೂ 1000ಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಇದಕ್ಕಾಗಿ ಪೇಟೆಂಟ್ ಅರ್ಜಿ ಸಲ್ಲಿಸಲಾಗಿದೆ. ಸದ್ಯದಲ್ಲೇ ಇದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ವಿಧಾನವನ್ನು ಸಂವರ್ಧಿತ ವಾಸ್ತವತೆ (ಆಗ್ಮೆಂಟೆಂಡ್ ರಿಯಾಲಟಿ) ಮತ್ತು ಆರೋಗ್ಯದ ಮಾಪನಾಂಕಗಳ ಮೇಲೆ ನೈಜ ಕ್ಷಣದ ನಿಗಾ ಇತ್ಯಾದಿ ಆನ್ವಯಿಕತೆಗಳಿಗೆ ಕೂಡ ವಿಸ್ತರಿಸಬಹುದು ಎಂದೂ ಅವರು ವಿವರಿಸಿದರು.
ಸಂಪರ್ಕಿಸಿ:
ಅವೀಕ್ ಬಿಡ್
ಸಹಾಯಕ ಪ್ರಾಧ್ಯಪಕರು
ಭೌತಶಾಸ್ತ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
ಇ-ಮೇಲ್: aveek@iisc.ac.in
ಫೋನ್: +91-80-2293 3340
http://www.physics.iisc.ac.in/~aveek_bid/
ಅಭಿಜಿತ್ ರಾಯ್
ಡಿಎಸ್ಟಿ- ಇನ್ ಸ್ಪೈರ್ ಫ್ಯಾಕಲ್ಟಿ
ಭೌತಶಾಸ್ತ್ರ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
ಇ-ಮೇಲ್: abhijitroy@iisc.ac.in
https://abhiphn09.wixsite.com/softbioelectrolab
ಪರ್ತಕರ್ತರಿಗೆ ಸೂಚನೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or>pro@iisc.ac.in ಗೆ ಬರೆಯಿರಿ.
——000—–