ಸಣ್ಣ ಮಾರ್ಪಾಡುಗಳು- ನಾಟಕೀಯವಾಗಿ ಅಧಿಕಗೊಳ್ಳುವ ಪೀಜೋಸೆರಾಮಿಕ್ ಗಳ ಪರಿಣಾಮಕಾರಿತ್ವ


09 ಜನವರಿ 2025

-ರಂಜಿನಿ ರಘುನಾಥ್

ಸಾಮಾನ್ಯ ಬಳಕೆಯ ಪೀಜೋಎಲೆಕ್ಟ್ರಿಕ್ ಪಿಂಗಾಣಿ ವಸ್ತುಗಳ ಪರಿಣಾಮಕಾರಿತ್ವವನ್ನು, ಅವುಗಳ ದಪ್ಪವನ್ನು ಕಡಿಮೆಗೊಳಿಸುವ ಮೂಲಕ ಹಾಗೂ ತಯಾರಿಕೆ ವೇಳೆ ಅನಿರೀಕ್ಷಿತವಾಗಿ ಉಂಟಾಗುವ ‘’ಪರಮಾಣು ವ್ಯತ್ಯಯ’ಗಳನ್ನು ತಪ್ಪಿಸುವ ಮೂಲಕ ನಾಟಕೀಯವೆನ್ನಿಸುವ ರೀತಿಯಲ್ಲಿ ಹೆಚ್ಚಿಸಬಹುದು ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ) ತಜ್ಞರು ಸಹಭಾಗಿತ್ವದ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಈ ಕುರಿತ ಅಧ್ಯಯನ ವರದಿಯು ‘ನೇಚರ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಪೀಜೋಎಲೆಕ್ಟ್ರಿಕ್ ವಸ್ತುಗಳು ವಿದ್ಯುತ್ ಕ್ಷೇತ್ರದ ಪ್ರಭಾವಕ್ಕೆ ಒಳಪಡಿಸಿದಾಗ ವಿರೂಪಗೊಳ್ಳುತ್ತವೆ (ಹಿಗ್ಗುವುದು ಅಥವಾ ಕುಗ್ಗುವುದು). ತಮ್ಮ ಈ ಗುಣದಿಂದಾಗಿ ಅವು ಹಲವಾರು ಬಗೆಯ ಆನ್ವಯಿಕತೆಗಳಿಗೆ ಸೂಕ್ತವಾಗುತ್ತವೆ. ಹೀಗಾಗಿ, ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್ ಇಮೇಜಿಂಗ್ ನಿಂದ ಹಿಡಿದು ಗುರಿ ನಿರ್ದೇಶಿತ ಕ್ಷಿಪಣಿಗಳಲ್ಲಿ ಆಕ್ಚುಯೇಟರ್ ಗಳವರೆಗೆ ಇವುಗಳಿಂದ ಅನೇಕ ಉಪಯೋಗಗಳಿವೆ. ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ಪೀಜೋಎಲೆಕ್ಟ್ರಿಕ್ ನ ಸಿಂಗಲ್ ಸ್ಫಟಿಕಗಳು ದೊಡ್ಡ ಪ್ರಮಾಣದ ‘ಸಮಾನಾಂತರ ಎಲೆಕ್ಟ್ರೊಸ್ಟ್ರೇನ್’ (1%ಗಿಂತ ಹೆಚ್ಚು) ತೋರ್ಪಡಿಸುತ್ತವೆ. ಇದು ವಸ್ತುವು ವಿದ್ಯುತ್ ಕ್ಷೇತ್ರದ ದಿಕ್ಕಿನಲ್ಲಿ ಅದು ವಿರೂಪಗೊಳ್ಳುವ ಪ್ರಮಾಣವನ್ನು ತೋರಿಸುವ ಮಾಪನಾಂಕವಾಗಿರುತ್ತದೆ. ಆದರೆ, ಇಂತಹ ವಸ್ತುಗಳು ತುಂಬಾ ಅಪರೂಪ. ಜೊತೆಗೆ, ಇಂತಹ ‘ಏಕಸ್ಫಟಿಕ’ಗಳ ದೊಡ್ಡ ಪ್ರಮಾಣದ ಉತ್ಪಾದನೆಯು ದುಬಾರಿ ವೆಚ್ಚದ ಬಾಬ್ತಾಗಿರುತ್ತದೆ. ಆದ್ದರಿಂದ, ಅವುಗಳನ್ನು ನಿರ್ದಿಷ್ಟ ಆನ್ವಯಿಕತೆಗಳಲ್ಲಿ ಮಾತ್ರ ಬಳಸಲಾಗುತ್ತದೆ. ಬಹುತೇಕ ವಾಣಿಜ್ಯಿಕ ಆನ್ವಯಿಕತೆಗಳಿಗೆ ಸಾಧಾರಣ ಬೆಲೆಯ ಪಾಲಿಕ್ರಿಸ್ಟಲೈನ್ ಪೀಜೋಎಲೆಕ್ಟ್ರಿಕ್ ಪಿಂಗಾಣಿ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಆದರೆ, ಇವು ತೋರುವ ‘ಸಮಾನಾಂತರ ಸ್ಟ್ರೇನ್’ ಪ್ರಮಾಣವು ತುಂಬಾ ಕಡಿಮೆ (0.2-0.4%) ಪ್ರಮಾಣದಲ್ಲಿರುತ್ತದೆ.

“ಪಾಲಿಕ್ರಿಸ್ಟಲೈನ್ ಸೀಸ ರಹಿತ ಪೀಜೋಎಲೆಕ್ಟ್ರಿಕ್ ವಸ್ತುಗಳು ತೋರ್ಪಡಿಸುವ ಗರಿಷ್ಠ ಎಲೆಕ್ಟ್ರೊಸ್ಟ್ರೇನ್ 0.7% ಆಗಿರುತ್ತದೆ” ಎನ್ನವು ಐ.ಐ.ಎಸ್.ಸಿ. ಮಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ ಹಳೆಯ ಪಿಎಚ್.ಡಿ. ವಿದ್ಯಾರ್ಥಿ ಹಾಗೂ ಅಧ್ಯಯನದ ಮೊದಲ ಲೇಖಕರಾದ ಗೋವಿಂದ ದಾಸ್ ಅಧಿಕಾರಿ ಅವರು, “ಈ ಪ್ರಮಾಣವನ್ನು ಹೆಚ್ಚಿಸುವುದು ನಮ್ಮ ಉದ್ದೇಶ” ಎಂದೂ ಹೇಳುತ್ತಾರೆ.

ಪೀಜೋಸೆರಾಮಿಕ್ ವಸ್ತುವಿನ ಪ್ರತಿಯೊಂದು ‘ಗ್ರೇನ್’ (ಕಣಗಳ ರಚನೆ) ಕೂಡ ಡೊಮೇನ್ಸ್ ಎಂದು ಕರೆಯಲಾಗುವ ಸ್ವಯಂ ಧ್ರುವೀಯ ವಲಯಗಳನ್ನು ಹೊಂದಿರುತ್ತದೆ. ಇವು ಏಕಕಾಲಕ್ಕೆ ವಿದ್ಯುತ್ ಕ್ಷೇತ್ರದೆಡೆಗೆ ತಮ್ಮ ವಾಲುವಿಕೆಯ ದಿಕ್ಕನ್ನು ಬದಲಾಯಿಸುತ್ತವೆ. ಹೀಗಾದಾಗ, ಆ ವಸ್ತುವಿಗೆ ವಿರೂಪತೆ ಉಂಟಾಗುತ್ತದೆ. ವಸ್ತುವಿನ ಮೇಲ್ಮೈಗೆ ಸನಿಹದಲ್ಲಿರುವ ‘ಗ್ರೇನ್’ಗಳು ಹೆಚ್ಚು

ಸ್ವತಂತ್ರವಾಗಿರುವುದರಿಂದ ಅವುಗಳ ವಿರೂಪತೆಯ ಪ್ರಮಾಣವೂ ಅಧಿಕವಿರುತ್ತದೆ. ಆದರೆ, ಆಳದ ಕಣಗಳು ಇತರ ಕಣಗಳ ನಡುವೆ ಬಿಗಿಯಾಗಿ ಬಂದಿಯಾಗಿರುವುದರಿಂದ ವಿರೂಪಗೊಳ್ಳಲು ಪ್ರಯಾಸಪಡುತ್ತವೆ. ಸಾಮಾನ್ಯ ಬಳಕೆಯಲ್ಲಿರುವ ಪೀಜೋಎಲೆಕ್ಟ್ರಿಕ್ ಬಿಲ್ಲೆಗಳಲ್ಲಿ (10 ಮಿ.ಮೀ. ವ್ಯಾಸ ಹಾಗೂ 1 ಮಿ.ಮೀ. ದಪ್ಪ) ಬಹುತೇಕ ‘ಗ್ರೇನ್’ಗಳು ವಿರೂಪಗೊಳ್ಳುವ ಪ್ರಮಾಣ ಅತ್ಯಲ್ಪವಾಗಿರುತ್ತದೆ. ಇದರಿಂದ, ಒಟ್ಟಾರೆ ‘ಸಮಾನಾಂತರ ಸ್ಟ್ರೇನ್’ ಕಡಿಮೆ ಇರುತ್ತದೆ ಎಂಬುದು ಮಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗೂ ಅಧ್ಯಯನದ ಸಹಲೇಖಕರಾದ ರಾಜೀವ್ ರಂಜನ್ ಅವರ ವಿವರಣೆ.

ವ್ಯಾಪಕವಾಗಿ ಪ್ರಚಲಿತವಿರುವ ಪಿ.ಜಡ್.ಟಿ. (ಲೆಡ್ ಜೆರ್ಕೊನೇಟ್ ಟೈಟಾನೇಟ್) ಪೀಜೋಸೆರಾಮಿಕ್ ನ ಗಾತ್ರ ಹಾಗೂ ಆಕಾರವನ್ನು ಮಾರ್ಪಡಿಸುವಾಗ, ವರ್ತುಲಾಕಾರದ ಪಿ.ಜಡ್.ಟಿ. ಬಿಲ್ಲೆಯ ದಪ್ಪವನ್ನು 0.7 ಮಿ.ಮೀ.ನಿಂದ 0.2 ಮಿ.ಮೀ.ಗೆ ಕಡಿಮೆಗೊಳಿಸಿದಾಗ, ಅದರ ಎಲೆಕ್ಟ್ರೊಸ್ಟ್ರೇನ್ 0.3%ದಿಂದ 1%ಗೆ ವೃದ್ಧಿಗೊಂಡಿದ್ದನ್ನು ರಂಜನ್ ಅವರ ತಂಡದವರು ಗಮನಿಸಿದರು..

ಇದರಿಂದ ಕುತೂಹಲಗೊಂಡ ತಜ್ಞರು ಯೂರೊಪಿಯನ್ ಸಿಂಕ್ರೊಟಾನ್ ರೇಡಿಯೇಷನ್ ಫೆಸಿಲಿಟಿಯ (ಇ.ಎಸ್.ಆರ್.ಎಫ್) ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಎಕ್ಸ್-ರೇ ಡಿಫ್ರ್ಯಾಕ್ಷನ್ ಪ್ರಯೋಗಗಳನ್ನು ನಡೆಸಿದರು. ‘ಗ್ರೇನ್’ಗಳ ದಪ್ಪವನ್ನು ಕಡಿಮೆಗೊಳಿಸಿದಾಗ ಧ್ರುವೀಯ ವಲಯಗಳ ಬದಲಾವಣೆಯು ಗಣನೀಯವಾಗಿ ಜಾಸ್ತಿಯಾಗುವುದು ಕಂಡುಬಂದಿತು “ಅದು 02 ಮಿ.ಮೀ. ಇದ್ದಾಗ ಮೇಲ್ಮೈ ಸನಿಹದಲ್ಲಿದೆ ಎಂದು ಪರಿಭಾವಿಸುವ ವಲಯಗಳು ಉತ್ತಮ ಪ್ರಮಾಣದಲ್ಲಿ ಬದಲಾಗುತ್ತವೆ” ಎಂಬುದು ರಂಜನ್ ಅವರ ವಿವರಣೆ. “ಅಂದರೆ, 0.3% ಸ್ಟ್ರೇನ್ ಇರುವ 1 ಮಿಮೀ. ಪಿಂಗಾಣಿ ಬದಲಿಗೆ 0.2 ಮಿಮೀನ ಬಿಲ್ಲೆಗಳನ್ನು ಒಂದರ ಮೇಲೊಂದು ಪೇರಿಸಿದರೆ ಅದರ ‘ಸ್ಟ್ರೇನ್ ಸಾಮರ್ಥ್ಯ[ವನ್ನು ಹೆಚ್ಚಿಸಬಹುದು” ಎಂದಾಗುತ್ತದೆ.

ಬಹುತೇಕ ವಾಣಿಜ್ಯಿಕ ಅತ್ಯಾಧುನಿಕ ಪೀಜೋಎಲೆಕ್ಟ್ರಿಕ್ ವಸ್ತುಗಳಲ್ಲಿ ಸೀಸದ ಅಂಶವಿರುತ್ತದೆ. ಈ ಸೀಸವು ಕ್ಯಾನ್ಸರ್ ಕಾರಕವಾಗಿದ್ದು, ಪರಿಸರಕ್ಕೆ ಹಾನಿಕಾರಕವಾಗಿರುತ್ತದೆ. ಕೆಲವು ಸೀಸ ರಹಿತ ಪೀಜೋಸೆರಾಮಿಕ್ ಗಳ ಎಲೆಕ್ಟ್ರೊಸ್ಟ್ರೇನ್ 1%ಗಿಂತ ಹೆಚ್ಚಿನ ಮೌಲ್ಯಾಂಕನವಿದೆ ಎಂಬ ವರದಿಗಳು ದೋಷಪೂರಿತ ಎಂಬದನ್ನು ಕೂಡ ತಂಡದವರು ದೃಢಪಡಿಸಿಕೊಂಡಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಗೋವಿಂದ ದಾಸ್ ಅಧಿಕಾರಿಯವರು ಸೋಡಿಯಂ ಬಿಸ್ಮತ್ ಟೈಟಾನೇಟ್ ಎಂಬ ಸೀಸ ರಹಿತ ಪೀಜೋಸೆರಾಮಿಕ್ ವಸ್ತುವನ್ನು ಪರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಅದರ ‘ಸ್ಟ್ರೇನ್ ಮ್ಯಾಲಾಂಕನ’ವು 1.5%ರಷ್ಟಿರುವುದು ಅನಿರೀಕ್ಷಿತವಾಗಿ ಕಂಡುಬಂತು. ಆಗ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಆದರೆ ಆ ಸಂತೋಷ ದೀರ್ಘಕಾಲ ಉಳಿಯಲಿಲ್ಲ. ಆ ವಸ್ತುವು ಸಮಾನಾಂತರವಾಗಿ ಹಿಗುವುದು ಅಥವಾ ಕುಗ್ಗುವುದು ಕಂಡುಬರಲಿಲ್ಲ. ಬದಲಿಗೆ, ಅದು ಬಾಗುವುದು ಕಂಡುಬಂತು. ಹೀಗೆ ಬಾಗುವುದು ಸಂಪೂರ್ಣ ಬೇರೆಯೇದೇ ವಿದ್ಯಮಾನವಾಗಿರುತ್ತದೆ. ಅಧಿಕ ಎಲೆಕ್ಟ್ರೊಸ್ಟ್ರೇನ್ ಮೌಲ್ಯವಿರುವ ಇತರ ಹಲವು ವಸ್ತುಗಳನ್ನು ಪರೀಕ್ಷಿಸಿದಾಗಲೂ, ಅವು ಸಮಾನಾಂತರ ವಿರೂಪವಲ್ಲ; ಬದಲಿಗೆ ಬಾಗುವಿಕೆ ಎಂಬುದು ದೃಢಪಟ್ಟಿತು.

ಈ ‘ಬಾಗುವಿಕೆ’ಗೆ ಸಂಭಾವ್ಯ ಕಾರಣವನ್ನು ಕೂಡ ತಂಡದವರು ಕಂಡುಹಿಡಿದರು. ಪೀಜೋಸೆರಾಮಿಕ್ ಗಳನ್ನು ತಯಾರಿಸುವಾಗ ಸಾಮಾನ್ಯವಾಗಿ ಅವನ್ನು 1,100ರಿಂದ 1,300 ಡಿಗ್ರಿ ಸೆಲ್ಸಿಯಸ್ ಉಷ್ಣತೆಗೆ ಬಿಸಿಗೊಳಿಸಲಾಗುತ್ತದೆ. ಹೀಗಾದಾಗ, ‘ಆಕ್ಸಿಜನ್ ವೇಕೆನ್ಸೀಸ್’ (ಆಮ್ಲಜನಕ ನಿರ್ವಾತಗಳು) ಎಂಬ ಧನ ವಿದ್ಗುದಾವಿಷ್ಟ ನ್ಯೂನತೆಗಳು ರೂಪುಗೊಳ್ಳುತ್ತವೆ. ವಿದ್ಯುತ್ ಕ್ಷೇತ್ರದ ಪ್ರಭಾವದಲ್ಲಿ ಈ ‘ವೇಕೆನ್ಸಿ’ಗಳು ಋಣ ವಿದ್ಯುದಾವಿಷ್ಟ ಎಲೆಕ್ಟ್ರೋಡ್ ನೆಡೆಗೆ ಸಾಗುತ್ತವೆ. ಋಣಾವಿಷ್ಟ ಬದಿಗೆ ಹತ್ತಿರದಲ್ಲಿರುವ ವಲಯಗಳು ಈ ‘ವೇಕೆನ್ಸಿ’ಗಳ ಹಿಡಿತಕ್ಕೆ ಒಳಪಡುವುದರಿಂದ ಅವುಗಳಿಗೆ ಬದಲಾವಣೆಗೊಳ್ಳಲು ಆಗುವುದಿಲ್ಲ. ಆದರೆ, ಧನಾವಿಷ್ಟ ಬದಿಯ ವಲಯಗಳು ಹೆಚ್ಚು ಬದಲಾವಣೆಗೊಳ್ಳಬಲ್ಲವು” ಎಂಬುದು ರಂಜನ್ ಅವರ ವಿವರಣೆ. ಈ ಅಸಮತೋಲನವು ವಸ್ತುವು ಬಾಗುವಂತೆ ಮಾಡುತ್ತದೆ. ರಂಜನ್ ಅವರ ಪ್ರಕಾರ, ಇದನ್ನೇ ಸಾಮಾನ್ಯ ಮಾಪನದ ವೇಳೆ ಸಮಾನಾಂತರ ವಿರೂಪತೆ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇರುತ್ತದೆ.

“’ಎಲ್ಲಾ ಸೀಸ ರಹಿತ ಪೀಜೋಸೆರಾಮಿಕ್ ಗಳಲ್ಲಿ ಒಂದೊಮ್ಮೆ ‘ಆಕ್ಸಿಜನ್ ವೇಕೆನ್ಸಿ’ಗಳನ್ನು ತಗ್ಗಿಸುವುದು ನಮಗೆ ಸಾಧ್ಯವಾಗುವುದಾದರೆ ‘ಸಮಾನಾಂತರ ಸ್ಟ್ರೇನ್’ ಅನ್ನು ಪಿ.ಜಡ್.ಟಿ.ಯಲ್ಲಿ ಕಂಡುಬರುವಂತೆ 1% ಗೆ ಅಥವಾ ಅದಕ್ಕಿಂತ ಹೆ್ಚಿನ ಪ್ರಮಾಣಕ್ಕೆ ಹೆಚ್ಚಿಸಬಹುದು” ಎಂದು ಅವರು ಮುಂದುವರಿಸುತ್ತಾರೆ. ಸೀಸ ರಹಿತ ಪೀಜೋಸೆರಾಮಿಕ್ ವಸ್ತುಗಳಲ್ಲಿ ‘ಆಕ್ಸಿಜನ್ ವೇಕೆನ್ಸಿಗಳನ್ನು ತಗ್ಗಿಸಿದಾಗ, ಅವುಗಳ ಎಲೆಕ್ಟ್ರೊಸ್ಟ್ರೇನ್ ಸುಮಾರು 2.5%ಗೆ ಹೆಚ್ಚಳಗೊಂಡಿದ್ದನ್ನು ಅವರ ತಂಡದವರು ಖಚಿತಪಡಿಸಿಕೊಂಡಿದ್ದಾರೆ (ಇದರ ಫಲಿತಾಂಶಗಳು ಇನ್ನು ಪ್ರಕಟವಾಗಬೇಕಿದೆ). ಜೊತೆಗೆ, ಪೀಜೋಸೆರಾಮಿಕ್ ವಸ್ತುಗಳಲ್ಲಿ ‘ಬಾಗುವಿಕೆ’ಗೆ ಸಂಬಂಧಿಸಿದಂತೆ ತಂಡವು ದೃಢಪಡಿಸಿಕೊಂಡ ಹೊಸ ಅಂಶಗಳು ಮಾನೋಲಿಥ್ ಕ್ಯಾಂಟಿಲಿವರ್ ಗಳ ವಿನ್ಯಾಸದಲ್ಲಿ ಕೂಡ ಉಪಯೋಗಕರ ಆಗಬಲ್ಲವು.

ಪೀಜೋಸೆರಾಮಿಕ್ ಗಳನ್ನು ಹೇಗೆ ತಯಾರಿಸಲಾಗುತ್ತದೆ ಹಾಗೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂಬ ಬಗ್ಗೆ ಪುನರಾವಲೋಕನದ ಅಗತ್ಯವನ್ನು ಈ ಅಧ್ಯಯನದ ಅಂಶಗಳು ಒತ್ತಿ ಹೇಳುತ್ತವೆ. ನಿರ್ದಿಷ್ಟ ದಪ್ಪಕ್ಕಿಂತ ಕಡಿಮೆ ಗಾತ್ರದಲ್ಲಿ ‘ಎಲೆಕ್ಟ್ರೊಸ್ಟ್ರೇನ್’ ಹೇಗೆ ಉಂಟಾಗುತ್ತದೆ ಎಂಬ ಬಗ್ಗೆ ನಮಗೆ ಗೊತ್ತಿರುವಂತದ್ದು ಎಷ್ಟು ಕಡಿಮೆ ಮಾತ್ರ ಎಂಬುದನ್ನೂ ಇದು ಸೂಚಿಸುತ್ತದೆ ಎನ್ನುತ್ತಾರೆ ಸಂಶೋಧಕರು. “ಅಂತಹ ಸಹಜವಲ್ಲದ ಅನಿರೀಕ್ಷಿತ ವರ್ತನೆಯನ್ನು ವಿವರಿಸಲು ನಾವು ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕಿದೆ” ಎನ್ನುತ್ತಾರೆ ಗೋವಿಂದ ದಾಸ್ ಅಧಿಕಾರಿಯವರು.

ಉಲ್ಲೇಖ:

ಅಧಿಕಾರಿ ಜಿಡಿ, ಅಡುಕ್ಕಡನ್ ಎ. ಮುಲೇತ ಜಿಜೆ, ಮೋನಿಕಾ, ಸಿಂಗ್ ಆರ್, ಸಿಂಗ್ ಡಿಎನ್, ಲುಒ ಎಚ್, ಟೀನಾ ಜಿ.ಎ, ಜೈಲ್ಸ್, ಚೆಚ್ಲಾ ಎಸ್, ಡೇನಿಯಲ್ಸ್ ಜೆ, ರಂಜನ್ ಆರ್. Longitudinal strain enhancement and bending deformations in piezoceramics, Nature (2025). https://www.nature.com/articles/s41586-024-08292-1

ಸಂಪರ್ಕ:

ರಾಜೀವ್ ರಂಜನ್
ಪ್ರಾಧ್ಯಾಪಕರು
ಮಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗ (ಎಂಎಟಿಇ)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ಇಮೇಲ್: rajeev@iisc.ac.in
ಫೋನ್: +91-80-2293 2989

ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.

+++