ಸಾರ್ವಜನಿಕ ಆರೋಗ್ಯ ಕೇಂದ್ರ ಸ್ಥಾಪನೆ: ಅಜಿತ್-ಸಾರಾ ಐಸ್ಯಾಕ್ ಜೊತೆ ಐ.ಐ.ಎಸ್ ಸಿ. ಒಡಂಬಡಿಕೆ


ಉದ್ದೇಶಿತ ಈ ಕೇಂದ್ರವು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಎಂಪಿಎಚ್- ಎಂ.ಟೆಕ್. (ಸಂಶೋಧನೆ) ಜೋಡಿ ಪದವಿಯನ್ನು ಒದಗಿಸುವ ಗುರಿ ಹೊಂದಿದೆ. ಜೊತೆಗೆ, ಐ.ಐ.ಎಸ್ ಸಿ.ಯಲ್ಲಿರುವ ಜಾಗತಿಕ ದರ್ಜೆಯ ಕಂಪ್ಯೂಟರ್ ವಿಜ್ಞಾನ ಹಾಗೂ ದತ್ತಾಂಶ ವಿಜ್ಞಾನ ವಿಭಾಗಗಳ ಸಹಭಾಗಿತ್ವದಲ್ಲಿ ಸೂಕ್ತ ನೆಲೆಯನ್ನು ಸೃಷ್ಟಿಸಲಿದೆ.


Quess Corp Chairman Ajit Isaac and wife Sarah Isaac with Prof Govindan Rangarajan, Director, Indian Institute of Science at the MoU signing ceremony to set up the Isaac Centre for Public Health at the IISc Campus

ಭಾರತದ ಉನ್ನತ ಸಂಶೋಧನೆ ಮತ್ತು ಶಿಕ್ಷಣದ ಅಗ್ರಮಾನ್ಯ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)- ಬೆಂಗಳೂರು, ಶ್ರೀ ಅಜಿತ್ ಐಸ್ಯಾಕ್, ಕ್ವೆಸ್ ಕಾರ್ಪ್ ಸ್ಥಾಪಕ ಹಾಗೂ ಅಧ್ಯಕ್ಷ ಮತ್ತು ಶ್ರೀಮತಿ ಸಾರಾ ಐಸ್ಯಾಕ್ ಅವರ ನಡುವೆ ಇಂದು ಐಐಎಸ್ ಸಿ ಆವರಣದಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವ ಸಲುವಾಗಿ ಪರಸ್ಪರ ಒಡಂಬಡಿಕೆ (ಎಂಒಯು) ಏರ್ಪಟ್ಟಿತು.

ಶ್ರೀ ಐಸ್ಯಾಕ್ ಮತ್ತು ಶ್ರೀಮತಿ ಐಸ್ಯಾಕ್ ಅವರು ಈ ಕೇಂದ್ರದ ಸ್ಥಾಪನೆಗಾಗಿ 105 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಕೊಡಲಿದ್ದಾರೆ. ‘ಐಸ್ಯಾಕ್ ಸಾರ್ವಜನಿಕ ಆರೋಗ್ಯ ಕೇಂದ್ರ’ (ICPH) ಎಂಬ ಹೆಸರಿನ ಈ ಕೇಂದ್ರವು ಇದೇ ಕ್ಯಾಂಪಸ್ ನಲ್ಲಿ ಶೀಘ್ರವೇ ನಿರ್ಮಾಣವಾಗಲಿರುವ ಸ್ನಾತಕೋತ್ತರ ವೈದ್ಯಕೀಯ ಕಾಲೇಜಿನ ಭಾಗವಾಗಲಿದೆ. ಈ ಕೇಂದ್ರವು 2024ರ ವೇಳೆಗೆ ಕಾರ್ಯಾಚರಣೆ ಆರಂಭಿಸಲಿದೆ. ಚಿಕಿತ್ಸಾ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದವರಿಗೆ ಹೊಸ ಚಿಕಿತ್ಸೆಗಳನ್ನು ಹಾಗೂ ಆರೋಗ್ಯ ಶುಶ್ರೂಷೆಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವ ಉದ್ದೇಶವನ್ನು ಈ ಕೇಂದ್ರ ಹೊಂದಿದೆ.

ಭಾರತಕ್ಕೆ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ದೇಶಗಳಿಗೆ ಒಪ್ಪಿತವಾಗುವಂತಹ ಆರೋಗ್ಯ ಶುಶ್ರೂಷಾ ಮಾದರಿಗಳನ್ನು ಮರುವ್ಯಾಖ್ಯಾನಿಸುವ ಸಲುವಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ದರ್ಜೆಯ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನಾ ಕೋರ್ಸ್ ಗಳನ್ನು ಈ ಕೇಂದ್ರವು ರೂಪಿಸಲಿದೆ. ಇದು ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ (MPH)-PhD (5-6 ವರ್ಷಗಳು) ಮತ್ತು ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ (MPH)-MTech Research (3 ವರ್ಷಗಳು) ಜೋಡಿ ಪದವಿ ಕೋರ್ಸ್ ಗಳನ್ನು ಲಭ್ಯವಾಗಿಸಲಿದೆ. ಪ್ರತಿವರ್ಷ 10 ಹೊಸ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳಲಿದ್ದು, ಒಟ್ಟಾರೆ ಕೋರ್ಸ್ ನ ಎಲ್ಲಾ ವರ್ಷಗಳ ವಿದ್ಯಾರ್ಥಿಗಳ ಸಂಖ್ಯೆ 40 ಆಗಿರಲಿದೆ. ಸಾರ್ವಜನಿಕ ಆರೋಗ್ಯಕ್ಕೆ ಅಗತ್ಯವಾದ ದತ್ತಾಂಶವನ್ನು ಒದಗಿಸಲು ಮತ್ತು ಬಿಗ್ ಡಾಟಾ ವಿಶ್ಲೇಷಣಾ ವಿಧಾನಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲು ಅತ್ಯಾಧುನಿಕ ಜೀವವೈದ್ಯಕೀಯ ಸಂಶೋಧನಾ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಈ ಕೇಂದ್ರವು ಹೊಂದಿರಲಿದೆ.

ಈ ಸಂದರ್ಭದಲ್ಲಿ ಐ.ಐ.ಎಸ್ ಸಿ. ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮಾತನಾಡಿ, “ಎಲ್ಲರಿಗೂ ಗುಣಮಟ್ಟದ ಆರೋಗ್ಯ ಶುಶ್ರೂಷೆ ಲಭ್ಯವಾಗಿಸುವ ಗುರಿಯನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ಷಿಪ್ರವಾಗಿ ಪರಿಣಾಮಕಾರಿಯಾದ ಅಭಿವೃದ್ಧಿ ಸಾಧಿಸಬೇಕೆಂದರೆ ಭಾರತವು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗತಿಕ ದರ್ಜೆಯ ಚಿಕಿತ್ಸಾ ಹಾಗೂ ಶೈಕ್ಷಣಿಕ ಸಂಶೋಧನಾ ಕೇಂದ್ರ ಹೊಂದುವುದು ತುಂಬಾ ತುರ್ತಿನ ಅಗತ್ಯವಾಗಿದೆ. ಈ ಉದ್ದೇಶಿತ ಕೇಂದ್ರವು ಸಾರ್ವಜನಿಕ ಆರೋಗ್ಯ ಸಂಶೋಧನೆಯ ಹಿನ್ನೆಲೆಯಲ್ಲಿ ಐ.ಐ.ಎಸ್.ಸಿ. ವೈದ್ಯಕೀಯ ಕಾಲೇಜಿನ ಎಲ್ಲಾ ವಿಭಾಗಗಳು ಹಾಗೂ ಐ.ಐ.ಎಸ್.ಸಿ. ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಗಳ ನಡುವೆ ಸಮನ್ವಯತೆ ಸಾಧಿಸಲು ಅನುವು ಮಾಡಿಕೊಡಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಐ.ಐ.ಎಸ್ ಸಿ.ಯಲ್ಲಿರುವ ಜಾಗತಿಕ ದರ್ಜೆಯ ಕಂಪ್ಯೂಟರ್ ವಿಜ್ಞಾನ ಹಾಗೂ ದತ್ತಾಂಶ ವಿಜ್ಞಾನ ವಿಭಾಗಗಳ ಸಹಭಾಗಿತ್ವದಲ್ಲಿ ಸೂಕ್ತ ತಜ್ಞ ನೆಲೆಯನ್ನು ಸೃಷ್ಟಿಸಲಿದೆ. ಇದು, ಜಾನ್ ಹಾಪ್ಕಿನ್ಸ್ ಬ್ಲೂಮ್ ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಗೆ ಸರಿಸಮನಾಗಿರಲಿದೆ. ಈ ಸಂದರ್ಭದಲ್ಲಿ, ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ನೆರವಾಗುತ್ತಿರುವ ಸಮಾಜ ಸೇವಾಸಕ್ತರಾದ ಶ್ರೀ ಮತ್ತು ಶ್ರೀಮತಿ ಐಸ್ಯಾಕ್ ಅವರಂಥವರು ನೀಡುವ ದೇಣಿಗೆಗಳಿಗೆ ನಾವು ಕೃತಜ್ಞರಾಗಿದ್ದೇವೆ.


Quess Corp Chairman Ajit Isaac and family at IISc during the event announcing the setting up of Isaac Centre for Public Health, slated to be operational in the campus by 2024

ಈ ಉದ್ದೇಶಿತ ಐಸ್ಯಾಕ್ ಸಾರ್ವಜನಿಕ ಆರೋಗ್ಯ ಕೇಂದ್ರವು ಐ.ಐ.ಎಸ್ ಸಿ. ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ಹಾಗೂ ಸಂಶೋಧನಾ ಬ್ಲಾಕ್ ನಲ್ಲಿ ಸ್ಥಾಪನೆಯಾಗಲಿದೆ. ಇದು ಒಂದು ಅಂತಸ್ತಿನಲ್ಲಿ ಪೂರ್ತಿಯಾಗಿ ಇರಲಿದ್ದು 27,000 ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿರುತ್ತದೆ. ಶೈಕ್ಷಣಿಕ ಹಾಗೂ ಸಂಶೋಧನಾ ಕೋರ್ಸ್ ಗಳಿಗೆ ಪೂರಕವಾದ ಪ್ರಯೋಗಾಲಯಗಳು ಹಾಗೂ ಕಾಂಪ್ಯುಟೇಷನಲ್ ಸೌಕರ್ಯಗಳು ಇಲ್ಲಿರಲಿವೆ. ಇದು ಸಾಂಖ್ಯಿಕ ಶಾಸ್ತ್ರ, ಸೋಂಕು ಅಧ್ಯಯನ ಮತ್ತು ದತ್ತಾಂಶ ವಿಜ್ಞಾನ ಕೋರ್ಸ್ ಗಳ ಜೊತೆಗೆ ಪರಿಣಾಮಕಾರಿ ಸಂಶೋಧನೆಗಳ ಮೇಲೆ ಗಮನ ಕೇಂದ್ರೀಕರಿಸುವ ಪಿಎಚ್.ಡಿ. ಹಾಗೂ ಎಂ.ಟೆಕ್ (ಸಂಶೋಧನೆ) ಪದವಿಗಳನ್ನು ಹೊಂದಿರಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಎಂ.ಟೆಕ್. (ಸಂಶೋಧನೆ) ಕೋರ್ಸ್ ದತ್ತಾಂಶ ವಿಜ್ಞಾನ, ಸಾರ್ವಜನಿಕ ಆರೋಗ್ಯ ಡ್ಯಾಟಾ ಅನಲಿಟಿಕ್ಸ್ ಮತ್ತು ಎಐ/ಎಂಎಲ್ ತಾಂತ್ರಿಕತೆ ವಲಯಗಳಲ್ಲಿ ವಿಷಯ ಪರಿಣತಿಗೆ ಒತ್ತು ಕೊಡಲಿದೆ.

ಈ ಕೇಂದ್ರಕ್ಕಾಗಿ ನೀಡಿರುವ ದೇಣಿಗೆಯನ್ನು ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಫೆಲೋಷಿಪ್ ಗಳು, ಶಿಷ್ಯವೇತನಗಳು, ವಿಸಿಟಿಂಗ್ ಚೇರ್ ಪ್ರೊಫೆಸರ್ ಷಿಪ್ ಗಳು ಹಾಗೂ ಎಂಡೋಡ್ ಚೇರ್ ಪ್ರೊಫೆಸರ್ ಷಿಪ್ ಗಳಿಗೂ ಬಳಸಲಾಗುತ್ತದೆ. ಇದರ ಜೊತೆಗೆ, ಜೈವಿಕ-ವಿಚಕ್ಷಣೆ, ಡಿಜಿಟಲ್ ಆರೋಗ್ಯ ಹಾಗೂ ಮೊಬೈಲ್ ಆಧಾರಿತ ರೋಗ ದೃಢೀಕರಣಗಳು ಸೇರಿದಂತೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿ ಸಂಶೋಧನಾ ಕಾರ್ಯಯೋಜನೆಗಳಿಗೆ ಅನುದಾನವನ್ನು ಕೂಡ ಒದಗಿಸಲಾಗುತ್ತದೆ.

ಈ ವರ್ಷಾರಂಭದಲ್ಲಿ ಐ.ಐ.ಎಸ್.ಸಿ.ಯು ತನ್ನ ಬೆಂಗಳೂರು ಕ್ಯಾಂಪಸ್ಸಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಹಾಗೂ ಬಗ್ಚಿ-ಪಾರ್ಥಸಾರಥಿ ಆಸ್ಪತ್ರೆಯ ಸ್ಥಾಪನೆಯನ್ನು ಪ್ರಕಟಿಸಿತು. ಒಂದೇ ಸಂಸ್ಥೆಯಲ್ಲಿನ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯವನ್ನು ಸಂಯೋಜನೆಗೊಳಿಸುವ ಜಾಗತಿಕ ಮಾದರಿಗಳಿಗೆ ಇದು ಅನುಗುಣವಾಗಿರುತ್ತದೆ. ಸಾರ್ವಜನಿಕ ಆರೋಗ್ಯ ಕೇಂದ್ರವು ದೇಶದಲ್ಲಿ ಆರೋಗ್ಯ ಶುಶ್ರೂಷೆಯನ್ನು ರೂಪಿಸಬಯಸುವ ಸಮಾನ ಮನಸ್ಕ ಸಂಸ್ಥೆಗಳು ಹಾಗೂ ದಾರ್ಶನಿಕರೊಂದಿಗಿನ ಸಹಭಾಗಿತ್ವಕ್ಕಾಗಿನ ಬದ್ಧತೆಯ ವಿಸ್ತರಣೆಯಾಗಿದೆ.

ಐ.ಐ.ಎಸ್ ಸಿ. ಬಗ್ಗೆ:
ಉದ್ಯಮಿ ಜಮಶೇಟಜಿ ನಸರ್ ವಾಂಜಿ ಟಾಟಾ, ಮೈಸೂರು ಸಂಸ್ಥಾನದ ರಾಜ ಕುಟುಂಬ ಹಾಗೂ ಭಾರತ ಸರ್ಕಾರದ ಒಳನೋಟದಿಂದ ಕೂಡಿದ ಪಾಲುದಾರಿಕೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.) 1909ರಲ್ಲಿ ಸ್ಥಾಪನೆಗೊಂಡಿತು. ಆರಂಭದಿಂದಲೂ ಸಂಸ್ಥೆಯು ವಿಜ್ಞಾನ ಮತ್ತು ಎಂಜಿನಿಯರಿಂಗ್ ನಲ್ಲಿ ಜ್ಞಾನಾರ್ಜನೆಗೆ ಹಾಗೂ ಅವುಗಳ ಸಂಶೋಧನೆಯ ಫಲಿತಾಂಶಗಳನ್ನು ಔದ್ಯಮಿಕ ಮತ್ತು ಸಾಮಾಜಿಕ ಉಪಯೋಗಕ್ಕೆ ಆನ್ವಯಿಕಗೊಳಿಸಲು ಸಮತೋಲಿತವಾದ ಒತ್ತು ಕೊಡುತ್ತಾ ಬಂದಿದೆ. ಐ.ಐ.ಎಸ್ ಸಿ.ಯು 2018ರಲ್ಲಿ ಭಾರತ ಸರ್ಕಾರದಿಂದ ‘ಇನ್ಸ್ ಟಿಟ್ಯೂಷ್ ಆಫ್ ಎಮಿನೆನ್ಸ್’ ಆಗಿ ಆಯ್ಕೆಗೊಂಡಿದೆ. ಪ್ರಪಂಚದ ವಿಶ್ವವಿದ್ಯಾಲಯಗಳ ರಾಂಕಿಂಗ್ ಪಟ್ಟಿಯಲ್ಲಿ ಭಾರತದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದೆಂದು ಸತತವಾಗಿ ಪರಿಗಣಿತವಾಗುತ್ತದೆ. ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿ ರಾಂಕಿಂಗ್ಸ್ 2022ರ ಪ್ರಕಾರ, ಪ್ರಭಾವಿ ಸಂಶೋಧನೆಗಳ ಮಾನದಂಡವಾದ, ‘ಸೈಟೇಷನ್ಸ್ ಪರ್ ಫ್ಯಾಕಲ್ಟಿ ಮೆಟ್ರಿಕ್’ ನಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನವನ್ನು ಪಡೆದಿದೆ.

ಅಜಿತ್ ಐಸ್ಯಾಕ್ ಅವರ ಬಗ್ಗೆ:
ಅಜಿತ್ ಐಸ್ಯಾಕ್ ಅವರು ಉದ್ಯಮಿ ಹಾಗೂ ಸಮಾಜಸೇವಾಸಕ್ತರಾಗಿದ್ದಾರೆ. ಇವರು ಲೀಡ್ಸ್ ವಿಶ್ವವಿದ್ಯಾಲಯ ಚಿನ್ನದ ಪದಕ ವಿಜೇತರೂ ಹಾಗೂ ಬ್ರಿಟಿಷ್ ಚೆವನಿಂಗ್ ವಿದ್ವಾಂಸರೂ ಆಗಿದ್ದಾರೆ. ಇವರು 2007ರಲ್ಲಿ ಸ್ಥಾಪಿಸಿದ ಕ್ವೆಸ್ ಕಾರ್ಪ್ ಲಿಮಿಟೆಡ್ ಇಂದು ಭಾರತದಲ್ಲಿನ ಅತ್ಯಂತ ದೊಡ್ಡ ದೇಶೀಯ ಉದ್ಯೋಗ ಸೃಷ್ಟಿ ಸಂಸ್ಥೆಯಾಗಿದೆ. ಅವರ ಮುಂದಾಳತ್ವದಲ್ಲಿ ಕ್ವೆಸ್ ಸಂಸ್ಥೆಯು ಅಸಂಘಟಿತ ಉದ್ಯೋಗಗಳನ್ನು ಸಂಘಟಿತ ವೇದಿಕೆಗಳಿಗೆ ತರುವ ಕಾರ್ಯವನ್ನು ಕ್ಷಿಪ್ರಗೊಳಿಸಿದೆ. ಭಾರತದಾದ್ಯಂತ 61 ಶಾಲೆಗಳ ಸುಮಾರು 14,800 ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವ ಕೇರ್ ವರ್ಕ್ಸ್ ಫೌಂಡೇಷನ್ ಅನ್ನು ಕೂಡ ಅವರು ಸ್ಥಾಪಿಸಿದ್ದಾರೆ. ಅಜಿತ್ ಅವರು 2011ರಲ್ಲಿ ‘ಇಂಡಿಯಾ ಫೋರ್ಬ್ಸ್ ನಾಯಕತ್ವ ಪ್ರಶಸ್ತಿ’ಗೆ ನಾಮ ನಿರ್ದೇಶನಗೊಂಡಿದ್ದರು. ಅಲ್ಲದೇ 2016ರಲ್ಲಿ ವರ್ಷದ ಅರ್ನ್ಸ್ಟ್ ಅಂಡ್ ಯಂಗ್ ಉದ್ಯಮಿ ಪ್ರಶಸ್ತಿಯ ಅಂತಿಮ ಸುತ್ತಿನ ಸ್ಪರ್ಧಿಯಾಗಿದ್ದರು. ಉದ್ಯೋಗ ಸೃಷ್ಟಿಯ ಜೊತೆಗೆ ಆರೋಗ್ಯ ಮತ್ತು ಶಿಕ್ಷಣ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಸಮಾಜದ ಆರೋಗ್ಯಕರ ಭವಿಷ್ಯವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ ಎಂಬುದು ಅವರ ನಂಬುಗೆಯಾಗಿದೆ.

ಮಾಧ್ಯಮ ಸಂಪರ್ಕಕ್ಕೆ:
ಐ.ಐ.ಎಸ್.ಸಿ.ಗೆ- ಐ.ಐ.ಎಸ್ ಸಿ. ಸಂವಹನ ಕಚೇರಿ | news@iisc.ac.in
ಅಜಿತ್ ಐಸ್ಯಾಕ್ ಅವರಿಗೆ – ಜೈನಾಬ್ ನಾಜಿಮ್ | zainab.nazim@adfactorspr.com | 99957 99242