ಹಾವಿನ ವಿಷದ ಘಟಕಾಂಶಗಳಲ್ಲಿ ಭಿನ್ನತೆ; ಚಿಕಿತ್ಸೆ ಕುರಿತು ಮೂಡುವ ಪ್ರಶ್ನೆಗಳು


-ದೇಬರಾಜ್‌ ಮನ್ನ

ಭಾರತದಲ್ಲಿ ಪ್ರತಿವರ್ಷ ಸುಮಾರು ೫೮,೦೦೦ ಜನರು ಹಾವು ಕಡಿತದಿಂದ ಸಾವಿಗೀಡಾಗುತ್ತಾರೆ. ಇದರಲ್ಲಿ ಬಹುತೇಕ ಪ್ರಕರಣಗಳಿಗೆ ಕಾರಣವಾಗುವುದು ನಾಲ್ಕು ಬಗೆಯ ಹಾವುಗಳು. ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಹಾವಿನ ಪ್ರಭೇದಗಳಲ್ಲೊಂದಾದ ರಸೆಲ್‌ ವೈಪರ್‌ (ದಬೋಜ ರಸೇಲಿ- ಮಂಡಲಹಾವಿನ ಪ್ರಭೇದ), ಸ್ಪೆಕ್ಟಕಲ್ಡ್‌ ಕೋಬ್ರ (ನಜ ನಜ- ನಾಗರಹಾವಿನ ಪ್ರಭೇದ), ಕಾಮನ್‌ ಕ್ರೈಟ್‌ (ಬುಂಗಾರುಸ್‌ ಕೇರುಲ್ಯೂಸ್‌, ಕಟ್ಟುಹಾವು) ಮತ್ತು ಸಾ-ಸ್ಕೇಲ್ಡ್‌ ವೈಪರ್‌ (ಎಚಿಸ್‌ ಕ್ಯಾರಿನ್ಯಾಟಸ್‌- ಮಂಡಲಹಾವಿನ ಮತ್ತೊಂದು ಪ್ರಭೇದ), ಇವೇ ಆ ನಾಲ್ಕು ಬಗೆಯವು. ಹಾವು ಕಡಿತಕ್ಕೆ ಕೊಡಲಾಗುವ ಪ್ರತಿವಿಷ ಚಿಕಿತ್ಸೆಗಳು ಕೆಲವೊಮ್ಮೆ ನಿಶ್ಚಿತ ಪರಿಣಾಮ ಬೀರದೇ ವಿಫಲವಾಗುತ್ತವೆ. ಭಾರತದಲ್ಲಿ ಇಂತಹ ಗಂಭೀರತೆಯ ಪ್ರಕರಣಗಳು ಸಾಕಷ್ಟಿದ್ದರೂ ಇದಕ್ಕೆ ಕಾರಣವನ್ನು ತಿಳಿಯುವ ಪ್ರಯತ್ನಗಳು ನಡೆದಿರಲಿಲ್ಲ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ (ಸಿಇಎಸ್‌) ಸಂಶೋಧಕರು ಹಾಗೂ ಅವರ ಸಹಭಾಗಿಗಳು, ರಸೆಲ್‌ ವೈಪರ್‌ಗಳ (ಮಂಡಲಹಾವಿನ ಪ್ರಭೇದ) ವಿಷದಲ್ಲಿನ ಸಂಯೋಜನೆಗಳು ಹಾಗೂ ನಂಜಿನ ತೀವ್ರತೆಯು ಭೌಗೋಳಿಕ ಪ್ರದೇಶವನ್ನು ಆಧರಿಸಿ ಅಚ್ಚರಿ ಹುಟ್ಟಿಸುವ ವ್ಯತ್ಯಾಸಗಳನ್ನು ಪ್ರದರ್ಶಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದು, ಈ ಕುರಿತ ಅಧ್ಯಯನ ವಿವರಗಳನ್ನು PLoS Neglected Tropical Diseases ಪ್ರಕಟಿಸಿದ್ದಾರೆ. ರಸೆಲ್‌ ವೈಪರ್‌ ಕಡಿತಕ್ಕೆ ಕೊಡಲಾಗುವ ಪ್ರತಿವಿಷವು (ಆಂಟಿವೆನಮ್‌) ಉತ್ತರ ಭಾರತದ ಹಾವುಗಳಿಗೆ ಹೊರತುಪಡಿಸಿ ಬೇರೆ ಹಾವುಗಳ ಕಡಿತದ ಸಂದರ್ಭಗಳಲ್ಲಿ ಪರಿಣಾಮಕಾರಿ ಆಗಿರುತ್ತವೆ. ಇದು ನಾಗರಹಾವುಗಳ ಕುರಿತಾಗಿ ನಡೆದಿರುವ ಅಧ್ಯಯನಗಳಿಂದ ದೃಢಪಟ್ಟಿರುವ ಅಂಶಗಳಿಗೆ ವ್ಯತಿರಿಕ್ತವಾಗಿದೆ. ಭೌಗೋಳಿಕ ನೆಲೆಯನ್ನು ಆಧರಿಸಿ ವಿಷದಲ್ಲಿ ಭಿನ್ನತೆಗಳು ಇರುವುದನ್ನು ನಾಗರಹಾವುಗಳ ಕುರಿತಾದ ಅಧ್ಯಯನವು ತೋರಿಸಿತ್ತು. ಇವುಗಳಿಗೆ ನೀಡಲಾಗುವ ಪ್ರತಿವಿಷವು ವಿಭಿನ್ನ ವಲಯಗಳ ಹಾವುಗಳ ಕಡಿತದ ಸಂದರ್ಭದಲ್ಲಿ ಪರಿಣಾಮಕಾರಿಯಲ್ಲ ಎಂಬುದೂ ಕಂಡುಬಂದಿತ್ತು.


An Indian spectacled cobra (Naja naja) from the Pune district of Maharashtra with its charismatic inflated hood (Credit: Ashok Captain and Indian Herpetological Society)

ʼವಿಷದ ಅಂಶದೊಂದಿಗೆ ಬಂಧಕಗೊಂಡು, ಅವನ್ನು ತಟಸ್ಥಗೊಳಿಸುವ ಪ್ರತಿಕಾಯಗಳ ಮಿಶ್ರಣಕ್ಕೆ ಪ್ರತಿವಿಷ ಎನ್ನಲಾಗುತ್ತದೆ. ಪ್ರಯೋಗಾಲಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಈ ಬಂಧಕ ಏರ್ಪಡುವುದು ಕಂಡುಬರುತ್ತದಾದರೂ, ಮನುಷ್ಯರ ದೇಹದೊಳಗೆ ಕೂಡ ಇದೇ ರೀತಿ ಆಗುತ್ತದೆಂಬುದನ್ನು ಖಚಿತವಾಗಿ ಹೇಳಲು ಇನ್ನೂ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿವಿಷಗಳನ್ನು ಸಾಮಾನ್ಯವಾಗಿ ಯಾವುದೇ ಪೂರ್ವ ಚಿಕಿತ್ಸಕ ಮೌಲ್ಯಮಾಪನಗಳನ್ನು ನಡೆಸದೇ ಬಿಡುಗಡೆ ಮಾಡಲಾಗಿರುತ್ತದೆʼ ಎನ್ನುತ್ತಾರೆ ಈ ಅಧ್ಯಯನದ ಲೇಖಕರಲ್ಲಿ ಒಬ್ಬರಾಗಿರುವ, ಸಿಇಎಸ್‌ ಸಹಾಯಕ ಪ್ರಾಧ್ಯಾಪಕರಾದ ಕಾರ್ತಿಕ್‌ ಸುಣಗಾರ್‌.

 

ರಸೆಲ್‌ ವೈಪರ್‌ ಪ್ರತಿವಿಷದ ಫಲಿತಾಂಶವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತಜ್ಞರು ಭಾರತದ ಐದು ಜೀವಭೌಗೋಳಿಕ ವಲಯಗಳ 48 ವೈಪರ್‌ಗಳ ವಿಷವನ್ನು ಸಂಗ್ರಹಿಸಿದ್ದರು. ಆನಂತರ, ವಿವಿಧ ಬಗೆಯ ವಿಷಗಳನ್ನು ಪ್ರತಿವಿಷವು ಹೇಗೆ ತಟಸ್ಥಗೊಳಿಸುತ್ತದೆ ಎಂಬುದನ್ನು ಪರೀಕ್ಷಿಸಲು ಇಲಿಗಳ ಮೇಲೆ ಪ್ರಯೋಗ ಮಾಡಿದ್ದರು.

  


Russell’s viper (Daboia russelii) snake from Odisha with its characteristic strike pose (Credit: Vivek Sharma) 

ಹಾವಿನ ವಿಷವು ಆಯಾ ಪರಿಸರಕ್ಕೆ ಅನುಗುಣವಾಗಿ ಮಾರ್ಪಾಡಾಗುವಂತಹ ಗುಣಲಕ್ಷಣಗಳನ್ನು ಹೊಂದಿರುತ್ತದೆ. ರಸೆಲ್‌ ವೈಪರ್‌ಗಳಲ್ಲಿ ಇದನ್ನು ದೃಢಪಡಿಸುವ ಸಲುವಾಗಿ ಸಂಶೋಧಕರು SDS-PAGE ಮತ್ತು ರಿವರ್ಸ್ಡ್‌ ಫೇಸ್‌ HPLC ಯಂತಹ ವಿಶ್ಲೇಷಣಾ ತಾಂತ್ರಿಕತೆಗಳನ್ನು ಬಳಸಿದರು. ಇದು ವಿಷಾಂಶದ ಘಟಕಗಳಲ್ಲಿನ ಪ್ರಮಾಣದಲ್ಲಿ ಹಾಗೂ ಸಂಯೋಜನೆಯಲ್ಲಿ ವ್ಯತ್ಯಾಸಗಳನ್ನು ಅನಾವರಣಗೊಳಿಸಿತು. ವಿಷದಲ್ಲಿನ ಘಟಕಾಂಶಗಳನ್ನು ಮಾಸ್‌ ಸ್ಪೆಕ್ಟ್ರೋಮೆಟ್ರಿ ನೆರವಿನಿಂದ ಗುರುತಿಸಲಾಯಿತು.

ಪ್ರಚಲಿತದಲ್ಲಿರುವ ಪ್ರತಿವಿಷ ಔಷಧೋಪಚಾರದ ಪ್ರಭಾವವನ್ನು ಪರಿಶೀಲಿಸುವುದಕ್ಕೋಸ್ಕರ, ತಂಡವು ಪ್ರಯೋಗಾಲಯದಲ್ಲಿನ ಪ್ರಮಾಣ ಮಾಪನಗಳನ್ನು ಬಳಸಿತು. ಇದರಿಂದಾಗಿ ವಿಷಕಾರಕ ಪ್ರೋಟೀನ್‌ಗಳಿಗೆ ಪ್ರತಿವಿಷದ ಬಂಧಕವನ್ನು ಗುರುತಿಸಲು ಸಹಕಾರಿಯಾಯಿತು. ಅಷ್ಟೇ ಅಲ್ಲದೇ, ಇಲಿಗಳ ದೇಹಕ್ಕೆ ಸೇರಿಸಲಾದ ವಿಷದ ಪರಿಣಾಮಗಳನ್ನು ಪ್ರತಿವಿಷವು ತಟಸ್ಥೀಕರಣಗೊಳಿಸಬಲ್ಲದೇ ಎಂಬುದನ್ನು ಪರೀಕ್ಷಿಸಲು ಪ್ರಯೋಗಗಳನ್ನು ಕೂಡ ನಡೆಸಿತು.  ಅಚ್ಚರಿಯ ಸಂಗತಿಯೆಂದರೆ, ವಿಷ ಸಂಯೋಜನೆಯಲ್ಲಿನ ಭಿನ್ನತೆಗಳ ನಡುವೆಯೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿವಿಷವು ಉತ್ತರ ಭಾರತದ ಅರೆ ಶುಷ್ಕ ಪ್ರದೇಶಗಳ ಹಾವುಗಳನ್ನು ಹೊರತುಪಡಿಸಿ ಬೇರೆಲ್ಲಾ ಪ್ರದೇಶಗಳ ಹಾವುಗಳ ವಿಷದ ವಿರುದ್ಧ ಪರಿಣಾಮವನ್ನು ಬೀರಿತು. ಆದರೆ, ಈ ಪ್ರತಿವಿಷವು ರಸೆಲ್‌ ವೈಪರ್‌ ಕಡಿತವು ಉಂಟುಮಾಡುವ ಜೀವಿತಾವಧಿ ಗಾಯಗಳಿಗೂ ರಕ್ಷಣೆಯನ್ನು ನೀಡಬಲ್ಲದೇ ಎಂಬುದು ಗೊತ್ತಾಗಿಲ್ಲ.

ಮಂಡಲಹಾವು (ವೈಪರ್‌) ಮತ್ತು ನಾಗರಹಾವಿನ ಮೇಲೆ ನಡೆಸಲಾಗಿರುವ ಅಧ್ಯಯನಗಳಿಂದ ಕಂಡುಬಂದಿರುವ ಪ್ರಕಾರ, “ಬೇರೆ ಬೇರೆ ಪ್ರದೇಶಗಳ ವಿಷಾಂಶಗಳಲ್ಲಿನ ಭಿನ್ನತೆಯನ್ನು ಗಮನಿಸುವ ಮೂಲಕ ಚಿಕಿತ್ಸಾ ಹಂತದ ಅಥವಾ ಚಿಕಿತ್ಸಾ ಪೂರ್ವ ಹಂತದ ಫಲಿತಾಂಶಗಳನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲಾಗಿ ಮಾರುಕಟ್ಟೆಯಲ್ಲಿನ ಪ್ರತಿವಿಷಗಳ ಪರಿಣಾಮವನ್ನು ನಿಖರವಾಗಿ ಪರೀಕ್ಷಿಸಲು ಚಿಕಿತ್ಸಕ ಮತ್ತು ಪೂರ್ವ ಚಿಕಿತ್ಸಕ ಅಧ್ಯಯನಗಳಿಂದ ಮಾತ್ರ ಸಾಧ್ಯ” ಎನ್ನುತ್ತಾರೆ ಸುಣಗಾರ್‌. ಹಾವಿನ ವಿಷಗಳ ಕುರಿತು ಈಗ ನಡೆದಿರುವ ಹಾಗೂ ಈ ಮುಂಚೆ ನಡೆಸಲಾಗಿದ್ದ (ರೋಮುಲಸ್‌ ವ್ಹಿಟೇಕರ್‌, ಗೆರಾರ್ಡ್‌ ಮಾರ್ಟಿನ್‌ ಮತ್ತು ನಿಕೋಲಸ್‌ ಕೇಸ್‌ವೆಲ್‌ ಅವರನ್ನು ಒಳಗೊಂಡ ತಂಡ) ಅಧ್ಯಯನಗಳಿಂದ, ಉತ್ತರ ಭಾರತದ ನಾಲ್ಕು ಪ್ರಮುಖ ಹಾವುಗಳ ಪೈಕಿ ಮೂರು ಹಾವುಗಳಲ್ಲಿನ ವಿಷಗಳ ವಿರುದ್ಧ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಪ್ರತಿವಿಷಗಳು ಪರಿಣಾಮಕಾರಿಯಲ್ಲ ಎಂಬುದು ಕಂಡುಬಂದಿದೆ ಎಂದೂ ಅವರು ಹೇಳಿದ್ದಾರೆ.

ಪ್ರತಿವಿಷಗಳು, ಹಾವಿನ ವಿವಿಧ ಬಗೆಯ ವಿಷಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂಬುದನ್ನು ಖಾತರಿಗೊಳಿಸಿಕೊಳ್ಳುವುದಕ್ಕಾಗಿ, ದೇಶದ ಅತ್ಯಂತ ವಿಷಕಾರಕ ಹಾವುಗಳ ಕಡಿತಕ್ಕೆ ಚಿಕಿತ್ಸೆ ಲಭ್ಯವಾಗಿಸಲು, ʼವಲಯ ನಿರ್ದಿಷ್ಟ ಪ್ರತಿವಿಷʼಗಳ ಉತ್ಪಾದನೆಯನ್ನು ತಕ್ಷಣವೇ ಆರಂಭಿಸಬೇಕು. ಜೊತೆಗೆ, ವಿವಿಧ ಬಗೆಯ ವಿಷಗಳ ಕುರಿತು ಸಾಕಷ್ಟು ಲಭ್ಯವಿರುವ ಮಾಹಿತಿಯನ್ನು ಆಧರಿಸಿ, ಭಾರತದಾದ್ಯಂತ ಪರಿಣಾಮಕಾರಿ ಎನ್ನಿಸುವ ಪ್ರಯೋಗಾರ್ಥ ಚಿಕಿತ್ಸೆಗಳಿಂದ ದೃಢೀಕೃತಗೊಂಡ ಪ್ರತಿವಿಷವೊಂದನ್ನು ಅಭಿವೃದ್ಧಿಪಡಿಸುವ ದೀರ್ಘಾವಧಿ ಗುರಿಯೂ ಇರಬೇಕು ಎಂಬುದರ ಬಗ್ಗೆ ಸಂಶೋಧಕರು ಗಮನಸೆಳೆಯುತ್ತಾರೆ.

ಉದ್ದೇಶಿತ ಫಲಿತಾಂಶವನ್ನು ಹೆಚ್ಚಿನ ನಿಖರತೆಯೊಂದಿಗೆ, ನಿರ್ದಿಷ್ಟತೆಯೊಂದಿಗೆ ಹಾಗೂ ಸುರಕ್ಷತೆಯೊಂದಿಗೆ ಸಾಧಿಸುವುದಕ್ಕಾಗಿ ರೀಕಾಂಬಿನೆಂಟ್‌ ಆಂಟಿವೆನಮ್‌ಗಳನ್ನು ಅಭಿವೃದ್ಧಿಗೊಳಿಸುವ ಪ್ರಾಮುಖ್ಯದ ಬಗ್ಗೆಯೂ ಸುಣಗಾರ್‌ ಅವರ ಒತ್ತಿ ಹೇಳುತ್ತಾರೆ.  ಈ ಕುರಿತು ಸುಣಗಾರ್‌ ಅವರ ಪ್ರಯೋಗಾಲಯದಲ್ಲಿಯೋ ಅಧ್ಯಯನಗಳು ಕೂಡ ನಡೆಯುತ್ತಿವೆ.

ಉಲ್ಲೇಖಗಳು:

ಆರ್‌ಆರ್‌ ಸೆಂಜಿ ಲಕ್ಸ್ಮೆ, ಸುಯೋಗ್‌ ಕೊಚರೆ, ಸೌರಭ್‌ ಅತರ್ಡೆ, ವಿವೇಕ್‌ ಸುರನ್ಸೆ, ಅಶ್ವಿನ್‌ ಅಯ್ಯರ್‌, ನಿಕೋಲಸ್‌ ಆರ್‌.ಕೇಸ್‌ವೆಲ್‌, ರೊಮುಲಸ್‌ ವ್ಹಿಟೇಕರ್‌, ಗೆರಾರ್ಡ್‌ ಮಾರ್ಟಿನ್‌ ಮತ್ತು ಕಾರ್ತಿಕ್‌ ಸುಣಗಾರ್‌, Biogeographic venom variation in Russell’s viper (Daboia russelii) and the preclinical inefficacy of antivenom therapy in snakebite hotspots, PLoS Neglected Tropical Diseases (2021).

https://journals.plos.org/plosntds/article?id=10.1371/journal.pntd.0009247

ಸಂಪರ್ಕಿಸಿ:

ಕಾರ್ತಿಕ್‌ ಸುಣಗಾರ್‌
ಸಹಾಯಕ ಪ್ರಾಧ್ಯಾಪಕರು
ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
+91-80-2293-2635
ksunagar@iisc.ac.in 

ಪತ್ರಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಬಿಡುಗಡೆಯಲ್ಲಿನ ಯಾವುದೇ ಪಠ್ಯ ಭಾಗವನ್ನು ಯಥಾವತ್‌ ಬಳಸಿದ ಸಂದರ್ಭದಲ್ಲಿ, ಆ ಕುರಿತು ʼಕೃಪೆ- ಐಐಎಸ್‌ಸಿ ಪತ್ರಿಕಾ ಬಿಡುಗಡೆʼ ಎಂದು ಉಲ್ಲೇಖಿಸಿರಿ.

ಆ) ಐಐಎಸ್‌ಸಿ ಪತ್ರಿಕಾ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.

—೦೦೦—