ಹೆಚ್ಚಿದ ರಿಕಾಂಬಿನೇಷನ್: SARS-CoV-2ಗೆ ಹೊಸ ಪುಷ್ಟಿ


20ನೇ ಮಾರ್ಚ್ 2023
-ನರ್ಮದಾ ಖರೆ
ಇಸವಿ 2022ರ ಜನವರಿ ಸುಮಾರಿಗೆ SARS-CoV-2 ಒಮೈಕ್ರಾನ್ ರೂಪಾಂತರ ತಳಿಯು ಕ್ಷಿಪ್ರವಾಗಿ ಹರಡಲು ಶುರುವಾಯಿತು. ಆ ಸಂದರ್ಭದಲ್ಲಿ, ಐಐಎಸ್‌ಸಿ ಸೂಕ್ಷ್ಮಾಣು ಜೀವಿಶಾಸ್ತ್ರ & ಕೋಶ ಜೀವಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಶಶಾಂಕ್ ತ್ರಿಪಾಠಿ ಅವರ ನೇತೃತ್ವದ ಸಂಶೋಧಕರ ತಂಡವು ಒಮೈಕ್ರಾನ್ ತಳಿಯ ರಿಕಾಂಬಿನೆಂಟ್ ಸಂತತಿಗಳ ಸಂಖ್ಯೆಯು ಅಚ್ಚರಿ ಎನ್ನಿಸುವಷ್ಟರ ಮಟ್ಟಿಗೆ ಹೆಚ್ಚಾಗಿರುವುದನ್ನು ಗಮನಿಸಿತು.
ತಂಡದ ಸಂಶೋಧಕರು, ಪ್ರಪಂಚದ ಬೇರೆ ಬೇರೆ ಪ್ರದೇಶಗಳ ವಿವಿಧ ಮೂಲಗಳಿಂದ 2019ರ ನವೆಂಬರ್ ನಿಂದ 2020 ರ ಜುಲೈವರೆಗಿನ ಅವಧಿಯಲ್ಲಿ ಲಭ್ಯವಾದ ವೈರಾಣು ತಳಿಗಳ ವಂಶವಾಹಿನಿ ಅನುಕ್ರಮಣಿಕೆಗಳ ವಿಶ್ಲೇಷಣೆ ನಡೆಸಿದರು. ಈ ಅಧ್ಯಯನದ ವೇಳೆ ಅವರು ಅಧಿಕ ದರದಲ್ಲಿ ರಿಕಾಂಬಿನೇಷನ್ ಮೂಲಕ ರೂಪುಗೊಂಡ ಹಾಗೂ ವೈರಾಣು ಪ್ರೋಟೀನ್‌ಗಳ ಮೇಲೆ, ಮುಖ್ಯವಾಗಿ, ವೈರಾಣು ಸ್ಪೈಕ್ ಪ್ರೋಟೀನಿನ ವಿವಿಧ ಭಾಗಗಳ ಮೇಲೆ ದುಷ್ಪರಿಣಾಮ ಬೀರಿದ ಹಲವಾರು ಹೊಸ ರೂಪಾಂತರಗಳನ್ನು ಪತ್ತೆ ಹಚ್ಚಿದರು. ರಿಸೆಪ್ಟಾರ್ ಬೈಂಡಿಂಗ್ ಡೊಮೈನ್ (ಆರ್ ಬಿಡಿ) ಮತ್ತು ಎನ್ ಟರ್ಮಿನಲ್ ಡೋಮೈನ್ (ಎನ್ ಟಿಡಿ) ನಂತಹ ವಲಯಗಳು ವೈರಾಣು ಮತ್ತು ಆಶ್ರಯ ಕೋಶಗಳ ಬಂಧದಲ್ಲಿ ಭಾಗಿಯಾಗುತ್ತವೆಂದು ಹೇಳಲಾಗುತ್ತದೆ. ಜೊತೆಗೆ, ಇವು ಆಶ್ರಯ ಕೋಶದ ರೋಗನಿರೋಧಕ ವ್ಯವಸ್ಥೆಯಿಂದ ದಾಳಿಗೊಳಗಾಗುವ ನೆಲೆಗಳು ಎಂಬ ವರದಿಗಳು ಕೂಡ ಇವೆ. ಈ ರೂಪಾಂತರಗಳ ಮೂಲಕ ಇಂತಹ ಹಲವಾರು ಒಮೈಕ್ರಾನ್ ರೀಕಾಂಬಿನೆಂಟ್ ಮತ್ತು ರೂಪಾಂತರ ತಳಿಗಳು ಆಶ್ರಯ ಕೋಶದ ರಕ್ಷಣಾ ವ್ಯವಸ್ಥೆಯ ಕಣ್ತಪ್ಪಿಸಿಕೊಂಡು ಆಶ್ರಯ ಕೋಶಕ್ಕೆ ಇನ್ನಷ್ಟು ಬಿಗಿಯಾಗಿ ಅಂಟಿಕೊಳ್ಳಲು ಸಮರ್ಥವಾಗಿದ್ದವು ಎಂಬುದನ್ನು ತಂಡದ ತಜ್ಞರು ತೋರಿಸಿದ್ದಾರೆ.
ವೈರಾಣುವಿನ ಹೊಸ ತಳಿಗಳು ಪ್ರತಿರೋಧಕ ವ್ಯವಸ್ಥೆಯನ್ನು ಕಣ್ತಪ್ಪಿಸುವುದರಲ್ಲಿ ಹಾಗೂ ಸೋಂಕು ಹರಡುವುದರಲ್ಲಿ ಹೇಗೆ ಪರಿಣಾಮಕಾರಿಯಾಗಿದ್ದವು ಎಂಬುದನ್ನು ದೃಢಪಡಿಸುತ್ತಿರುವ ಸಾಕ್ಷ್ಯಗಳ ಸಾಲಿಗೆ ಈ ಅವಲೋಕನವು ಇನ್ನಷ್ಟು ಪುಷ್ಟಿ ನೀಡುವಂತಿದೆ.
SARS-CoV-2 ನಂತಹ ವೈರಾಣುಗಳು ನಿರಂತರ ಬದಲಾವಣೆಗೆ ಹೆಸರಾಗಿವೆ. ಹೀಗಾಗಿ, ಮನುಷ್ಯನ ರೋಗನಿರೋಧಕ ವ್ಯವಸ್ಥೆಗೆ ಇವನ್ನು ಗುರುತಿಸಿ ನಾಶಗೊಳಿಸುವುದು ಕಷ್ಟವಾಗುತ್ತದೆ. ಲಸಿಕೆಗಳ ತಯಾರಿಕೆಗೂ ಈ ಅಂಶವೇ ಬಲುದೊಡ್ಡ ತೊಡಕಿನ ಸಂಗತಿಯಾಗಿರುತ್ತದೆ. ಉದ್ದನೆಯ ಆರ್ ಎನ್ ಎ ಒಂಟಿ ಎಳೆಯು SARS-CoV-2 ದಲ್ಲಿ ಆನುವಂಶಿಕ ಪರಿಕರವಾಗಿರುತ್ತದೆ. ಇದರ ಜೊತೆಗೆ, ಈ ಆರ್ ಎನ್ ಎ ದ ನಕಲುಗಳನ್ನು ಮಾಡಲು ಅಗತ್ಯವಾದ ಪ್ರೋಟೀನು ಆರ್ ಎನ್ ಎ ಪಾಲಿಮರೇಸ್ ಆಗಿದ್ದು, ಅದು ಈ ವೈರಾಣುವಿನಲ್ಲಿ ದೋಷಕ್ಕೆ ಪಕ್ಕಾಗುತ್ತದೆಂದು ಹೇಳಲಾಗಿದೆ.
ವೈರಾಣುಗಳು ರೂಪಾಂತರ ಅಥವಾ ರಿಕಾಂಬಿನೇಷನ್, ಈ ಎರಡು ವಿಧಾನಗಳ ಪೈಕಿ ಯಾವುದಾದರೂ ಒಂದರ ಮೂಲಕ ವಿಕಾಸಗೊಳ್ಳಲು ಸಾಧ್ಯವೆಂದು ವಿವರಿಸುತ್ತಾರೆ ತ್ರಿಪಾಠಿಯವರು. “ಇದು ತನ್ನ ವಂಶವಾಹಿನಿ ವೈವಿಧ್ಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗೋಪಾಯವಾಗಿದೆ” ಎಂಬುದು ಅವರ ಅಭಿಪ್ರಾಯ. ಈ ಪಾಲಿಮರೇಸ್ ಕೇವಲ ರೂಪಾಂತರಗಳು ಕ್ರೋಡೀಕರಣಗೊಳ್ಳಲು ಅವಕಾಶ ಕೊಡುವುದಷ್ಟೇ ಅಲ್ಲದೆ, ವೈರಾಣುವಿನ ವಿಭಿನ್ನ ತಳಿಗಳ ನಡುವೆ ರಿಕಾಂಬಿನೇಷನ್ ಸಂಭವಿಸುವುದಕ್ಕೂ ಎಡೆ ಮಾಡಿಕೊಡುತ್ತದೆ. ಸಹವರ್ತಿ-ಸೋಂಕು ಇದ್ದಾಗ ಇದು ಸಾಧ್ಯವಾಗುತ್ತದೆ. ಅಂದರೆ, ಆಶ್ರಯ ಕೋಶವು ವೈರಾಣುವಿನ ಒಂದಕ್ಕಿಂತ ಹೆಚ್ಚು ತಳಿಗಳಿಂದ ಸೋಂಕಿತಗೊಂಡಿದ್ದಾಗ ಇದು ಸಂಭವಿಸುತ್ತದೆ ಎಂದು ಅರ್ಥ. “ವೈರಾಣುವಿನ ಆರ್ ಎನ್ ಎ ಯನ್ನು ನಕಲು‌ ಮಾಡಿಕೊಳ್ಳುವಾಗ ಒಂದು ಆರ್ ಎನ್ ಎ ಟೆಂಪ್ಲೇಟ್ ನಿಂದ ಹತ್ತಿರದಲ್ಲಿರುವ ಮತ್ತೊಂದಕ್ಕೆ ಪಾಲಿಮರೇಸ್ ಜಿಗಿಯಬಲ್ಲದು” ಎನ್ನುತ್ತಾರೆ ತ್ರಿಪಾಠಿ. ಹೀಗಾದಾಗ, ಹತ್ತಿರದ ಅನುಕ್ರಮಣಿಕೆಯು ಬೇರೊಂದು ತಳಿಯದಾಗಿದ್ದರೆ, ಆಗ ಉದ್ಭವವಾಗುವ ಹೊಸ ನಕಲು ರಿಕಾಂಬಿನೆಂಟ್ ಆಗಿರುತ್ತದೆ ಅಥವಾ ಎರಡು ಪೋಷಕ ತಳಿಗಳ ಹೈಬ್ರಿಡ್ ಆಗಿರುತ್ತದೆ. ತ್ರಿಪಾಠಿ ಅವರು ಮುಂದುವರಿದು ಹೇಳುವ ಪ್ರಕಾರ, ಸದ್ಯ SARS-CoV-2ಯ 35ಕ್ಕೂ ಹೆಚ್ಚು ರೀಕಾಂಬಿನೆಂಟ್ ಗಳು ಇವೆ. ಉದಾಹರಣೆಗೆ ಗಮನಿಸುವುದಾದರೆ, ತ್ರಿಪಾಠಿ ಅವರ ಪ್ರಕಾರ, 2022ರಲ್ಲಿ ಉದ್ಬವಿಸಿದ ಪ್ರಬಲ ರೂಪಾಂತರಗಳಲ್ಲೊಂದಾದXBBಯು ಒಮೈಕ್ರಾನಿನ ಇನ್ನೆರಡು ತಳಿಗಳ ರೀಕಾಂಬಿನೇಷನ್ ನಿಂದ ಹುಟ್ಟು ಪಡೆದಿದೆ.
ಅಧ್ಯಯನದ ಪ್ರಕಾರ, ಈ ರೀಕಾಂಬಿನೇಷನ್ ವಿದ್ಯಮಾನಗಳಲ್ಲಿ ಹೆಚ್ಚಳವಾಗುವುದಕ್ಕೆ ಎರಡು ಸಂಭಾವ್ಯ ಕಾರಣಗಳಿವೆ.
ಮೊದಲನೆಯದು, 2022ರ ಒಮೈಕ್ರಾನ್ ಅಲೆಯ ವೇಳೆ ಸೋಂಕುಗಳ ಮತ್ತು ಸಹವರ್ತಿ ಸೋಂಕುಗಳ ಸಂಖ್ಯೆ ಅಧಿಕವಾಗಿದ್ದುದು.
ಎರಡನೆಯದು, ನಿರ್ದಿಷ್ಟ ರೂಪಾಂತರವು ಎಕ್ಸೋನ್ಯೂಕ್ಲಿಯೇಸ್ ವೈರಾಣು ವಂಶವಾಹಿನಿಯಲ್ಲಿ ಕಾಣಿಸಿಕೊಂಡದ್ದು (ಎಕ್ಸೋನ್ಯೂಕ್ಲಿಯೇಸ್ ಎಂಬುದು ಆರ್ ಎನ್ ಎ ಯನ್ನು ಸೀಳಬಲ್ಲ ಒಂದು ಪ್ರೋಟೀನ್ ಆಗಿದ್ದು, ಇದು ರಿಕಾಂಬಿನೇಷನ್ ನಲ್ಲಿ ಭಾಗಿಯಾಗುತ್ತದ್ದೆಂದು ಹೇಳಲಾಗಿದೆ).
“ವೈರಾಣುವಿನ ಚಟುವಟಿಕೆ ಕಡಿಮೆಯಾಗುತ್ತಿಲ್ಲ. ವಾಸ್ತವವಾಗಿ, ರೂಪಾಂತರಗಳು ಹೆಚ್ಚಳವಾದಷ್ಟೂ ಅದು ಇನ್ನಷ್ಟು ಕ್ರಿಯಾಶೀಲವಾಗಲು ಅಣಿಯಾಗುತ್ತಿದೆ” ಎನ್ನುವುದು ತ್ರಿಪಾಠಿಯವರ ಅಭಿಪ್ರಾಯವಾಗಿದೆ.
ಹೆಚ್ಚಿನ ರಿಕಾಂಬಿನೇಷನ್ ನಿಂದಾಗಿ ಹೊಸ ತಳಿಗಳು ಉದ್ಭವಿಸುವ ಸಾಧ್ಯತೆಗಳು ಕೂಡ ವೃದ್ಧಿಸುತ್ತವೆ. ಆದ್ದರಿಂದ, ವೈರಾಣುವಿನ‌ ನಿಯಮಿತ ಅನುಕ್ರಮಣಿಕೆಯನ್ನು ಅವಲೋಕಿಸುವುದು ಅತ್ಯಂತ ಮಹತ್ವದ್ದೆನ್ನಿಸಿಕೊಳ್ಳುತ್ತದೆ ಎನ್ನುತ್ತಾರೆ ಸಂಶೋಧಕರು.
ಉಲ್ಲೇಖ:
ಶಿರಾಜ್ ಆರ್., ತ್ರಿಪಾಠಿ ಎಸ್. recombination among omicron subvariants of SARS-
CoV-2 contributes to viral immune escape, Journal of Medical Virology (2023).
ಸಂಪರ್ಕ:
ಶಶಾಂಕ್ ತ್ರಿಪಾಠಿ
ಸಹಾಯಕ ಪ್ರಾಧ್ಯಾಪಕರು
ಸೂಕ್ಷ್ಮಾಣು ಜೀವಿಶಾಸ್ತ್ರ & ಕೋಶ ಜೀವಶಾಸ್ತ್ರ ವಿಭಾಗ ಮತ್ತು ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಫೋನ್: +91 8022932884
ಇ-ಮೇಲ್: shashankt@iisc.ac.in
ಅಂತರ್ಜಾಲ: https://cidr.iisc.ac.in/shashank/
ಪರ್ತಕರ್ತರಿಗೆ ಸೂಚನೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.