800 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಐ.ಐ.ಎಸ್ ಸಿ.ಗೆ ರೂ 425 ಕೋಟಿ ದೇಣಿಗೆ


ಇಸವಿ 1909ರಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.) ವಿಜ್ಞಾನ ಮತ್ತು ಎಂಜಿನಿಯರಿಂಗ್ ಗಳೆರಡಕ್ಕೂ ಸಮಾನ ಆದ್ಯತೆ ನೀಡುವ ಭಾರತದ ಮುಂಚೂಣಿ ಆಧುನಿಕ ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದೆ. ವಿಜ್ಞಾನ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯವನ್ನು ಸಂಯೋಜಿಸುವ ಈಗಿನ ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಐ.ಐ.ಎಸ್ ಸಿ.ಯು ತನ್ನ ಬೆಂಗಳೂರಿನ ಕ್ಯಾಂಪಸ್ಸಿನಲ್ಲಿ ಬಹು-ವಿಶೇಷತೆಯ ಆಸ್ಪತ್ರೆಯೊಂದಿಗೆ ಸ್ನಾತಕೋತ್ತರ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಿದೆ.

ಹೊಸ ತಲೆಮಾರಿನ ತಜ್ಞವೈದ್ಯ- ವಿಜ್ಞಾನಿಗಳನ್ನು (ಫಿಸಿಷಿಯನ್- ಸೈಂಟಿಸ್ಟ್ಸ್) ರೂಪಿಸುವ ಗುರಿಯೊಂದಿಗೆ ಎಂ.ಡಿ.-ಪಿಎಚ್.ಡಿ. ಅವಳಿ ಪದವಿ ವ್ಯಾಸಂಗಕ್ಕೆ ಅನುವು ಮಾಡಿಕೊಡುವುದು ಈ ಶೈಕ್ಷಣಿಕ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ಅಂದಹಾಗೆ, ಈ ತಜ್ಞವೈದ್ಯ-ವಿಜ್ಞಾನಿಗಳು ಪ್ರಯೋಗಾಲಯದ ಫಲಿತಾಂಶಗಳನ್ನು ಹೊಸ ರೀತಿಯ ಚಿಕಿತ್ಸಾ ಕ್ರಮಗಳಾಗಿ ಪರಿವರ್ತಿಸುವ ಧ್ಯೇಯದೊಂದಿಗೆ ಚಿಕಿತ್ಸಾ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಈ ಅಧ್ಯಯನಾರ್ಥಿಗಳಿಗೆ ಆಸ್ಪತ್ರೆಯ ಜೊತೆಜೊತೆಗೆ ಐ.ಐ.ಎಸ್ ಸಿ.ಯ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ಒಟ್ಟೊಟ್ಟಿಗೆ ತರಬೇತಿ ಕೊಡಲಾಗುತ್ತದೆ.

ಲಾಭದ ಉದ್ದೇಶವಿರದ 800 ಹಾಸಿಗೆಗಳ ಸಾಮರ್ಥ್ಯದ ಬಹುಶಿಸ್ತೀಯ ಆಸ್ಪತ್ರೆಯು ಉದ್ದೇಶಿತ ಶೈಕ್ಷಣಿಕ ಕೋರ್ಸ್ ನಲ್ಲಿ ವ್ಯಾಸಂಗ ಮಾಡುವವರಿಗೆ ಚಿಕಿತ್ಸಾ ತರಬೇತಿ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ಅನುಕೂಲ ಮಾಡಿಕೊಡುತ್ತದೆ. ಅಹಮದಾಬಾದ್ ಮೂಲದ ಆರ್ಚಿ ಮೆಡೆಸ್ (|) ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ನವರು ವಿನ್ಯಾಸಗೊಳಿಸಿರುವ ಯೋಜಿತ ಆಸ್ಪತ್ರೆ ಕಟ್ಟಡದ ನಿರ್ಮಾಣಕ್ಕಾಗಿ ಐ.ಐ.ಎಸ್ ಸಿ.ಯು ಇಂದು ಸಮಾಜಸೇವಾಸಕ್ತರಾದ ಸುಸ್ಮಿತಾ ಹಾಗೂ ಸುಬ್ರೊತೊ ಬಾಗ್ಚಿ ಮತ್ತು ರಾಧಾ ಹಾಗೂ ಪಾರ್ಥಸಾರಥಿ ದಂಪತಿಗಳೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕಾರ್ಯಯೋಜನೆಗಾಗಿ ಈ ದಂಪತಿಗಳು ರೂ 425 ಕೋಟಿಗಳನ್ನು (ಸುಮಾರು 6 ಕೋಟಿ ಡಾಲರ್) ದೇಣಿಗೆ ನೀಡಲಿದ್ದಾರೆ. ಯೋಜನೆ ಅನುಷ್ಠಾನಗೊಂಡ ನಂತರ, ಇದು ಐ.ಐ.ಎಸ್ ಸಿ. ಇದುವರೆಗಿನ ತನ್ನ ಇತಿಹಾಸದಲ್ಲಿ ಸ್ವೀಕರಿಸಿದ ಅತ್ಯಂತ ದೊಡ್ಡ ಮೊತ್ತದ ಕೊಡುಗೆಯಾಗಲಿದೆ. ಈ ಆಸ್ಪತ್ರೆಗೆ ‘ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ’ ಎಂದು ಹೆಸರಿಸಲಾಗುತ್ತದೆ.

[metaslider id=37024]

ಈ ಸಂದರ್ಭದಲ್ಲಿ, ಐ.ಐ.ಎಸ್ ಸಿ. ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಅವರು ಮಾತನಾಡಿ, “ಸದುದ್ದೇಶದಿಂದ ಈ ಒಂದು ಬೃಹತ್ ಕೊಡುಗೆ ನೀಡಲು ಮುಂದಾಗಿರುವ ಸುಸ್ಮಿತಾ-ಸುಬ್ರೊತೊ ಬಾಗ್ಚಿ ಮತ್ತು ರಾಧಾ- ಎನ್.ಎಸ್.ಪಾರ್ಥಸಾರಥಿ ದಂಪತಿಗಳಿಗೆ ನಾವು ಅತ್ಯಂತ ಆಭಾರಿಗಳಾಗಿದ್ದೇವೆ. ಈ ಉದಾರ ಕೊಡುಗೆಯು ನಮ್ಮ ಕ್ಯಾಂಪಸ್ಸಿನೊಳಗೆ ಚಿಕಿತ್ಸಾ ವಿಜ್ಞಾನಗಳು, ಮೂಲಭೂತ ವಿಜ್ಞಾನಗಳು ಹಾಗೂ ಎಂಜಿನಿಯರಿಂಗ್ ತಾಂತ್ರಿಕ ಶಿಸ್ತುಗಳನ್ನು ಸಂಯೋಜಿಸುವ ಬಗ್ಗೆ ನಾವು ಹೊಂದಿದ್ದ ಕನಸನ್ನು ಸಾಕಾರಗೊಳಿಸಲು ಸಹಕಾರಿಯಾಗಲಿದೆ. ಇದು ಉತ್ಸಾಹಿ ಅಧ್ಯಯನಾರ್ಥಿಗಳಾಗಿ ಅಂತರಶಿಸ್ತೀಯ ತರಬೇತಿ ಮತ್ತು ಸಂಶೋಧನೆಗೆ ನೆರವು ನೀಡಲಿದೆ. ಅಲ್ಲದೇ, ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಯ ನಿರ್ಮಾಣಕ್ಕೆ, ವಿಶೇಷವಾಗಿ ವೈದ್ಯಕೀಯ ಸಂಶೋಧನೆಗೆ ಸಂಬಂಧಿಸಿದಂತೆ ಒಂದು ಮಾದರಿಯೂ ಆಗಲಿದೆ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಶ್ರೀಮತಿ ಸುಸ್ಮಿತಾ ಬಾಗ್ಚಿ ಅವರು ಮಾತನಾಡಿ, “ಐ.ಐ.ಎಸ್ ಸಿ. ಜೊತೆ ಕೈಜೋಡಿಸಲು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ನಮ್ಮಂತಹ ದೇಶದಲ್ಲಿ ವೈದ್ಯಕೀಯ ಸಂಶೋಧನೆ ಹಾಗೂ ಚಿಕಿತ್ಸಾ ಲಭ್ಯತೆಯನ್ನು ಬರೀ ಸರ್ಕಾರದ ಅಥವಾ ಕಾರ್ಪೊರೇಟ್ ವಲಯದ ಜವಾಬ್ದಾರಿ ಎನ್ನಲಾಗದು. ಈ ನಿಟ್ಟಿನಲ್ಲಿ ನಮ್ಮಂಥವರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಲು ಇದು ಸಕಾಲ. ಐ.ಐ.ಎಸ್ ಸಿ.ಯೊಂದಿಗೆ ನಮ್ಮ ಒಳನೋಟದಲ್ಲಿ ಪಾಲುದಾರರಾಗಿದ್ದೇವೆ.ಇದು ದೊಡ್ಡ ಪ್ರಮಾಣದಲ್ಲಿ ಜನಜೀವನದ ಮೇಲೆ ಪರಿಣಾಮ ಬೀರುವಂತಹ ಸ್ಪರ್ಧಾತ್ಮಕತೆ, ನಾಯಕತ್ವ ಹಾಗೂ ಸಾಮರ್ಥ್ಯದಿಂದ ಕೂಡಿರುವ ಸಂಸ್ಥೆಯಾಗಿದೆ. ಈ ನಮ್ಮ ಕೊಡುಗೆಯು ಸುದೀರ್ಘಾವಧಿಯವರಿಗೆ ಪ್ರಯೋಜನಕಾರಿಯಾಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ” ಎಂದರು.

ಶ್ರೀಮತಿ ರಾಧಾ ಪಾರ್ಥಸಾರಥಿ ಅವರು ಮಾತನಾಡಿ, “ವಿಜ್ಞಾನ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯವನ್ನು ಒಂದೇ ಕ್ಯಾಂಪಸ್ಸಿನಲ್ಲಿ ಸಂಯೋಜಿಸಬೇಕೆಂಬ ಐ.ಐ.ಎಸ್ ಸಿ.ಯ ಒಳನೋಟವು ಭಾರತದ ಶೈಕ್ಷಣಿಕ ಸಂಸ್ಥೆಗಳಲ್ಲೇ ಅತ್ಯಂತ ಹೊಚ್ಚಹೊಸ ಪರಿಕಲ್ಪನೆಯಾಗಿದೆ. ಇದು ನಾವು ಸಂಸ್ಥೆಯೊಂದಿಗೆ ಸಹಯೋಗಿಗಳಾಗಲು ಕೌತುಕಮಯ ಅವಕಾಶವನ್ನು ಸೃಷ್ಟಿಸಿದೆ. ಐ.ಐ.ಎಸ್ ಸಿ.ಗೆ ಇರುವ ಜಾಗತಿಕ ಮನ್ನಣೆ ಹಾಗೂ ಬಾಂಧವ್ಯ ಜಾಲವು ವೈದ್ಯಕೀಯ ಸಂಶೋಧನೆಯ ಮೂಲಕ ಜನಸಮುದಾಯದ ಮೇಲೆ ಪರಿಣಾಮ ಬೀರುವಂತಹ ಪ್ರತಿಭಾವಂತರನ್ನು ತನ್ನೆಡೆಗೆ ಸೆಳೆಯಲು ಸಹಕಾರಿಯಾಗಲಿದೆ. ಈಗ ನಾವು ಎದುರಿಸುತ್ತಿರುವ ಮಹಾಸೋಂಕಿನ ಪರಿಸ್ಥಿತಿಯು ವೈದ್ಯಕೀಯದಲ್ಲಿ ನಾವು ಸಾರ್ವತ್ರಿಕ ಲಭ್ಯತೆ ಹಾಗೂ ಸಮಾನತೆ ತರಬೇಕಾದ ಜರೂರನ್ನು ಸೃಷ್ಟಿಸಿದೆ. ಅತ್ಯಂತ ಹೆಚ್ಚಿನ ಮನ್ನಣೆಗೆ ಪಾತ್ರವಾಗಿರುವ ದೇಶದ ಪ್ರಮುಖ ಸಂಶೋಧನಾ ಸಂಸ್ಥೆಯ ಹೊಸ ಪಯಣದಲ್ಲಿ ನಾವು ಭಾಗಿಯಾಗಲು ಅವಕಾಶ ಲಭ್ಯವಾಗಿರುವುದಕ್ಕೆ ಧನ್ಯವಾದಗಳು” ಎಂದರು.

ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯನ್ನು ಐ.ಐ.ಎಸ್ ಸಿ. ಆವರಣದಲ್ಲಿ ನಿರ್ಮಿಸಲಾಗುತ್ತದೆ. ಇದು, ಕ್ಯಾಂಪಸ್ಸಿನಲ್ಲಿರುವ ವಿಜ್ಞಾನ ಹಾಗೂ ಎಂಜಿನಿಯರಿಂಗ್ ವಿಭಾಗಗಳ ಮತ್ತು ಪ್ರಯೋಗಾಲಯಗಳ ಸಂಯೋಜನೆಯೊಂದಿಗೆ ಕಾರ್ಯಾಚರಣೆ ಮಾಡಲಿದೆ. ಇದೇ ವರ್ಷದ ಜೂನ್ ನಲ್ಲಿ (2022ರ ಜೂನ್) ಈ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಯೋಜಿಸಲಾಗಿದ್ದು, 2024ರ ಕೊನೆಯ ವೇಳೆಗೆ ಆಸ್ಪತ್ರೆಯನ್ನು ಕಾರ್ಯಾಚರಣೆಗೊಳಿಸುವ ಗುರಿ ಹೊಂದಲಾಗಿದೆ. ಈ ಆಸ್ಪತ್ರೆಯು ರೋಗ ದೃಢೀಕರಣ (ಡಯಾಗ್ನೋಸ್ಟಿಕ್ಸ್), ಚಿಕಿತ್ಸೆ ಮತ್ತು ಸಂಶೋಧನೆಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಉದ್ದೇಶಿತ ಆಸ್ಪತ್ರೆಯು ಚಿಕಿತ್ಸಕ ಹಾಗೂ ಶಸ್ತ್ರಚಿಕಿತ್ಸಾ ವಿಭಾಗಗಳು ಕ್ಯಾನ್ಸರ್, ಹೃದಯ ಕಾಯಿಲೆ, ನರ ಸಂಬಂಧಿ ಅಸ್ವಾಸ್ಥ್ಯ, ಅಂತಸ್ರಾವಕ ಬಾಧೆ, ಗ್ಯಾಸ್ಟ್ರೊಎಂಟೆರಾಲಜಿ, ನೆಫ್ರಾಲಜಿ, ಯೂರಾಲಜಿ, ಚರ್ಮಬಾಧೆ ಹಾಗೂ ಸುರೂಪ ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ, ರೋಬೋಟಿಕ್ ಶಸ್ತ್ರಚಿಕಿತ್ಸೆ, ಕಣ್ಣಿನ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸೆ ಹಾಗೂ ಆರೋಗ್ಯ ಆರೈಕೆ ನೀಡಲು ನೆರವು ನೀಡಲಿವೆ. ಇದರ ಜೊತೆಗೆ, ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾವಳಿ ಪ್ರಕಾರ, ಎಂ.ಡಿ./ಎಂ.ಎಸ್. ಮತ್ತು ಡಿ.ಎಂ./ಎಂ.ಸಿಎಚ್. ವ್ಯಾಸಂಗಕ್ಕೆ ಸೇರುವವರಿಗೆ ತರಗತಿಗಳು ಹಾಗೂ ಪ್ರಯೋಗಾಲಯ ತರಬೇತಿಯ ಜೊತೆಗೆ ಆಸ್ಪತ್ರೆಯ ಸೂಕ್ತ ವಿಭಾಗಗಳಲ್ಲಿಯೂ ತರಬೇತಿ ಕೊಡಲಾಗುತ್ತದೆ. ಆಸ್ಪತ್ರೆಯು ಸಮಗ್ರ ವೈದ್ಯಕೀಯ ದಾಖಲೆ ವ್ಯವಸ್ಥೆಯಂತಹ ಆಧುನಿಕ ಡಿಜಿಟಲ್ ತಾಂತ್ರಿಕತೆಯನ್ನು ಹಾಗೂ ಸಮಗ್ರ ಟೆಲಿಮೆಡಿಸಿನ್ ಸೂಟ್ ಅನ್ನೂ ಹೊಂದಿರಲಿದೆ.

ಐ.ಐ.ಎಸ್ ಸಿ. ವೈದ್ಯಕೀಯ ಕಾಲೇಜು ಮತ್ತು ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯ ಸಹಯೋಗದ ಪರಿಣಾಮವು ವಿಜ್ಞಾನ ಹಾಗೂ ಪರಿಹಾರಗಳನ್ನು ಮೀರಿ ಮುನ್ನಡೆಯಲಿದೆ. ದೇಶದಲ್ಲಿ ಸುಸ್ಥಿರ ಆರೋಗ್ಯ ಗುರಿಗಳು ಹಾಗೂ ಕಾರ್ಯನೀತಿಗಳು ರೂಪುಗೊಳ್ಳಲು ಇದು ಪ್ರೇರಣೆಯಾಗುವುದೆಂದು ನಿರೀಕ್ಷಿಸಲಾಗಿದೆ. ಜೊತೆಗೆ, ದೇಶದಾದ್ಯಂತ ಚಿಕಿತ್ಸಾ ಸಂಶೋಧನೆಗೆ ಮತ್ತು ತರಬೇತಿಗೆ ಇದೊಂದು ಮಾದರಿಯಾಗುವುದೆಂಬ ಆಶಯವೂ ಇದೆ. ಈ ಮಹತ್ವಾಕಾಂಕ್ಷಿ ಕಾರ್ಯಯೋಜನೆಯು ದೇಶದ ಮುಂಬರುವ ದಿನಗಳ ಆರೋಗ್ಯಸೇವಾ ಅಗತ್ಯಗಳಿಗೆ ಸ್ಪಂದಿಸುವಲ್ಲಿ ದೊಡ್ಡ ಬದಲಾವಣೆಯನ್ನೇ ಉಂಟುಮಾಡಲಿದೆ ಎಂಬ ವಿಶ್ವಾಸವೂ ಇದೆ.

ಹೆಚ್ಚಿನ ಮಾಹಿತಿಗೆ ದಯವಿಟ್ಟು ಸಂಪರ್ಕಿಸಿ: ಪ್ರೊಫೆಸರ್ ಫಣೀಂದ್ರ ಯಲವರ್ತಿ (yalavarthy@iisc.ac.in).

ಐ.ಐ.ಎಸ್ ಸಿ. ಬಗ್ಗೆ:
ಉದ್ಯಮಿ ಜಮಷೇಟಜಿ ನಸರ್ ವಾಂಜಿ ಟಾಟಾ, ಮೈಸೂರು ರಾಜವಂಶಸ್ಥ ಕುಟುಂಬ ಹಾಗೂ ಭಾರತ ಸರ್ಕಾರದ ದೂರದರ್ಶಿತ್ವದಿಂದ ಕೂಡಿದ ಸಹಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ). 1909ರಲ್ಲಿ ಸ್ಥಾಪನೆಗೊಂಡಿತು. ಆರಂಭದಿಂದಲೂ ಸಂಸ್ಥೆಯು ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೂಲಭೂತ ಜ್ಞಾನ ಶೋಧನೆಗೆ ಹಾಗೂ ಸಂಶೋಧನೆಗಳ ಫಲಿತಾಂಶವನ್ನು ಕೈಗಾರಿಕಾ ಮತ್ತು ಸಾಮಾಜಿಕ ಉಪಯೋಗಗಳಿಗೆ ಅನ್ವಯಿಸುವುದಕ್ಕೆ ಸಮತೋಲಿತ ಆದ್ಯತೆ ಕೊಡುತ್ತಾ ಮುನ್ನಡೆಯುತ್ತಿದೆ. ಸಂಸ್ಥೆಯು 2018ರಲ್ಲಿ ಭಾರತ ಸರ್ಕಾರದಿಂದ ‘ಇನ್ಸ್ ಟಿಟ್ಯೂಷ್ ಆಫ್ ಎಮಿನೆನ್ಸ್’ (ಐಒಇ- ಪರಿಣತ ಸಂಸ್ಥೆ) ಎಂದು ಆಯ್ಕೆಯಾಗಿದೆ. ಪ್ರಪಂಚದ ವಿಶ್ವವಿದ್ಯಾಲಯಗಳ ರಾಂಕಿಂಗ್ ಪಟ್ಟಿಯಲ್ಲಿ ನಿರಂತರವಾಗಿ ಭಾರತದ ಅಗ್ರಮಾನ್ಯ ಶೈಕ್ಷಣಿಕ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗುತ್ತಾ ಬಂದಿದೆ. ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿ ರಾಂಕಿಂಗ್-2022ರ ಪ್ರಕಾರ, ಐ.ಐ.ಎಸ್ ಸಿ.ಯು ಸಂಶೋಧನೆಯ ಪ್ರಭಾವಗಳನ್ನು ಸೂಚಿಸುವ ವಿಭಾಗವಾರು ಸೈಟೇಷನ್ ಗಳ ಅನುಸಾರ ಇಡೀ ಪ್ರಪಂಚದಲ್ಲೇ ಮೊದಲ ಸ್ಥಾನಕ್ಕೆ ಪಾತ್ರವಾಗಿದೆ.

ಮಾಧ್ಯಮ ಸಂಪರ್ಕ:
ಐ.ಐ.ಎಸ್ ಸಿ. ಸಂವಹನ ಕಚೇರಿ | news@iisc.ac.in
ಸೌಮ್ಯ ಪಿ. | Soumya.P@genesis-bcw.com

—000—