ಎಚ್.ಎ.ಎಲ್.-ಐ.ಐ.ಎಸ್.ಸಿ. ಕೌಶಲಾವೃದ್ಧಿ ಕೇಂದ್ರದ ತರಬೇತಿ ಕಾರ್ಯಾಗಾರ ಆರಂಭ


ಎಚ್.ಎ.ಎಲ್. ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ಸಹಭಾಗಿತ್ವದಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಕೌಶಲಾಭಿವೃದ್ಧಿ ಕೇಂದ್ರದಲ್ಲಿ (ಎಸ್.ಡಿ.ಸಿ.) ಐಒಟಿ ಮತ್ತು ಎಂಬೆಡೆಡ್ ಆನ್ವಯಿಕತೆಗಳ ಕುರಿತು ಏರ್ಪಡಿಸಲಾಗಿರುವ ತರಬೇತಿ ಕಾರ್ಯಾಗಾರವನ್ನು 2020ರ ಡಿಸೆಂಬರ್ 7ರ ಸೋಮವಾರ ಉದ್ಘಾಟಿಸಲಾಯಿತು.

ಎಚ್.ಎ.ಎಲ್. ನಿರ್ದೇಶಕ (ಮಾನವ ಸಂಪನ್ಮೂಲ ವಿಭಾಗ)ರಾದ ಶ್ರೀ ಅಲೋಕ್ ವರ್ಮಾ ಉದ್ಘಾಟನೆ ನೆರವೇರಿಸಿದರು. ಸಂಸ್ಥೆಯ  ಪ್ರಧಾನ ವ್ಯವಸ್ಥಾಪಕ (ಎಚ್.ಆರ್.-ಸಿ.ಎಸ್.ಆರ್ & ಎಫ್.ಎಂ.)ರಾದ ವೆಂಕಟೇಶ್ವರ ರಾವ್ ಮತ್ತು ಐ.ಐ.ಎಸ್.ಸಿ. ಡೀನ್ (ಯೋಜನೆ ಮತ್ತು ಮೂಲಸೌಕರ್ಯ) ಪ್ರೊ.ಎಸ್.ಕೆ.ಸತೀಶ್, ಈ ಸಂದರ್ಭದಲ್ಲಿ ಇದ್ದರು.

ವರ್ಮಾ ಅವರು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, “ಇದೊಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ತರಬೇತುದಾರರಿಗೆ ತರಬೇತಿ ನೀಡುವ ಮೂಲಕ ದೇಶದ ಅಗತ್ಯಕ್ಕೆ ಸ್ಪಂದಿಸುತ್ತದೆ. ಜೊತೆಗೆ, ಇದು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ತರಬೇತಿ ಕೊಡಲು ಅನುಕೂಲ ಮಾಡಿಕೊಡುತ್ತದೆ” ಎಂದರು.

ಕೌಶಲ ಅಭಿವೃದ್ಧಿ ಕೇಂದ್ರದ (ಎಸ್.ಡಿ.ಸಿ.) ಸಂಚಾಲಕ ಡಾ.ಸುಬ್ಬಾರೆಡ್ಡಿ ಅವರು ಮಾತನಾಡಿ, “ಮೊದಲ ತಂಡದವರಿಗೆ ಐದು ಕೋರ್ಸ್ ಗಳನ್ನು  ಲಭ್ಯವಾಗಿಸುವ ಮೂಲಕ ಕೇಂದ್ರದ ಚಟುವಟಿಕೆಗಳು ಆರಂಭವಾಗಲಿವೆ. 2020ರ ಡಿಸೆಂಬರ್ ನಿಂದ 2021ರ ಫೆಬ್ರುವರಿವರೆಗೆ ವರ್ಚ್ಯುಯಲ್ ಮಾದರಿಯಲ್ಲಿ ತರಬೇತಿ ಚಟುವಟಿಕೆಗಳು ನಡೆಯುತ್ತವೆ” ಎಂದು ತಿಳಿಸಿದರು.

ಎಚ್.ಎ.ಎಲ್.-ಐ.ಐ.ಎಸ್.ಸಿ. ಕೌಶಲ ಅಭಿವೃದ್ಧಿ ಕೇಂದ್ರವನ್ನು (ಎಸ್.ಡಿ.ಸಿ.) ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು 2020ರ ಆ.13ರಂದು ವಿಧ್ಯುಕ್ತವಾಗಿ ಉದ್ಘಾಟಿಸಿದ್ದರು. ‘ಆತ್ಮನಿರ್ಭರ’ ಉಪಕ್ರಮದ ಗುರಿಗಳನ್ನು ಗಮನದಲ್ಲಿರಿಸಿಕೊಂಡು ವೈಮಾಂತರಿಕ್ಷ ಹಾಗೂ ತಯಾರಿಕಾ ಸಂಬಂಧಿ ವಲಯಗಳಿಗೆ ಸಂಬಂಧಿಸಿದ ಅತ್ಯಾಧುನಿಕ ಕೌಶಲಗಳನ್ನು ಕೊಡುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.

ಈ ಕೇಂದ್ರವು ಚಳ್ಳಕೆರೆಯಲ್ಲಿರುವ ಸಂಸ್ಥೆಯ 1500 ಎಕರೆಗಳ ಕ್ಯಾಂಪಸ್ ನಲ್ಲಿ ಇದೆ. ಇದು ವಿಜ್ಞಾನ ,ಮತ್ತು ತಂತ್ರಜ್ಞಾನ ನಗರವೆಂದೇ ಹೆಸರಾಗಿರುವ ಬೆಂಗಳೂರಿನ ಐ.ಐ.ಎಸ್.ಸಿ. ಕ್ಯಾಂಪಸ್ ನಿಂದ ಸುಮಾರು 225 ಕಿ.ಮೀ. ಅಂತರದಲ್ಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ.), ಭಾಭಾ ಪರಮಾಣು ಸಂಶೋಧನಾ ಕೇಂದ್ರ (ಬಾರ್ಕ್)  ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳೊಂದಿಗೆ (ಇಸ್ರೊ) ಈ ಕೇಂದ್ರವು ನಿಕಟವಾಗಿ ಕೆಲಸ ಮಾಡಲಿದೆ.

ದೇಶದಲ್ಲಿರುವ ಕೌಶಲಾಭಿವೃದ್ಧಿಯ ಭಾರೀ ಕೊರತೆಯನ್ನು ನೀಗುವ ಸಲುವಾಗಿ ತರಬೇತುಗೊಂಡವರ ದೊಡ್ಡ ಪಡೆಯನ್ನು ಸೃಷ್ಟಿಸಬೇಕೆಂಬ ಗುರಿಯನ್ನು ಐ.ಐ.ಎಸ್.ಸಿ. ಹೊಂದಿತ್ತು. ಈ ಕಾರ್ಯಯೋಜನೆಯಲ್ಲಿ ಕೈಜೋಡಿಸುವಂತೆ ಎಚ್.ಎ.ಎಲ್. ಅನ್ನು 2016ರಲ್ಲಿ ಕೋರಲಾಯಿತು. ಸಮಾನ ಸಾಮಾಜಿಕ ಕಾಳಜಿ ಹೊಂದಿದ್ದ ಎಚ್.ಎ.ಎಲ್. ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್.) ಅಡಿಯಲ್ಲಿ ಇದಕ್ಕೆ ಅನುದಾನ ಒದಗಿಸಲು ಒಪ್ಪಿಗೆ ಸೂಚಿಸಿತು. ಆನಂತರ, 2016ರ ಮಾರ್ಚ್ 28ರಂದು ಕೌಶಲ ಅಭಿವೃದ್ಧಿ ಕೇಂದ್ರ ನಿರ್ಮಾಣಕ್ಕಾಗಿ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಯಿತು. ಮುಂದಿನ ಹಂತದಲ್ಲಿ 2016ರ ಅಕ್ಟೋಬರ್ 27ರಂದು ನಿರ್ಮಾಣ ಕಾರ್ಯ ಶುರುವಾಯಿತು. ಒಟ್ಟು 73.7 ಕೋಟಿ ರೂಪಾಯಿಗಳ ಈ ಕಾರ್ಯಯೋಜನೆಯು ಕಟ್ಟಡಗಳ ನಿರ್ಮಾಣ ಮತ್ತು ಪ್ರಯೋಗಾಲಯ ಉಪಕರಣಗಳ ಅಳವಡಿಕೆಯನ್ನು ಒಳಗೊಂಡಿದೆ.

75,000 ಚದುರ ಅಡಿ ವಿಸ್ತೀರ್ಣದಲ್ಲಿರುವ ಈ ಕೇಂದ್ರವು ಅತ್ಯಾಧುನಿಕ ಪ್ರಯೋಗಾಲಯಗಳು, ತರಬೇತಿ ಕೊಠಡಿಗಳು ಮತ್ತು 250 ಆಸನಗಳ ಸಾಮರ್ಥ್ಯದ ಸಭಾ ಭವನವನ್ನು ಹೊಂದಿರುತ್ತದೆ. 250 ತರಬೇತಿ ಅಭ್ಯರ್ಥಿಗಳು ಹಾಗೂ ಬೋಧನಾ ಸಿಬ್ಬಂದಿಗೆ ವಸತಿ ಸೌಕರ್ಯ ಕೂಡ ಇದೆ. 2011ರಿಂದ ನಡೆದುಕೊಂಡು ಬರುತ್ತಿರುವ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಇದೇ ಕೇಂದ್ರದಲ್ಲಿ ನಡೆಸಲಾಗುತ್ತದೆ (ಈ ಕಾರ್ಯಕ್ರಮದಡಿ ಇದುವರೆಗೆ ಪ್ರೌಢಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದ 13,500ಕ್ಕೂ ಹೆಚ್ಚು ವಿಜ್ಞಾನ ಮತ್ತು ಗಣಿತ ಬೋಧಕರಿಗೆ ತರಬೇತಿ ಕೊಡಲಾಗಿದೆ).

ಈ ಕೇಂದ್ರವು ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಆರಂಭಿಸಿದ ಮೇಲೆ ಪ್ರತಿವರ್ಷವೂ 1000 ತರಬೇತುದಾರರಿಗೆ ತರಬೇತಿ ಕೊಡಬಹುದಾಗಿರುತ್ತದೆ. ತರಬೇತುದಾರರಿಗೆ ತರಬೇತಿ ಕೊಟ್ಟರೆ ಅವರು ಮತ್ತಷ್ಟು ಮಗದಷ್ಟು ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಾರೆ. ಹೀಗಾಗಿ ತರಬೇತಿದಾರರ ತರಬೇತಿಗೆ ಗಮನ ಕೇಂದ್ರೀಕರಿಸಲಾಗಿದೆ. ಮುಂಬರುವ ದಿನಗಳಲ್ಲಿ- ಸಂಯೋಜಿತ ವಸ್ತುಗಳು, ಸಂವೇದಕಗಳು ಮತ್ತು ಐಒಟಿ, ತಯಾರಿಕಾ ವ್ಯವಸ್ಥೆಗಳು- ಈ ಮೂರು ವಲಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಬೇಕೆಂದು ಎಚ್.ಎ.ಎಲ್.- ಐ.ಐ.ಎಸ್.ಸಿ. ತಾಂತ್ರಿಕ ಸಮಿತಿ ನಿರ್ಧರಿಸಿದೆ.

ಅನುಭವಿ ಎಂಜಿನಿಯರುಗಳು, ಮೇಲ್ವಿಚಾರಕರು ಹಾಗೂ ವಿವಿಧ ತಾಂತ್ರಿಕ ಸಂಸ್ಥೆಗಳ ಬೋಧಕ ಸಿಬ್ಬಂದಿಯು ಈ ಕಾರ್ಯಕ್ರಮಗಳ ಫಲಾನುಭವಿಗಳಾಗಲಿದ್ದಾರೆ. ತರಬೇತಿಯು, ಕೌಶಲ ವೃದ್ಧಿ ಹಾಗೂ ಹೊಸ ಕೌಶಲಗಳ ಕಲಿಕೆ, ಇವೆರಡನ್ನೂ ಒಳಗೊಂಡಿರುತ್ತದೆ. ತರಬೇತಿ ಅಭ್ಯರ್ಥಿಗಳು ಕೋರ್ಸ್ ನ ಶೇ 50ಕ್ಕೂ ಹೆಚ್ಚು ಅವಧಿಯನ್ನು ಪ್ರಯೋಗಗಳನ್ನು ಮಾಡುವುದಕ್ಕೆ ಮೀಸಲಿಡಬೇಕಾಗುತ್ತದೆ. ಐ.ಐ.ಎಸ್.ಸಿ., ಎಚ್.ಎ.ಎಲ್. ಸೇರಿದಂತೆ ಇತರ ಮುಂಚೂಣಿ ಸಂಸ್ಥೆಗಳಿಗೆ ಸೇರಿದವರನ್ನು ಬೋಧಕರಿಗೆ ಆಯ್ಕೆ ಮಾಡಲಾಗುತ್ತದೆ.

ವೈಮಾಂತರಿಕ್ಷ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಲಯಗಳಿಗೆ ಸಂಬಂಧಿಸಿದಂತೆ ಎಸ್.ಡಿ.ಸಿ. ತರಬೇತಿ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. ಇವೆಲ್ಲವನ್ನೂ “ಭಾರತದಲ್ಲೇ ತಯಾರಿಸಿ” ಪರಿಕಲ್ಪನೆಯಡಿ ವಿನ್ಯಾಸಗೊಳಿಸಲಾಗಿದೆ., ನವರತ್ನ ಸ್ಥಾನಮಾನದ ಸಾರ್ವಜನಿಕ ವಲಯದ ಕಂಪನಿಯಾದ ಎಚ್.ಎ.ಎಲ್. ಹಾಗೂ ಕೇಂದ್ರ ಸರ್ಕಾರದ ಅನುದಾನಿತ ಉತ್ಕೃಷ್ಠ ಸಂಸ್ಥೆಯಾದ ಐ.ಐ.ಎಸ್.ಸಿ., ದೇಶದ ಈ ಎರಡು ಹೆಸರಾಂತ ಸಂಸ್ಥೆಗಳು ಈ ಸಹಭಾಗಿತ್ವದ ಮೂಲಕ  ಈ ಮೇಲೆ ತಿಳಿಸಿದ ವಲಯಗಳಲ್ಲಿ ಕೌಶಲ ವೃದ್ಧಿ  ಮತ್ತು ಅಭಿವೃದ್ಧಿ ಸಾಧಿಸುವ ಪಥದಲ್ಲಿ ಮುನ್ನಡೆದಿವೆ.

ಸಂಪರ್ಕಿಸಿ:

ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿ (pro@iisc.ac.in); ಸಂವಹನ ಕಚೇರಿ (news@iisc.ac.in)

ತಾಂತ್ರಿಕ ಮಾಹಿತಿ: ಡಾ.ಸುಬ್ಬಾರೆಡ್ಡಿ ಬಿ., ಸಂಚಾಲಕರು, ಎಚ್.ಎ.ಎಲ್.-ಐ.ಐ.ಎಸ್.ಸಿ.- ಎಸ್.ಡಿ.ಸಿ. (office.sdc@iisc.ac.in)

ಐ.ಐ.ಎಸ್.ಸಿ.ಗೆ ಸಿ.ಎಸ್.ಆರ್. ದೇಣಿಗೆ ನೀಡಲು: ಡಾ.ರಾಮ್ ತುರಗ, 94489 87200 (cdc.odaa@iisc.ac.in)

—000—