ಬಹುಉದ್ದೇಶಿತ ಸಂಚಾರಿ ನೋಡಲ್-ಹಬ್ ಪ್ರಯೋಗಾಲಯ


ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ಎಂ4 ನೋಡಲ್ ಹಬ್’ ಎಂಬ ಸಂಚಾರಿ ರೋಗ ದೃಢೀಕರಣ ಪ್ರಯೋಗಾಲಯ (ಡಯಾಗ್ನೋಸ್ಟಿಕ್ ಲ್ಯಾಬ್)ವನ್ನು ವಿನ್ಯಾಸಗೊಳಿಸಿದೆ. ಇದು ಎಂಐಟಿಆರ್ ಪ್ರಯೋಗಾಲಯಗಳ ಸರಣಿಯ ಭಾಗವಾಗಿದೆ. ಈ ಸರಣಿಯ ಮೂರು ಸ್ಯಾಟಲೈಟ್ ಸಂಚಾರಿ ಪ್ರಯೋಗಾಲಯಗಳನ್ನು 2020ರ ಜುಲೈನಲ್ಲಿ ಸಿದ್ಧಗೊಳಿಸಲಾಗಿತ್ತು.

ಎಸ್.ಐ.ಡಿ., ಸ್ವಯಂ ಸೇವಾ ಸಂಸ್ಥೆಯಾದ ಯುನೈಟೆಡ್ ವೇ ಬೆಂಗಳೂರು ಹಾಗೂ ಕಾರ್ಪೊರೇಟ್ ಪಾಲುದಾರರಾದ ಪಾರ್ ಎಕ್ಸೆಲ್, ಸ್ಟೇಟ್ ಸ್ಟ್ರೀಟ್ ಮತ್ತು ಭಾರತ್ ಬೆನ್ಜ್ ಗಳ ಸಹಯೋಗದಲ್ಲಿ ಇದನ್ನು ಸಿದ್ಧಗೊಳಿಸಲಾಗಿದೆ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ದೇಶದೆಲ್ಲೆಡೆ ಸಂಶೋಧನಾ ಸಂಸ್ಥೆಗಳು ಕೋವಿಡ್-19 ವಿರುದ್ಧ ಹೋರಾಡಲು ಮುಂದಾದವು. ಸುಲಭ ದರದಲ್ಲಿ ವೈರಾಣು ಪರೀಕ್ಷಾ ಸೌಲಭ್ಯಗಳನ್ನು ಸಿದ್ಧಪಡಿಸುವುದು ಕೂಡ ಪ್ರಮುಖ ಸವಾಲುಗಳಲ್ಲಿ ಒಂದಾಗಿದ್ದಿತು.

ಇಂತಹ ಪ್ರಯೋಗಾಲಯವು ಇದೇ ಮೊದಲನೆಯದಾಗಿದೆ, ಇದು ಬಿಎಸ್ಎಲ್-2+ ಮೂಲಸೌಕರ್ಯ ಹೊಂದಿದೆ. ಮಿನಿ-ಸ್ಪಿನ್, ವೊರ್ಟೆಕ್ಸ್ ಮಿಕ್ಸರ್, ಸೆಂಟ್ರಿಫ್ಯೂಜ್ ನಂತಹ ಉಪಕರಣಗಳು, ಪಿಪೆಟ್ ಹಾಗೂ ನಾವೆಲ್ ಕೊರೋನಾವೈರಸ್ ಸಾರ್ಸ್-ಕೋವ್-2 ಪತ್ತೆಯಲ್ಲಿ ಸುವರ್ಣ ಪ್ರಮಾಣೀಕರಣ ಎನ್ನಲಾಗಿರುವ ಆರ್.ಟಿ.-ಪಿ.ಸಿ.ಆರ್. ಪರೀಕ್ಷೆ ನಡೆಸಲು ಬೇಕಾದ ಉಪಕರಣಗಳು ಇದರಲ್ಲಿ ಸೇರಿವೆ.

ಈ ಮುಂಚಿನ ಸಂಚಾರಿ ಪ್ರಯೋಗಾಲಯಗಳಲ್ಲಿ ಮಾದರಿ ಸಂಗ್ರಹ ಮತ್ತು ನಿಷ್ಕ್ರಿಯಗೊಳಿಸುವಿಕೆ (ಎ1). ಆರ್.ಎನ್.ಎ. ಎಕ್ಸ್ ಟ್ರ್ಯಾಕ್ಷನ್ (ಎಂ2), ಮತ್ತು ಆರ್.ಟಿ.-ಪಿ.ಸಿ.ಆರ್. ಪರೀಕ್ಷೆಗೆ (ಎಂ3) ಬೇಕಾದ ಸೌಕರ್ಯಗಳು ಇದ್ದವು. ಇದೀಗ ಎಂ4 ನೋಡಲ್ ಹಬ್ ಅನ್ನು ಭಾರತ್ ಬೆನ್ಜ್ ನ ಚಾಸೀಸ್ ಮೇಲೆ 20 ಅಡಿ ಉದ್ದದ ಕಂಟೇನರ್ ಬಳಸಿ ವಿನ್ಯಾಸಗೊಳಿಸಲಾಗಿದೆ. ಮಾದರಿಗಳು ಮತ್ತು ಕಿಟ್ ಗಳ ಸಂಗ್ರಹ, ಜೈವಿಕ ತ್ಯಾಜ್ಯ ನಿರ್ವಹಣೆ ಹಾಗೂ ಮಾಸ್ಟರ್ ಮಿಕ್ಸ್ ತಯಾರಿಕೆಗೆ ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ. ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್ ಇತ್ತೀಚೆಗೆ ಸಮರ್ಪಿಸಿದ CRISPR FELUDA ಪರೀಕ್ಷೆಯೊಂದಿಗೆ ಇದು ಸ್ವತಂತ್ರ ಪರೀಕ್ಷಾ ಘಟಕವಾಗಿಯೂ ಕಾರ್ಯನಿರ್ವಹಿಸಬಲ್ಲದು. ಅಲ್ಲದೇ, ಸಂಶೋಧನೆ ಹಾಗೂ ಲಸಿಕಾ ಆಂದೋಲನಗಳಲ್ಲಿ ಕೂಡ ಇದನ್ನು ಬಳಸಬಹುದು.

ಇದಕ್ಕೆ ಸಂಚಾರಿ ಸೋಂಕು ಪರೀಕ್ಷೆ ಮತ್ತು ವರದಿ (ಎಂಐಟಿಆರ್) ಪ್ರಯೋಗಾಲಯಗಳು ಎಂದು ಹೆಸರಿಸಲಾಗಿದೆ. ಐ.ಐ.ಎಸ್.ಸಿ. ತಂಡವು ಎಸ್.ಐ.ಡಿ. ಪರಿಪೋಷಕ ನವೋದ್ಯಮವಾದ ಷಣ್ಮುಖ ಇನ್ನೊವೇಷನ್ಸ್ ನೊಂದಿಗೆ ಈ ಸಂಚಾರಿ ಪ್ರಯೋಗಾಲಯಗಳನ್ನು ಸಿದ್ಧಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಅನುಮೋದನೆಯನ್ನು ಇದು ಹೊಂದಿದೆ.

“ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಲು ಹಲವಾರು ಘಟಕಗಳು ಅತ್ಯಗತ್ಯವಾಗಿರುತ್ತವೆ. ಈ ಎಲ್ಲಾ ಘಟಕಗಳೂ ಈ ಉತ್ಕೃಷ್ಠ ಗುಣಮಟ್ಟದ ಸಂಚಾರಿ ಪ್ರಯೋಗಾಲಯ ಉಪಕ್ರಮದಲ್ಲಿ ಸಂಯೋಜನೆಗೊಂಡಿವೆ. ಅಂದರೆ, ಪರೀಕ್ಷೆಗಳು (ವಿವಿಧ ಮಾದರಿಗಳು), ಲಸಿಕೆ ಹಾಕುವುದು ಹಾಗ ಲಸಿಕೆಯ ಕ್ಷಮತೆಯ ಮೇಲೆ ನಿಗಾ ಇಡುವುದು, ಇವೆಲ್ಲವೂ ಇದರಲ್ಲಿ ಅಡಕಗೊಂಡಿವೆ. ಕೋವಿಡ್-19 ವಿರುದ್ಧದ ಹೋರಾಟವು ವಿವಿಧ ಸಂಸ್ಥೆಗಳು, ಉದ್ಯಮಶೀಲರು ಹಾಗೂ ಶೈಕ್ಷಣಿಕ ಸಂಸ್ಥೆಗಳ ನಡುವೆ ಪರಸ್ಪರ ಸಹಕಾರಕ್ಕೆ ಎಡೆಮಾಡಿಕೊಟ್ಟಿರುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ” ಎನ್ನುತ್ತಾರೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ.ಕೆ.ವಿಜಯ ರಾಘವನ್.

ಸ್ವಯಂ ಸೇವಾ ಸಂಸ್ಥೆಯಾದ ಯುನೈಟೆಡ್ ವೇ ಬೆಂಗಳೂರು (UWBe) ತನ್ನ ಕಾರ್ಪೊರೇಟ್ ಪಾಲುದಾರರಿಂದ ಸಿ.ಎಸ್.ಆರ್. ಸಹಕಾರ ಲಭ್ಯವಾಗಿಸುವ ಮೂಲಕ ಈ ನೋಡಲ್ ಹಬ್ ರೂಪಿಸಲು ಅನುವು ಮಾಡಿಕೊಟ್ಟಿದೆ. “ಸಮುದಾಯಗಳ ಕಾಳಜಿಯ ಸಾಮರ್ಥ್ಯವನ್ನು ಸಶಕ್ತಗೊಳಿಸುವುದು ನಮ್ಮ ಧ್ಯೇಯವಾಗಿದೆ. ಇದೇ ಧ್ಯೇಯದೊಂದಿಗೆ ಈ ಉಪ್ರಕಮವನ್ನು ಸಾಕಾರಗೊಳಿಸಲು ಸಹಕರಿಸಿದ ಕಾರ್ಪೊರೇಟ್ ಕಂಪನಿಗಳಿಗೆ ನಾವು ಆಭಾರಿಗಳಾಗಿದ್ದೇವೆ” ಎಂದು ಯುನೈಟೆಡ್ ವೇ ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಕೃಷ್ಣನ್ ಹೇಳಿದ್ದಾರೆ.

 “ಕೋವಿಡ್-19 ಸನ್ನಿವೇಶವು ವೈದ್ಯಕೀಯ ಉದ್ಯಮಕ್ಕೆ ಗಮನಾರ್ಹ ಸವಾಲುಗಳನ್ನು ಒಡ್ಡಿದೆ” ಎನ್ನುತ್ತಾರೆ ಪಾರ್ ಎಕ್ಸೆಲ್ ಹಿರಿಯ ಉಪಾಧ್ಯಕ್ಷರೂ ಆದ ಇಂಡಿಯಾ ಕಂಟ್ರಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ವ್ಯಾಸ್. “ಮುಂಚೂಣಿ ಜಾಗತಿಕ ಚಿಕಿತ್ಸಾ ಸಂಶೋಧನೆ ಸಂಸ್ಥೆಯಾದ (ಸಿ.ಆರ್.ಒ.) ಪಾರ್ ಎಕ್ಸೆಲ್ ಕೋವಿಡ್-19 ವಿರುದ್ಧ ಹೋರಾಡಬಲ್ಲ 150ಕ್ಕೂ ಹೆಚ್ಚು ಥೆರಪಿಗಳನ್ನು ಅಭಿವೃದ್ಧಿಪಡಿಸಿದೆ. ಇದೀಗ ಈ ಉಪ್ರಕಮದಲ್ಲಿ ಭಾಗಿಯಾಗಿರುವುದಕ್ಕೆ ತುಂಬಾ ಸಂತಸವಾಗಿದೆ’ ಎಂದೂ ಅವರು ಹೇಳಿದ್ದಾರೆ.

“ಕೋವಿಡ್-19 ಹಬ್ಬುವುದನ್ನು ಅಥವಾ ಬೇರೆ ಯಾವುದೇ ಆರೋಗ್ಯ ಸಂಕಷ್ಟ ಸ್ಥಿತಿಯನ್ನು ನಿರ್ವಹಿಸುವಲ್ಲಿ ಬಹು-ಹಿತಾಸಕ್ತಿದಾರರ ಸಹಯೋಗವು ಅತ್ಯುತ್ತಮ ಮಾರ್ಗೋಪಾಯ ಎಂಬುದು ನಮ್ಮ ನಂಬಿಕೆಯಾಗಿದೆ. ಸೋಂಕಿನ ವಿರುದ್ಧದ ಹೋರಾಟದಲ್ಲಿ ಈ ಸಹಯೋಗದ ಮೂಲಕ ದೇಶಸೇವೆಯ ಕಾರ್ಯದಲ್ಲಿ ಕೈಜೋಡಿಸುವುದಕ್ಕೆ ಖುಷಿಯಾಗುತ್ತಿದೆ” ಎನ್ನುತ್ತಾರೆ ಸ್ಟೇಟ್ ಸ್ಟ್ರೀಟ್ ಇಂಡಿಯಾ ಕಂಟ್ರಿ ಮುಖ್ಯಸ್ಥರಾದ ಶ್ರೀ ಪೂಲ್ಸ್.

“ಐ.ಐ.ಎಸ್.ಸಿ., ಎಸ್.ಐ.ಡಿ., ಷಣ್ಮುಖ ಇನ್ನೊವೇಷನ್ಸ್, ಹೊರಗಿನಿಂದ ಸಹಕಾರ ನೀಡಿದ ಆರ್.ಜಿ.ಯು.ಎಚ್.ಎಸ್. ತಜ್ಞರು, ಪಿ.ಎಸ್.ಎ. ಕಚೇರಿ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಸಂಸ್ಥೆ ಮತ್ತು ಕಾರ್ಪೊರೇಟ್ ಸಿ.ಎಸ್.ಆರ್. ಪ್ರಾಯೋಜಕರ ಸಹಕಾರವಿಲ್ಲದೆ ಲಾಕ್ ಡೌನ್ ನಂತಹ ಇಂತಹ ಸಂದರ್ಭದಲ್ಲಿ ಈ ಕಾರ್ಯ ಸಾಧ್ಯವಾಗುತ್ತಿರಲಿಲ್ಲ” ಎನ್ನುತ್ತಾರೆ ಐ.ಐ.ಎಸ್.ಸಿ. ಇನ್ಸ್ ಟ್ರುಮೆಂಟೇಷನ್ ವಿಭಾಗದ ಸಹ ಪ್ರೊಫೆಸರ್ ಹಾಗೂ ಮೊಬೈಲ್ ಲ್ಯಾಬ್ಸ್   ಕಾರ್ಯಯೋಜನೆಯ ಪ್ರಧಾನ ಅವಲೋಕನರರಾದ ಪ್ರೊಫೆಸರ್ ಸಾಯಿ ಶಿವ ಗೋರ್ತಿ.

—-000—-