ಭಾರತದಲ್ಲಿ ಬಳ್ಳಿ ಹಾವಿನ ಹೊಸ ನಮೂನೆಗಳು ಪತ್ತೆ


ಭಾರತದ ಪರ್ಯಾಯ ದ್ವೀಪ ಪ್ರದೇಶ ವ್ಯಾಪ್ತಿಯಲ್ಲಿ ಬಳ್ಳಿ ಹಾವುಗಳು ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಹಾವುಗಳಾಗಿವೆ. ಅಲ್ಪಸ್ವಲ್ಪ ಹಸಿರು ಕಂಡುಬರುವ ನಗರದ ಅಂಚಿನ ಪ್ರದೇಶಗಳಲ್ಲೂ ಇವು ಕಂಡುಬರುತ್ತವೆ. ಈ ಪರ್ಯಾಯದ್ವೀಪದ ಶುಷ್ಕ ಪ್ರದೇಶಗಳಲ್ಲಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಇವು ವ್ಯಾಪಕವಾಗಿ ಕಂಡುಬರುತ್ತವೆ ಎಂಬುದು ಈ ಮುಂಚಿನ ಅಧ್ಯಯನಗಳಿಂದ ತಿಳಿದಿತ್ತು. ಇದೀಗ ನಡೆದಿರುವ ಶೋಧನೆಗಳಿಂದ, ಈ ಹಾವುಗಳಲ್ಲಿ ಹಲವು ನಮೂನೆಗಳಿವೆ ಎಂಬುದು ಪತ್ತೆಯಾಗಿದೆ. ಭಾರತೀಯ ವಿಜ್ಞಾನ ಕೇಂದ್ರದ (ಐ.ಐ.ಎಸ್ ಸಿ.) ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ (ಸಿ.ಇ.ಎಸ್.) ಸಂಶೋಧಕರ ತಂಡವು ಪರ್ಯಾಯದ್ವೀಪ ಪ್ರದೇಶದಲ್ಲಿ ಬಳ್ಳಿ ಹಾವಿನ ವಿವಿಧ ನಮೂನೆಗಳನ್ನು ಗುರುತಿಸಿ, ಅವುಗಳ ಬಗ್ಗೆ ವಿವರಣೆ ನೀಡಿದೆ.

ಸಂಸ್ಥೆಯಲ್ಲಿ ಹಿಂದೆ ವಿದ್ಯಾರ್ಥಿಯಾಗಿದ್ದ ಅಶೋಕ್ ಮಲ್ಲಿಕ್ ಅವರ ಪಿಎಚ್.ಡಿ. ಸಂಶೋಧನೆಯ ಭಾಗವಾಗಿ ಭಾರತದಾದ್ಯಂತ ಹಲವೆಡೆಗಳಿಗೆ ಕ್ಷೇತ್ರಭೇಟಿ ನೀಡಿದ್ದ ತಂಡವು ಈ ಹಾವುಗಳ ಲಕ್ಷಣಾವಳಿ ಹಾಗೂ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿದೆ. ಆ ಮೂಲಕ ದೇಶದಲ್ಲಿ ಬಳ್ಳಿ ಹಾವುಗಳ ಇರುವಿಕೆಯು ಹರಡಿಕೊಂಡಿರುವ ಬಗೆ ಮತ್ತು ವೈವಿಧ್ಯ ಕುರಿತು ಅರ್ಥೈಸಿಕೊಂಡಿದೆ.


Ahaetulla lineages in peninsular India and Sri Lanka showing side-by-side comparison of their superficial head morphology and maxillary dentition

ಏಷ್ಯಾ ಖಂಡದಾದ್ಯಂತ ಕಂಡುಬರುವ ಏಷ್ಯನ್ ಬಳ್ಳಿ ಹಾವುಗಳು ‘ಅಹೇಟುಲ್ಲಾ’ ಹಾಗೂ ಇತ್ತೀಚೆಗೆ ವಿವರಿಸಲಾಗಿರುವ ‘ಪ್ರೊಅಹೇಟುಲ್ಲಾ’ ವಂಶ ಪ್ರಕಾರಗಳಿಗೆ ಒಳಪಡುತ್ತವೆ. ಸಂಶೋಧನೆಯಲ್ಲಿ ತೊಡಗಿದ ತಂಡಕ್ಕೆ ಭಾರತದಲ್ಲಿನ ಸಾಮಾನ್ಯ ಹಸಿರು ಬಳ್ಳಿ ಹಾವು (ಅಹೇಟುಲ್ಲಾ ನಸೂಟ) ಸಂಕೀರ್ಣ ಪ್ರಭೇದವೆಂದು ಕಂಡುಬಂದಿರುವುದು ಅಚ್ಚರಿ ಉಂಟುಮಾಡಿದೆ. ಇವುಗಳಲ್ಲಿ ಸಣ್ಣ ಶರೀರದ ಹಾಗೂ ಗಿಡ್ಡ ಮೂಗಿನ ನಾಲ್ಕು ನಮೂನೆಗಳನ್ನು ಅವರು ಗುರುತಿಸಿದ್ದಾರೆ. ವಾಯವ್ಯ ಪಶ್ಚಿಮ ಘಟ್ಟಗಳ ಬಳ್ಳಿ ಹಾವು (ಅಹೇಟುಲ್ಲಾ ಬೋರಿಯಾಲಿಸ್), ಫ್ಯಾನ್ಸ್ ವರ್ಥ್ ಬಳ್ಳಿಹಾವು (ಅಹೇಟುಲ್ಲಾ ಫ್ಯಾನ್ಸ್ ವರ್ಥಿ), ಮಲಬಾರ್ ಬಳ್ಳಿ ಹಾವು (ಅಹೇಟುಲ್ಲಾ ಮಲಬಾರಿಕಾ) ಮತ್ತು ಪಶ್ಚಿಮ ಘಟ್ಟಗಳ ಮಳೆಕಾಡುಗಳಲ್ಲಿ ಮಾತ್ರ ಕಂಡುಬರುವ ವಾಲ್ ಬಳ್ಳಿ ಹಾವು (ಅಹೇಟುಲ್ಲಾ ಇಸಾಬೆಲ್ಲಿನ), ಇವೇ ಆ ನಾಲ್ಕು ನಮೂನೆಗಳಾಗಿವೆ. ಲಕ್ಷಣಾವಳಿಯ ದೃಷ್ಟಿಯಿಂದ ಮೇಲ್ನೋಟಕ್ಕೆ ಈ ನಮೂನೆಗಳಲ್ಲಿ ಸಾಮ್ಯತೆ ಇದ್ದರೂ ಭೌಗೋಳಿಕ ನೆಲೆಯ ದೃಷ್ಟಿಯಿಂದ (ಜೀವವೈವಿಧ್ಯ ಹಿನ್ನೆಲೆಯಿಂದ) ವರ್ಗೀಕರಣ ಕಂಡುಬರುತ್ತದೆ. ಲಾಕ್ಷಣಿಕ ದೃಷ್ಟಿಯಿಂದ ಭಿನ್ನವಾಗಿರುವ ಮತ್ತೊಂದು ದೊಡ್ಡ ನಮೂನೆಯಾದ ಉದ್ದ ಮೂಗಿನ ಬಳ್ಳಿ ಹಾವು (ಅಹೇಟುಲ್ಲಾ ಆಕ್ಸಿರಿಂಚಾ) ಭಾರತದ ಪರ್ಯಾಯದ್ವೀಪ ವ್ಯಾಪ್ತಿಯ ತಗ್ಗು ಪ್ರದೇಶಗಳಲ್ಲಿ ಹಾಗೂ ಒಣ ಪ್ರದೇಶಗಳಲ್ಲಿ ಕಂಡುಬರುತ್ತದೆ.


Ahaetulla farnsworthi

‘ಈ ಎಲ್ಲಾ ನಮೂನೆಗಳಿಗೆ ಅವುಗಳ ಆವಾಸ ಸ್ಥಾನವನ್ನು ಅಥವಾ ಲಕ್ಷಣವನ್ನು ಆಧರಿಸಿ ಹೆಸರು ಕೊಡಲಾಗಿದೆ. ಆದರೆ, ‘ಅಹೇಟುಲ್ಲಾ ಫಾರ್ನ್ಸ್ ವರ್ಥಿ ನಮೂನೆಗೆ ನನ್ನ ಪ್ರೇರಕರಾದ ವಿಜ್ಞಾನಿ ಡಾ.ಹ್ಯೂಬರ್ಟ್ ಫಾರ್ನ್ಸ್ ವರ್ಥ್ ಅವರ ಹೆಸರನ್ನು ಇಡಲಾಗಿದೆ’ ಎನ್ನುತ್ತಾರೆ ಸಂಶೋಧಕರ ತಂಡದಲ್ಲಿದ್ದ ಸಿ.ಇ.ಎಸ್. ಸಂಶೋಧಕರಾದ ಅಚ್ಚುತನ್ ಶ್ರೀಕಂಠನ್.

ತಂಡದ ತಜ್ಞರು, ಗುಂಥೆರ್ ಬಳ್ಳಿ ಹಾವಿಗಿಂತ (ಅಹೇಟುಲ್ಲಾ ಡಿಸ್ಪ್ಯಾರ್) ಲಾಕ್ಷಣಿಕ ಹಾಗೂ ಭೌಗೋಳಿಕ ಆವಾಸ ಸ್ಥಾನದ ದೃಷ್ಟಿಯಿಂದ ವಿಭಿನ್ನವಾದ ‘ಟ್ರ್ಯಾವಂಕೋರ್ ಬಳ್ಳಿ ಹಾವನ್ನು (ಅಹೇಟುಲ್ಲಾ ಟ್ರ್ಯಾವಂಕೋರಿಯಾ) ಕೂಡ ಗುರುತಿಸಿದ್ದಾರೆ. ಅಂತಿಮವಾಗಿ, ಪಶ್ಚಿಮಘಟ್ಟಗಳ ಕಂದು ಬಳ್ಳಿ ಹಾವು ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಹಾವಿನ ನಡುವೆ ಲಾಕ್ಷಣಿಕ ವ್ಯತ್ಯಾಸಗಳನ್ನು ಪಟ್ಟಿ ಮಾಡಿದ್ದು, ಪಶ್ಚಿಮ ಘಟ್ಟಗಳ ಆವಾಸ ಸ್ಥಾನವಾಗಿರುವ ಹಾವಿಗೆ ‘ಅಹೇಟುಲ್ಲಾ ಸಹ್ಯಾದ್ರೇನಿಸಿಸ್’ ಎಂಬ ಹೊಸ ಹೆಸರು ಇಟ್ಟಿದ್ದಾರೆ. ಇದರೊಂದಿಗೆ, ಪಶ್ಚಿಮ ಘಟ್ಟಗಳು ಆವಾಸ ಸ್ಥಾನವಾಗಿರುವ ಬಳ್ಳಿ ಹಾವುಗಳ ನಮೂನೆ ಆರು (06) ಆದಂತಾಗಿದೆ.


 Ahaetulla sahyadrensis

“ವ್ಯಾಪಕವಾಗಿ ಕಂಡುಬರುವ ಈ ಪ್ರಬೇಧದಲ್ಲಿ ಇನ್ನೂ ಹಲವು ನಮೂನೆಗಳು ಪತ್ತೆಯಾಗದೇ ಉಳಿದಿರಬಹುದು. ವಂಶವಾಹಿನಿ ವಿಶ್ಲೇಷಣೆಯಿಂದ ಮಾತ್ರ ಅವನ್ನು ಪತ್ತೆಹಚ್ಚಬಹುದು. ಈ ಮುಂಚೆ ನಾವು ಹೆಚ್ಚಿನ ವೈವಿಧ್ಯದಿಂದ ಕೂಡಿದ ‘ಪ್ರೊಅಹೇಟುಲ್ಲಾ ಆಂಟಿಕ್ವಾ’ ವನ್ನು ಪತ್ತೆಹಚ್ಚಿದ್ದರಿಂದ ಬಳ್ಳಿ ಹಾವುಗಳ (ಅಹೇಟುಲ್ಲಾ) ಸಂಪೂರ್ಣ ವಂಶಾವಳಿಯು ತನ್ನ ಸೋದರ ವರ್ಗವಾದ ‘ಪ್ರೊಅಹೇಟುಲ್ಲಾ’ದಿಂದ ಸುಮಾರು 2.6 ಕೋಟಿ ವರ್ಷಗಳ ಹಿಂದೆ ವಿಕಾಸಗೊಂಡಿದೆ ಎಂಬುದು ದೃಢಪಟ್ಟಿತು” ಎಂದು ಮಲ್ಲಿಕ್ ವಿವರಿಸುತ್ತಾರೆ.

“ಈ ಶೋಧನೆಯು ಪ್ರಭೇದದ ವೈವಿಧ್ಯತೆಯನ್ನು ದಾಖಲಿಸುವ ಜೊತೆಗೆ ದಕ್ಷಿಣ ಭಾರತದಲ್ಲಿ ಬಳ್ಳಿ ಹಾವುಗಳ ವಿಕಾಸ ಚರಿತ್ರೆ ಬಗ್ಗೆ ಬೆಳಕು ಚೆಲ್ಲುವುದಕ್ಕೂ ಸಹಕಾರಿಯಾಗಿದೆ. ಉತ್ಸಾಹಿ ಉರಗ ತಜ್ಞರಾಗಿ ನಾವು ಮೊದಲಿಗೆ ‘ಅಹೇಟುಲ್ಲಾ ನಸೂಟ’ ಬಗ್ಗೆ ಕಲಿತಿದ್ದೆವು. ಇದರ ಮೂಲ ಆವಾಸವನ್ನು ಶ್ರೀಲಂಕಾ ಎಂದು ಒಪ್ಪಿಕೊಳ್ಳುವ ಸಂದರ್ಭ ಉಂಟಾಗಿದ್ದಕ್ಕೆ ಬೇಸರವಾಗುತ್ತದೆ. ಆದರೆ ಈ ಎಲ್ಲಾ ನಮೂನೆಗಳು ಭಾರತದಲ್ಲಿ ಇರುವುದು ಅತ್ಯಂತ ರೋಮಾಂಚಕಾರಿ ವಿಷಯವಾಗಿದೆ” ಎಂಬುದು ಸಿ.ಇ.ಎಸ್. ಸಹ ಪ್ರಾಧ್ಯಾಪಕರಾದ ಕಾರ್ತಿಕ್ ಶಂಕರ್ ಅವರ ಅಭಿಪ್ರಾಯವಾಗಿದೆ.

ಚೈನ್ನೈ ಉರಗೋದ್ಯಾನದ ಸಂಶೋಧಕ ಎಸ್.ಆರ್.ಗಣೇಶ್ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸೌನಕ್ ಪಾಲ್ ಮತ್ತು ಐ.ಐ.ಎಸ್ ಸಿಯ ಪ್ರಿನ್ಸಿಯಾ ಡಿಸೋಜಾ ಅವರ ಸಹಯೋಗದಲ್ಲಿ ಈ ಅಧ್ಯಯನ ವರದಿಯು Zootaxa ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಉಲ್ಲೇಖ:

ಅಶೋಕ್ ಕುಮಾರ್ ಮಲ್ಲಿಕ್, ಅಚ್ಚುತನ್ ಎನ್.ಶ್ರೀಕಂಠನ್, ಸೌನಕ್ ಪಿ.ಪಾಲ್, ಪ್ರಿನ್ಸಿಯಾ ಮಾರ್ಗರೆಟ್ ಡಿಸೋಜಾ, ಕಾರ್ತಿಕ್ ಶಂಕರ್ ಮತ್ತು ಸುಮೈಂಥಂಗಿ ರಾಜಗೋಪಾಲನ್ ಗಣೇಶ್, , Disentangling vines: a study of morphological crypsis and genetic divergence in vine snakes (Squamata: Colubridae: Ahaetulla) with the description of five new species from Peninsular India, Zootaxa (2020)

https://doi.org/10.11646/zootaxa.4874.1.1 

ಚಿತ್ರ ಕೃಪೆಅಶೋಕ್ ಕುಮಾರ್ ಮಲ್ಲಿಕ್, ಎನ್.ಎಸ್.ಅಚ್ಚುತನ್ ಮತ್ತು ವಿವೇಕ್ ಫಿಲಿಪ್ ಸಿರಿಯಾಕ್

ಸಂಪರ್ಕಿಸಿ:

ಕಾರ್ತಿಕ್ ಶಂಕರ್,
ಸಹ ಪ್ರಾಧ್ಯಾಪಕರು
ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿ.ಇ.ಎಸ್.)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
kshanker@iisc.ac.in
080-22933104

ಅಶೋಕ್ ಕುಮಾರ್ ಮಲ್ಲಿಕ್
ಸಂದರ್ಶಕ ಸಂಶೋಧಕ
ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿ.ಇ.ಎಸ್.)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
ashokgene@gmail.com

ಪರ್ತಕರ್ತರಿಗೆ ಸೂಚನೆ:

  1. ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
  2. ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.inor>pro@iisc.ac.in ಗೆ ಬರೆಯಿರಿ.

—-000—-