ಆಮ್ಲಜನಕ ಕೊರತೆ ನೀಗಲು ಐ.ಐ.ಎಸ್ ಸಿ. ಪರಿಹಾರಗಳು


ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧಕರು ಕಳೆದೊಂದು ವರ್ಷದಿಂದ ಕೋವಿಡ್-19 ಕಾರಣದಿಂದಾಗಿ ಉಂಟಾಗಿರುವ ಆಸ್ಪತ್ರೆಗಳಲ್ಲಿನ ಆಮ್ಲಜನಕ ಕೊರತೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಫಲವಾಗಿ, ಆಮ್ಲಜನಕ ಉತ್ಪಾದನಾ ವ್ಯವಸ್ಥೆ ಮತ್ತು ಆಮ್ಲಜನಕ ಸಾಂದ್ರಕಗಳ ಅಭಿವೃದ್ಧಿಯು ಮುಖ್ಯವಾಗಿ ಆಗಿರುವ ಎರಡು ಬೆಳವಣಿಗೆಗಳಾಗಿವೆ.

ಪೂರ್ತಿಯಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಆಮ್ಲಜನಕ ಸಾಂದ್ರಕವನ್ನು ಐ.ಐ.ಎಸ್ ಸಿ.ಯ ಮಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರವೀಣ್ ರಾಮಮೂರ್ತಿ ಮುನ್ನಡೆಸಿದ್ದಾರೆ. ಇವರ ನೇತೃತ್ವದ ತಂಡವು 2020ರ ಮಾರ್ಚ್ ತಿಂಗಳಿನಿಂದಲೇ ಆಮ್ಲಜನಕ ಸಾಂದ್ರಕಗಳ ಬಗೆಗೆ ಕೆಲಸದಲ್ಲಿ ತೊಡಗಿತ್ತು. ಆಮೇಲೆ, 2020ರ ಆಗಸ್ಟ್ ವೇಳೆಗೆ ಶೇ 93ರಷ್ಟು ಶುದ್ಧತೆಯೊಂದಿಗೆ ಪ್ರತಿ ನಿಮಿಷಕ್ಕೆ 5 ಲೀಟರ್ ಉತ್ಪಾದನಾ ಸಾಮರ್ಥ್ಯ್ಯದ ಹಾಗೂ ಶೇ 82ರಷ್ಟು ಶುದ್ಧತೆಯೊಂದಿಗೆ ಪ್ರತಿ ನಿಮಿಷಕ್ಕೆ 10 ಲೀಟರ್ ಉತ್ಪಾದನಾ ಸಾಮರ್ಥ್ಯದ ಆಮ್ಲಜನಕ ಉತ್ಪಾದಿಸಬಲ್ಲ ಸಾಂದ್ರಕಗಳ ಪ್ರಾಯೋಗಿಕ ಮಾದರಿಗಳನ್ನು ಅಭಿವೃದ್ಧಿಗೊಳಿಸಲಾಗಿತ್ತು. ನಂತರದ ಹಂತದಲ್ಲಿ, ಸಂಶೋಧಕರು ಈ ಪ್ರಾಯೋಗಿಕ ಮಾದರಿಗೆ ಇನ್ನಷ್ಟು ಮಾರ್ಪಾಡುಗಳನ್ನು ಮಾಡಿ 93±3% ಶುದ್ಧತೆಯೊಂದಿಗೆ 3 ನಿಮಿಷಗಳೊಳಗೆ 10 ಲೀಟರ್ ಆಮ್ಲಜನಕ ಉತ್ಪಾದಿಸಬಲ್ಲ ಸಾಂದ್ರಕವನ್ನು ಅಭಿವೃದ್ಧಿಗೊಳಿಸಿದರು.

ಇದುವರೆಗೆ, ಈ ತಂತ್ರಜ್ಞಾನವನ್ನು 24 ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಬೇರೆ ಬೇರೆ 35 ಆಸ್ಪತ್ರೆಗಳಿಗೆ ಈ ಘಟಕಗಳನ್ನು ಪೂರೈಕೆ ಮಾಡಲಾಗಿದೆ. ಇತ್ತೀಚೆಗೆ, ಕರ್ನಾಟಕ ಸರ್ಕಾರವು ರಾಜ್ಯದ 2508 ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ತಲಾ 2 ಘಟಕಗಳನ್ನು ಪರವಾನಗಿದಾರರಿಂದ ಪೂರೈಸುವಂತೆ ಸುತ್ತೋಲೆ ಹೊರಡಿಸಿದೆ.

ಆಸ್ಪತ್ರೆಗಳ ಬೇಡಿಕೆಯನ್ನು ಪೂರೈಸುವ ಮತ್ತೊಂದು ತಾಂತ್ರಿಕತೆಯಾದ ಆಮ್ಲಜನಕ ಉತ್ಪಾದನಾ ವ್ಯವಸ್ಥೆಯನ್ನು ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಎಸ್.ದಾಸಪ್ಪ ಅವರ ನೇತೃತ್ವದಲ್ಲಿ ಸಂಶೋಧಕರಾದ ಅರಷ್ ದೀಪ್ ಸಿಂಗ್ ಮತ್ತು ಆನಂದ್ ಎಂ.ಶಿವಪೂಜಿ ಅವರು ಅಭಿವೃದ್ಧಿಪಡಿಸಿದ್ದಾರೆ. ‘ಟ್ವಿನ್-ಬೆಡ್ ಸ್ವಿಂಗ್ ಅಡ್ಸಾರ್ಪ್ಷನ್’ ವ್ಯವಸ್ಥೆ ಆಧಾರಿತವಾದ ಈ ಪ್ರಕ್ರಿಯೆಗೆ ಸಂಗ್ರಾಹಕ ಮತ್ತು ವಿಸರ್ಜಕ ನಳಿಕೆಗಳೊಂದಿಗೆ ಇನ್ನಿತರ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದು, ಭಾರತೀಯ ಫಾರ್ಮಕೋಪಿಯಾವು ನಿಗದಿಗೊಳಿಸಿರುವ ಗುಣಮಟ್ಟದ ಆಮ್ಲಜನಕವನ್ನು ಉತ್ಪಾದಿಸಬಲ್ಲದಾಗಿದ್ದು, ಆಸ್ಪತ್ರೆಗಳ ಐ.ಸಿ.ಯು./ಸಿ.ಸಿ.ಯು./ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಇತರ ಚಿಕಿತ್ಸಾ ವಾರ್ಡ್ ಗಳಲ್ಲಿ ಬಳಸಬಹುದಾಗಿರುತ್ತದೆ. ಕಳೆದ ತಿಂಗಳು, ಈ ವ್ಯವಸ್ಥೆ ಆಧಾರಿತವಾದ ಮೊದಲ ಘಟಕವನ್ನು ಬೆಂಗಳೂರಿನ ಪೊಬ್ಬತಿ ಮೆಡಿಕಲ್ ಸೆಂಟರ್ ನಲ್ಲಿ ಅಳವಡಿಸಲಾಯಿತು.

ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ರಂಗರಾಜನ್ ಅವರು 2021ರ ಆಗಸ್ಟ್ 15ರಲ್ಲಿ ಪ್ರತಿ ನಿಮಿಷಕ್ಕೆ 50 ಲೀಟರ್ ಉತ್ಪಾದನಾ ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕ ಉತ್ಪಾದನಾ ವ್ಯವಸ್ಥೆಯ ಮುಕ್ತ-ಮೂಲ ವಿನ್ಯಾಸವನ್ನು ಉದ್ಘಾಟಿಸಿದರು. ಐಐಎಂ ಕೋಯಿಕ್ಕೋಡ್ ನ ನಿವೃತ್ತ ನಿರ್ದೇಶಕ ಪ್ರೊ.ಕೃಷ್ಣ ಕುಮಾರ್ ಅವರು ಈ ಕಾರ್ಯಯೋಜನೆಗೆ ಉದಾರ ಕೊಡುಗೆ ನೀಡಿದ್ದು, ಇದನ್ನು ಲಖನೌದ ಸೇಂಟ್ ಮೇರಿ ಪಾಲಿಕ್ಲಿನಿಕ್ ನಲ್ಲಿ ಅಳವಡಿಸಲಾಗುವುದು. ಇದರ ವಿಶೇಷತೆಯೆಂದರೆ, ಇದು ಚಿಕಿತ್ಸೆಗೆ ದಾಖಲಾದವರ ಹಾಸಿಗೆಗಳಿಗೆ ಆಮ್ಲಜನಕವನ್ನು ಪೂರೈಸುವ ಜೊತೆಗೆ 24 ಗಂಟೆಗಳೊಳಗೆ 200 ಬಾರ್ ಒತ್ತಡದೊಂದಿಗೆ ತಲಾ 47 ಲೀಟರ್ ಗಳ 10 ಸಿಲಿಂಡರ್ ಗಳನ್ನು ತುಂಬಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದನ್ನು ಲಖನೌದ ಆಸ್ಪತ್ರೆಗೆ ಸಾಗಣೆ ಮಾಡಲು ತಯಾರಿ ನಡೆದಿದೆ.

ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸುವುದಕಕಾಗಿ ವಿವಿಧ ಸಾಮರ್ಥ್ಯಗಳ (ಪ್ರತಿ ನಿಮಿಷಕ್ಕೆ 50 ಲೀಟರ್ ನಿಂದ 1000 ಲೀಟರ್ ಗಳವರೆಗೆ) ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸುವುದಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯು ದೇಶದ ನಾಲ್ಕು ಏಜೆನ್ಸಿಗಳೊಂದಿಗೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಿದೆ.

ಸಂಪರ್ಕಿಸಿ:

ಪ್ರವೀಣ್ ಸಿ.ರಾಮಮೂರ್ತಿ
ಪ್ರಾಧ್ಯಾಪಕರು, ಮಟೀರಿಯಲ್ಸ್ ಎಂಜಿನಿಯರಿಂಗ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
praveen@iisc.ac.in
+91-80- 2293 2627

ಎಸ್.ದಾಸಪ್ಪ
ಪ್ರಾಧ್ಯಾಪಕರು, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
dasappa@iisc.ac.inscube@iisc.ac.in
+91-80-2293 2338

—-000—-