[metaslider id=24117]
ಭಾರತೀಯ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.) ಫ್ರಾನ್ಸ್ ದೇಶದೊಂದಿಗೆ ಗಣಿತ ಶಾಸ್ತ್ರ, ಘನ ಸ್ಥಿತಿ ರಸಾಯನ ವಿಜ್ಞಾನ, ಅಧಿಕ ಶಕ್ತಿ ಭೌತವಿಜ್ಞಾನ, ಜೀವಶಾಸ್ತ್ರ, ಮಟೀರಿಯಲ್ಸ್ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಜಲ ಸಂಶೋಧನೆಯ ಬಹುಶಿಸ್ತೀಯ ಕ್ಷೇತ್ರದಲ್ಲಿ ಬಹುವರ್ಷಗಳಿಂದ ಸಹಭಾಗಿತ್ವವನ್ನು ಹೊಂದಿದೆ.
ಈ ಹಿನ್ನೆಲೆಯಲ್ಲಿ, ಈ ಸಹಭಾಗಿತ್ವದ ಯಶಸ್ಸನ್ನು ಸಂಭ್ರಮಿಸಲು ಹಾಗೂ ಇಂಡೋ-ಫ್ರೆಂಚ್ ಜಲವಿಜ್ಞಾನಗಳ ಕೋಶವು (IFCWS/French: CEFIRSE) ಅಸ್ತಿತ್ವಕ್ಕೆ ಬಂದು 20 ವರ್ಷಗಳಾದ ನಿಮಿತ್ತ 22ನೇ ನವೆಂಬರ್ 2021ರಂದು ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ, ಜಲವಿಜ್ಞಾನಗಳ ಕೋಶದ ನವೀಕರಿಸಲಾದ ಎರಡು ಅಂತಸ್ತುಗಳ ಕಟ್ಟಡವನ್ನು ಬೆಂಗಳೂರಿನಲ್ಲಿರುವ ಫ್ರಾನ್ಸ್ ನ ಕಾನ್ಸುಲ್ ಜನರಲ್ ಶ್ರೀ ಥೈಯರಿ ಬೆರ್ತೆಲೋಟ್ ಅವರು ಉದ್ಘಾಟಿಸಿದರು. ಇದೇ ವೇಳೆ, ಐ.ಐ.ಎಸ್ ಸಿ ಹಾಗೂ ಫ್ರಾನ್ಸ್ ಸರ್ಕಾರದ ಸೆಂಟರ್ ನ್ಯಾಷನಲ್ ಡೆ ಲಾ ರೀಚೆರ್ಚೆ ಸೈಂಟಿಫಿಕ್ (ಸಿ.ಎನ್.ಆರ್.ಎಸ್.) ನೇತೃತ್ವದಲ್ಲಿ ಆ ದೇಶದ 21 ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ (ಎಂಒಯು) ಕೂಡ ಸಹಿ ಹಾಕಿ, ಅವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ಐ.ಐ.ಎಸ್. ಸಿ. ನಿರ್ದೇಶಕ ಪ್ರೊ.ಗೋವಿಂದರಾಜನ್ ರಂಗರಾಜನ್, ಭಾರತದಲ್ಲಿನ ಸಿ.ಎನ್.ಆರ್.ಎಸ್. ಕಚೇರಿಯ ನಿರ್ದೇಶಕರಾದ ಡಾ.ಶ್ರೀನಿ ಕಾವೇರಿ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ಸಂಶೋಧನಾ ನಿರ್ದೇಶಕ ಡಾ.ಜೀನ್ ರಿಯೊಟ್ಟೆ ಅವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಇಂಡೋ-ಫ್ರೆಂಚ್ ಜಲವಿಜ್ಞಾನಗಳ ಕೋಶದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ನಡೆಸಲಾದ ಬಹುಶಿಸ್ತೀಯ ಸಂಶೋಧನೆಗಳ ಬಗ್ಗೆ ಚರ್ಚೆ ನಡೆಯಿತು. ನೀರಿನ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಈ ಕೋಶದ ಬದ್ಧತೆ, ವಿವಿಧ ಪರ್ಯಾವರಣಗಳ ಮೇಲೆ ಇದು ಬೀರಿರುವ ಪ್ರಬಾವ, ಕೃಷಿ, ಜೀವವೈವಿಧ್ಯ ಮತ್ತು ಮಾನವ ಆರೋಗ್ಯ ಸೇರಿದಂತೆ ಹಲವು ಪ್ರಕ್ರಿಯೆಗಳ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಪ್ರಸ್ತಾಪಿಸಲಾಯಿತು. ಭಾರತ ಮತ್ತು ಫ್ರಾನ್ಸಿನ ಸಂಶೋಧಕರು ಜಲಶಾಸ್ತ್ರ, ಭೂರಸಾಯನವಿಜ್ಞಾನ, ಕೃಷಿ ಅರ್ಥಶಾಸ್ತ್ರ, ಜೀವರಸಾಯನಶಾಸ್ತ್ರ, ಭೂಭೌತವಿಜ್ಞಾನ, ಮಣ್ಣಿನ ವಿಜ್ಞಾನ ಹಾಗೂ ಇನ್ನಿತರ ವೈವಿಧ್ಯಮಯ ವಲಯಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿರುವುದು ಇಲ್ಲಿ ಉಲ್ಲೇಖಾರ್ಹ.
ಪ್ಯಾರಿಸ್-ಸ್ಯಾಕ್ಲೇ ವಿಶ್ವವಿದ್ಯಾಲಯದ ಸಂಶೋಧಕರ ನಿಯೋಗದವರು, ಭಾರತದಲ್ಲಿರುವ ಫ್ರೆಂಚ್ ಇನ್ಸ್ ಟಿಟ್ಯೂಟ್ ನ (ಐಎಫ್ಐ) ಪ್ರತಿನಿಧಿಗಳು, ಭಾರತದಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿಯ ಡಾ.ಫ್ರಾಂಕೋಯಿಸ್ ಕ್ಸೇವಿಯರ್ ಮಾರ್ಟ್ರೇ ಉಯಿಲ್ ಮತ್ತು ಡಾ.ಅನುಪಮಾ ಅಂಬಿಕಾ ಅನಿಲ್ ಕುಮಾರ್ ಅವರು ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಭಾಗವಾಗಿ, ಐ.ಐ.ಎಸ್ ಸಿ.ಯ ಅಧಿಕ ಶಕ್ತಿ ಭೌತವಿಜ್ಞಾನ ಕೇಂದ್ರದ ಗೌರವ ಪ್ರಾಧ್ಯಾಪಕರಾಗಿರುವ ರೋಹಿಣಿ ಗೋಡಬೋಲೆ ಅವರಿಗೆ ‘ನ್ಯಾಷನಲ್ ಆರ್ಡರ್ ಆಫ್ ಮೆರಿಟ್’ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು, ಫ್ರಾನ್ಸ್ ನೊಂದಿಗೆ ವೈಜ್ಞಾನಿಕ ಸಹಭಾಗಿತ್ವ ಕಾಯ್ದುಕೊಳ್ಳುವುದರಲ್ಲಿ ವಹಿಸಿರುವ ಪಾತ್ರ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ನೀಡಿರುವ ಉತ್ತೇಜನಗಳನ್ನು ಪರಿಗಣಿಸಿ ಈ ಗೌರವ ಅವರಿಗೆ ಸಂದಾಯವಾಯಿತು. ಫ್ರಾನ್ಸ್ ದೇಶವು ಕೊಡಮಾಡುವ ಅತ್ಯುನ್ನತ ಪುರಸ್ಕಾರಗಳಲ್ಲಿ ಇದು ಒಂದಾಗಿದ್ದು, 2021ರ ಜನವರಿಯಲ್ಲಿ ಇದನ್ನು ಪ್ರಕಟಿಸಲಾಗಿತ್ತು. ತಮಗೆ ಪುರಸ್ಕಾರ ಪ್ರದಾನವಾದ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಪ್ರೊಫೆಸರ್ ಗೋಡಬೋಲೆ ಅವರು ಫ್ರಾನ್ಸ್ ನೊಂದಿಗೆ ತಮ್ಮ ಸಹಭಾಗಿತ್ವಗಳು, ತಮ್ಮ ಕ್ಷೇತ್ರವಾದ ಅಧಿಕ ಶಕ್ತಿ ಭೌತವಿಜ್ಞಾನ ಸಂಶೋಧನೆಗಳಲ್ಲಿ ಅವುಗಳ ಪಾತ್ರ ಮತ್ತು ಆಡಳಿತಾತ್ಮಕ ಸ್ಥಾನಗಳಲ್ಲಿ ಭಾರತೀಯ ಹಾಗೂ ಫ್ರೆಂಚ್ ವಿಜ್ಞಾನಿಗಳ ನಡುವೆ ವೈಜ್ಞಾನಿಕ ಸಹಭಾಗಿತ್ವದ ಉತ್ತೇಜನ, ಇವುಗಳ ಬಗ್ಗೆ ಮಾತನಾಡಿ ಗಮನಸೆಳೆದರು.
—–0000—–