ಗಂಗಾ ನದಿ ಪಾತ್ರದ ಮೇಲೆ ಹವಾಮಾನ ಬದಲಾವಣೆ ಮತ್ತು ಮನುಷ್ಯಜನ್ಯ ಚಟುವಟಿಕೆಗಳ ಪರಿಣಾಮ


-ಅರ್ಪಿತ್ ಓಂಪ್ರಕಾಶ್

ಗಂಗಾ ನದಿಯು 50 ಕೋಟಿಗೂ ಹೆಚ್ಚು ಭಾರತೀಯರ ಜೀವನಾಡಿಯಾಗಿದೆ. ಈ ನದಿಗೆ ಹೊಂದಿಕೊಂಡ ಪ್ರದೇಶದಲ್ಲಿನ ಮನುಷ್ಯ ಚಾಲಿತ ಚಟುವಟಿಕೆಗಳು ನದಿಯ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿವೆ. ವಿಪರೀತ ಮಾಲಿನ್ಯದಿಂದ ಹಿಡಿದು ನದಿಯ ಹರಿವಿನ ಪಥವೇ ಬದಲಾಗುವವರೆಗೆ ಹೇಳತೀರದಷ್ಟು ಅನಾಹುತಗಳಿಗೆ ಇದು ಎಡೆಮಾಡಿಕೊಟ್ಟಿದೆ. ಗಂಗಾ ನದಿ ಪಾತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಕುಸಿತಗಳು ಮತ್ತು ಪ್ರವಾಹಗಳು ಕೂಡ ಹೆಚ್ಚಾಗಿ ಸಂಭವಿಸುತ್ತಿವೆ.


The study area in UGB. The triangles represent dams and the green circles represent the weather stations that provided data for the study. Credit: Swarnkar et al. 

ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.) ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ, ಕಾನ್ಪುರ (ಐ.ಟಿ.ಟಿ.ಕೆ.)ದ ಸಂಶೋಧಕರು ‘ಸೈಂಟಿಫಿಕ್’ ನಿಯತಕಾಲಿಕದಲ್ಲಿ ಪ್ರಕಟಿಸಿರುವ ಹೊಸ ಅಧ್ಯಯನ ವರದಿಯು ಹವಾಮಾನ ಬದಲಾವಣೆ ಹಾಗೂ ಈ ವಲಯದಲ್ಲಿ ಅಣೆಕಟ್ಟು ನಿರ್ಮಾಣದಂತಹ ಮನುಷ್ಯಜನ್ಯ ಚಟುವಟಿಕೆಗಳು ಹೇಗೆ ದುಷ್ಪರಿಣಾಮ ಬೀರುತ್ತಿವೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ. ಇಲ್ಲಿನ ಪರ್ವತ ಪ್ರದೇಶದಲ್ಲಿ ಈ ಹಿಂದೆ ನಡೆದಿದ್ದ ಚಟುವಟಿಕೆಗಳಿಂದ ಉಂಟಾದ ಪರಿಣಾಮಗಳ ಬಗ್ಗೆ ದೇವಪ್ರಯಾಗದಲ್ಲಿ ಸಂಗಮವಾಗಿ ಗಂಗೆಯಾಗಿ ರೂಪುಗೊಳ್ಳುವ ಭಾಗೀರಥಿ ಮತ್ತು ಅಲಕನಂದಾ ಉಪನದಿಗಳನ್ನು ಕೇಂದ್ರವಾಗಿಸಿಕೊಂಡು ಇದರಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ಇದಕ್ಕಾಗಿ ಸಂಶೋಧಕರು 1971ರಿಂದ 2010ರವರೆಗಿನ ಅವಧಿಯ ಮಳೆ ಸುರಿಯುವ ಪ್ರಮಾಣ, ನದಿಗಳಲ್ಲಿ ಹರಿಯುವ ನೀರಿನ ಪ್ರಮಾಣ, ಮೇಲ್ಮುಖ ಗಂಗಾ ನದಿ ಪಾತ್ರದಲ್ಲಿರುವ ಹವಾಮಾನ ಕೇಂಧ್ರಗಳಿಂದ ಹೊರಬರುವ ಮಡ್ಡಿಯ ಪ್ರಮಾಣ, ಈ ಕುರಿತ ಅಂಕಿ-ಅಂಶಗಳನ್ನು ಪರಿಶೀಲಿಸಿದ್ದಾರೆ. ಈ ಅಂಕಿ-ಅಂಶಗಳನ್ನು, ಎರಡು ವರ್ಗೀಕರಣಗಳನ್ನಾಗಿ ಮಾಡಿ, ಅಂದರೆ 1995ಕ್ಕಿಂತ ಮುಂಚಿನ ಹಾಗೂ 1995ರ ನಂತರದ ಎರಡು ಕಾಲಘಟ್ಟಗಳನ್ನು ಆಧಾರವಾಗಿಸಿಕೊಂಡು ಅಧ್ಯಯನ ನಡೆಸಿದ್ದಾರೆ. ಇದರಿಂದಾಗಿ, 1995ರ ನಂತರ ಈ ಎರಡೂ ಉಪನದಿಗಳ ಪಾತ್ರದಲ್ಲಿ ಪ್ರವಾಹ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿರುವುದು ಅವರಿಗೆ ದೃಢಪಟ್ಟಿದೆ. ಜೊತೆಗೆ, ಮುಖ್ಯವಾಗಿ ನದಿಗೆ ಅಡ್ಡಲಾಗಿ ಮನೇರಿ, ತೆಹ್ರಿ ಮತ್ತು ಕೋಟೇಶ್ವರಗಳಲ್ಲಿ ನಿರ್ಮಿಸಿರುವ ಮೂರು ಅಣೆಕಟ್ಟುಗಳಿಂದ ಭಾಗೀರಥಿ ನದಿಯ ನೀರಿನ ಕೆಳಮಟ್ಟದ ಹರಿವಿನಲ್ಲಿ ಹಾಗೂ ಮಧ್ಯಮ ಮಟ್ಟದ ಹರಿವಿನಲ್ಲಿ ಬದಲಾವಣೆಗಳು ಉಂಟಾಗಿವೆ ಎಂದೂ ಸಂಶೋಧಕರು ಹೇಳುತ್ತಾರೆ.

ಹಾಗೆಯೇ, ಅಲಂಕನಂದಾ ನದಿ ಪಾತ್ರದ ವಿಷಯಕ್ಕೆ ಬಂದರೆ, ಜೋಷಿಮಠ ಹವಾಮಾನ ಕೇಂದ್ರದಲ್ಲಿ 1995ರಿಂದ 2005ರ ಅವಧಿಯಲ್ಲಿ ನೀರಿನ ಹರಿವಿನ ಪ್ರಮಾಣ ದುಪ್ಪಟ್ಟಾಗಿದೆ ಎಂದೂ ಹೇಳಲಾಗಿದೆ. ಇಲ್ಲಿನ ನೀರಿನ ಹರಿವಿನ ಪ್ರಮಾಣ ವಿಪರೀತ ಎನ್ನಿಸುವಷ್ಟು ಹೆಚ್ಚಾಗಿದೆ. “ಅಲಂಕನಂದಾ ನದಿ ಪಾತ್ರದಲ್ಲಿನ ಪರಿಸ್ಥಿತಿಯು ಭಾಗೀರಥಿ ಪಾತ್ರಕ್ಕಿಂತ ವಿಭಿನ್ನವಾಗಿದ್ದು, ಇಲ್ಲಿ ಮಳೆ ಸುರಿಯುವ ಪ್ರಮಾಣವು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಇದು ಮುಖ್ಯವಾಗಿ ಅಲಂಕನಂದಾ ನದಿಯ ಕೆಳ ಪಾತ್ರದಲ್ಲಿ ಹೆಚ್ಚಾಗಿರುವುದು ಕೂಡ ಕಂಡುಬಂದಿದೆ. ಹೀಗಾಗಿ ಇಲ್ಲಿ ನದಿ ನೀರಿನ ಹರಿವಿನಲ್ಲಿ ಕೂಡ ತುಂಬಾ ಹೆಚ್ಚಳವಾಗಿರುವುದು ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ ಎಂದು ಐ.ಐ.ಎಸ್ ಸಿ. ಬಹುಶಿಸ್ತೀಯ ಜಲ ಸಂಶೋಧನೆ ಕೇಂದ್ರದಲ್ಲಿ (ICWaR) ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವ ಹಾಗೂ ಅಧ್ಯಯನದ ಮೊದಲ ಲೇಖಕರಾದ ಸೋಮಿಲ್ ಸ್ವರ್ಣಾಂಕರ್ ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ (2010ರ ನಂತರ), ಹವಾಮಾನ ಬದಲಾವಣೆಯ ಜೊತೆಗೆ ಅಲಕನಂದಾ ಅಣೆಕಟ್ಟುಗಳ ನಿರ್ಮಾಣವು ಇಲ್ಲಿನ ನೀರಿನ ಹರಿವಿನ ರೀತಿಯಲ್ಲಿನ ಬದಲಾವಣೆಗೆ ಕಾರಣವಾಗಿರಬಹುದು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ನದಿಗಳು ಹೊತ್ತು ಸಾಗಿಸುವ ಮಡ್ಡಿಯ ಪ್ರಮಾಣದ ಮೇಲೆ ಅಣೆಕಟ್ಟುಗಳು ಹಾಗೂ ಇತರ ಜಲಸಂಗ್ರಹಾಗಾರಗಳು ಪರಿಣಾಮ ಬೀರಿವೆ. ನೀರಿನ ಹರಿವಿನ ಪ್ರಮಾಣದಲ್ಲಿ ಆಗುವ ಯದ್ವಾತದ್ವಾ ಬದಲಾವಣೆಗಳಿಂದಾಗಿ ಗಂಗಾ ಪಾತ್ರದ ಮೇಲ್ಮುಖ ಭಾಗದಲ್ಲಿ ಸಂಗ್ರಹವಾಗುವ ಮಡ್ಡಿಯು ಕೆಳಪಾತ್ರದ ಮೇಲೂ ಪರಿಣಾಮವಾಗಿ, ಮಡ್ಡಿಯ ಸಂಯೋಜನೆಯಲ್ಲಿ ಮಾರ್ಪಾಡುಗಳಾಗಿವೆ. ಮೇಲ್ಮುಖ ನದಿ ಪಾತ್ರದಲ್ಲಿ ತೆಹ್ರಿ ಅಣೆಕಟ್ಟು ಬಲು ಮುಖ್ಯ ಪಾತ್ರ ವಹಿಸುತ್ತದೆಂದು ಅಧ್ಯಯನ ವರದಿ ಹೇಳುತ್ತದೆ. ಅತ್ಯಂತ ದೊಡ್ಡ ಜಲಸಂಗ್ರಹಗಾರವಾಗಿರುವ ಜೊತೆಗೆ ಹರಿವು ನಿಯಂತ್ರಕ ನಿರ್ಮಿತಿ ಇದಾಗಿದ್ದು, ಮೇಲ್ಭಾಗದಿಂದ ಹರಿಯಬೇಕಾದ ಮಡ್ಡಿಯನ್ನು ತಡೆಯುತ್ತದೆ. ಜೊತೆಗೆ, ಕೆಳಪಾತ್ರಕ್ಕೆ ಹರಿಯುವ ನೀರಿನ ಪ್ರಮಾಣವನ್ನು ಕೂಡ ಇದು ನಿಯಂತ್ರಿಸುತ್ತದೆ. ಇದೇ ವೇಳೆ, ಈ ಅಣೆಕಟ್ಟುಗಳ ಕೆಳಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಉನ್ನತ ಮಟ್ಟವನ್ನು ತಗ್ಗಿಸುವಲ್ಲಿ ಬೀರಿರುವ ಸಕಾರಾತ್ಮಕ ಪರಿಣಾಮದ ಬಗ್ಗೆಯೂ ವರದಿ ಗಮನ ಸೆಳೆಯುತ್ತದೆ.

 ಸದ್ಯಕ್ಕೆ, ಭಾಗೀರಥಿ ನದಿ ಪಾತ್ರದಲ್ಲಿ 11 ಅಣೆಕಟ್ಟುಗಳನ್ನು ಮತ್ತು ಅಲಕನಂದಾ ಪಾತ್ರದಲ್ಲಿ 26 ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆ ಇದೆ. ಇವುಗಳ ನಿರ್ಮಾಣದಿಂದಾಗಿ ಈ ಪ್ರದೇಶಕ್ಕೆ ಅತ್ಯಗತ್ಯವಾಗಿರುವ ಜಲ ವಿದ್ಯುತ್ ಶಕ್ತಿಯನ್ನು ಪೂರೈಸುವುದು ಸಾಧ್ಯವಾಗಲಿದೆ ಎನ್ನುವುದೇನೋ ಹೌದು; ಆದರೆ, ಈ ಅಣೆಕಟ್ಟುಗಳಿಂದಾಗಿ ಸಂಬಂಧಿಸಿದ ವಲಯಗಳಲ್ಲಿ ನೀರಿನ ಹರಿವಿನ ಹಾಗೂ ಮಡ್ಡಿಯ ಹರಿವಿನ ಪ್ರಮಾಣದಲ್ಲಿ ಏರುಪೇರಾಗುತ್ತದೆ ಎಂದು ಬಹುಶಿಸ್ತೀಯ ಜಲ ಸಂಶೋಧನೆ ಕೇಂದ್ರದಲ್ಲಿ (ICWaR) ಪ್ರಾಧ್ಯಾಪಕರಾಗಿರುವ ಅಧ್ಯಯನದ ಮತ್ತೊಬ್ಬ ಲೇಖಕರಾದ ಪ್ರದೀಪ್ ಮಜುಂದಾರ್.

ಗಂಗಾ ನದಿ ಪಾತ್ರದಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಹಾಗೂ ಪ್ರವಾಹ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಬಹುದು ಎಂದೂ ತಜ್ಞರು ಊಹಿಸಿದ್ದಾರೆ. ಆದರೆ, ತಂತ್ರಜ್ಞಾನದಲ್ಲಿನ ಸುಧಾರಣೆಗಳಿಂದಾಗಿ ಹಾಗೂ ಹೊಸ ನಮೂನೆಯ ಹೈಡ್ರಾಲಿಕ್ ಸಂರಚನೆಗಳಿಂದಾಗಿ ಇದರಲ್ಲ ಬದಲಾವಣೆಗಳು ಉಂಟಾಗಬಹುದು. ಉದಾಹರಣೆಗೆ, ಹೃಷಿಕೇಶದಲ್ಲಿನ ಪಶುಲೋಕ್ ಬ್ಯಾರೇಜ್ ನಿಂದಾಗಿ ನದಿಯ ಕೆಳ ಹರಿವಿನ ಪ್ರದೇಶಗಳಲ್ಲಿ ಪ್ರವಾಹಗಳು ಹಾಗೂ ನೀರಿನ ಅತ್ಯಧಿಕ ಹರಿವಿನ ಪ್ರಮಾಣವು ಕಡಿಮೆಯಾಗಿರುವುದು ದೃಢಪಟ್ಟಿದೆ. ಕಂಪ್ಯೂಟರ್ ಮಾದರಿಗಳಿಂದ ಚಾಲಿತವಾದ ಪೂರ್ವ ಮಾಹಿತಿಯೊಂದಿಗಿನ ಯೋಜನೆಗಳು ಹಾಗೂ ನಿರ್ಧಾರ ತಳೆಯುವ ಕ್ರಮಗಳು ಇದಕ್ಕೆ ಸಹಕಾರಿಯಾಗಬಹುದು. “ವಾತಾವರಣದಲ್ಲಿ ಏನು ಆಗುತ್ತದೆಂಬ ಬಗ್ಗೆ ನಮಗೆ ಯಾವ ಹತೋಟಿಯೂ ಇರುವುದಿಲ್ಲ. ಆದರೆ ನೆಲದ ಮೇಲೆ ನಡೆಯುವ ಕಾರ್ಯಗಳ ಬಗ್ಗೆ ನಮಗೆ ನಿಯಂತ್ರಣವಿರುತ್ತದೆ. ಜಲವಿಜ್ಞಾನ ಮಾದರಿಗಳಿಂದ ನೀರಿನ ಹರಿವಿನ ಪ್ರಮಾಣವನ್ನು ಅಂದಾಜಿಸಬಹುದಾಗಿರುತ್ತದೆ. ಈ ತಿಳಿವಳಿಕೆಯಿಂದಾಗಿ ಅಧಿಕ ಪ್ರವಾಹವನ್ನು ಕಡಿಮೆಗೊಳಿಸಲು ನಿರ್ಮಿತೀಯ ಹಾಗೂ ನಿರ್ಮಿತೀಯವಲ್ಲದ ಮಾರ್ಗೋಪಾಯಗಳನ್ನು ಅಭಿವೃದ್ಧಿಪಡಿಸಬಹುದು ಎಂಬುದು ಮಜುಂದಾರ್ ಅವರ ವಿವರಣೆಯಾಗಿದೆ.

ಉಲ್ಲೇಖ:

ಸರ್ಣಾಂಕರ್ ಎಸ್.ಮಜುಂದಾರ್ ಪಿ., ಮತ್ತು ಸಿನ್ಹಾ ಆರ್. , Modified hydrologic regime of upper Ganga basin induced by natural and anthropogenic stressors, Sci Rep, 2021; 11,19491.

https://doi.org/10.1038/s41598-021-98827-7

ಸಂಪರ್ಕಿಸಿ:

ಪ್ರದೀಪ್ ಮಜುಂದಾರ್
ಪ್ರಾಧ್ಯಾಪಕರು
ಬಹುಶಿಸ್ತೀಯ ಜಲ ಸಂಶೋಧನಾ ಕೇಂದ್ರ (ICWaR)
ಭಾರತೀಯ ವಿಜ್ಞಾನ ಸಂಸ್ಥೆ (IISc)
pradeep@iisc.ac.in

 

ಸೋಮಿಲ್ ಸ್ವರ್ಣಾಂಕರ್
ರಾಷ್ಟ್ರೀಯ ಪೋಸ್ಟ್ ಡಾಕ್ಟೋರಲ್ ಫೆಲೊ
ಬಹುಶಿಸ್ತೀಯ ಜಲ ಸಂಶೋಧನಾ ಕೇಂದ್ರ (ICWaR)
ಭಾರತೀಯ ವಿಜ್ಞಾನ ಸಂಸ್ಥೆ (IISc)
somils@iisc.ac.in

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್ ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or>pro@iisc.ac.in ಗೆ ಬರೆಯಿರಿ.

—–000—–