ಹೃದಯ ಸ್ನಾಯುವಿನ ಜೀವಕೋಶಗಳಲ್ಲಿ ಮೇದಾಮ್ಲಗಳ ಹೀರುವಿಕೆಯ ನಿಯಂತ್ರಣ: ಹೊಸ ಒಳನೋಟ


-ಶ್ರೀತಮ ಬೋಸ್

ನಾವು ತಿಂದ ಆಹಾರದಲ್ಲಿನ ಕೊಬ್ಬಿನ ಅಂಶವು ಜೀರ್ಣವಾಗುವ ಹಂತದಲ್ಲಿ ಮೇದಾಮ್ಲಗಳು ಉತ್ಪತ್ತಿಯಾಗುತ್ತವೆ. ನಮ್ಮ ಶರೀರದ ಹಲವಾರು ಅಂಗಗಳು ಗ್ಲೂಕೋಸ್ ಅನ್ನು ಪ್ರಮುಖ ಶಕ್ತಿ ಮೂಲವಾಗಿ ಬಳಸಿಕೊಳ್ಳುತ್ತವೆ. ಆದರೆ, ಹೃದಯವು ತನಗೆ ಬೇಕಿರುವ ಶಕ್ತಿಯ ಬಹುಪಾಲನ್ನು (ಶೇ 70ಕ್ಕಿಂತ ಹೆಚ್ಚು) ಮೇದಾಮ್ಲಗಳ ಉತ್ಕರ್ಷಣೆಯಿಂದ ಪಡೆಯುತ್ತದೆ. ‘ಕಾರ್ಡಿಯೋಮಯೋಸೈಟ್’ಗಳನ್ನು, ಅಂದರೆ, ಹೃದಯದ ಲಯಬದ್ಧ ಬಡಿತವನ್ನು ನಿಯಂತ್ರಿಸುವ ಹೃದಯ ಸ್ನಾಯುವಿನ ಜೀವಕೋಶಗಳ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಇದು ಅತ್ಯಂತ ಮಹತ್ವದ್ದಾಗಿರುತ್ತದೆ. ಕಾರ್ಡಿಯೋಮಯೋಸೈಟ್ ಗಳಲ್ಲಿ ಮೇದಾಮ್ಲಗಳ ಅಧಿಕ ಶೇಖರಣೆಯು ಹಾನಿಕಾರಕ ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ. ಇದು, ಹೆಚ್ಚಿನ ಸಂದರ್ಭಗಳಲ್ಲಿ ಗಂಭೀರವಾದ ಹೃದಯ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ ಸಿ) ವಿಜ್ಞಾನಿಗಳ ನೇತೃತ್ವದಲ್ಲಿ ಭಾರತ ಮತ್ತು ಅಮೆರಿಕದ ಸಂಶೋಧಕರ ತಂಡವು ಇತ್ತೀಚೆಗೆ ನಡೆಸಿದ ಸಂಶೋಧನೆಯ ಅಧ್ಯಯನ ವರದಿಗಳು ‘ಸೆಲ್ ರಿಪೋರ್ಟ್ಸ್’ ನಲ್ಲಿ ಪ್ರಕಟಗೊಂಡಿದ್ದು, ಇದು ಕಾರ್ಡಿಯೋಮಯೋಸೈಟ್ ಗಳಲ್ಲಿ ಮೇದಾಮ್ಲಗಳ ಹೀರಿಕೊಳ್ಳುವಿಕೆಯು ಹೇಗೆ ನಿಯಂತ್ರಿತಗೊಳ್ಳುತ್ತದೆ ಎಂಬ ಬಗ್ಗೆ ಹೊಸ ಹೊಳಹುಗಳನ್ನು ನೀಡುತ್ತದೆ.


Schematic showing the mechanism by which SIRT6 regulates fatty acid uptake through PPARγ transcription factor in the heart (Khan et al., 2021/Cell Reports)

“ಕಾರ್ಡಿಯೋಮಯೋಸೈಟ್ ಗಳಿಗೆ ಮೇದಾಮ್ಲದ ಹರಿವನ್ನು, SIRT6 ಎಂಬ ಪ್ರೊಟೀನ್, ನಿರ್ಣಾಯಕವಾದ ರೀತಿಯಲ್ಲಿ ನಿಯಂತ್ರಿಸುವ ವಿಧಿವಿಧಾನವನ್ನು ನಾವು ಗುರುತಿಸಿದ್ದೇವೆ” ಎನ್ನುತ್ತಾರೆ ಸಂಶೋಧನೆಯ ಮುಖ್ಯಸ್ಥರಾದ ಐ.ಐ.ಎಸ್ ಸಿ. ಸೂಕ್ಷ್ಮಾಣುಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿ ಸುಂದರೇಶನ್.; ಹೃದಯದ ಮೇಲೆ ದುಷ್ಪರಿಣಾಮ ಬೀರುವ ಹಲವಾರು ಚಯಾಪಚಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ SIRT6 ಪರಿಣಾಮಕಾರಿ ಉಪಶಮನದ ಗುರಿ ಕೇಂದ್ರವಾಗಬಹುದು ಎಂಬುದನ್ನೂ ಅಧ್ಯಯನವು ದೃಢಪಡಿಸುತ್ತದೆ.

ಕಾರ್ಡಿಯೋಮಯೋಸೈಟ್ ಗಳು, ರಕ್ತದಿಂದ ತಮ್ಮೆಡೆಗೆ ಮೇದಾಮ್ಲಗಳ ಹರಿವನ್ನು ಹೆಚ್ಚಿಸುವಂತಹ ಹಲವಾರು ನಿರ್ದಿಷ್ಟ ಮೇದಾಮ್ಲ ವಾಹಕಗಳನ್ನು ಹೊಂದಿರುತ್ತವೆ. ಇವು, ಕಾರ್ಡಿಯೋಮಯೋಸೈಟ್ ಗಳಿಗೆ ಮೇದಾಮ್ಲಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುವುದನ್ನು ಖಾತರಿಗೊಳಿಸುತ್ತವೆ. ಕಾರ್ಡಿಯೋಮಯೋಸೈಟ್ ಗಳಲ್ಲಿ ಈ ವಾಹಕ ಪ್ರೊಟೀನ್ ಗಳು ರೂಪುಗೊಳ್ಳಲು ಕಾರಣವಾಗುವ ವಂಶವಾಹಿನಿಗಳನ್ನು SIRT6 ನಿಯಂತ್ರಿಸುತ್ತದೆ ಎಂಬುದನ್ನು ನಿರೂಪಿಸುವ ಮೊತ್ತಮೊದಲ ಅಧ್ಯಯನ ಇದಾಗಿದೆ ಎನ್ನುತ್ತಾರೆ ಸಂಶೋಧನಾ ತಂಡದ ಲೇಖಕರು.

SIRT6 ಪ್ರೊಟೀನ್ ರಹಿತ ಕಾರ್ಡಿಯೋಮಯೋಸೈಟ್ ಗಳಲ್ಲಿ ಹೆಚ್ಚಿನ ಪ್ರಮಾಣದ ಮೇದಾಮ್ಲ ವಾಹಕಗಳು ಇರುತ್ತವೆ. ಇದು, ಮೇದಾಮ್ಲಗಳ ಹೆಚ್ಚಿನ ಹರಿವು ಮತ್ತು ಶೇಖರಣೆಗೆ ಎಡೆಮಾಡಿಕೊಡುತ್ತದೆ. ಕಾರ್ಡಿಯೋಮಯೋಸೈಟ್ ಗಳಲ್ಲಿ SIRT6 ಪ್ರಮಾಣವನ್ನು ಹೆಚ್ಚಿಸಿದರೆ ಮೇದಾಮ್ಲ ವಾಹಕಗಳ ಪ್ರಮಾಣ ಕಡಿಮೆಯಾಗುತ್ತದೆ. ಆ ಮೂಲಕ, ಕಾರ್ಡಿಯೋಮಯೋಸೈಟ್ ಗಳಿಗೆ ಮೇದಾಮ್ಲಗಳ ಹರಿವು ಹಾಗೂ ಅವುಗಳ ಶೇಖರಣೆಯೂ ಕಡಿಮೆಯಾಗುತ್ತದೆ ಎಂಬುದನ್ನು ಸಂಶೋಧಕರ ತಂಡವು ತೋರಿಸಿದೆ. ಮುಖ್ಯವಾಗಿ ಇಲಿಗಳ ಮೇಲೆ ನಡೆಸಲಾದ ಪರೀಕ್ಷೆಗಳಿಂದ ಇದು ದೃಢಪಟ್ಟಿದೆ.

SIRT6 ಎಂಬುದು ‘ಸರ್ ಟುಯಿನ್ಸ್’ ಎಂಬ ವರ್ಗಕ್ಕೆ ಸೇರಿದ ಪ್ರೊಟೀನ್ ಆಗಿದೆ. ಈ ವರ್ಗದ ಪ್ರೊಟೀನ್ ಗಳು ತಮ್ಮ ಕಾರ್ಯಾಚರಣೆಗೆ ಕೋ-ಫ್ಯಾಕ್ಟರ್ಸ್ ಎಂದು ಕರೆಯಲಾಗುವ ನಿರ್ದಿಷ್ಟ ಅಣುಗಳ ಅಗತ್ಯವಿರುವ ಪ್ರಮುಖ ಜೈವಿಕ ಕಿಣ್ವಗಳಾಗಿವೆ. ಆದರೆ ಅಚ್ಚರಿಯ ಅಂಶವೆಂದರೆ, SIRT6 ಪ್ರೊಟೀನ್, ಕಿಣ್ವದಂತೆ ಕೆಲಸ ನಿರ್ವಹಿಸುವುದಿಲ್ಲ. ಅಲ್ಲದೇ, ಕಾರ್ಡಿಯೋಮಯೋಸೈಟ್ ಗಳಲ್ಲಿ ಮೇದಾಮ್ಲಗಳ ಹರಿವನ್ನು ನಿಯಂತ್ರಿಸಲು ಅದಕ್ಕೆ ಕೋ-ಫ್ಯಾಕ್ಟರ್ ಕೂಡ ಬೇಕಾಗಿಲ್ಲ. ಬದಲಿಗೆ, ಮೇದಾಮ್ಲ ವಾಹಕಗಳ ಉತ್ಪತ್ತಿಯಲ್ಲಿ ಭಾಗಿಯಾಗುವ ನಿರ್ದಿಷ್ಟ ಪ್ರೊಟೀನ್ ನೊಂದಿಗೆ ಬಂಧಕಗೊಳ್ಳುವ ಮೂಲಕ ಅದು ಈ ಕಾರ್ಯವನ್ನು ಮಾಡುತ್ತದೆ. SIRT6 ಕಿಣ್ವದಂತೆ ಕಾರ್ಯನಿರ್ವಹಿಸದೆ ಪ್ರೊಟೀನ್ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬ ಬೇರೊಂದು ಅಧ್ಯಯನವನ್ನು ಸುಂದರೇಶನ್ ಅವರು ಮುನ್ನಡೆಸಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿರುತ್ತದೆ.

“ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಮೇದಾಮ್ಲಗಳು ಹೃದಯಕ್ಕೆ ಅತ್ಯಂತ ಉಪಯುಕ್ತ” ಎನ್ನುತ್ತಾರೆ ಸುಂದರೇಶನ್. ಆದರೆ, ಹೃದಯವು ಬಳಸಿಕೊಳ್ಳಬಹುದಾದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೇದಾಮ್ಲಗಳು ಕಾರ್ಡಿಯೋಮಯೋಸೈಟ್ ಗಳಲ್ಲಿ ಶೇಖರಣೆಗೊಂಡರೆ ‘ಲಿಪೊಟಾಕ್ಸಿಸಿಟಿ’ಯನ್ನು ಉಂಟುಮಾಡುತ್ತವೆ. ಕೊಬ್ಬಿನ ಆಮ್ಲಗಳ (ಲಿಪಿಡ್ಗಳ) ಸಂಗ್ರಹಣೆಯು ಉರಿಯೂತ ಹಾಗೂ ಜೀವಕೋಶದ ಅವಸಾನದಂತಹ ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗುವ ಸ್ಥಿತಿಯೇ ‘ಲಿಪೊಟಾಕ್ಸಿಸಿಟಿ’ ಆಗಿರುತ್ತದೆ. ಸಕ್ಕರೆ ಕಾಯಿಲೆ ಮತ್ತು ಬೊಜ್ಜು ಒಳಗೊಂಡಂತೆ ಕೆಲವು ಅನಾರೋಗ್ಯಗಳ ವೇಳೆ ವ್ಯಕ್ತಿಯ ಶರೀರದಲ್ಲಿ ಮೇದಾಮ್ಲ ವಾಹಕಗಳ ಪ್ರಮಾಣ ಅಧಿಕವಾಗಿರುತ್ತದೆ ಎಂಬುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ಅಂತಹ ಸನ್ನಿವೇಶಗಳಲ್ಲಿ, SIRT6 ಅನ್ನು ಸಕ್ರಿಯಗೊಳಿಸುವುದು ಹಾಗೂ ಅದರ ಪ್ರಕಟಗೊಳಿಸುವಿಕೆಯನ್ನು ಹೆಚ್ಚಿಸುವುದು ಉಪಯುಕ್ತ ಚಿಕಿತ್ಸೆಯಾಗಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ.

ಐ.ಐ.ಎಸ್ ಸಿ. ಆಣ್ವಿಕ ಜೀವಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಾರಾಯಣಸ್ವಾಮಿ ಶ್ರೀನಿವಾಸನ್, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಸಂಶೋಧಕರು, ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರು, ಅಮೆರಿಕದ ರಗರ್ಸ್ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್ ವೈದ್ಯಕೀಯ ಕಾಲೇಜಿನ ತಜ್ಞರು ಈ ಅಧ್ಯಯನದ ಭಾಗವಾಗಿದ್ದರು.

ಉಲ್ಲೇಖ:

ದಾನಿಷ್ ಖಾನ್, ತರನ್ನುಮ್ ಅರಾ, ವೆಂಕಟರಮಣ್ ರವಿ, ರಕ್ಷಾ ರಾಜಗೋಪಾಲ್, ಹಿಮಾನಿ ಟಂಡನ್, ಜಯದೇವನ್ ಪಾರ್ವತಿ, ಎಡ್ವರ್ಡ್ ಎ.ಗೊನ್ಜಾಲೆಸ್, ನಿನಿತಾ ಆಶೀರ್ವಾದಮ್- ಜಯರಾಜ್, ಸ್ವಾತಿ ಕೃಷ್ಣ, ಸ್ನೇಹ ಮಿಶ್ರಾ, ಸುಕನ್ಯಾ ರಘು, ಅರವಿಂದ್ ಸಿಂಗ್ ಭಾತಿ, ಅಂಕಿತ್ ಕುಮಾರ್ ಟಮ್ಟಾ, ಸುಭಜಿತ್ ದಾಸ್ ಗುಪ್ತ, ಉಲ್ಲಾಸ್ ಕೊಲ್ತೂರ್- ಸೀತಾರಾಮನ್, ಜೀನ್-ಪಿಯರೆ ಎಟ್ಚೆಗರಯ್, ರೌಲ್ ಮೋಸ್ತೋಸ್ಲೋವ್ ಸ್ಕಿ, ಪ್ರಸನ್ನ ಸಿಂಹ ಮೋಹನ್ ರಾವ್, ನಾರಾಯಣಸ್ವಾಮಿ ಶ್ರೀನಿವಾಸನ್ ಮತ್ತು ನಾಗಲಿಂಗಮ್ ರವಿ ಸುಂದರೇಶನ್, “SIRT6 transcriptionally regulates fatty acid transport by suppressing PPARγ”, Cell Reports, Volume 35, Issue 9, 2021, 109190.

https://doi.org/10.1016/j.celrep.2021.109190

ಸಂಪರ್ಕಿಸಿ:

ಎನ್.ರವಿ ಸುಂದರೇಶನ್
ಸಹಾಯಕ ಪ್ರಾಧ್ಯಾಪಕರು
ಸೂಕ್ಷ್ಮಾಣು ಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ ವಿಭಾಗ (ಎಂ.ಸಿ.ಬಿ.)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ.)
ಇ-ಮೇಲ್: rsundaresan@iisc.ac.in
ಫೋನ್: 080-2293 2068

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.

—000—