ಆರೋಗ್ಯ-ಶುಶ್ರೂಷೆಯಲ್ಲಿ ಹೊಸ ಪದ್ಧತಿಗಳ ಸಹಸ್ಥಾಪನೆ: ಯುಸಿಎಲ್-ಐ.ಐ.ಎಸ್.ಸಿ. ಸಹಭಾಗಿತ್ವ


19 ನವೆಂಬರ್ 2024

ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ತಮ್ಮ ಕಾರ್ಯತಂತ್ರ ಸಹಭಾಗಿತ್ವವನ್ನು ಹೊಸ ಹಂತಕ್ಕೆ ಕೊಂಡೊಯ್ದಿದ್ದು, ಆರೋಗ್ಯಶುಶ್ರೂಷಾ ಕ್ಷೇತ್ರದಲ್ಲಿ ನಾವೀನ್ಯತೆ ವಿಸ್ತರಿಸಲು ಉದ್ದೇಶಿಸಿವೆ.

ಎರಡೂ ಸಂಸ್ಥೆಗಳು ಐ.ಐ.ಎಸ್.ಸಿ. ಸದ್ಯದಲ್ಲೇ ಸ್ಥಾಪಿಸಲಿರುವ ಸ್ನಾತಕೋತ್ತರ ವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನೆ, ಶಿಕ್ಷಣ, ನಾವೀನ್ಯತೆ ಹಾಗೂ ವಾಣಿಜ್ಯೀಕರಣದಲ್ಲಿ ನಿಕಟ ಸಹಭಾಗಿತ್ವಕ್ಕೆ ಅನುವು ಕಲ್ಪಿಸುವ ಉದ್ದೇಶದಿಂದ ‘ಇಂಗಿತ ಪತ್ರ’ಕ್ಕೆ (ಲೆಟರ್ ಆಫ್ ಇಂಟೆಂಟ್) ಅಂಕಿತ ಹಾಕಿವೆ.

ಐ.ಐ.ಎಸ್.ಸಿ. ಕ್ಯಾಂಪಸ್ಸಿನಲ್ಲಿ ನವೆಂಬರ್ 18ರ ಸೋಮವಾರ ಸಹಿ ಹಾಕಲಾದ ‘ಇಂಗಿತ ಪತ್ರ’ವು ಯುಸಿಎಲ್ ಹಾಗೂ ಐ.ಐ.ಎಸ್.ಸಿ. ಸಹಭಾಗಿತ್ವದಲ್ಲಿ ಹೊಸದಾದ ಹಾಗೂ ಮಹತ್ವಾಕಾಂಕ್ಷೆಯ ಹಂತವಾಗಿದೆ. ಈ ಮೂಲಕ ಎರಡೂ ವಿಶ್ವವಿದ್ಯಾಲಯಗಳು ಒಗ್ಗೂಡಿ ಮೂಲಭೂತ ಹಾಗೂ ಚಿಕಿತ್ಸಾ ವಿಜ್ಞಾನಗಳು, ಆನ್ವಯಿಕ ಎಂಜಿನಿಯರಿಂಗ್ ಮತ್ತು ಚಿಕಿತ್ಸಾ ವೃತ್ತಿ ವಲಯಗಳಲ್ಲಿ ಹೊಸ ಸಂಶೋಧನಾ ಸಾಮರ್ಥ್ಯವನ್ನು ಸಹಸ್ಥಾಪನೆ ಮಾಡುವ ಆಶಯ ಹೊಂದಿವೆ.

ಐ.ಐ.ಎಸ್.ಸಿ. ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಹೊಸದಾದ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಯಲ್ಲಿ ತೊಡಗಲು ಯುಸಿಎಲ್ ಜೊತೆ ನಮ್ಮ ಸಹಭಾಗಿತ್ವವನ್ನು ಸದೃಢಗೊಳಿಸುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ” ಎಂದರು. ಯುಸಿಎಲ್ ಹಾಗೂ ಐ.ಐ.ಎಸ್.ಸಿ. ಜಂಟಿ ಪ್ರಯತ್ನಗಳು ವೈದ್ಯಕೀಯ ಸಂಶೋಧನೆ ಮತ್ತು ಆರೋಗ್ಯಶುಶ್ರೂಷೆಯಲ್ಲಿ ಶಿಕ್ಷಣದ ಜೊತೆಗೆ ನಾವೀನ್ಯತೆಯನ್ನು ಸಶಕ್ತಗೊಳಿಸಲಿವೆ. ಇದು ನಿರ್ಮಾಣವಾಗಲಿರುವ ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ಜಾಗತಿಕ ಗುಣಮಟ್ಟದ ಸ್ನಾತಕೋತ್ತರ ಕೋರ್ಸ್ ಗಳನ್ನು ಅಳವಡಿಸಬೇಕೆಂಬ ಪ್ರಯತ್ನಗಳಿಗೆ ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಪ್ರಸ್ತುತ ಕಾಲಮಾನದ ಅತ್ಯಂತ ಜರೂರಿನ ಸವಾಲುಗಳನ್ನು ಪರಿಹರಿಸುವ ದಿಸೆಯಲ್ಲಿ ವಿವಿಧ ಶಿಸ್ತುಗಳ ಸಂಶೋಧಕರನ್ನು ಸಶಕ್ತಗೊಳಿಸಲು ಹಾಗೂ ಅವರನ್ನು ಒಂದೇ ವೇದಿಕೆಯಡಿ ತರಲು ಐ.ಐ.ಎಸ್.ಸಿ. ಬದ್ಧವಾಗಿದ್ದು, ಯುಸಿಎಲ್ ಕೂಡ ಸಮಾನ ಆಶಯ ಹೊಂದಿದೆ. ನಮ್ಮ ಸಹಭಾಗಿತ್ವದ ಮುಂದಿನ ಹಂತವು ಆರೋಗ್ಯಶುಶ್ರೂಷೆಗೆ ಒತ್ತು ನೀಡುವ ಕೃತಕ ಬುದ್ಧಿಮತ್ತೆ, ಕ್ವಾಂಟಂ ತಾಂತ್ರಿಕತೆ, ರೋಬೋಟಿಕ್ಸ್ ಗಳಲ್ಲಿ ಮಹತ್ವದ ಹೊಸ ಜಂಟಿ ಸಂಶೋಧನಾ ಸಾಮರ್ಥ್ಯವನ್ನು ಸೃಷ್ಟಿಸಲಿದೆ. ಜೊತೆಗೆ, ಭವಿಷ್ಯದ ತಜ್ಞವೈದ್ಯರನ್ನು (ಫಿಸಿಷಿಯನ್) ತರಬೇತುಗೊಳಿಸಲು ಶೈಕ್ಷಣಿಕ ಸಹಭಾಗಿತ್ವಗಳನ್ನು ರೂಪಿಸಲಿದೆ ಎಂದು ಯುಸಿಎಲ್ ಅಧ್ಯಕ್ಷ ಹಾಗೂ ಪ್ರೊವೊಸ್ಟ್ ಡಾ.ಮೇಕೆಲ್ ಸ್ಪೆನ್ಸ್ ವಿವರಿಸಿದರು.

ಯುಸಿಎಲ್ ಹಾಗೂ ಐ.ಐ.ಎಸ್.ಸಿ. ಜೊತೆಗೂಡಿ ಡಿಜಿಟಲ್ ಹೆಲ್ತ್, ಕ್ವಾಂಟಂ ಟೆಕ್, ಎಐ ಮತ್ತು ಮೆಡಿಸಿನ್ ನಂತಹ ಭವಿಷ್ಯ ಕೇಂದ್ರಿತ ಅಂತರಶಿಸ್ತೀಯ ಕ್ಷೇತ್ರಗಳಲ್ಲಿ ಸಮರ್ಥ ಸಹಭಾಗಿ ಉಪಕ್ರಮಗಳನ್ನು ಶೋಧಿಸಲು ಜಂಟಿ ಕಾರ್ಯತಂಡವನ್ನು ರಚಿಸಲಿವೆ.

ಈ ರೂಪುರೇಷೆಯು ಜಂಟಿ ಪಿ.ಎಚ್ ಡಿ, ಆರೋಗ್ಯ ವ್ಯವಸ್ಥೆಗಳ ಅತ್ಯುತ್ತಮ ಪದ್ಧತಿಗಳ ವಿನಿಮಯ, ಬೋಧನಾ ವೃಂದದ ವಿನಿಮಯ ಹಾಗೂ ಸಂಶೋಧನಾ ಫೆಲೊಷಿಪ್ ನಂತಹ ಬಾಹ್ಯ ಅನುದಾನಿತ ಬೆಂಬಲದ ಹೊಸ ಕೋರ್ಸ್ ಗಳಿಗೆ ಮುನ್ನಡೆಸುತ್ತವೆ ಎಂಬುದು ಪಾಲುದಾರರ ನಿರೀಕ್ಷೆಯಾಗಿದೆ.

ಯುಸಿಎಲ್ ಸಂಸ್ಥೆಯು ಭಾರತದೊಂದಿಗೆ ಸುದೀರ್ಘ ಸಹಭಾಗಿತ್ವದ ಇತಿಹಾಸ ಹೊಂದಿದೆ. ಯುಸಿಎಲ್ ನಲ್ಲಿ ನಿರವಯವ ರಸಾಯನಶಾಸ್ತ್ರ ವಿಭಾಗದಲ್ಲಿ 1887ರಿಂದ 1913ರವರೆಗೆ ಪ್ರೊಫೆಸರ್ ಆಗಿದ್ದು, 1904ಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಸರ್ ವಿಲಿಯಮ್ ರಾಮ್ ಸೆ ಅವರು ಬೆಂಗಳೂರಿನಲ್ಲಿ ಐ.ಐ.ಎಸ್. ಸಿ. ಸ್ಥಾಪಿಸುವ ಸಂಬಂಧ ಜೆಮ್ ಷೇಟ್ ಜಿ ಟಾಟಾರವರ ಕೋರಿಕೆ ಮೇರೆಗೆ ಭಾರತಕ್ಕೆ ಸಮಾಲೋಚಕರಾಗಿ ಭೇಟಿ ನೀಡಿದ್ದರು. ರಾಮ್ ಸೇ ಅವರು ವಿಸ್ತೃತ ಅಧ್ಯಯನ ನಡೆಸಿ ನೀಡಿದ ವರದಿಯು ಐ.ಐ.ಎಸ್.ಸಿ. ಸ್ಥಾಪನೆಯ ಸ್ಥಳ ನಿಗದಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅವರ ಸಹ-ಉದ್ಯೋಗಿಯಾದ ಪ್ರೊ.ಮೋರಿಸ್ ವಿಲಿಯಂ ಟ್ರ್ಯಾವೆರ್ಸ್ ಎಫ್ ಆರ್ ಎಸ್ ಹಾಗೂ ನಂತರ ಸರ್ ಆಲ್ ಫ್ರೆಡ್ ಬೌರ್ನ್ (ಇಬ್ಬರೂ ಯು.ಸಿ.ಎಲ್. ಹಳೆಯ ವಿದ್ಯಾರ್ಥಿಗಳು) ಐ.ಐ.ಎಸ್.ಸಿ. ಮೊದಲ ಹಾಗೂ ಎರಡನೇ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಇದೀಗ ಹೊಸ ಬೆಳವಣಿಗೆಯು, ಐ.ಐ.ಎಸ್.ಸಿ. ಜೊತೆಗಿನ ಯುಸಿಎಲ್ ದ ದೀರ್ಘಕಾಲೀನ ಸಹಭಾಗಿತ್ವವನ್ನು ಇನ್ನಷ್ಟು ಬಲಗೊಳಿಸುತ್ತದೆ. ಇತ್ತೀಚೆಗೆ ಈ ಎರಡೂ ಸಂಸ್ಥೆಗಳು ಜಂಟಿ ಅನುದಾನ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಸಮಾನ ಅವಕಾಶಗಳ ನಗರ ವಿನ್ಯಾಸ, ಯಕೃತ್ತು ಅಂಗಾಂಶ ಎಂಜಿನಿಯರಿಂಗ್ ಮತ್ತು ಕ್ವಾಂಟಂ ತಾಂತ್ರಿಕತೆಯ ಕ್ಷೇತ್ರಗಳಲ್ಲಿ ಸಹಭಾಗಿತ್ವ ಸಾಧಿಸಲು ಎರಡೂ ಸಂಸ್ಥೆಗಳ ಶೈಕ್ಷಣಿಕ ಕಾರ್ಯಕ್ರಮಗಳಿಗೆಇದು ನೆರವು ನೀಡುತ್ತಿದೆ.

ಸಂಪರ್ಕ: ಐ.ಐ.ಎಸ್.ಸಿ. ಸಂವಹನ ಕಚೇರಿ| news@iisc.ac.in

ಸೋಫಿ ವಿಂಟೆರ್ ಯುಸಿಎಲ್ ಮೀಡಿಯಾ ರಿಲೇಷನ್ಸ್| ಫೋನ್: +44 7717 532 978, ಇಮೇಲ್: s.vinter@ucl.ac.uk